ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 8 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಹಳೇ ಮೈಸೂರು ಭಾಗದ ಪ್ರವಾಸೋದ್ಯಮ ರಾಯಭಾರಿಯಾದ ಯದುವೀರ್‌

ಹಳೇ ಮೈಸೂರು ಭಾಗದಲ್ಲಿ ಪ್ರವಾಸೋದ್ಯಮ ರಾಯಭಾರಿಯಾಗಲು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಒಪ್ಪಿಗೆ ಸೂಚಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್‌ ಅವರ ಮನವಿಯ ಮೇರೆಗೆ, ಹಳೇ ಮೈಸೂರು ಭಾಗದ ಮೈಸೂರು, ಕೊಡಗು, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ರಾಯಭಾರಿಯಾಗಿ ಯದುವೀರ್‌ ನೇಮಕಗೊಂಡಿದ್ದಾರೆ. ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

9 ತಿಂಗಳಲ್ಲಿ 9,448 ಕೋಟಿ ರುಪಾಯಿ ಕೃಷಿ ಸಾಲ ಮನ್ನಾ: ಕಾಶೆಂಪುರ್‌

“ದಸರಾ ಮತ್ತು ದೀಪಾವಳಿ ಹಬ್ಬದವರೆಗೆ ೨೨ ಲಕ್ಷ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಆಗಲಿದೆ. ಇನ್ನುಳಿದ ರೈತರ ಸಾಲವನ್ನು ಮುಂದಿನ ವರ್ಷದ ಜುಲೈ ಒಳಗೆ ಮನ್ನಾ ಮಾಡಲಾಗುವುದು. 9 ತಿಂಗಳ ಅವಧಿಯಲ್ಲಿ ೯,೪೪೮ ಕೋಟಿ ರುಪಾಯಿ ಸಾಲ ಮನ್ನಾ ಆಗಲಿದೆ,” ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿಳಿಸಿದ್ದಾರೆ. “ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಸಾಲ ಮನ್ನಾದ ಪೈಕಿ ೨ ಸಾವಿರ ಕೋಟಿ ರುಪಾಯಿಗಳನ್ನು ಸಮ್ಮಿಶ್ರ ಸರ್ಕಾರ ಪಾವತಿಸಿದೆ,” ಎಂದೂ ಅವರು ಹೇಳಿದ್ದಾರೆ.

ಆಸ್ಕರ್‌ಗೆ ನಾಮನಿರ್ದೇಶನಗೊಂಡ ಇರ್ಫಾನ್‌ ಸಿನಿಮಾ

ಇರ್ಫಾನ್ ಖಾನ್‌ ಅಭಿನಯದ ‘ನೋ ಬೆಡ್ ಆಫ್ ರೋಸಸ್‌’ ಸಿನಿಮಾ ಬಾಂಗ್ಲಾದೇಶದಿಂದ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಬಾಂಗ್ಲಾದ ಚಿತ್ರನಿರ್ದೇಶಕ ಮೊಸ್ತಾಫಾ ಫರೂಕಿ ಅವರ ಈ ಚಿತ್ರ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್‌ನಲ್ಲಿ ಸ್ಪರ್ಧಿಸುತ್ತಿದೆ. ಪತ್ನಿಯನ್ನು ತೊರೆದು ಪುತ್ರಿಯ ಕಾಲೇಜು ಸಹಪಾಠಿಯನ್ನು ಮದುವೆಯಾಗುವ ಚಿತ್ರನಿರ್ದೇಶಕನ ಕತೆ ಇದು. ನಿರ್ದೇಶಕನ ಪಾತ್ರದಲ್ಲಿ ಇರ್ಫಾನ್ ಖಾನ್ ನಟಿಸಿದ್ದು, ರೊಕಿಯಾ ಪ್ರಾಚಿ, ನುಸ್ರತ್ ಇಮ್ರೋಸ್‌, ಪಾರ್ನೋ ಮಿತ್ರಾ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಈ ಸಿನಿಮಾ, ಕಳೆದ ವರ್ಷ ಅ.27ರಂದು ಬಾಂಗ್ಲಾ ಮತ್ತು ಭಾರತದಲ್ಲಿ ತೆರೆಕಂಡಿತ್ತು.

ದೊಂಬಿಹತ್ಯೆ ತಡೆ ಆದೇಶ ಪಾಲಿಸುವಂತೆ ರಾಜ್ಯಗಳಿಗೆ ಸುಪ್ರೀಂ ಮರುಸೂಚನೆ

ಗೋರಕ್ಷಕರ ಹಾವಳಿ ಮತ್ತು ದೊಂಬಿಹತ್ಯೆ ತಡೆಯುವ ಸಲುವಾಗಿ ತಾನು ನೀಡಿರುವ ನಿರ್ದೇಶನಗಳನ್ನು ಪಾಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರಿಂ ಕೋರ್ಟ್ ಮರು ಆದೇಶಿಸಿದೆ. ಗೋರಕ್ಷಕರ ಹಾವಳಿ ಮತ್ತು ದೊಂಬಿಹತ್ಯೆ ತಡೆಗೆ ಜುಲೈ 17ರಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಮಿಜೋರಾಂ, ತೆಲಂಗಾಣ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ದೆಹಲಿ ರಾಜ್ಯಗಳು ಇನ್ನೂ ವರದಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಮಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ಸೂಚನೆಯನ್ನು ನೀಡಿದೆ. ಗೋರಕ್ಷಣೆ ಹೆಸರಲ್ಲಿ ಹಾಗೂ ಮಕ್ಕಳ ಅಪಹರಣ ಹೆಸರಲ್ಲಿ ನಡೆಯುವ ದೊಂಬಿಹತ್ಯೆ ವಿರುದ್ಧ ಮಾಧ್ಯಮಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸಬೇಕು ಎಂದು ಕೇಂದ್ರ ಮತ್ತು ಎಲ್ಲ ರಾಜ್ಯಗಳಿಗೆ ಕೋರ್ಟ್ ಸೂಚಿಸಿತ್ತು.

ಕಾಂಗ್ರೆಸ್‌ಗೆ ಮರಳಿ ಅಧಿಕಾರಕ್ಕೆ ಬರುವ ಇಚ್ಛೆ ಇದ್ದಂತಿಲ್ಲ: ಜಾವಡೇಕರ್

ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರಕ್ಕೆ ಬರುವ ಇಚ್ಛೆ ಇರುವಂತೆ ತೋರುತ್ತಿಲ್ಲ, ಸುಳ್ಳುಗಳ ಮೇಲೆ ಬಿಜೆಪಿ ಸರ್ಕಾರದ ವಿರುದ್ಧ ಅಭಿಯಾನವನ್ನು ಆರಂಭಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಆರೋಪಿಸಿದ್ದಾರೆ. “ರಾಹುಲ್ ಗಾಂಧಿ ಅವರ ಬಳಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಾಕ್ಷಿಗಳಿಲ್ಲ. ಅವರೊಬ್ಬ ಗುರಿಯಿಲ್ಲದ ನಾಯಕ. ಕೇವಲ ಆರೋಪದ ಮೇಲೆ ಯಾರೊಬ್ಬರನ್ನೂ ಭ್ರಷ್ಟರನ್ನಾಗಿ ಮಾಡಲಾಗುವುದಿಲ್ಲಮ,” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಸೇರ್ಪಡೆಯಾದ ಮಧ್ಯಪ್ರದೇಶ ಬಿಜೆಪಿ ನಾಯಕಿ

ಮಧ್ಯಪ್ರದೇಶದ ಬಿಜೆಪಿ ನಾಯಕಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಉಪಾಧ್ಯಕ್ಷೆ ಪದ್ಮಾ ಶುಕ್ಲಾ ಅವರು ಸೋಮವಾರ ಪಕ್ಷಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. “೧೯೮೦ರಿಂದಲೂ ಪಕ್ಷದಲ್ಲಿದ್ದೇವೆ. ಪಕ್ಷ ಇದೀಗ ತನ್ನ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತದೆ. ಇದರಿಂದ ಬೇಸತ್ತು ಪಕ್ಷಕ್ಕೆ ರಾಜಿನಾಮೆ ನೀಡುತ್ತಿದ್ದೇನೆ,” ಎಂದು ಅವರು ಬಿಜೆಪಿ ರಾಜ್ಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತ ವನಿತೆಯರಿಗೆ ಟಿ೨೦ ಸರಣಿ

ಅನುಜಾ ಪಾಟೀಲ್ (೫೪: ೪೨ ಎಸೆತ, ೭ ಬೌಂಡರಿ) ಮತ್ತು ಜೆಮಿಮಾ ರಾಡ್ರಿಗಸ್ (೫೨: ೩೭ ಎಸೆತ, ೫ ಬೌಂಡರಿ, ೨ ಸಿಕ್ಸರ್) ಅವರುಗಳ ಅಜೇಯ ಅರ್ಧಶತಕದ ನೆರವಿನಿಂದ ಮಳೆಬಾಧಿತ ನಾಲ್ಕನೇ ಟಿ೨೦ ಪಂದ್ಯದಲ್ಲಿ ಭಾರತ ವನಿತಾ ತಂಡ 7 ವಿಕೆಟ್ ಗೆಲುವು ಸಾಧಿಸಿತು. ೧೩೫ ರನ್ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ವನಿತಾ ತಂಡ, ೧೫.೪ ಓವರ್‌ಗಳಲ್ಲಿ ಕೇವಲ ೩ ವಿಕೆಟ್ ಕಳೆದುಕೊಂಡು ೧೩೭ ರನ್ ಗಳಿಸಿತು. ಮಳೆಬಾಧಿತ ಪಂದ್ಯವನ್ನು ೧೭ ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಸರಣಿಯಲ್ಲಿ ೩-೦ ಮುನ್ನಡೆ ಸಾಧಿಸಿರುವ ಭಾರತ ವನಿತಾ ತಂಡ ನಾಳೆ ನಡೆಯಲಿರುವ ಐದನೇ ಹಾಗೂ ಕೊನೆಯ ಪಂದ್ಯದಲ್ಲೂ ಗೆಲುವು ಸಾಧಿಸುವ ಭರವಸೆಯಲ್ಲಿದೆ. ಅಂದಹಾಗೆ, ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ವನಿತೆಯರಿಗೂ ಬಲ್ಲಾನ್ ಡಿ'ಓರ್ ಪ್ರಶಸ್ತಿ?

ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ ನೀಡುವ ಪ್ರತಿಷ್ಠಿತ ಬಲ್ಲಾನ್ ಡಿ'ಓರ್ ಪ್ರಶಸ್ತಿಯನ್ನು ಈ ಸಾಲಿನಿಂದ ವನಿತೆಯರಿಗೂ ನೀಡುವ ಸಂಭವವಿದೆ ಎಂದು ಫ್ರಾನ್ಸ್ ಫುಟ್ಬಾಲ್ ಮ್ಯಾಗಜೀನ್ ಒಂದು ಇಂದು ಪ್ರಕಟಿಸಿದೆ. ಮುಂದಿನ ತಿಂಗಳು ವಿಜೇತರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಪ್ರಶಸ್ತಿ ರೇಸ್‌ನಲ್ಲಿ ಕ್ರೊವೇಷ್ಯಾದ ಲೂಕಾ ಮಾರ್ಡಿಚ್, ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ ಸೇರಿದಂತೆ ಪುರುಷರ ವಿಭಾಗದಲ್ಲಿ ೩೦ ಆಟಗಾರರಿದ್ದಾರೆ. ಅಂತೆಯೇ ವನಿತೆಯರ ವಿಭಾಗದಿಂದ ೧೫ ಮಂದಿ ಆಟಗಾರ್ತಿಯರ ಅಂತಿಮ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎಂದು ಮ್ಯಾಗಜೀನ್ ಹೇಳಿದೆ. ಡಿಸೆಂಬರ್ ೮ರಂದು ಪ್ಯಾರಿಸ್‌ನಲ್ಲಿ ಈ ಬಾರಿಯ ಬಲ್ಲಾನ್ ಡಿ'ಓರ್ ಪ್ರಶಸ್ತಿ ಸಮಾರಂಭ ಪ್ಯಾರಿಸ್‌ನಲ್ಲಿ ನಡೆಯಲಿದೆ. ೧೯೫೬ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಾ ಬರುತ್ತಿದ್ದು, ಇಲ್ಲೀವರೆಗೆ ಪುರುಷರಷ್ಟೇ ಪಡೆಯುತ್ತಿದ್ದುದು ಗಮನಾರ್ಹ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More