ರಫೇಲ್ ಡೀಲ್ | ಹೊಲಾಂದ್ ಮಾತಿನಲ್ಲಿ ತಮಗೆ ಬೇಕಾದ ಸಾಲನ್ನಷ್ಟೇ ಸುದ್ದಿ ಮಾಡಿದ ಮಾಧ್ಯಮಗಳು!

ರಿಲಯನ್ಸ್ ಢಿಪೆನ್ಸ್ ಕಂಪನಿಯನ್ನು ರಫೇಲ್ ಒಪ್ಪಂದದ ಪಾಲುದಾರನಾಗಿ ನೇಮಿಸಿಕೊಳ್ಳಲು ಭಾರತ ಸರ್ಕಾರ ಸೂಚಿಸಿತ್ತು ಎಂಬ ಹೊಲಾಂದ್ ಮಾತನ್ನು ಮರೆಯಲ್ಲಿಟ್ಟು, ‘ಈ ಕುರಿತು ಡಸಾಲ್ಟ್ ಕಂಪನಿಯನ್ನೇ ಕೇಳಬೇಕು’ ಎಂಬರ್ಥದ ಎರಡನೇ ಮಾತನ್ನು ಮಾತ್ರ ಕೆಲ ಮಾಧ್ಯಮಗಳು ಸುದ್ದಿ ಮಾಡಿವೆ

ರಫೇಲ್ ಒಪ್ಪಂದದ ವಿಚಾರವಾಗಿ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಫ್ರಾನ್ಸ್‌ನ ಡಸಾಲ್ಟ್ ಕಂಪನಿಯ ಪಾಲುದಾರನನ್ನಾಗಿ ಮಾಡಿಕೊಳ್ಳುವಂತೆ ಪ್ರಧಾನಿ ಮೋದಿ ಸರ್ಕಾರ ಸೂಚಿಸಿತ್ತು, ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂದ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ತಿರುಚಿ ಭಾರತದ ಕೆಲ ಮಾಧ್ಯಮಗಳು ಸುದ್ದಿ ಮಾಡಿವೆ.

ಹೊಲಾಂದ್ ಅವರು ಹೇಳಿಕೆ ನೀಡಿದ ಮೇಲೆ ಕೇಂದ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ವಿಷಯವನ್ನು ತಣ್ಣಗಾಗಿಸಲು ಹರಸಾಹಸಪಡುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ರಫೇಲ್ ಒಪ್ಪಂದ ಹಾಗೂ ಮೋದಿ ಸರ್ಕಾರದ ರಫೇಲ್ ಒಪ್ಪಂದಗಳ ಬಗೆಗೆ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೊಸ ಸುಳ್ಳು ಸೃಷ್ಟಿಸಿದ್ದು ಒಂದೆಡೆಯಾದರೆ, ಹೊಲಾಂದ್ ಅವರ ಹೇಳಿಕೆಗಳನ್ನೇ ಜನರಿಗೆ ತಪ್ಪಾಗಿ ಅರ್ಥೈಸಿ ಗೊಂದಲಕ್ಕೆ ಈಡುಮಾಡುವ ಪ್ರಯತ್ನ ಇನ್ನೊಂದೆಡೆ ನಡೆದಿದೆ.

ಇದನ್ನೂ ಓದಿ : ಯುಪಿಎ ಮೇಲೆ ರಫೇಲ್ ಹಗರಣ ಹೇರಲು ಪ್ರಯತ್ನಿಸಿ ಪೇಚಿಗೀಡಾದ ಸಚಿವ ಪ್ರಸಾದ್

“ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತವು ಫ್ರಾನ್ಸ್ ಸರ್ಕಾರದ ಮೇಲೆ ಒತ್ತಡ ಹೇರಿದುದರ ಬಗೆಗೆ ನನಗೆ ತಿಳಿದಿರಲಿಲ್ಲ,” ಎಂದು ಹೊಲಾಂದ್ ಈ ಹಿಂದೆ ರಫೇಲ್ ವಿಚಾರವಾಗಿ ಹೇಳಿಕೆ ನೀಡಿದ್ದರು. ಅದೇ ಹೇಳಿಕೆಯನ್ನು ಇಟ್ಟುಕೊಂಡು ಭಾರತದ ಕೆಲ ಮಾಧ್ಯಮಗಳು ಹಾಗೂ ಕೇಂದ್ರ ಸರ್ಕಾರದ ಬೆಂಬಲಿಗರು ಬೇಕಾಗಿದ್ದನ್ನು ಮಾತ್ರ ಆಯ್ದುಕೊಂಡು ವಿಷಯವನ್ನು ಸರಿದೂಗಿಸಲು ನೋಡಿದ್ದಾರೆ. ಫ್ರಾನ್ಸ್ ಮೂಲದ ಎಎಫ್‌ಪಿ ಸುದ್ದಿಸಂಸ್ಥೆಗೆ ರಫೇಲ್ ಒಪ್ಪಂದದ ಕುರಿತಾಗಿ ಹೊಲಾಂದ್ ಸ್ಪೋಟಕ ಮಾಹಿತಿಗಳನ್ನು ನೀಡಲು ನಿರಾಕರಿಸಿದ್ದಾರೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿವೆ. ಆದರೆ, ನಿಜವಾಗಿಯೂ ಹೊಲಾಂದ್ ಅವರು ಹೇಳಿದ್ದೇನು ಎಂಬುದನ್ನು ತಾಳೆ ಹಾಕಲಾಗಿದ್ದು ,ಸತ್ಯಾಂಶ ಬಹಿರಂಗಗೊಂಡಿದೆ.

‘ಹೊಸ ಸೂತ್ರ’

ಹೊಲಾಂದ್ ಮ್ಯಾಂಟ್ರಿಯಲ್‌ನ ಕಾರ್ಯಕ್ರಮವೊಂದರಲ್ಲಿ (ಸೆ.೨೨) ಭಾಗಿಯಾದಾಗ ಎಎಫ್‌ಪಿಯವರು ರಫೇಲ್ ಒಪ್ಪಂದದ ಕುರಿತಾಗಿ ಪ್ರಶ್ನೆಯನ್ನು ಕೇಳಿರುತ್ತಾರೆ. ಆ ಪ್ರಶ್ನೆಗೆ ಉತ್ತರಿಸಿದ ಹೊಲಾಂದ್ ಹೇಳಿಕೆಯನ್ನು ಎಎಫ್‌ಪಿ ಪ್ರಕಟಿಸಿದ ರೀತಿಗೂ ಹಾಗೂ ಅಲ್ಲೇ ಇದ್ದ ‘ಲಿ ಮೊಂಡೆ’ ದೈನಿಕ ಪ್ರಕಟಿಸಿದ ರೀತಿಗೂ ವ್ಯತ್ಯಾಸ ಕಂಡುಬಂದಿದೆ. “ರಫೇಲ್ ಒಪ್ಪಂದ ಕುರಿತ ಫ್ರಾನ್ಸ್ ಜೊತೆಗಿನ ಮಾತುಕತೆಯಲ್ಲಿ ‘ರಿಲಯನ್ಸ್ ಡಿಫೆನ್ಸ್ ಕಂಪನಿ’ಯು ಮೋದಿಯವರ ಹೊಸ ಸೂತ್ರದ ಭಾಗ. ಒಟ್ಟಾರೆಯಾಗಿ ಹೇಳುವುದಾದರೆ ಮೋದಿ ಸರ್ಕಾರವೇ ಅನಿಲ್ ಅಂಬಾನಿ ಹೆಸರನ್ನು ರಫೇಲ್ ಒಪ್ಪಂದದಲ್ಲಿ ಡಸಾಲ್ಟ್‌ಗೆ ಪಾಲುದಾರರಾಗಿ ಪ್ರಸ್ತಾಪಿಸಿತ್ತು. ತಮ್ಮ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ಹೊಲಾಂದ್ ಪುನರುಚ್ಚರಿಸಿದ್ದಾರೆ.

ಮುಂದುವರಿದು, “ರಿಲಯನ್ಸ್ ಕಂಪನಿಯನ್ನು ಡಸಾಲ್ಟ್ ಕಂಪನಿಯ ಜೊತೆ ಪಾಲುದಾರನನ್ನಾಗಿ ಮಾಡಿಕೊಳ್ಳುವಂತೆ ಭಾರತ ಸರ್ಕಾರ ಒತ್ತಡ ಹೇರಿತ್ತೇ?” ಎಂಬ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಹೊಲಾಂದ್, “ಭಾರತ ಒತ್ತಡ ಹೇರಿದುದರ ಕುರಿತಾಗಿ ನನಗೆ ತಿಳಿದಿಲ್ಲ, ಡಸಾಲ್ಟ್ ಕಂಪನಿಯೇ ಈ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ಹೊಂದಿದೆ. ಭಾರತದ ಈ ವಿವಾದದಲ್ಲಿ ನಾನು ಮಧ್ಯಪ್ರವೇಶಿಸಬಾರದೆಂದು ಇಚ್ಛಿಸಿದ್ದೇನೆ,” ಎಂದೂ ಹೇಳಿದ್ದಾರೆ.

ಅಪೂರ್ಣ ಅನುವಾದ

ಆದರೆ, ಎಎಫ್‌ಪಿ ತನ್ನ ಇಂಗ್ಲಿಷ್ ಆವೃತ್ತಿಯ ಹೊಲಾಂದ್‌ ಅವರ ಮಾತುಗಳ ಎರಡನೇ ಭಾಗವನ್ನು ಮಾತ್ರ ಅನುವಾದಿಸಿದೆ. ಅಂದರೆ, "ಭಾರತವು ರಿಲಯನ್ಸ್ ಮತ್ತು ಡಸಾಲ್ಟ್ ಒಟ್ಟಿಗೆ ಕೆಲಸ ಮಾಡುವಂತೆ ಒತ್ತಡ ಹೇರಿತ್ತೇ?” ಎಂದು ಕೇಳಿದಾಗ ಹೊಲಾಂದ್‌ ಅವರು, “ಅದರ ಬಗೆಗೆ ತಿಳಿದಿಲ್ಲ. ಡಸಾಲ್ಟ್ ಮಾತ್ರ ಇದರ ಕುರಿತಾಗಿ ಹೇಳಿಕೆ ನೀಡಬಹುದು,” ಎಂದು ಹೇಳಿದ್ದನ್ನು ಮಾತ್ರ ಸುದ್ದಿ ಮಾಡಲಾಗಿದೆ. ಇದನ್ನು ಆಧರಿಸಿಯೇ, “ಹೊಲಾಂದ್ ಅವರು ರಫೇಲ್ ಕುರಿತಾಗಿ ಹೇಳಿಕೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ,” ಎಂದು ‘ರಿಪಬ್ಲಿಕ್’ ಹಾಗೂ ‘ಸಿಎನ್‌ಎನ್‌’ ಸುದ್ದಿವಾಹಿನಿಗಳು ವರದಿ ಮಾಡಿವೆ. ಕೆಲವರು ಇದನ್ನು ‘ಸ್ಪಷ್ಟ ನಿರಾಕರಣೆ’ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More