ರಫೇಲ್ ಡೀಲ್ ಹಗರಣ ಬೂದಿ ಮುಚ್ಚಿದ ಕೆಂಡದಂತೆ ಗೌಪ್ಯವಾಗಿರಲು ಕಾರಣವೇನು?

ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆ ವಿಚಿತ್ರ ಸನ್ನಿವೇಶ ಸೃಷ್ಟಿಸಿದೆ. ಹೊಲಾಂದ್ ಹೇಳಿಕೆಯನ್ನು ಕೇಂದ್ರ ಬಲವಾಗಿ ತಿರಸ್ಕರಿಸುತ್ತಿಲ್ಲ. ಹಾಗೆಂದು ವಿಪಕ್ಷಗಳು ಸಂಘಟಿತವಾಗಿ ಕೇಂದ್ರದ ವಿರುದ್ಧ ಮುಗಿಬೀಳುತ್ತಿಲ್ಲ. ಕಾರಣವೇನು? ಹಗರಣದ ಪ್ರಮುಖ ಪಾತ್ರಧಾರಿಗಳ ಮೌನ ಏನನ್ನು ಬಿಂಬಿಸುತ್ತಿದೆ?

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೊಲಾಂದ್ ಅವರು ಬಹಿರಂಗಪಡಿಸಿದ ಸ್ಫೋಟಕ ಮಾಹಿತಿಯಿಂದಾಗಿ ಎರಡು ದಿನಗಳ ಬಳಿಕ ವಿಚಿತ್ರ ಸನ್ನಿವೇಶವೊಂದು ದೇಶದ ರಾಜಕೀಯ ವಲಯವನ್ನು ಆವರಿಸಿದೆ. “ರಫೇಲ್ ಒಪ್ಪಂದದಲ್ಲಿ ಸಹಯೋಗಿ ಸಂಸ್ಥೆಯನ್ನು ಭಾರತವೇ ಪ್ರಸ್ತಾಪಿಸಿತ್ತು, ಅದರಲ್ಲಿ ತಮ್ಮ ಆಯ್ಕೆಗಳಿರಲಿಲ್ಲ,” ಎಂದು ಹೊಲಾಂದ್ ಹೇಳಿದ್ದರು.

ವಿಚಿತ್ರ ಸನ್ನಿವೇಶಗಳಲ್ಲಿ ಮೊದಲನೆಯದು, ಹೊಲಾಂದ್ ಹೇಳಿಕೆಯನ್ನು ಕೇಂದ್ರ ಸರ್ಕಾರ ಬಲವಾಗಿ ತಿರಸ್ಕರಿಸದೆ ಇರುವುದು. ಎರಡನೆಯದು, ಕಾಂಗ್ರೆಸ್ ಹೊರತುಪಡಿಸಿದರೆ ಉಳಿದ ವಿರೋಧಪಕ್ಷಗಳಾವುವೂ ಸಾವಿರಾರು ಕೋಟಿ ರುಪಾಯಿ ಅವ್ಯವಹಾರದ ಆರೋಪ ಕೇಳಿಬರುತ್ತಿರುವ ವಿವಾದದ ಬಗ್ಗೆ (ಅದು ತೀವ್ರ ಸ್ವರೂಪ ಪಡೆದ ಬಳಿಕವೂ) ದೊಡ್ಡ ಮಟ್ಟದಲ್ಲಿ ಚಕಾರ ಎತ್ತದಿರುವುದು.

ಮತ್ತೊಂದು ಮೌನ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್‌ಗೆ ಸಂಬಂಧಿಸಿದ್ದು. ತನ್ನ ವಿರುದ್ಧ ಧ್ವನಿ ಎತ್ತಿದ ಕಾಂಗ್ರೆಸ್ ಮತ್ತು ವಿವಾದವನ್ನು ಪ್ರಸಾರ ಮಾಡಿದ ಮಾಧ್ಯಮಗಳ ಮೇಲೆ ಮಾನನಷ್ಟ ಮೊಕದ್ದಮೆ ಸೇರಿದಂತೆ ವಿವಿಧ ಪ್ರಕರಣ ದಾಖಲಿಸುವುದಾಗಿ ಈ ಹಿಂದೆ ಬೆದರಿಕೆ ಒಡ್ಡಿದ್ದ ಕಂಪನಿಯು, ಹೊಲಾಂದ್ ಹೇಳಿಕೆ ನಂತರ ತುಟಿ ಬಿಚ್ಚಿಲ್ಲ!

ಇದೆಲ್ಲದರ ನಡುವೆ, ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಯನ್ನು ಬೇರೆ ರೀತಿ ಬಿಂಬಿಸುವ ಯತ್ನ ನಡೆದಿದೆ ಎನ್ನುತ್ತದೆ ‘ದಿ ವೈರ್’’ ಜಾಲತಾಣದ ವರದಿ. ಹೊಲಾಂದ್ ಕೆನಡಾದಲ್ಲಿ ಎಎಫ್‌ಪಿ ಸುದ್ದಿಸಂಸ್ಥೆಗೆ ಶುಕ್ರವಾರ ನೀಡಿದ್ದ ಸಂದರ್ಶನದಲ್ಲಿ ನೀಡಿದ, ‘ರಿಲಯನ್ಸ್ ಕಂಪನಿಯನ್ನು ಫ್ರಾನ್ಸ್ ಸೂಚಿಸಿರಲಿಲ್ಲ’ ಎಂಬ ಹೇಳಿಕೆಯಲ್ಲಿ ಅರ್ಧಸತ್ಯ ಮಾತ್ರ ಇದೆ ಎಂದು ಜಾಲತಾಣ ಹೇಳಿದೆ. ಎಎಫ್ ಪಿ ಪ್ರಕಟಿಸಿರುವ ಫ್ರೆಂಚ್ ಆವೃತ್ತಿಗೆ ಹೋಲಿಸಿದರೆ, ಇಂಗ್ಲಿಷ್ ಆವೃತ್ತಿಯಲ್ಲಿ ಒಂದು ಪ್ಯಾರಾವನ್ನು ಪ್ರಕಟಿಸಿಲ್ಲ ಎಂದು ಅದು ಆರೋಪಿಸಿದೆ. ಫ್ರೆಂಚ್ ಪತ್ರಿಕೆ ‘ಲೆ ಮೊಂಡ್’ ನಂತರ ಅದನ್ನು ಪ್ರಕಟಿಸಿರುವುದನ್ನು ಅದು ಉಲ್ಲೇಖಿಸಿರುವುದಲ್ಲದೆ ಆ ಪ್ಯಾರಾದ ವಿವರವನ್ನೂ ನೀಡಿದೆ.

“ಶುಕ್ರವಾರ ಮೋಂಟ್ರಿಯಲ್‌ನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಎಎಫ್‌ಪಿ ಜೊತೆ ಮಾತನಾಡಿದ ಹೊಲಾಂದ್, ‘ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಫೇಲ್ ಒಪ್ಪಂದದ ಮಾತುಕತೆಯ ಹೊಸ ಸೂತ್ರವಾಗಿ ರಿಲಯನ್ಸ್ ಸಮೂಹ ಸೇರಿಕೊಂಡಿತು’ ಎಂದು ಹೇಳಿದ್ದಾರೆ,” ಎಂಬ ವಿವರ ಆ ಪ್ಯಾರಾದಲ್ಲಿದೆ.

ಇದನ್ನೂ ಓದಿ : ಯುಪಿಎ ಮೇಲೆ ರಫೇಲ್ ಹಗರಣ ಹೇರಲು ಪ್ರಯತ್ನಿಸಿ ಪೇಚಿಗೀಡಾದ ಸಚಿವ ಪ್ರಸಾದ್

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿರುವಂತೆ, ಹೊಲಾಂದ್ ಹೇಳಿಕೆಯಲ್ಲಿ ವಿರೋಧಾಭಾಸವಿಲ್ಲ. ಬದಲಿಗೆ, ಇದು ಮೋದಿ ಸರ್ಕಾರ ರಿಲಯನ್ಸ್ ಪರವಾಗಿತ್ತು ಎಂಬ ಹೊಲಾಂದ್ ಅವರ ಹಿಂದಿನ ಹೇಳಿಕೆಯನ್ನು ಪುಷ್ಟೀಕರಿಸುತ್ತದೆ. ಅಲ್ಲದೆ, ಸರ್ಕಾರ ಮೊದಲು ರಿಲಯನ್ಸ್ ಹೆಸರನ್ನು ಪ್ರಸ್ತಾಪಿಸಿರುವ ಸಾಧ್ಯತೆ ಇದ್ದು, ನಂತರ ಡಸಾಲ್ಟ್ ಮತ್ತು ಅನಿಲ್ ಅಂಬಾನಿ ಅವರೇ ಅಂತಿಮ ಒಪ್ಪಂದ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿರಬಹುದು. ಹಾಗಾಗಿಯೇ, ಭಾರತ ಒತ್ತಡ ಹೇರಿತ್ತೇ ಎಂದು ಎಎಫ್‌ಪಿ ಪ್ರಶ್ನಿಸಿದಾಗ ಹೊಲಾಂದ್, “ಈ ಬಗ್ಗೆ ಡಸಾಲ್ಟ್ ಮಾತ್ರವೇ ಉತ್ತರಿಸಲು ಸಾಧ್ಯ,” ಎಂಬ ಹೇಳಿಕೆ ನೀಡಿರಬಹುದು ಎಂದು ‘ದಿ ವೈರ್’ ಹೇಳಿದೆ.

ಅಲ್ಲದೆ, ಕೇಂದ್ರ ಸರ್ಕಾರ ವಿನಾಕಾರಣ ಮುಖೇಶ್ ಅಂಬಾನಿ ಅವರನ್ನು ಪ್ರಕರಣದಲ್ಲಿ ಎಳೆದು ತರುತ್ತಿರುವುದನ್ನು ಅದು ಪ್ರಸ್ತಾಪಿಸಿದೆ. “ಅನಿಲ್ ಅಂಬಾನಿ ಮತ್ತು ಮುಖೇಶ್ ಇಬ್ಬರೂ ಪ್ರತ್ಯೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ. 2012ರಲ್ಲಿ ಯುಪಿಎ-2 ಸರ್ಕಾರ ಅಧಿಕಾರದಲ್ಲಿದ್ದಾಗ ಮುಖೇಶ್ ಅವರೊಂದಿಗೆ ಮೊದಲು ರಫೇಲ್ ಒಪ್ಪಂದವಾಗಿತ್ತು. ಬಳಿಕ ಮುಖೇಶ್ ಸೇನಾ ವ್ಯವಹಾರದಿಂದ ದೂರ ಸರಿದರು. 2012ರ ಆರ್ ಐ ಎಲ್ ಮತ್ತು ಡಸಾಲ್ಟ್ ನಡುವಿನ ಒಪ್ಪಂದ 2014ರಲ್ಲಿ ರದ್ದಾಯಿತು. ನಂತರ ಡಸಾಲ್ಟ್ ಹೊಸ ಪಾಲುದಾರನನ್ನು ಹುಡುಕಲು ಆರಂಭಿಸಿತು. ಮುಖೇಶ್ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿರಲಿಲ್ಲ. 2016ರಲ್ಲಿ ಅನಿಲ್ ಮತ್ತು ಡಸಾಲ್ಟ್ ನಡುವೆ ಅಧಿಕೃತವಾಗಿ ಒಪ್ಪಂದ ಏರ್ಪಟ್ಟಿತು. ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಬಿಟ್ಟು ಅನನುಭವಿ ರಿಲಯನ್ಸ್ ಡಿಫೆನ್ಸ್ (ಅನಿಲ್ ಒಡೆತನದ) ಕಂಪನಿಗೆ ಒತ್ತು ನೀಡಿದ್ದು ಮತ್ತು ರಿಲಯನ್ಸ್ ಎಂಟರ್ಟೇನ್ಮೆಂಟ್ ಹೊಲಾಂದ್ ಸಂಗಾತಿ ಹಾಗೂ ನಟಿ ಜ್ಯೂಲಿ ಗಯೇ ಅವರಿಗೆ ಸಿನಿಮಾದಲ್ಲಿ ಬಂಡವಾಳ ಹೂಡಿದ್ದು ವಿವಾದಕ್ಕೆ ಕಾರಣ,” ಎಂದು ಅದು ಹೇಳಿದೆ.

ತನ್ನ ಹೊಸ ವಿಮಾನಯಾನ ಕಂಪನಿಗೆ ರಿಲಯನ್ಸ್ ಸಮೂಹ 289 ಎಕರೆ ಜಮೀನು ಅಗತ್ಯವಿದೆ ಎಂದು ಮಹಾರಾಷ್ಟ್ರ ಸರ್ಕಾರವನ್ನು 2015ರಲ್ಲಿ ಕೋರಿರುವ, ಡಸಾಲ್ಟ್ ಮುಖ್ಯಸ್ಥರೊಂದಿಗೆ ಮೋದಿ, ಅನಿಲ್ ಹಾಗೂ ಕೆಲವು ಸೇನಾ ಪ್ರಮುಖರು ಪ್ಯಾರಿಸ್‌ನಲ್ಲಿ ಸುದೀರ್ಘ ಮಾತುಕತೆ ನಡೆಸಿರುವ ಹಾಗೂ 2017ರಲ್ಲಿ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ ಅಸ್ತಿತ್ವಕ್ಕೆ ಬಂದಿರುವ ಬಗ್ಗೆ ಸಾಕ್ಷ್ಯಗಳಿವೆ. ಇವೆಲ್ಲವೂ ಹೊಲಾಂದ್ ಹೇಳಿರುವ ‘ಹೊಸ ಸೂತ್ರ’ ಮಾತಿಗೆ ತಾಳೆ ಹೊಂದುವಂತಿವೆ ಎಂಬ ಪ್ರಮುಖ ಅಂಶಗಳು ಜಾಲತಾಣದ ವರದಿಯಲ್ಲಿ ಉಲ್ಲೇಖವಾಗಿದೆ.

ಇತ್ತ, ವಿವಾದದ ಬಗ್ಗೆ ಕಾಂಗ್ರೆಸ್ ಹೊರತುಪಡಿಸಿ ಉಳಿದ ವಿರೋಧಪಕ್ಷಗಳು ತಾಳಿರುವ ದಿವ್ಯಮೌನವನ್ನು ‘ಸ್ಕ್ರಾಲ್’ ಜಾಲತಾಣ ಪ್ರಶ್ನಿಸಿದೆ. ಹೊಲಾಂದ್ ತಮ್ಮ ಹೇಳಿಕೆಯಲ್ಲಿ ಬಿಜೆಪಿಯನ್ನಷ್ಟೇ ದೂರದೆ ಪ್ರಧಾನಿ ಮೋದಿ ಅವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇಷ್ಟಾದರೂ ಪ್ರತಿಪಕ್ಷಗಳು ಇದನ್ನು ಬಲವಾಗಿ ವಿರೋಧಿಸಿಲ್ಲ ಅಥವಾ ವಿರೋಧಿಸುವ ಗೋಜಿಗೇ ಹೋಗಿಲ್ಲ ಎಂದು ಹೇಳಿದೆ.

2019ರ ಪ್ರಧಾನಿ ಅಭ್ಯರ್ಥಿ ಎಂದು ಗುರುತಿಸಿಕೊಳ್ಳಲು ಹವಣಿಸುತ್ತಿರುವ ಮಮತಾ ಬ್ಯಾನರ್ಜಿ ಅವರು ಮೋದಿ ಹೆಸರನ್ನು ಕೂಡ ಪ್ರಸ್ತಾಪಿಸಿಲ್ಲ ಎಂಬುದು ಗಮನಾರ್ಹ. ಜೆಡಿಎಸ್, ಬಿಎಸ್ ಪಿ, ಬಿಜು ಜನತಾದಳ ಮತ್ತಿತರ ಪಕ್ಷಗಳು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಡಿಎಂಕೆ ಮುಖಂಡ ಎಂ ಕೆ ಸ್ಟಾಲಿನ್, “ಪ್ರಧಾನಿ ದೇಶಕ್ಕೆ ಉತ್ತರದಾಯಿಯಾಗಿರಬೇಕು,” ಎಂದು ಹೇಳುತ್ತ ಸಂಪೂರ್ಣ ತನಿಖೆಗೆ ಆಗ್ರಹಿಸಿದರು. ತಡವಾಗಿ ಪ್ರತಿಕ್ರಿಯಿಸಿದ ಟಿಡಿಪಿಯ ಚಂದ್ರಬಾಬು ನಾಯ್ಡು, “ಹೊಲಾಂದ್ ಹೇಳಿಕೆ ಕುರಿತು ಪ್ರಧಾನಿ ಪ್ರತಿಕ್ರಿಯಿಸಬೇಕು,” ಎಂದರು. ಆರ್ ಜೆಡಿ, “ದೇಶದ ಚೌಕಿದಾರ್ ಚೋರ್ ಹೈ,” ಎಂಬ ಹೇಳಿಕೆಯನ್ನು ಟ್ವೀಟ್ ಮಾಡಿದೆ. ಸಮಾಜವಾದಿ ಪಕ್ಷ, “ಸಂಸದೀಯ ವಿಚಾರಣೆ ನಡೆಸಬೇಕು,” ಎಂದಿದ್ದರೆ, ಆಮ್ ಆದ್ಮಿ ಪಕ್ಷ, “ವಿವಾದವನ್ನು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು,” ಎಂದಿದೆ.

ಬಹುತೇಕ ಪ್ರತಿಪಕ್ಷಗಳ ಮೌನಕ್ಕೆ ಕಾರಣವೂ ಇದೆ. ಈ ಹಿಂದೆ ಕಾಂಗ್ರೆಸ್ 2002ರ ಗುಜರಾತ್ ಹಿಂಸಾಚಾರವನ್ನು ಪ್ರಸ್ತಾಪಿಸುತ್ತ ಮೋದಿ ಅವರನ್ನು ಸಾವಿನ ದಲ್ಲಾಳಿ ಎಂದು ಕರೆದು ಸ್ವತಃ ಟೀಕೆ ಎದುರಿಸಿತ್ತು. ಪಂಜಾಬ್, ಗೋವಾ, ದೆಹಲಿ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಆಪ್ ಪಕ್ಷ ಪ್ರಧಾನಿ ಅವರನ್ನು ನೇರವಾಗಿ ಟೀಕಿಸುವ ಗೋಜಿಗೆ ಹೋಗಿರಲಿಲ್ಲ. ಹಾಗಾಗಿ ಕಾದುನೋಡುವ ತಂತ್ರವನ್ನು ಅವು ಅನುಸರಿಸುತ್ತಿರಬಹುದು. ಅಲ್ಲದೆ, ಕೆಲ ಪಕ್ಷಗಳು ಮುಂದಿನ ಲೋಕಸಭೆ ಚುನಾವಣೆ ನಂತರ ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗುವ ಸಾಧ್ಯತೆಯೂ ಇರುವುದರಿಂದ ವಿರೋಧ ಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಅದು ವರದಿ ಹೇಳಿದೆ, ಅಲ್ಲದೆ, ಮಾಧ್ಯಮಗಳಲ್ಲಿ ಪ್ರಚಾರ ಪಡೆದ ಮಾತ್ರಕ್ಕೆ ವಿವಾದ ಮತದಾರನ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಈಗಾಗಲೇ ಅಮೆರಿಕದಂತಹ ದೇಶಗಳಲ್ಲಿ ನಡೆದಿರುವ ಅಧ್ಯಯನಗಳು ಹೇಳುತ್ತವೆ. ಇದು ಕೂಡ ಸರ್ಕಾರದ ವಿರುದ್ಧ ದೊಡ್ಡಮಟ್ಟದ ಧ್ವನಿ ಏಳದಿರಲು ಕಾರಣವಿರಬಹುದು ಎಂದು ಜಾಲತಾಣ ಅಂದಾಜಿಸಿದೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More