ಜನಿಸಿದ ಹೆಣ್ಣುಮಗುವಿನ ಜೀವ ಉಳಿದಿದ್ದರೆ ಚಿನ್ನದ ಬೆಲೆ ಕುಸಿದಿದೆ ಎಂದರ್ಥ!

ಚಿನ್ನಕ್ಕೂ ಹೆಣ್ಣಿಗೂ ಒಂದು ವಿಶಿಷ್ಟ ನಂಟು. ಅಂದರೆ, ಹೆಣ್ಣಿಗೆ ಚಿನ್ನಾಭರಣಗಳು ಇಷ್ಟ ಎಂಬುದಲ್ಲ. ಚಿನ್ನದ ಬೆಲೆಯಲ್ಲಾಗುವ ಏರಿಳಿತ ಹೆಣ್ಣುಮಗುವಿನ ಜನನವನ್ನು ಅಥವಾ ಜನಿಸಿದ ಹೆಣ್ಣುಮಗುವಿನ ಉಳಿವನ್ನು ನಿರ್ಧರಿಸುತ್ತದೆ ಎಂದು ಇಂಗ್ಲೆಂಡಿನ ಎಸೆಕ್ಸ್‌ ವಿವಿಯ ಅಧ್ಯಯನವೊಂದು ತಿಳಿಸಿದೆ

ಚಿನ್ನದ ಬೆಲೆ ಬಾಳುವ ಲೋಹ. ಚಿನ್ನದಾಭರಣಗಳಿಲ್ಲದೇ ಒಂದು ಸಣ್ಣ ಕಾರ್ಯಕ್ರಮವೂ ಜರುಗುವುದಿಲ್ಲ. ಹೆಣ್ಣು ತನ್ನ ಅಂದ ಹೆಚ್ಚಿಸಿಕೊಳ್ಳುವುದಕ್ಕೆ ಚಿನ್ನದ ಆಭರಣಗಳನ್ನು ತೊಟ್ಟುಕೊಳ್ಳುವುದು ಸಾಮಾನ್ಯ. ಇಂಗ್ಲೆಂಡಿನ ಎಸ್ಸೆಕ್ಸ್‌ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಬೋಧಿಸುತ್ತಿರುವ ಭಾರತೀಯ ಮೂಲದ ಪ್ರೊಫೆಸರ್‌ ಸೋನಿಯಾ ಭಲೋತ್ರ ಅವರಿಗೆ ಹೆಣ್ಣು ಮತ್ತು ಚಿನ್ನದ ನಡುವಿನ ಸಂಬಂಧ ಬೇರೆಯದ್ದೇ ಎಂಬ ಅನುಮಾನ. ಅದು ಸಾಂಪ್ರದಾಯಿಕವಾದದ್ದೇ, ಸಾಮಾಜಿಕವಾದದ್ದೇ ಎಂಬ ಪ್ರಶ್ನೆ ಕಾಡುತ್ತಿತ್ತು.

ಅಭಿಷೇಕ್‌ ಚಕ್ರವರ್ತಿ ಮತ್ತು ಸೆಲಿಮ್‌ ಗುಲೆಶಿ ಅವರೊಂದಿಗೆ ಜೊತೆಯಾಗಿ ನಡೆಸಿದ ದೀರ್ಘ ಅಧ್ಯಯನ ಸೋನಿಯಾ ಅವರ ಅನುಮಾನವನ್ನು ಬಲಪಡಿಸಿದ್ದು, ಹೆಣ್ಣುಮಗುವಿನ ಅಸ್ತಿತ್ವಕ್ಕೂ ಚಿನ್ನಕ್ಕೂ ಸಂಬಂಧವಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅಂದರೆ, ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದ್ದರೆ, ಅದಕ್ಕೆ ಚಿನ್ನದ ಬೆಲೆಯಲ್ಲಿ ಆಗುತ್ತಿರುವ ಏರಿಳಿತ ಕಾರಣ!

ವರದಕ್ಷಿಣೆ ಭಾರತೀಯ ಸಮಾಜದಲ್ಲಿ ಹೊಸದಲ್ಲ. ೧೯೬೧ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆಯಾದರೂ ಈ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಭಾರತವಷ್ಟೇ ಅಲ್ಲ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾಗಳಲ್ಲೂ ಜೀವಂತವಾಗಿದೆ. ಹೆಣ್ಣಿಗೆ ವೈವಾಹಿಕ ಜೀವನದಲ್ಲಿ ಆರ್ಥಿಕವಾಗಿ ಬೆಂಬಲವಾಗಿರಲಿ ಎಂಬ ಕಾರಣಕ್ಕೆ ಇದು ಚಾಲ್ತಿಯಲ್ಲಿತ್ತು. ಕಾಲಾನಂತರ ಅದು ಗಂಡ ಮತ್ತು ಅವನ ಕುಟುಂಬದ ಶೋಷಣೆಯ ಅಸ್ತ್ರವಾಗಿಬಿಟ್ಟಿದೆ ಎಂಬುದು ಸಮಾಜಶಾಸ್ತ್ರಜ್ಞರ ವಿಶ್ಲೇಷಣೆ.

ಅದೇನೇ ಆದರೂ, ಹೆಣ್ಣಿನ ಕುಟುಂಬದವರಿಗೆ ವರದಕ್ಷಿಣೆ ಎಂಬುದು ಆರ್ಥಿಕ ಹೊರೆಯೇ. ಅವರ ವಾರ್ಷಿಕ ಆದಾಯಕ್ಕಿಂತ ಆರು ಪಟ್ಟು ಹೆಚ್ಚಿನ ಹೊರೆಯನ್ನು ಈ ಸಾಮಾಜಿಕ ಅನಿಷ್ಟ ಪದ್ಧತಿ ಹೊರಿಸುತ್ತದೆ ಎನ್ನುತ್ತವೆ ಅಂಕಿ-ಅಂಶಗಳು. ಹಾಗಾಗಿ, ಮನೆಯಲ್ಲಿ ಹೆಣ್ಣುಮಗು ಹುಟ್ಟುತ್ತಿದ್ದಂತೆ ಪೋಷಕರು ಮಗುವಿನ ಹೆಸರಿನಲ್ಲಿ ಹಣವನ್ನು ಉಳಿತಾಯ ಮಾಡಲಾರಂಭಿಸುತ್ತಾರೆ. ಈ ಕುರಿತು ನಿಖರ ದಾಖಲೆಗಳು ಇಲ್ಲವಾದ್ದರಿಂದ ಸೋನಿಯಾ ಮತ್ತು ಅವರ ಸಂಶೋಧನಾ ತಂಡ ಮೂರು ದಶಕಗಳ ಚಿನ್ನದ ಬೆಲೆಯ ಏರಿಳಿತವನ್ನು ಸಂಗ್ರಹಿಸಿತು.

ವರದಕ್ಷಿಣೆಯ ಭಾಗವಾಗಿ ಚಿನ್ನದ ಆಭರಣಗಳನ್ನು ನೀಡುವುದು ರೂಢಿ ಇರುವ ಭಾರತ ದೇಶವು ವಿಶ್ವದ ಶೇ.೯೦ರಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇದು ಜಾಗತಿಕ ಚಿನ್ನದ ಮಾರುಕಟ್ಟೆಯ ಬೆಲೆಯನ್ನು ಪ್ರಭಾವಿಸುತ್ತದೆ. ಹಾಗಾಗಿ, ೧೯೭೨ರಿಂದ ೨೦೦೫ರವರೆಗಿನ ಮಾಸಿಕ ಬೆಲೆಗಳ ಪಟ್ಟಿಯನ್ನು ಸೋನಿಯಾ ಅವರ ತಂಡ ಸಿದ್ಧಪಡಿಸಿತು. ಅದರಂತೆ, ಚಿನ್ನದ ಬೆಲೆಯು ಲಿಂಗಾನುಪಾತವನ್ನು ಪ್ರಭಾವಿಸುತ್ತ ಬಂದಿರುವುದು ಸ್ಪಷ್ಟವಾಗಿದೆ. ಹಾಗೆಯೇ, ಹೆಣ್ಣು ಜನಿಸಿದ ಒಂದು ತಿಂಗಳ ಅವಧಿಯಲ್ಲಿ ಅದು ಬದುಕುಳಿಯುವುದನ್ನು ನಿರ್ಧರಿಸುವಲ್ಲಿಯೂ ಈ ಬೆಲೆ ಪಾತ್ರ ವಹಿಸಿದೆ ಎನ್ನಲಾಗಿದೆ!

ಮೂರು ದಶಕಗಳ ಅವಧಿಯಲ್ಲಿ ೧ ಲಕ್ಷ ಶಿಶುಗಳ ಜನನದ ಮಾಹಿತಿಯನ್ನು ವಿಶ್ಲೇಷಿಸಿದ ತಂಡವು ಕಂಡುಕೊಂಡಿದ್ದೇನೆಂದರೆ, ಚಿನ್ನದ ಬೆಲೆ ಏರಿದಾಗ ಹೆಣ್ಣುಮಗು ಜನಿಸಿದ್ದರೆ ಅದು ಬದುಕುಳಿದ ಸಾಧ್ಯತೆ ಗಂಡು ಮಗುವಿಗಿಂತ ಕಡಿಮೆ ಎಂಬುದು.

೧೯೭೨ರಿಂದ ೧೯೮೫ರ ಅವಧಿಯಲ್ಲಿ ಪ್ರತಿ ತಿಂಗಳು ಚಿನ್ನದ ಬೆಲೆ ಶೇ.೬.೩ರಷ್ಟು ಹೆಚ್ಚಿದ್ದು, ನವಜಾತು ಹೆಣ್ಣು ಶಿಶುವಿನ ಸಾವಿನ ಪ್ರಮಾಣ ಶೇ.೬.೪ರಷ್ಟು ಹೆಚ್ಚಿದೆ. ಆದರೆ ನವಜಾತ ಗಂಡು ಶಿಶುವಿನ ಸಾವಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಜನಿಸಿದ ಹೆಣ್ಣುಮಗುವಿನ ಬಗ್ಗೆ ಉಪೇಕ್ಷೆ ಮತ್ತು ತಾರತಮ್ಯ ಅನುಸರಿಸುವ ಮೂಲಕ ಅಪೌಷ್ಟಿಕತೆ ಮತ್ತು ಸಾವಿಗೆ ಕಾರಣವಾಗಿರುವುದು ಕಂಡುಬಂದಿದೆ.

೧೯೮೬ರ ಹೊತ್ತಿಗೆ ಅಲ್ಟ್ರಾಸೌಂಡ್‌ ತಂತ್ರಜ್ಞಾನ ಬಳಕೆ ಬಂದಿತ್ತು. ಇದರಿಂದಾಗಿ ಗರ್ಭದಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂಬುದನ್ನು ತಿಳಿಯುವುದಕ್ಕೂ ಅವಕಾಶವಾಯಿತು. ಈ ಹಿನ್ನೆಲೆಯಲ್ಲಿ, ಸೋನಿಯಾ ಅವರ ತಂಡವು ೧೯೮೬ರಿಂದ ೨೦೦೫ರ ಅವಧಿಯಲ್ಲಿ ಅಂಕಿ-ಅಂಶಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿತು. ಈ ಅವಧಿಯಲ್ಲಿ ಗಮನಾರ್ಹ ಸಂಖ್ಯೆಯ ಪೋಷಕರು, ಹುಟ್ಟಲಿರುವ ಮಗು ಹೆಣ್ಣು ಎಂದು ತಿಳಿದ ಮೇಲೆ ಗರ್ಭಪಾತ ಮಾಡಿಸಿದ್ದು ಸ್ಪಷ್ಟವಾಗಿ ತಿಳಿದುಬಂದಿದೆ.

ಇದನ್ನೂ ಓದಿ : ಒಂದೇ ವಾರದಲ್ಲಿ ₹1000 ಕುಸಿದ ಚಿನ್ನ ₹4000 ಕುಸಿದ ಬೆಳ್ಳಿ, ಖರೀದಿಗಿದು ಸಕಾಲ

ತಾವು ಕಂಡುಕೊಂಡ ಅಂಕಿ-ಅಂಶಗಳು ಹೇಳುವ ಸತ್ಯವನ್ನು ಪರಾಮರ್ಶಿಸಲು ಸೋನಿಯಾ ಅವರ ತಂಡವು ಗ್ರಾಮೀಣ ಪ್ರದೇಶಗಳಲ್ಲೂ ಸಮೀಕ್ಷೆಗಳನ್ನು ನಡೆಸಿದ್ದು, ಅವುಗಳ ಫಲಿತಾಂಶವೂ ಅಧ್ಯಯನದ ಅಂಶಗಳನ್ನು ಖಚಿತಪಡಿಸಿವೆ. ಇತ್ತೀಚಿನ ಗಣತಿಯ ಪ್ರಕಾರ, ೨೦೧೩ರಿಂದ ೨೦೧೫ರ ಅವಧಿಯಲ್ಲಿ ಲಿಂಗಾನುಪಾತವು ೧,೦೦೦ ಬಾಲಕರಿಗೆ ೯೦೦ ಬಾಲಕಿಯರಷ್ಟಿದೆ. ಹೆಣ್ಣು ಭ್ರೂಣಹತ್ಯೆ ಹೆಚ್ಚಳದ ಪರಿಣಾಮ ಈ ಲಿಂಗಾನುಪಾತದಲ್ಲಿ ಅಂತರ ಹೆಚ್ಚಿದೆ ಎನ್ನಲಾಗಿದೆ.

ಚಿನ್ನದ ರೂಪದಲ್ಲಿ ನೀಡಲಾಗುವ ವರದಕ್ಷಿಣೆ ಹೆಣ್ಣಿನ ಅಸ್ತಿತ್ವವನ್ನು ನಿರ್ಧರಿಸುವಂತಾಗಿರುವುದು ದುರಂತ ಎನ್ನುವ ಈ ಅಧ್ಯಯನ, ಮಹಿಳೆಗೂ ಸಮಾನ ಆಸ್ತಿ ಹಕ್ಕು, ಗಂಡಿನಂತೆ ಹೆಣ್ಣಿಗೂ ಶಿಕ್ಷಣ ಲಭ್ಯವಾದರೆ ಈ ಸಮಸ್ಯೆ ನಿಧಾನವಾಗಿ ಪರಿಹಾರವಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More