ಶಾಸಕಾಂಗ, ಕಾರ್ಯಾಂಗದ ವಿಫಲತೆಗೆ ಕನ್ನಡಿ ಹಿಡಿಯಿತೇ ನ್ಯಾಯಾಂಗ?

ಬೆಂಗಳೂರಿಗರ ಹಿತದೃಷ್ಟಿಯಿಂದ ಹೈಕೋರ್ಟ್‌ ಕಳೆದೆರಡು ತಿಂಗಳಿಂದ ಬಿಬಿಎಂಪಿ ಬೆನ್ನು ಬಿದ್ದಿದೆ. ನ್ಯಾಯಾಲಯದ ಆದೇಶಗಳಿಂದ ಗಲಿಬಿಲಿಗೊಂಡಿರುವ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ತನ್ನ ಆದೇಶದ ಮೂಲಕ ಕಾರ್ಯಾಂಗದ ಜವಾಬ್ದಾರಿಗಳನ್ನು ಕೋರ್ಟ್‌ ಎಚ್ಚರಿಸಿಬೇಕಾದ ಸ್ಥಿತಿ ನಿರ್ಮಾಣವಾಗಿರುವುದರಿಂದ ಸರ್ಕಾರದ ಅಸ್ತಿತ್ವದ ಪ್ರಶ್ನೆ ಚರ್ಚೆಯ ಮುನ್ನೆಲೆಗೆ ಬಂದಿದೆ

ನಿಷ್ಕ್ರಿಯಗೊಂಡಿದ್ದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳಿಂದ ಹೈಕೋರ್ಟ್ ಕೈಗೊಂಡಿರುವ ಕ್ರಮಗಳ ಕುರಿತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ಸೌಂದರ್ಯ ವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಆಡಳಿತಶಾಹಿ ವೈಫಲ್ಯವನ್ನು ಗುರುತಿಸಿರುವ ನ್ಯಾಯಾಲಯವು‌, ಆಡಳಿತಶಾಹಿಯ ಬೆನ್ನಿಗೆ ಬಿದ್ದು ಕೆಲಸ ಮಾಡಿಸುತ್ತಿರುವುದು ಸಾರ್ವಜನಿಕರನ್ನು ಪುಳಕಿತಗೊಳಿಸಿದೆ. ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಹೈಕೋರ್ಟ್‌ ತಪರಾಕಿಯಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಮಧ್ಯೆ, ಕಾರ್ಯಾಂಗದ ಕೆಲಸಗಳನ್ನು ತನ್ನ ಆದೇಶದ ಮೂಲಕ ನೆನಪಿಸಲು ಕೋರ್ಟ್‌ ಮುಂದಾಗಿರುವುದರಿಂದ ಸರ್ಕಾರದ ಅಸ್ಥಿತ್ವದ ಕುರಿತು ಗಂಭೀರ ಚರ್ಚೆ ಆರಂಭವಾಗಿದೆ. ಹೈಕೋರ್ಟ್‌ ನಿರ್ದೇಶನಗಳನ್ನು ಉಲ್ಲೇಖಿಸಿ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು “ನ್ಯಾಯಾಲಯದಿಂದ ಹೇಳಿಸಿಕೊಂಡು ಕೆಲಸ ಮಾಡಬೇಕೆ? ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಿಸಿಲು ಏನು ಸಮಸ್ಯೆ?,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಸೌಂದರ್ಯವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಫ್ಲೆಕ್ಸ್‌, ಬ್ಯಾನರ್‌ ಮತ್ತು ಹೋರ್ಡಿಂಗ್‌ ತೆರವುಗೊಳಿಸುವುದು, ರಸ್ತೆಯ ಗುಂಡಿ ಮುಚ್ಚುವುದು ಮತ್ತು ಅವುಗಳ ಗುಣಮಟ್ಟ ಪರಿಶೀಲನೆಗೆ ತಜ್ಞರ ತಂಡ ನೇಮಿಸುವ ಮೂಲಕ ಆಡಳಿತ ವ್ಯವಸ್ಥೆ ನಂಬಿಕೆಗೆ ಅರ್ಹವಲ್ಲ ಎಂಬ ಸಂದೇಶವನ್ನು ಕೋರ್ಟ್ ಸೂಚ್ಯವಾಗಿ ರವಾನಿಸಿದೆ. ಈಗ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಮುಂದಡಿ ಇಟ್ಟಿದೆ. ರಾಜಧಾನಿಯ ಸಮಸ್ಯೆಗಳು, ಪ್ರಸಕ್ತ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ನೇತೃತ್ವದ ಪೀಠವು ಆರಂಭದಿಂದಲೂ ರಾಜಧಾನಿಯ ಸೌಂದರ್ಯ, ಮೂಲಸೌಕರ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ. “ಜಾಗತಿಕ ಪ್ರಸಿದ್ಧವಾದ ಬೆಂಗಳೂರು ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ. ಅದನ್ನು ಮರುಸ್ಥಾಪಿಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಏನು ಮಾಡಬೇಕು ಎಂದು ತಿಳಿದಿದೆ” ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಖಡಕ್‌ ಆಗಿ ನುಡಿದಿದ್ದಾರೆ. ಕೋರ್ಟ್ ದೃಢ ಹೆಜ್ಜೆಗಳಿಂದ ಆಡಳಿತಶಾಹಿ ಗಲಿಬಿಲಿಗೊಂಡಿದೆ. ಅಟಾರ್ನಿ ಜನರಲ್‌ ಹಾಗೂ ಬಿಬಿಎಂಪಿ ಪರ ವಕೀಲರು ನ್ಯಾಯಮೂರ್ತಿಗಳ ಆದೇಶಗಳಿಂದ ಕಂಗಾಲಾಗಿ ಹೋಗಿದ್ದಾರೆ. “ಇಂದು ಏನಾಗಲಿದೆಯೋ ಎಂಬ ಆತಂಕದಲ್ಲೆ ವಕೀಲರು ಹಾಗೂ ಅಧಿಕಾರಿಗಳು ವಿಚಾರಣೆಗೆ ಹಾಜರಾಗುತ್ತಿದ್ದಾರೆ. ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದರೆ, ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ” ಎನ್ನುತ್ತಾರೆ ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು.

ಬಿಬಿಎಂಪಿಗೆ ಹೈಕೋರ್ಟ್‌‌ಗೆ ಚಾಟಿ ಬೀಸಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಗರ ತಜ್ಞ ರವಿಚಂದರ್‌ ಅವರು “ಸರ್ಕಾರದಿಂದ ನಿರೀಕ್ಷಿಸಿದ್ದ ತೀರ್ಮಾನಗಳನ್ನು ಕೋರ್ಟ್‌ ಕೈಗೊಳ್ಳುತ್ತಿದೆ. ಜನಪ್ರತಿನಿಧಿಗಳು ಹಾಗೂ ಆಡಳಿತಶಾಹಿ ವಿಫಲತೆ ಹಿನ್ನೆಲೆಯಲ್ಲಿ ಕೋರ್ಟ್‌ ತೀರ್ಮಾನ ನಿರೀಕ್ಷಿತವಾಗಿತ್ತು. ಫುಟ್‌ಪಾತ್ ಒತ್ತುವರಿ ತೆರವು, ಮಾಲಿನ್ಯ ತಡೆ ಸೇರಿದಂತೆ ಇನ್ನೂ ಸಾಕಷ್ಟು ಕೆಲಸಗಳಾಗಬೇಕಿದೆ. ಇದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದ್ದೇವೆ” ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, “ದೆಹಲಿಯ ಮಾಲಿನ್ಯ ನಿಯಂತ್ರಣ, ಬಿಸಿಸಿಐ ಆಡಳಿತ ಮತ್ತಿತರ ಪ್ರಮುಖ ವಿಚಾರಗಳಲ್ಲಿ ಲಗಾಯತಿನಿಂದಲೂ ಕೋರ್ಟ್‌ಗಳು ಸಾರ್ವಜನಿಕ ಹಿತಾಸಕ್ತಿಗಳಿಗೆ ಸ್ಪಂದಿಸಿವೆ. ಬೆಂಗಳೂರಿನ ಸಮಸ್ಯೆಗಳ ನಿಟ್ಟಿನಲ್ಲಿಯೂ ಅದು ಮುಂದುವರೆದಿದೆ. ಇದರಿಂದಾಗಿ ನ್ಯಾಯಾಲಯದ ಮೇಲಿನ ವಿಶ್ವಾಸ ಹೆಚ್ಚಿದೆ” ಎಂದಿದ್ದಾರೆ.

ಆಡಳಿತಶಾಹಿಯನ್ನು ಕೆಲಸಕ್ಕೆ ಹಚ್ಚುವುದು ಸರ್ಕಾರದ ಕೆಲಸ. ಆದರೆ, ಈ ಜವಾಬ್ದಾರಿಯನ್ನು ನ್ಯಾಯಾಲಯ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ತಿಂಗಳು ಪೂರ್ಣಗೊಂಡಿವೆ. ಆದರೆ, ಭಿನ್ನಮತ ಚಟುವಟಿಕೆಗಳು ವ್ಯಾಪಕವಾಗಿರುವುದರಿಂದ ಸರ್ಕಾರವಿದೆ ಎಂಬ ಭಾವನೆಯೇ ಇಲ್ಲದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಇದನ್ನೂ ಓದಿ : ಮಿಷನ್ ಬಿಬಿಎಂಪಿಗಾಗಿ ಅಶೋಕ್‌ ಬದಲಿಗೆ ಸೋಮಣ್ಣ ಬೆನ್ನು ಹತ್ತಿತೇ ಬಿಜೆಪಿ?

“ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲೆರಡು ತಿಂಗಳು ಸಚಿವ ಸ್ಥಾನಕ್ಕಾಗಿ ಲಾಬಿ ಮತ್ತಿತರ ವಿಚಾರಗಳಿಂದ ಸರ್ಕಾರ ಕಾರ್ಯಾರಂಭಿಸಿರಲಿಲ್ಲ. ಆನಂತರದ ಎರಡು ತಿಂಗಳು ಭಿನ್ನಮತ ಚಟುವಟಿಕೆಗಳಿಂದ ಸರ್ಕಾರ ಹೈರಾಣಾಗಿದ್ದು, ಕಾರ್ಯಾಂಗಕ್ಕೆ ಚುರುಕು ಮುಟ್ಟಿಸುವ ಕೆಲಸವೇ ಆಗಿಲ್ಲ. ಸರ್ಕಾರ ಉರುಳಲಿದೆ ಎಂಬ ಗಾಳಿ ಸುದ್ದಿಗಳ ಹಿನ್ನೆಲೆಯಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ, ತೆವಳುತ್ತಾ ಸಾಗಿವೆ. ಬಜೆಟ್‌ನಲ್ಲಿ ಘೋಷಿಸಲಾದ‌ ಬಹುತೇಕ ಯೋಜನೆಗಳು ಇನ್ನಷ್ಟೇ ಕಾರ್ಯಾರಂಭವಾಗಬೇಕಿದೆ” ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ರಾಜ್ಯದ ರಾಜಧಾನಿಯಲ್ಲೇ ಕೋರ್ಟ್‌ ನಿರ್ದೇಶನದ ಬಳಿಕ ಆಡಳಿತಶಾಹಿ ಕಾರ್ಯಪ್ರವೃತವಾಗಬೇಕಾದ ಪರಿಸ್ಥಿತಿ ಇರುವಾಗ ರಾಜ್ಯದ ಉಳಿದ ಭಾಗಗಳಲ್ಲಿ ಯಾವ ಸ್ಥಿತಿ ಇರಬಹುದು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗದ ನಿಷ್ಕ್ರಿಯತೆಯ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಪ್ರೊ. ಬಿ ಕೆ ಚಂದ್ರಶೇಖರ್ “ಆಡಳಿತಗಾರರು ಗಂಭೀರವಾಗಿ ಯೋಚಿಸಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬುದನ್ನು ಕೋರ್ಟ್ ಹೇಳುತ್ತಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು. ವಿಕೇಂದ್ರೀಕರಣದ ಆಶಯದಂತೆ ಬಿಬಿಎಂಪಿಯನ್ನು ವಿಭಜಿಸಿದರೆ ಪಾರದರ್ಶಕತೆ ನಿರೀಕ್ಷಿಸಬಹುದು. ಸಿದ್ದರಾಮಯ್ಯ ಸರ್ಕಾರ ವಿಭಜನೆಯ ಪರವಾಗಿತ್ತು. ಇಂದಿನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More