ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು  

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು

ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.‌ ಸಂಪುಟ ವಿಸ್ತರಣೆ, ನಿಗಮ ಮತ್ತು ಮಂಡಳಿಗೆ ನೇಮಕ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಪ್ರಾಶಸ್ತ್ಯ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ. ವಿಧಾನ ಪರಿಷತ್‌ ಉಪಚುನಾವಣೆ ನಡೆಯಲಿದ್ದ ಹಿನ್ನೆಲೆಯಲ್ಲಿ ಭಿನ್ನಮತ ಚಟುವಟಿಕೆ ಸಹಿಸುವುದಿಲ್ಲ ಎಂದು ಎಚ್ಚರಿಸಲು ಸಭೆ ಕರೆಯಲಾಗಿತ್ತು.‌ ಆದರೆ, ಬಿಜೆಪಿ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಈ ವಿಚಾರ ಅಪ್ರಸ್ತುತವಾಗಲಿದೆ.

ನಟ ರಾಜಕುಮಾರ್ ಅಪಹರಣ ತೀರ್ಪು ಇಂದು

೧೮ ವರ್ಷಗಳ ಹಿಂದಿನ ನಟ ರಾಜಕುಮಾರ್ ಅಪಹರಣ ಪ್ರಕರಣದ ತೀರ್ಪನ್ನು ಈರೋಡ್ ಜಿಲ್ಲಾ ನ್ಯಾಯಾಲಯ ಮಂಗಳವಾರ ಪ್ರಕಟಿಸಲಿದೆ. ಕರ್ನಾಟಕದ ಗಡಿಯಲ್ಲಿದ್ದ ತಮ್ಮ ಫಾರ್ಮ್ ಹೌಸ್‌ನಿಂದ ರಾಜ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ ೧೦೮ ದಿನಗಳ ಕಾಲ ಸೆರೆಯಲ್ಲಿಟ್ಟು ಬಳಿಕ ಬಿಡುಗಡೆ ಮಾಡಿದ್ದ.

‘ಪೋಷಣೆ ಅಭಿಯಾನ-ಪೌಷ್ಟಿಕ ಕರ್ನಾಟಕ ಯೋಜನೆ’ಗೆ ಚಾಲನೆ

ಅಪೌಷ್ಟಿಕತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಪೋಷಣೆ ಅಭಿಯಾನ-ಪೌಷ್ಟಿಕ ಕರ್ನಾಟಕ ಯೋಜನೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಚಾಲನೆ ನೀಡಲಿದ್ದಾರೆ. ಜೊತೆಗೆ, ಯೋಜನೆ ಕುರಿತು ಮಾಹಿತಿ ನೀಡುವ 'ಸ್ನೇಹ' ಮೊಬೈಲ್ ಆಪ್, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನೂ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಜಯಮಾಲಾ ತಿಳಿಸಿದ್ದಾರೆ

ದಾಖಲೆ ಹೊಸ್ತಿಲಲ್ಲಿ ಎಂ ಎಸ್ ಧೋನಿ

ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ೪ರ ಹಂತದ ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಸೆಣಸುತ್ತಿರುವ ಭಾರತ ತಂಡ, ಅಜೇಯವಾಗಿ ಫೈನಲ್ ತಲುಪುವ ಗುರಿ ಹೊತ್ತಿದೆ. ಇದೇ ವೇಳೆ ಮಾಜಿ ನಾಯಕ ಎಂ ಎಸ್ ಧೋನಿ ದಾಖಲೆಯೊಂದನ್ನು ಬರೆಯಲು ಸಜ್ಜಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಪಂದ್ಯಗಳನ್ನಾಡಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಧೋನಿ ಜಿಗಿಯಲಿದ್ದಾರೆ.37ರ ಹರೆಯದ ಧೋನಿ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದೊಂದಿಗೆ ೫೦೫ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದ್ದಾರೆ. ಆ ಮೂಲಕ ಅವರು ರಾಹುಲ್ ದ್ರಾವಿಡ್ (೫೦೪) ಅವರ ದಾಖಲೆಯನ್ನು ಹತ್ತಿಕ್ಕುತ್ತಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವವರು ಸಚಿನ್ ತೆಂಡೂಲ್ಕರ್. ೬೬೪ ಪಂದ್ಯಗಳನ್ನಾಡಿರುವ ಸಚಿನ್ ಸಾರ್ವಕಾಲಿಕ ಸರ್ವಾಧಿಕ ಪಂದ್ಯಗಳನ್ನಾಡಿದ ಕ್ರಿಕೆಟಿಗ ಎನಿಸಿದ್ದಾರೆ. ಪಂದ್ಯ ಸಂಜೆ ೫ ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ನೆಟ್ವರ್ಕ್‌ನಲ್ಲಿ ಪ್ರಸಾರವಾಗಲಿದೆ.

ಕೊರಿಯಾ ಓಪನ್‌ನಲ್ಲಿ ಸೈನಾ, ಸಮೀರ್ ಆಕರ್ಷಣೆ

ಸಿಯೋಲ್‌ನಲ್ಲಿ ಇಂದಿನಿಂದ ಶುರುವಾಗುತ್ತಿರುವ ೬೦೦,೦೦೦ ಡಾಲರ್ ಬಹುಮಾನ ಮೊತ್ತದ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೈನಾ ನೆಹ್ವಾಲ್ ಮತ್ತು ಸಮೀರ್ ವರ್ಮಾ ಕ್ರಮವಾಗಿ ವನಿತೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಆಕರ್ಷಣೆಯಾಗಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಚೀನಾ ಓಪನ್‌ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ ಸೈನಾ, ಕೊರಿಯಾ ಓಪನ್‌ನಲ್ಲಿ ಗೆಲುವು ಸಾಧಿಸುವ ಗುರಿ ಹೊತ್ತಿದ್ದಾರೆ. ಇನ್ನು, ಪುರುಷರ ವಿಭಾಗದಲ್ಲಿ ಸ್ಟಾರ್ ಆಟಗಾರ ಕಿಡಾಂಬಿ ಶ್ರೀಕಾಂತ್ ಈ ಪಂದ್ಯಾವಳಿಯಿಂದ ಹಿಮ್ಮೆಟ್ಟಿದ್ದಾರೆ. ಚೀನಾ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಶ್ರೀಕಾಂತ್, ಜಪಾನ್ ಆಟಗಾರ ಕೆಂಟೊ ಮೊಮೊಟಾ ವಿರುದ್ಧ ಸೋಲಿನ ಯಾತನೆಗೆ ಗುರಿಯಾಗಿದ್ದರು. ಯುವ ಆಟಗಾರ್ತಿ ವೈಷ್ಣವಿ ರೆಡ್ಡಿ ಮತ್ತು ಅಜಯ್ ಜಯರಾಮ್ ಕೂಡ ಟೂರ್ನಿಯಲ್ಲಿರುವ ಭಾರತದ ಇನ್ನಿತರ ಪ್ರಮುಖ ಶಟ್ಲರ್‌ಗಳು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More