ಟ್ವೀಟ್ ಜನಪ್ರಿಯತೆಯಲ್ಲಿ ಪ್ರಧಾನಿ ಮೋದಿಯವರನ್ನು ಮೀರಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಹಿಂದಿ ಟ್ವೀಟ್‌ಗಳು ಮೋದಿ ಅವರ ಟ್ವೀಟ್‌ಗಳನ್ನೂ ಮೀರಿಸಿ ಜನಪ್ರಿಯವಾಗಿವೆ ಎಂದಿದೆ ಮಿಷಿಗನ್ ವಿವಿಯ ಅಧ್ಯಯನ. ರಾಹುಲ್ ಅವರ ವಿಶಿಷ್ಟ ಸಂಭಾಷಣಾ ಶೈಲಿ, ಪ್ರಾಸಬದ್ಧ, ಹಾಸ್ಯಮಿಶ್ರಿತ ಟ್ವೀಟ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ‘ಕ್ವಾರ್ಟ್ಸ್‌’ ವರದಿ ಮಾಡಿದೆ

ರಾಹುಲ್ ಗಾಂಧಿ ಟ್ವಿಟರ್ ಖಾತೆ ಆಕ್ರಮಣಕಾರಿಯಾಗಿ ಪರಿವರ್ತನೆಗೊಂಡಿದೆ. ೨೦೧೮ರ ಜನವರಿ ಮತ್ತು ಏಪ್ರಿಲ್ ನಡುವೆ ರಾಹುಲ್ ಗಾಂಧಿ ಅವರ ರಿಟ್ವೀಟ್‌ಗಳು ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್‌ಗಳು ಪಡೆದ ರಿಟ್ವೀಟ್‌ಗಳನ್ನೂ ಮೀರಿಸಿವೆ! ಹೀಗೆಂದು ವಿವರ ನೀಡಿದೆ ಮಿಷಿಗನ್ ವಿಶ್ವವಿದ್ಯಾಲಯದ ಅಧ್ಯಯನ. ಒಟ್ಟಾರೆಯಾಗಿ ಲೆಕ್ಕ ಹಾಕಿ ನೋಡಿದರೆ, ರಾಹುಲ್ ಗಾಂಧಿ ಟ್ವೀಟ್‌ಗಳಿಗೆ ಸಿಕ್ಕಿದ ರಿಟ್ವೀಟ್‌ಗಳು ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಇತರ ಪ್ರಮುಖ ಭಾರತೀಯ ರಾಜಕಾರಣಿಗಳ ಟ್ವೀಟ್‌ಗಳಿಗೆ ಸಿಕ್ಕ ರಿಟ್ವೀಟ್ ಲೆಕ್ಕಗಳನ್ನು ಮೀರಿಸಿದೆ ಎಂದು ಮಿಷಿಗನ್ ಅಧ್ಯಯನ ಹೇಳಿದೆ. ಆ ಅಧ್ಯಯನದಲ್ಲಿ, ಸಹಾಯಕ ಪ್ರೊಫೆಸರ್ ಜೊಯೋಜೀತ್ ಪಾಲ್ ಮತ್ತು ಅಧ್ಯಯನಕಾರರಾದ ಲಿಯಾ ಬೋಜರ್ಟ್ ಅವರು ಟ್ವಿಟರ್ ಎಪಿಐಗಳನ್ನು ಬಳಸಿಕೊಂಡು ೨೭೪ ಭಾರತೀಯ ರಾಜಕಾರಣಿಗಳ ಟ್ವಿಟರ್ ಖಾತೆಗಳನ್ನು ವಿಶ್ಲೇಷಣೆ ನಡೆಸಿದ್ದಾರೆ. ಮುಖ್ಯವಾಗಿ, ಇಂಗ್ಲಿಷೇತರ ಭಾಷೆಗಳನ್ನು ಬಳಸುವ ರಾಜಕಾರಣಿಗಳ ಟ್ವೀಟ್‌ಗಳನ್ನು ಅಧ್ಯಯನ ನಡೆಸಲಾಗಿದೆ.

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಹಳ ತಡವಾಗಿ ಟ್ವಿಟರ್‌ಗೆ ಆಗಮಿಸಿದ್ದರೂ, ಮತ್ತು ಕೇವಲ ೭.೬ ದಶಲಕ್ಷ ಬೆಂಬಲಿಗರನ್ನಷ್ಟೇ ಪಡೆದಿದ್ದರೂ ಈ ಯಶಸ್ಸನ್ನು ಸಾಧಿಸಿರುವುದು ವಿಶೇಷ. ಪ್ರಧಾನಿ ಮೋದಿಯವರ ೪೪ ದಶಲಕ್ಷ ಬೆಂಬಲಿಗರ ಮುಂದೆ ರಾಹುಲ್ ಗಾಂಧಿ ಅವರ ೭.೬ ದಶಲಕ್ಷ ಬೆಂಬಲಿಗರು ಏನೂ ಅಲ್ಲ. ಹಾಗೆ ನೋಡಿದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತರ ಅತೀ ಹೆಚ್ಚು ಮಂದಿ ಬೆಂಬಲಿಗರು ಹೊಂದಿರುವ ರಾಷ್ಟ್ರವೊಂದರ ಮುಖ್ಯಸ್ಥರೆನ್ನುವ ಹಿರಿಮೆ ಪ್ರಧಾನಿ ನರೇಂದ್ರ ಮೋದಿಯವರದು. ಫೇಸ್‌ಬುಕ್‌ನಲ್ಲೂ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿದ್ದಾರೆ ನರೇಂದ್ರ ಮೋದಿ.

“ರಾಹುಲ್ ಗಾಂಧಿ ಅವರ ಹಿಂದಿ ಟ್ವೀಟ್‌ಗಳು ಉಗ್ರವಾದ ಸಂಭಾಷಣಾ ಶೈಲಿಯನ್ನು ಹೊಂದಿರುತ್ತವೆ, ಅವುಗಳಲ್ಲಿ ಪ್ರಾಸ, ಹಾಸ್ಯಮಿಶ್ರಿತ ಮತ್ತು ವಾಗ್ಮಯತೆ ಇರುತ್ತದೆ. ಆದರೆ, ಪ್ರಧಾನಿ ಮೋದಿಯವರ ಸಂದೇಶಗಳು ಸಾಮಾನ್ಯವಾಗಿ ಸಪ್ಪೆಯಾಗಿರುತ್ತದೆ ಮತ್ತು ೨೦೧೭ಕ್ಕೆ ಮೊದಲಿಗೆ ಹೋಲಿಸಿದಲ್ಲಿ ಇನ್ನೂ ಹೆಚ್ಚು ಸಪ್ಪೆಯಾಗಿದೆ,” ಎಂದು ಅಧ್ಯಯನಕಾರರು ಹೇಳಿದ್ದಾರೆ. ಆರ್ಥಿಕ ಮತ್ತು ರಾಜಕೀಯ ವಾರಪತ್ರಿಕೆಯೊಂದಕ್ಕೆ ತಮ್ಮ ವರದಿಯನ್ನು ಬರೆದಿರುವ ಅಧ್ಯಯನಕಾರರು, “ಹಿಂದಿ ಭಾಷೆಯನ್ನು ಬಳಸಿ ದಾಳಿ ಮಾಡುವ ಶೈಲಿಯಲ್ಲಿ ಸಂದೇಶವನ್ನು ನೀಡಿರುವುದೇ ರಾಹುಲ್ ಗಾಂಧಿ ಅವರ ಟ್ವೀಟ್‌ಗಳು ಹೆಚ್ಚು ಜನಪ್ರಿಯವಾಗಲು ಕಾರಣ,” ಎಂದಿದ್ದಾರೆ. ಇದಕ್ಕೆ, ಕಳೆದ ಅಕ್ಟೋಬರ್‌ನಲ್ಲಿ ರಾಹುಲ್ ಗಾಂಧಿ ಮಾಡಿರುವ, ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಕಾಂಗ್ರೆಸ್ ಸರ್ಕಾರದ ಯೋಜನೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತ ಟ್ವೀಟ್ ಅನ್ನು ಉದಾಹರಣೆಯನ್ನಾಗಿ ಕೊಡಬಹುದು. ಕಾಂಗ್ರೆಸ್ ಜಿಎಸ್‌ಟಿಯನ್ನು ಮುಂದಿಟ್ಟಾಗ ಅದು ಜೆನ್ಯೂನ್ ಸಿಂಪಲ್ ಟ್ಯಾಕ್ಸ್ (ವಾಸ್ತವದ ಸರಳ ತೆರಿಗೆ) ಆಗಿತ್ತು. ಆದರೆ, ಮೋದಿ ಅದನ್ನು ಗಬ್ಬರ್ ಸಿಂಗ್ ಟ್ಯಾಕ್ಸ್‌ (ಬಾಲಿವುಡ್ ಸಿನಿಮಾದ ಖಳನಾಯಕನ ಹೆಸರು ಗಬ್ಬರ್ ಸಿಂಗ್) ಆಗಿ ಬದಲಿಸಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಬಿಜೆಪಿಗೆ ಪ್ರಬಲ ವಿಪಕ್ಷವಾದ ರಾಹುಲ್ ಟ್ವಿಟರ್ ಖಾತೆ

ವರದಿ ಪ್ರಕಾರ, “ಟ್ವಿಟರ್‌ನಲ್ಲಿ ಭಾರತೀಯ ರಾಜಕಾರಣಿಗಳು ಇತ್ತೀಚೆಗೆ ಇಂಗ್ಲಿಷೇತರ ಭಾಷೆಯನ್ನು ಬಳಸುವುದು ಹೆಚ್ಚಾಗಿದೆ. ಮುಖ್ಯವಾಗಿ ಹಿಂದಿ ಭಾಷೆಯ ಬಳಕೆ ರಾಜಕೀಯ ಟ್ವೀಟ್‌ಗಳಲ್ಲಿ ಹೆಚ್ಚಾಗಿದೆ. ಈ ಬದಲಾವಣೆಯಿಂದಾಗಿ ೨೦೧೬ರ ನಂತರ ಟ್ವೀಟ್‌ಗಳು ಹೆಚ್ಚು ಜನಪ್ರಿಯತೆ ಗಳಿಸಲಾರಂಭಿಸಿವೆ. ಹಿಂದಿಯೇತರ ಭಾಷೆಗಳು ಇಂಗ್ಲಿಷ್ ಅಥವಾ ಹಿಂದಿಯಷ್ಟು ಜನಪ್ರಿಯತೆ ಸಾಧಿಸಿಲ್ಲ. ಆದರೆ, ಇತ್ತೀಚೆಗೆ ರಾಜಕಾರಣಿಗಳು ಇತರ ಭಾಷೆಗಳಲ್ಲಿ ಟ್ವೀಟ್ ಮಾಡುವುದು ಹೆಚ್ಚಾಗುತ್ತಿದೆ.”

“ಅಕ್ಟೋಬರ್ ೨೦೧೩ರಿಂದ ಏಪ್ರಿಲ್ ೨೦೧೮ರ ನಡುವೆ ಪ್ರಧಾನಿ ಮೋದಿಯವರ ಶೇ.೭೩.೭ರಷ್ಟು ಟ್ವೀಟ್‌ಗಳು ಇಂಗ್ಲಿಷ್‌ನಲ್ಲಿಯೇ ಇದ್ದವು. ಆದರೆ, ರಾಹುಲ್ ಗಾಂಧಿ ಈ ಅವಧಿಯಲ್ಲಿ ಶೇ.೬೮ರಷ್ಟು ಮಾತ್ರವೇ ಇಂಗ್ಲಿಷ್ ಟ್ವೀಟ್‌ಗಳನ್ನು ಮಾಡಿದ್ದಾರೆ. ಅವರು ೨೦೧೫ರ ಏಪ್ರಿಲ್ ನಂತರ ಟ್ವಿಟರ್ ಬಳಸಲು ಆರಂಭಿಸಿದ್ದರು. ಮುಖ್ಯವಾಗಿ, ಚುನಾಯಿತ ರಾಜಕಾರಣಿಗಳಲ್ಲದ ಪಿ ಚಿದಂಬರಂ, ಸುಬ್ರಹ್ಮಣ್ಯ ಸ್ವಾಮಿ ಮತ್ತು ಕಿರಣ್ ಬೇಡಿಯವರು ಹೆಚ್ಚು ಇಂಗ್ಲಿಷ್ ಟ್ವೀಟ್‌ಗಳನ್ನು ಹಾಕಿದ್ದಾರೆ. ಆದರೆ, ಸುಶೀಲ್ ಮೋದಿ, ರಘುಬ್ರಾರ್ ದಾಸ್ ಅಥವಾ ಯೋಗಿ ಆದಿತ್ಯನಾಥ್ ಅವರು ಸಕ್ರಿಯವಾಗಿ ಸಾಮಾಜಿಕ ತಾಣಗಳಲ್ಲಿ ಪ್ರಾದೇಶಿಕ ಭಾಷೆಗಳನ್ನೇ ಬಳಸುತ್ತಿದ್ದಾರೆ.”

“ಭಾರತದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೇವಲ ಶೇ.೮ರಷ್ಟು ಟ್ವೀಟ್‌ಗಳು ಮಾತ್ರ ಇಂಗ್ಲಿಷ್‌ನಲ್ಲಿರುತ್ತವೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿಗೆ ಸಾಮಾಜಿಕ ಮಾಧ್ಯಮದಲ್ಲಿ ಆ ಪಕ್ಷದ ಪ್ರಭಾವ ಹೆಚ್ಚಾಗಿದ್ದದ್ದೂ ಕಾರಣ ಎನ್ನಲಾಗಿದೆ. ೨೦೧೭ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣಗಳ ಪ್ರಾಮುಖ್ಯತೆ ಅರಿವಾಗಿದೆ. ಜನರ ಜೊತೆಗೆ ಸಂವಹನಕ್ಕಾಗಿ ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಸಾಧನವಾಗಿ ಬಳಸುತ್ತಿದ್ದಾರೆ. ೨೦೧೪ರ ನಂತರ ಪ್ರಧಾನಿ ಮೋದಿ ಒಂದೂ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ.”

“೨೦೧೪ರಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್‌ ಪ್ರಚಾರಗಳಿಗೆ ಹೋಲಿಸಿದಲ್ಲಿ ನೆಲಮಟ್ಟದ ರಾಜಕೀಯ ಪ್ರಚಾರಗಳಲ್ಲಿ ಟ್ವಿಟರ್ ಹೆಚ್ಚು ಪಾತ್ರ ವಹಿಸಿರಲಿಲ್ಲ. ಇದೇ ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯವರು ಬಿಜೆಪಿ ಸದಸ್ಯರಿಗೆ ತಮ್ಮ ಫೇಸ್‌ಬುಕ್ ಪುಟಗಳಿಗೆ ಕನಿಷ್ಠ ೩ ಲಕ್ಷ ಲೈಕ್‌ಗಳನ್ನು ಪಡೆಯುವಂತೆ ಕಟ್ಟಪ್ಪಣೆ ಮಾಡಿದ್ದರು. ರಾಜಕೀಯ ಪಕ್ಷಗಳ ಐಟಿ ವಿಭಾಗಗಳು ವಾಟ್ಸಪ್‌ಗಳಲ್ಲಿ ಸಂದೇಶಗಳನ್ನು ಹರಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಟ್ವಿಟರ್ ಮಾತ್ರ ನಗರದ ಇಂಗ್ಲಿಷ್ ಮಾತನಾಡುವ ವರ್ಗದ ಸಾಮಾಜಿಕ ಜಾಲತಾಣವಾಗಿಯೇ ಹೆಚ್ಚು ಉಳಿದಿದೆ,” ಎಂದು ಮಿಷಿಗನ್ ಅಧ್ಯಯನ ಹೇಳಿದೆ.

ರಾಜಕಾರಣಿಗಳು ಇಂಗ್ಲಿಷ್‌ಯೇತರ ಭಾಷೆಗಳನ್ನು ಟ್ವಿಟರ್‌ನಲ್ಲಿ ಹೆಚ್ಚು ಬಳಸುವ ಮೂಲಕ ವ್ಯಾಪಕವಾಗಿ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಫೇಸ್‌ಬುಕ್ ಮತ್ತು ವಾಟ್ಸಪ್‌ಗೆ ಹೋಲಿಸಿದರೆ ಟ್ವಿಟರ್ ಇನ್ನೂ ಉನ್ನತ ವರ್ಗದ ಸಾಮಾಜಿಕ ಜಾಲತಾಣವಾಗಿಯೇ ಉಳಿದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More