ಭೂಕಬಳಿಕೆ ಬಯಲಿಗೆಳೆದ 15 ದಿನದೊಳಗೇ ಕೆಎಎಸ್ ಅಧಿಕಾರಿಗೆ ಎತ್ತಂಗಡಿ ಶಿಕ್ಷೆ!

ದೇವನಹಳ್ಳಿ, ನೆಲಮಂಗಲ ತಾಲೂಕಿನಲ್ಲಿ ಕಬಳಿಸಲಾಗಿದ್ದ ಹಾಗೂ ಅಕ್ರಮವಾಗಿ ಮಂಜೂರಾಗಿದ್ದ ನೂರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ನೀಡಿದ್ದ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಗಿದೆ. ಆ ಮೂಲಕ, ಸರ್ಕಾರಿ ಅಧಿಕಾರಿಗೆ ಪ್ರೋತ್ಸಾಹದ ಬದಲು ಬರೆ ಎಳೆಯಲಾಗಿದೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಬೀಳುಭೂಮಿ ಮತ್ತು ಅರಣ್ಯಭೂಮಿಯನ್ನು ಕಬಳಿಸಲು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿರುವ ಜಾಲವನ್ನು ಬಯಲಿಗೆಳೆದಿದ್ದ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಎನ್ ಮಹೇಶ್‌ ಬಾಬು ಅವರಿಗೆ ಸರ್ಕಾರ ವರ್ಗಾವಣೆ ಶಿಕ್ಷೆ ವಿಧಿಸಿದೆ. ಭೂ ಅಕ್ರಮಗಳನ್ನು ಹೊರಗೆಡವಿದ ಅತ್ಯಲ್ಪ ದಿನಗಳಲ್ಲೇ ಇವರನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ, ಪಟ್ಟಭದ್ರ ಹಿತಾಸಕ್ತಿ ಮತ್ತು ಭೂ ಮಾಫಿಯಾಗೆ ರಾಜ್ಯ ಸರ್ಕಾರ ಮಣಿದಿದೆಯಲ್ಲದೆ, ಸರ್ಕಾರಿ ಭೂಮಿಗಳನ್ನು ದೋಚುತ್ತಿದ್ದವರಿಗೆ ಸರ್ಕಾರ ಪರೋಕ್ಷವಾಗಿ ನೆರವಾದಂತಿದೆ.

ದೇವನಹಳ್ಳಿ ಮತ್ತು ನೆಲಮಂಗಲ ತಾಲೂಕಿನಲ್ಲಿ ೧೦೦ಕ್ಕೂ ಹೆಚ್ಚು ಎಕರೆ ಸರ್ಕಾರಿ ಮತ್ತು ಅರಣ್ಯ ಜಮೀನು ಕಬಳಿಕೆಯನ್ನು ೨೦೧೮ರ ಸೆಪ್ಟಂಬರ್‌ನಲ್ಲಿ ಬಯಲಿಗೆಳೆದಿದ್ದರು. ಅಲ್ಲದೆ, ತನಿಖೆ ನಡೆಸಿ ಆ ಎಲ್ಲ ಜಮೀನುಗಳನ್ನು ಕಂದಾಯ ಮತ್ತು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿಸಿದ್ದರು. ಈ ಪ್ರಕರಣಗಳಲ್ಲಿ ಭಾಗಿ ಆಗಿರುವ ಸಂಬಂಧಪಟ್ಟ ಅಧಿಕಾರಿ, ನೌಕರರು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಸರ್ಕಾರ ಈವರೆವಿಗೂ ಕಠಿಣ ಕ್ರಮ ಕೈಗೊಂಡಿಲ್ಲ. ವಿಪರ್ಯಾಸವೆಂದರೆ, ಭೂ ಅಕ್ರಮವನ್ನು ಬಯಲಿಗೆಳೆದ ಅಧಿಕಾರಿಯನ್ನೇ ವರ್ಗಾವಣೆ ಮಾಡಿದೆಯಲ್ಲದೆ, ಈವರೆಗೂ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ! ವಿಪರ್ಯಾಸವೆಂದರೆ, ಪ್ರಕರಣವನ್ನು ಬಯಲಿಗೆಳೆದ ತಿಂಗಳಲ್ಲೇ ಅವರನ್ನು ವರ್ಗಾಯಿಸಲಾಗಿದೆ.

ಮಹೇಶ್ ಬಾಬು ಅವರು ಈ ಹಿಂದೆ ಬೆಂಗಳೂರು ನಗರ ಉತ್ತರ ತಾಲೂಕಿನಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿಯೂ, ಒತ್ತುವರಿ ಮತ್ತು ಕಬಳಿಕೆ ಆಗಿದ್ದ ಸರ್ಕಾರಿ, ಅರಣ್ಯಭೂಮಿಯನ್ನು ತೆರವುಗೊಳಿಸಿ ಸಂರಕ್ಷಿಸಿದ್ದರು. ಹಾಗೆಯೇ, ಆ ಜಮೀನುಗಳಿಗೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ದಾಖಲಾತಿಗಳಲ್ಲಿ ಸರ್ಕಾರಿ ಭೂಮಿ ಎಂದು ನಮೂದಿಸಲು ಕಾರಣರಾಗಿದ್ದರು. ಆ ಸಂದರ್ಭದಲ್ಲಿಯೂ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ನೆಲಮಂಗಲ ತಾಲೂಕಿನಲ್ಲಿ ಅಕ್ರಮವಾಗಿ ಮಂಜೂರಾಗಿದ್ದ ಅರಣ್ಯ ಜಮೀನನ್ನು ಸರ್ಕಾರಕ್ಕೆ ಹಿಂದಿರುಗಿಸಿರುವ ಆದೇಶ
ಇದನ್ನೂ ಓದಿ : ಸರ್ಕಾರಿ ಭೂಕಬಳಿಕೆ: ‘ಭೂಮಿ’ ನಿರ್ವಹಣೆ ಕೇಂದ್ರ ಕಚೇರಿಯಲ್ಲೇ ಒಳಸಂಚು?

ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ೧೯ ಎಕರೆ ವಿಸ್ತೀರ್ಣ ಹೊಂದಿದ್ದ ಸರ್ಕಾರಿ ಬೀಳು ಜಮೀನನ್ನು ಅನಧಿಕೃತ ವ್ಯಕ್ತಿಗೆ ಹಕ್ಕು ಬದಲಾವಣೆ ಮಾಡಲಾಗಿದ್ದನ್ನು ಈ ಅಧಿಕಾರಿ ಬಯಲಿಗೆಳೆದಿದ್ದರಲ್ಲದೆ, ಭೂಮಿ ನಿರ್ವಹಣಾ ಮುಖ್ಯ ಕೇಂದ್ರದಲ್ಲೇ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ತನಿಖೆ ಮೂಲಕ ಸಾಬೀತು ಮಾಡಿದ್ದರು. ಈ ಪ್ರಕರಣವನ್ನು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರೆ ಇನ್ನಷ್ಟು ಭೂ ಅಕ್ರಮಗಳು ಹೊರಬರಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಆದರೆ, ಈ ಪತ್ರ ಆಧರಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯೇ ವಿನಾ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಪ್ರಕರಣ ಹಸ್ತಾಂತರವಾಗಿಲ್ಲ.

ಅದೇ ರೀತಿ, ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಬಳ್ಳಗೆರೆ ಸರ್ವೆ ನಂಬರ್‌ ೪೪ರಲ್ಲಿದ್ದ, ಅರಣ್ಯ ಇಲಾಖೆಗೆ ಸೇರಿರುವ ೯೪ ಎಕರೆ ೩೦ ಗುಂಟೆಯನ್ನು ೩೦ ಮಂದಿಗೆ ಅಕ್ರಮವಾಗಿ ಮಂಜೂರು ಮಾಡಿದ್ದನ್ನು ಪತ್ತೆಹಚ್ಚಿದ್ದರು. ಅಲ್ಲದೆ, ಮಂಜೂರು ಮಾಡಿಸಿಕೊಂಡಿದ್ದ ೩೦ ಮಂದಿಯ ಜೊತೆ ಪ್ರಭಾವಿ ವ್ಯಕ್ತಿಯೊಬ್ಬರು ಮಾಡಿಕೊಂಡಿದ್ದ ಒಪ್ಪಂದವನ್ನು ವಿಫಲಗೊಳಿಸಿದ್ದರು. ಈ ಪ್ರಭಾವಿ ವ್ಯಕ್ತಿ ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿದ್ದ ಸಂದರ್ಭದಲ್ಲಿನ ಸಚಿವರೊಬ್ಬರ ಕುಟುಂಬ ಸದಸ್ಯ ಎಂದು ಹೇಳಲಾಗಿದೆ.

ಈ ಪ್ರಕರಣ ಕುರಿತು ಸುದೀರ್ಘವಾಗಿ ವಿಚಾರಣೆ ನಡೆಸಿದ್ದ ಎನ್ ಮಹೇಶ್ ಬಾಬು, ಅಕ್ರಮವಾಗಿ ೩೦ ಮಂದಿಗೆ ೯೪ ಎಕರೆ ೩೦ ಗುಂಟೆ ಅರಣ್ಯಭೂಮಿಯ ಮಂಜೂರು ಆದೇಶವನ್ನು ರದ್ದುಗೊಳಿಸಿದ್ದರು. ಅಲ್ಲದೆ, ೨೦೧೮ರ ಸೆ.೫ರಂದು ತೆರೆದ ನ್ಯಾಯಾಲಯದಲ್ಲಿ ಈ ಕುರಿತು ಆದೇಶ ಹೊರಡಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More