ಬಿಷಪ್‌ ವಿರುದ್ಧದ ಪ್ರತಿಭಟನೆ ರಹಸ್ಯ ಕಾರ್ಯಸೂಚಿ ಎಂದ ಕ್ಯಾಥೊಲಿಕ್‌ ಬಿಷಪ್ಸ್‌ ಕೌನ್ಸಿಲ್ 

ಅತ್ಯಾಚಾರ ಆರೋಪಿ ಬಿಷಪ್‌ ಫ್ರಾಂಕೊ ಮುಲ್ಲಕಲ್‌ ವಿರುದ್ಧ ಕೇರಳದಲ್ಲಿ ನಡೆದ ಪ್ರತಿಭಟನೆ ಮತ್ತು ಮಾಧ್ಯಮಗಳ ಚರ್ಚೆಗಳನ್ನು ಕ್ಯಾಥೊಲಿಕ್‌ ಚರ್ಚ್‌ಗಳ ವಿರುದ್ಧದ ‘ರಹಸ್ಯ ಕಾರ್ಯಸೂಚಿ’ ಎನ್ನುವ ಮೂಲಕ ಕೇರಳ ಕ್ಯಾಥೊಲಿಕ್‌ ಬಿಷಪ್ಸ್‌ ಕೌನ್ಸಿಲ್‌ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದೆ

ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪದಡಿ ಬಿಷಪ್ ಫ್ರಾಂಕೊ ಮುಲ್ಲಕಲ್‌‌ ಬಂಧನಕ್ಕೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪಾದ್ರಿ ಮತ್ತು ಸನ್ಯಾಸಿನಿಯೊಬ್ಬರ ಮೇಲೆ ಕ್ರಮ ಗೊಳ್ಳುವ ತೀರ್ಮಾನವನ್ನು ಕ್ಯಾಥೊಲಿಕ್‌ ಆಡಳಿತ‌ ತೆಗೆದುಕೊಂಡಿದೆ. ಆ ಮೂಲಕ ಬಿಷಪ್‌ ಮುಲ್ಲಕಲ್‌ ಬಂಧನದ ವಿಚಾರವನ್ನು ಕೇರಳ ಕ್ಯಾಥೊಲಿಕ್‌ ಆಡಳಿತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಬಿಷಪ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮತ್ತು ಮಾಧ್ಯಮಗಳ ಚರ್ಚೆಗಳನ್ನು ಭಾರತದಲ್ಲಿ ಕ್ಯಾಥೊಲಿಕ್‌ ಚರ್ಚ್‌ಗಳ ವಿರುದ್ಧ ನಡೆಯುತ್ತಿರುವ ‘ರಹಸ್ಯ ಕಾರ್ಯಸೂಚಿ’ ಎಂದು ಕೇರಳ ಕ್ಯಾಥೊಲಿಕ್‌ ಬಿಷಪ್ಸ್‌ ಕೌನ್ಸಿಲ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಹೇಳಿಕೆ ನೀಡಿರುವ ಕೌನ್ಸಿಲ್, ಭಾರತದಲ್ಲಿ ಕ್ಯಾಥೋಲಿಕ್‌ ಚರ್ಚ್‌ಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹುಟ್ಟುಹಾಕುವ ಹುನ್ನಾರ ನಡೆದಿದೆ ಎಂದು ತಿಳಿಸಿದೆ. “ಭಾರತೀಯ ಮಾಧ್ಯಮಗಳಲ್ಲಿನ ಕೆಲ ಪ್ರಭಾವಿ ವ್ಯಕ್ತಿಗಳು ಕ್ಯಾಥೊಲಿಕ್‌ ಚರ್ಚ್‌ಗಳ ವಿರುದ್ಧ ರಹಸ್ಯ ಕಾರ್ಯಸೂಚಿ ಹೊಂದಿದ್ದಾರೆ. ಇದರ ಹಿಂದೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಭಾರತೀಯ ನಾಗರಿಕ ಸಮುದಾಯ ಇಂತಹ ದ್ವೇಷಪೂರಿತ ರಹಸ್ಯ ಕಾರ್ಯಸೂಚಿಗಳನ್ನು ಗುರುತಿಸಬೇಕಿದೆ,” ಎಂದು ಕೌನ್ಸಿಲ್‌ ವಕ್ತಾರ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿಯಲ್ಲಿ ಜಲಂಧರ್‌ ರೋಮನ್‌ ಕ್ಯಾಥೊಲಿಕ್‌ ಬಿಷಪ್ ಮುಲ್ಲಕಲ್‌ ಬಂಧನದ ವಿಚಾರವೀಗ ಕೇರಳದ ಧಾರ್ಮಿಕ ವಲಯದಲ್ಲಷ್ಟೇ ಅಲ್ಲದೆ, ರಾಜಕೀಯ ವಲಯದಲ್ಲಿಯೂ ಬಹುದೊಡ್ಡ ಚರ್ಚೆಗೆ ನಾಂದಿ ಹಾಡಿದೆ. 2014 ಹಾಗೂ 2016 ನಡುವಿನ ಅವಧಿಯಲ್ಲಿ 13 ಭಾರಿ ಬಿ‍‍ಷಪ್‌ ಅವರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಸನ್ಯಾಸಿನಿಯೊಬ್ಬರು ಕೇರಳ ಪೊಲೀಸರಿಗೆ ದೂರು ನೀಡಿದ್ದರು. ಆ ವಿಚಾರವಾಗಿ ವ್ಯಾಟಿಕನ್‌ ಸಿಟಿಗೂ ಪತ್ರ ಬರೆದಿದ್ದರು.

ಕ್ರೈಸ್ತ ಸನ್ಯಾಸಿನಿಯ ಆರೋಪದ ಹಿನ್ನೆಲೆಯಲ್ಲಿ ಬಿಷಪ್‌ ಪದಚ್ಯುತಿ ಮತ್ತು ಬಂಧನಕ್ಕೆ ಒತ್ತಾಯಿಸಿ ಸನ್ಯಾಸಿನಿಯರು ಹಾಗೂ ವಿವಿಧ ಸಂಘಟನೆಗಳಿಂದ ಕೇರಳದಲ್ಲಿ ಪ್ರತಿಭಟನೆಗಳು ನಡೆದಿದ್ದವು. ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಷಪ್‌ ಅತ್ಯಾಚಾರ ವಿಷಯದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಪ್ರಾಂಕೊ ಮುಲ್ಲಕಲ್‌ ತಮ್ಮ ಸ್ಥಾನದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವುದಾಗಿ ಸೆ.15ರಂದು ತಿಳಿಸಿದ್ದರು. ಆ ಮೂಲಕ, ತನಿಖಾ ತಂಡದ ವಿಚಾರಣೆ ಎದುರಿಸುವುದಾಗಿ ಹೇಳಿದ್ದರು. ತನಿಖಾ ತಂಡದ ವಿಚಾರಣೆಗೆ ಒಳಗಾದ ಬಿಷಪ್‌ ಅವರನ್ನು ಸೆ.22ರಂದು ಕೇರಳ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ : ರಾಜಕೀಯ ಅಸ್ತ್ರವಾಗಿ ಅತ್ಯಾಚಾರ ಬಳಕೆ; ವಿನಾಯಕ ದಾಮೋದರ ಸಾವರ್ಕರ್ ಸಮರ್ಥನೆ

ಈ ಎಲ್ಲ ಬೆಳವಣಿಗಳ ನಡುವೆಯೇ ಬಿಷಪ್‌ ಬಂಧನ ಮತ್ತು ಅವರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವೆಂದು ಕೇರಳ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಹೇಳಿಕೆ ನೀಡಿದ್ದರು. ಆ ಹೇಳಿಕೆ ಕೇರಳದಲ್ಲಿ ವ್ಯಾಪಕ ವಿವಾದ ಸೃಷ್ಟಿಸಿ ವಿರೋಧ ಪಕ್ಷಗಳು, ಮಹಿಳಾ ಸಂಘಟನೆಗಳು ಹಾಗೂ ಕ್ರೈಸ್ತ ಸನ್ಯಾಸಿನಿಯರ ಆಕ್ರೋಶಕ್ಕೆ ಕಾರಣವಾಯಿತು. ಕೊಡಿಯೇರಿ ಬಾಲಕೃಷ್ಣ ಹೇಳಿಕೆಗೂ ತಮ್ಮ ಪಕ್ಷಕ್ಕೂ ಸಂಬಂಧವಿಲ್ಲವೆಂದು ಸಿಪಿಎಂ ಸ್ಪಷ್ಟಪಡಿಸಿತು. “ಕೇರಳ ಪೊಲೀಸರು ನಡೆಸುತ್ತಿರುವ ತನಿಖೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸನ್ಯಾಸಿನಿಗೆ ನ್ಯಾಯ ದೊರಕಲಿದೆ. ಸರ್ಕಾರವು ಸಂತ್ರಸ್ತೆಯ ಪರ ನಿಲ್ಲಲಿದೆ. ಬಿಷಪ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಸರ್ಕಾರದ ಬೆಂಬಲವಿದೆ,” ಎಂದು ಕೇರಳ ಸಚಿವ ಇ ಪಿ ಜಯರಾಜನ್‌ ಸ್ಪಷ್ಟಪಡಿಸಿದ್ದರು.

ಇತ್ತ ಬಂಧನದಲ್ಲಿರುವ ಬಿಷಪ್‌ ಅವರಿಗೆ ಕೇರಳ ನ್ಯಾಯಲಯ ಜಾಮೀನು ನಿರಾಕರಿಸಿದೆ. ಅತ್ತ ಪ್ರತಿಭಟನೆಗಿಳಿದಿದ್ದ ಸನ್ಯಾಸಿನಿಯರು ಚರ್ಚುಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಹಣ ಮತ್ತು ಪ್ರಭಾವ ಚರ್ಚುಗಳನ್ನು ನಿಯಂತ್ರಿಸುತ್ತಿದ್ದು, ಅವುಗಳನ್ನು ಸ್ವಚ್ಛಗೊಳಿಸುವ ಸಮಯ ಬಂದಿದೆ ಎಂದು ಸನ್ಯಾಸಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು, ಮಾಧ್ಯಮ, ಧಾರ್ಮಿಕ ಹಾಗೂ ರಾಜಕೀಯ ವಲಯಗಳಲ್ಲಿ ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿರುವ ಈ ಪ್ರತಿಷ್ಠಿತ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂದು ಕಾದುನೋಡಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More