ಟ್ವಿಟರ್ ಸ್ಟೇಟ್ | ರಾಜಕೀಯ ಸ್ವಚ್ಛತೆ ಹೊಣೆಯನ್ನು ಸಂಸತ್ತಿಗೆ ವಹಿಸಿದ ಸುಪ್ರೀಂ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು, ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಸಂಸತ್ತೇ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿದೆ

ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಗೆ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪೊಂದನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ನ್ಯಾಯಪೀಠವು, ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಸಂಸತ್ತೇ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ತೀರ್ಪು ನೀಡಿದೆ. ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ನಿರ್ಧಾರವನ್ನು ಸಂಸತ್ತಿನ ವ್ಯಾಪ್ತಿಯಲ್ಲಿಯೇ ಪರಿಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಸಂಸತ್ತು ಮತ್ತು ನ್ಯಾಯಾಲಯದ ನಡುವೆ ಇರುವ ಲಕ್ಷ್ಮಣರೇಖೆಯನ್ನು ದಾಟಲು ಬಯಸುವುದಿಲ್ಲ ಎಂದು ಹೇಳಿದೆ. ಆದರೆ ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ನಲ್ಲಿ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ವಿವರಗಳನ್ನು ದಪ್ಪಕ್ಷರಗಳಲ್ಲಿ ನಮೂದಿಸಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಭ್ರಷ್ಟಾಚಾರ ಮತ್ತು ರಾಜಕೀಯದಲ್ಲಿ ಅಪರಾಧ ಹೆಚ್ಚಾಗುತ್ತಿರುವುದು ಪ್ರಜಾಪ್ರಭುತ್ವದ ಬೇರುಗಳನ್ನು ಸಡಿಲಗೊಳಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, “ಈ ಅಪಾಯವನ್ನು ಹತ್ತಿಕ್ಕಲು ಸಂಸತ್ತು ಸೂಕ್ತ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು,” ಎಂದು ಅಭಿಪ್ರಾಯಪಟ್ಟಿದೆ. “ಮತದಾರರಿಗೆ ಅಭ್ಯರ್ಥಿಗಳ ಮೇಲಿನ ಆರೋಪಗಳ ವಿವರ ತಿಳಿಯುವ ಹಕ್ಕಿದೆ. ಹೀಗಾಗಿ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ವಿಚಾರಣೆ ಎದುರಿಸುತ್ತಿರುವ ಮೊಕದ್ದಮೆಗಳ ಬಗ್ಗೆ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಾಕಷ್ಟು ವಿವರಗಳನ್ನು ಕೊಡಬೇಕು,” ಎಂದೂ ಕೋರ್ಟ್ ಹೇಳಿದೆ.

ತೀರ್ಪಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರ ಚರ್ಚೆಯಾಗುತ್ತಿದೆ. ಬಹುತೇಕ ಟ್ವೀಟಿಗರು ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, “ಚುನಾವಣಾ ಅಭ್ಯರ್ಥಿಗಳು ಆರೋಪಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಕಾರಣದಿಂದ ಸ್ಪರ್ಧೆಯಿಂದ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎನ್ನುವ ಸುಪ್ರೀಂ ಕೋರ್ಟ್ ತೀರ್ಪು ಸರಿ. ವಾದಿಗಳು ನೀಡಿರುವ ದೂರುಗಳ ಮೇಲೆ ಪೊಲೀಸ್ ಚಾರ್ಜ್‌ಶೀಟ್‌ ಮೇಲೆ ಆರೋಪ ಹೊರಿಸಲಾಗಿರುತ್ತದೆ. ಇದರ ಆಧಾರದ ಮೇಲೆ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸುವುದು ಅಪಾಯಕಾರಿ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು, ಕ್ರೂರ ಆರೋಪಗಳನ್ನು ಎದುರಿಸುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ತೀರ್ಪು ಬರುವವರೆಗೂ ಕಾಯುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. “ಅತ್ಯಾಚಾರ ಮತ್ತು ಕೊಲೆಗಳಂತಹ ಕ್ರೂರ ಕೃತ್ಯಗಳ ಆರೋಪ ಹೊರಿಸಿದ ವ್ಯಕ್ತಿಗಳು ಮತ್ತು ಸಾಮಾನ್ಯ ಅಪರಾಧಗಳಲ್ಲಿ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳ ನಡುವೆ ವ್ಯತ್ಯಾಸವಿಲ್ಲವೇ? ಸಂಸತ್ತು ರಾಜಕೀಯದಲ್ಲಿ ಅಪರಾಧೀಕರಣದ ಕುರಿತಂತೆ ಕಾನೂನು ರೂಪಿಸುವಾಗ ಈ ವ್ಯತ್ಯಾಸವನ್ನು ಪರಿಗಣಿಸುವುದೇ? ಅಂತಹ ಜವಾಬ್ದಾರಿಯುತ ನಿರ್ಣಯವನ್ನು ಸಂಸತ್ತಿನಿಂದ ನಿರೀಕ್ಷಿಸಬಹುದೇ?” ಎಂದು ರಾಜ್‌ದೀಪ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್ ತನ್ನ ಮೇಲಿನ ಜವಾಬ್ದಾರಿಯನ್ನು ಸಂಸತ್ತಿನ ಮೇಲೆ ಹೊರಿಸಿ ತಪ್ಪಿಸಿಕೊಂಡಿದೆ ಎಂದೂ ರಾಜ್‌ದೀಪ್ ಟ್ವೀಟ್ ಮಾಡಿದ್ದಾರೆ. ಆದರೆ, ಕೆಲವು ಟ್ವೀಟಿಗರು ಆರೋಪ ಸಾಬೀತಾಗುವವರೆಗೂ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಸಂದೇಸರಾ ಪಲಾಯನಕ್ಕೆ ಆಕ್ರೋಶ, ಟ್ವಿಸ್ಟ್ ಕೊಡಲು ಬಿಜೆಪಿ ಪ್ರಯತ್ನ

ಕೆಲವು ಟ್ವೀಟಿಗರು ಸಂಸತ್ತು ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. “ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ವಿಚಾರಣೆಯ ವಿವರಗಳನ್ನು ಮತದಾರರಿಗೆ ತಿಳಿಯುವಂತೆ ಪ್ರಚಾರ ಮಾಡಿ ಪಾರದರ್ಶಕವಾಗಿರಬೇಕು ಎಂದು ಹೇಳಿದೆ. ವಿಷಯದ ಮೇಲೆ ಬೆಳಕು ಚೆಲ್ಲುವುದು ಉತ್ತಮ ಪರಿಹಾರವೇ. ಆದರೆ, ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ಬಗ್ಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸಂಸ್ಥೆಗಳೇ ನಿರ್ಣಯ ಕೈಗೊಳ್ಳಲಿ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಈ ವಿಚಾರದಲ್ಲಿ ನಿಜವಾಗಿಯೂ ನಾವು ಸಂಸತ್ತನ್ನು ನಂಬಬಹುದೇ?” ಎಂದು ನ್ಯಾಯವಾದಿ ಕರುಣಾ ನಂದಿ ಪ್ರಶ್ನಿಸಿದ್ದಾರೆ.

ಪೊಲೀಸ್ ಇಲಾಖೆ, ಎನ್‌ಎಸ್‌ಎ ಮತ್ತಿತರ ತನಿಖೆ/ವಿಚಾರಣಾ ಸಂಸ್ಥೆಗಳ ಮೇಲೆ ನ್ಯಾಯಾಲಯಕ್ಕೆ ಭರವಸೆ ಇಲ್ಲ ಎನ್ನುವ ರೀತಿಯಲ್ಲಿಯೇ ಬಹಳಷ್ಟು ಟ್ವೀಟಿಗರು ಸುಪ್ರೀಂ ಕೋರ್ಟ್‌ ತೀರ್ಪನ್ನು ವಿಶ್ಲೇಷಿಸಿದ್ದಾರೆ. ನ್ಯಾಯಾಲಯದ ವಿಚಾರವಾಗಿ ವಿಶ್ಲೇಷಣಾ ಬರಹಗಳನ್ನು ಬರೆಯುವ ಕೌಸ್ತುಭ್ ಮೆಹ್ತಾ ಅವರು ಟ್ವೀಟ್ ಮಾಡಿ, “ಈ ತೀರ್ಪು ಪೊಲೀಸ್ ಇಲಾಖೆ, ಎನ್‌ಎಸ್‌ಎ ಮತ್ತಿತರ ತನಿಖೆ/ವಿಚಾರಣಾ ಸಂಸ್ಥೆಗಳ ವಿಶ್ವಾಸಾರ್ಹತೆ ಬಗ್ಗೆ ಏನು ಹೇಳುತ್ತದೆ? ಭೀಮಾ ಕೋರೆಗಾಂವ್ ವಿಚಾರವಾಗಿ ಬಂಧನಕ್ಕೊಳಗಾದವರಿಗೆ ಸಂಬಂಧಿಸಿ ಪೊಲೀಸ್/ಎನ್‌ಎಸ್‌ಎ/ಸಿಬಿಐ ಮೇಲೆ ನಂಬಿಕೆ ಇಡಬೇಕು ಎಂದು ಎಚ್ ಸಾಳ್ವೆ ಅವರು ಸುಪ್ರೀಂ ಕೋರ್ಟ್ ಮುಂದೆ ಅಭಿಪ್ರಾಯಪಟ್ಟಿದ್ದರು. ಆದರೆ, ಸ್ವತಃ ಸುಪ್ರೀಂ ಕೋರ್ಟ್‌ ಈ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ಎಂ ಕೆ ವೇಣು ಟ್ವೀಟ್ ಮಾಡಿ, “ನಾನು ಸುಪ್ರೀಂ ಕೋರ್ಟ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ. ಪರೋಕ್ಷವಾಗಿ ಅಮಿತ್ ಶಾ ತನಿಖಾ ಸಂಸ್ಥೆಗಳ ನೇತೃತ್ವ ವಹಿಸಿರುವ ಸಂದರ್ಭದಲ್ಲಿ ಎಲ್ಲ ವಿರೋಧ ಪಕ್ಷದ ರಾಜಕಾರಣಿಗಳ ಮೇಲೆ ಚಾರ್ಜ್‌ಶೀಟ್ ಬರಬಹುದು. ಆ ನಂತರ ಚುನಾವಣೆ ನಡೆಸುವ ಅಗತ್ಯವೇ ಬಾರದು,” ಎಂದು ಹೇಳಿದ್ದಾರೆ.

ರಾಜಕಾರಣಿಗಳು ಆರೋಪಗಳಿಂದ ತಪ್ಪಿಸಿಕೊಳ್ಳುವುದರಲ್ಲಿ ಸಿದ್ಧಹಸ್ತರು ಎಂದು ಹಲವು ಟ್ವೀಟಿಗರು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ ಈ ವಿಚಾರವಾಗಿ ಸಂಸತ್ತಿಗೆ ನಿರ್ಧಾರ ಕೈಗೊಳ್ಳಲು ಬಿಟ್ಟಿರುವುದನ್ನು ಇವರು ವಿರೋಧಿಸಿದ್ದಾರೆ. “ಹಲವು ಕಾರಣಗಳಿಂದ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವುದು ವಿಳಂಬವಾಗುತ್ತದೆ. ಹೀಗಾಗಿ, ದಶಕಗಳ ಕಾಲ ರಾಜಕಾರಣಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತ ಬರುತ್ತಾರೆ,” ಎಂದು ಮಹಾರಾಷ್ಟ್ರದ ಪ್ರಿಯಾ ಪ್ರಕಾಶ್ ಟ್ವೀಟ್ ಮಾಡಿದ್ದಾರೆ. “ಆರೋಪ ಹೊರಿಸುವುದು ಸುಲಭ. ಆದರೆ, ನ್ಯಾಯಾಲಯದಲ್ಲಿ ಅದನ್ನು ಸಾಬೀತು ಮಾಡಲು ಬಹಳ ಕಷ್ಟವಿದೆ. ಹೀಗಾಗಿ, ಭ್ರಷ್ಟರು ಅಧಿಕಾರ ಹಿಡಿಯುವುದೂ ಸುಲಭವಾಗಿದೆ,” ಎಂದು ಭರತ್ ಭಾಟಿಯಾ ಟ್ವೀಟ್ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More