ಆಯುಷ್ಮಾನ್‌ ಭಾರತ ಯಾವ ಅರ್ಥದಲ್ಲಿ ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಿಸೀತು?

ಚುನಾವಣೆಗಳು ಹೊಸ್ತಿಲಲ್ಲಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ ಆರೋಗ್ಯ ವಿಮಾ ಯೋಜನೆಯನ್ನು, ಜಗತ್ತಿನಲ್ಲೇ ದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಎನ್ನುವ ಪ್ರಚಾರದೊಂದಿಗೆ ಜಾರಿಗೆ ತಂದಿದೆ. ಏನಿದರ ವಿಶೇಷ, ಜಗತ್ತಿನಲ್ಲೇ ದೊಡ್ಡ ಯೋಜನೆ ಎನ್ನಲು ಇದು ಅರ್ಹವೇ?

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮೂರು ರಾಜ್ಯ ಮತ್ತು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ‘ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಆರೋಗ್ಯ ರಕ್ಷಣಾ ಯೋಜನೆ’ ಎನ್ನುವ ಸ್ವಯಂ ಬಿರುದು ಬಾವಲಿಗಳೊಂದಿಗೆ ಭಾರತ ಸರ್ಕಾರ ‘ಆಯುಷ್ಮಾನ್‌ ಭಾರತ’ ಎನ್ನುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಕಳೆದ ಆಗಸ್ಟ್ ೧೫ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಕಟಿಸಿದ್ದ ಈ ಯೋಜನೆಯನ್ನು ಅವಸರ ಗತಿಯಲ್ಲಿ ಜಾರಿಗೆ ತರಲಾಗಿದೆ. ಜೊತೆಗೆ, ಒಂದೂವರೆ ಲಕ್ಷ ಆರೋಗ್ಯ- ಕ್ಷೇಮಧಾಮಗಳ ಆರಂಭ ಮೋದಿ ಸರ್ಕಾರದ ಮತ್ತೊಂದು ಮಹತ್ವದ ಆರೋಗ್ಯ ಉಪಕ್ರಮ. ಆದರೆ, ಅಗತ್ಯದಷ್ಟು ಹಣವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡದೆ, ಅತ್ಯವಶ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೆ ಜಾರಿಗೆ ತಂದಿರುವ ಯೋಜನೆ ಯಾವ ಅರ್ಥದಲ್ಲಿ ‘ಜಗತ್ತಿನಲ್ಲೇ ಅತಿ ದೊಡ್ಡದು’ ಎನ್ನುವ ಪ್ರಶ್ನೆ ಎದ್ದಿದೆ.

ಈ ಹಿಂದಿದ್ದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಮತ್ತು ಹೊಸ ಯೋಜನೆ ವ್ಯಾಪ್ತಿಗೆ ಬಂದಿರುವ ಎಲ್ಲ ರಾಜ್ಯ ಸರ್ಕಾರಗಳು ಹೊಂದಿದ್ದ ಆರೋಗ್ಯ ವಿಮಾ ಯೋಜನೆಗಳ ಫಲಾನುಭವಿಗಳು ಸೇರಿ ದೇಶದ ಗ್ರಾಮೀಣ ಪ್ರದೇಶದ ೮.೦೩ ಕೋಟಿ ಮತ್ತು ನಗರ ಪ್ರದೇಶಗಳ ೨.೩೩ ಕೋಟಿ ಕುಟುಂಬಗಳ ೫೦ ಕೋಟಿ ಮಂದಿ ಕಡು ಬಡವರು ‘ಆಯುಷ್ಮಾನ್’ ಫಲಾನುಭವಿಗಳು. ತೆಲಂಗಾಣ, ಒಡಿಶಾ, ದೆಹಲಿ, ಕೇರಳ ಮತ್ತು ಪಂಜಾಬ್ ರಾಜ್ಯಗಳ ಹೊರತು ಕರ್ನಾಟಕವೂ ಸೇರಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಯೋಜನೆಗೆ ಅಂಕಿತ ಹಾಕಿವೆ. ದೇಶದ ಎಂಟು ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಹೃದ್ರೋಗ, ಯಕೃತ್‌ ಸಮಸ್ಯೆ, ಮಧು ಮೇಹ ಸಹಿತ ೧,೩೫೪ ಆರೋಗ್ಯ ಸೇವೆ ನಗದು ಮತ್ತು ಕಾಗದ ರಹಿತವಾಗಿ ಲಭಿಸಲಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ ೫ ಲಕ್ಷ ರೂ.ವರೆಗೂ ಆರೋಗ್ಯ ವಿಮಾ ರಕ್ಷಣೆ. ಒಂದು ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ ಎಲ್ಲರಿಗೂ ಯೋಜನೆಯ ಫಲ. ೧ ಸಾವಿರ ರೂ.ವರೆಗೆ ಪ್ರೀಮಿಯಂ ಮೊತ್ತ. ಅಂದಾಜು ೬ ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ವೆಚ್ಚದಲ್ಲಿ ಶೇ.೬೦ ರಷ್ಟನ್ನು ಕೇಂದ್ರ, ಶೇ.೪೦ರಷ್ಟು ಮೊತ್ತವನ್ನು ರಾಜ್ಯ ಸರಕಾರಗಳು ಭರಿಸುತ್ತವೆ.


ಈ ಅಂಕಿ ಅಂಶ ಮತ್ತು ಸೌಲಭ್ಯಗಳು ಜನರ ಗಮನವನ್ನು ಸೆಳೆಯುವಂತಿವೆ. ಆದರೆ, ‘ಜಗತ್ತಿನಲ್ಲೇ ದೊಡ್ಡ ಯೋಜನೆ’ ಎನ್ನುವುದಕ್ಕೆ ಈ ಯಾವುವು ಪುರಾವೆಯಾಗುವುದಿಲ್ಲ. ಆರೋಗ್ಯ ಮತ್ತು ಕ್ಷೇಮಧಾಮಗಳಿಗೆ ೨೦೧೮- ೧೯ರ ಆಯವ್ಯಯದಲ್ಲಿ ಕೇಂದ್ರ ಹಣಕಾಸು ಸಚಿವರು ೧,೨೦೦ ಕೋಟಿ ರೂ. ಹಂಚಿಕೆ ಮಾಡಿದ್ದರು. ಅಂದರೆ, ಪ್ರತಿ ಕೇಂದ್ರಕ್ಕೆ ೮೦ ಸಾವಿರ ರೂ. ವೈದ್ಯರು, ನರ್ಸುಗಳು,ಅವಶ್ಯ ಯಂತ್ರೋಪಕರಣ ಸಹಿತ ಹಲವು ಬಗೆಯ ಮೂಲ ಸೌಕರ್ಯ ಸಮಸ್ಯೆಗಳಿಂದ ಬಳಲುತ್ತಿರುವ ಆರೋಗ್ಯ ಕೇಂದ್ರಗಳಿಗೆ ಈ ಮೊತ್ತ ಏನಕ್ಕೂ ಸಾಲದು. “ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸ ಬಣ್ಣ ಬಳಿದು, ಮರುನಾಮಕರಣ ಮಾಡಿದಂತೆ ಆಗಿದೆಯಷ್ಟೆ,’’ ಎನ್ನುವುದು ರಾಂಚಿ ವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಜೀನ್‌ ಡ್ರೆಜ್‌ ಆಕ್ಷೇಪ. ಮಾತ್ರವಲ್ಲ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ೨೦೧೮-೧೯ರ ಬಜೆಟ್ ಹಂಚಿಕೆ ೨ ಸಾವಿರ ಕೋಟಿ ರೂ. ಇದು ಕಳೆದ ಆರ್ಥಿಕ ವರ್ಷದಲ್ಲಿದ್ದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗೆ ಹಂಚಿಕೆ ಮಾಡಿದ್ದ (ಒಂದು ಸಾವಿರ ಕೋಟಿ) ಮೊತ್ತಕ್ಕಿಂತ ತುಂಬಾ ಹೆಚ್ಚೇನಲ್ಲ. ರಾಷ್ಟ್ರೀಯ ಸ್ವಾಸ್ಥ್ಯ ವಿಮೆ ಈಗ ಹೊಸ ವಿಮೆಯಲ್ಲೇ ಅಡಕಗೊಳ್ಳುತ್ತದೆ. ಈ ಅರ್ಥದಲ್ಲಿ ನೋಡಿದರೆ, ಜಗತ್ತಿನ ದೊಡ್ಡ ಯೋಜನೆ ಎಂದು ಬಿಂಬಿಸಲ್ಪಟ್ಟಿರುವ ‘ಆಯುಷ್ಮಾನ್‌ ಭಾರತ’ಕ್ಕೆ ಈ ವರ್ಷ ಹಣ ಹಂಚಿಕೆಯನ್ನೇ ಮಾಡಿಲ್ಲ ಎಂದು ‘ದಿ ವೈರ್ ‘ಗೆ ಬರೆದ ಲೇಖನದಲ್ಲಿ ಜೀನ್‌ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ : ಇಲಾಜು | ಸುದ್ದಿ ಆಗುತ್ತಲೇ ಇರುವ ‘ಆಯುಷ್ಮಾನ್ ಭಾರತ’ದ ಅಸಲಿ ಕತೆ

ಹೊಸ ವಿಮಾ ಯೋಜನೆ ದೇಶದ ೧೦ ಕೋಟಿ ಕುಟುಂಬಗಳ ೫೦ ಕೋಟಿಗೂ ಹೆಚ್ಚು ವ್ಯಕ್ತಿಗಳಿಗೆ ೫ ಲಕ್ಷ ರೂ. ಆರೋಗ್ಯ ವಿಮೆಯ ರಕ್ಷಣೆ ನೀಡುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇದರ ಸಮರ್ಪಕ ಮತ್ತು ಸಮರ್ಥ ಅನುಷ್ಠಾನ ಆಗಬೇಕೆಂದರೆ ಸರಿ ಸುಮಾರು ೫೦ ಸಾವಿರ ಕೋಟಿ ರೂ. ಹಣವನ್ನು ವಿನಿಯೋಗಿಸಬೇಕು. ಆರೋಗ್ಯ ವಿಮೆಯು ಫಲಾನುಭವಿಗಳಿಗೆ ಸುಲಭ ಲಭ್ಯವಾದರೆ ಈ ಮೊತ್ತ ಇದಕ್ಕಿಂತ ಹೆಚ್ಚಾಗಲೂಬಹುದು. ಕೇಂದ್ರ ಶೇ.೬೦,ರಾಜ್ಯ ಸರ್ಕಾರಗಳು ಶೇ.೪೦ ಮೊತ್ತವನ್ನು ಭರಿಸಬೇಕಾದರೂ, ಯಾವ ಸರ್ಕಾರಗಳೂ ಅಷ್ಟು ಹಣವನ್ನು ವೆಚ್ಚ ಮಾಡಲು ಸಿದ್ಧವಾಗಿರುವ ಲಕ್ಷಣಗಳಿಲ್ಲ. ಮುಂದಿನ ಕೆಲವು ವರ್ಷಗಳಲ್ಲಿ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯ ಬಜೆಟ್ ೧೦ ಸಾವಿರ ಕೋಟಿಗೆ ಹೆಚ್ಚಬಹುದೆನ್ನುವುದು ನೀತಿ ಆಯೋಗದ ನಿರೀಕ್ಷೆ. ಆದರೆ, ೧೦ ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆಯನ್ನು ನೀಡುವ ಉದ್ದೇಶಕ್ಕಾಗಿ ೧೦ ಸಾವಿರ ಕೋಟಿ ರೂ. ಹಂಚಿಕೆ ಮಾಡುವುದು ಕೂಡ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತೆ. ಇದರಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ೧ ಸಾವಿರ ರೂ. ಐವರು ಇರುವ ಕುಟುಂಬದ ಲೆಕ್ಕದಲ್ಲಿ ಪ್ರತಿ ವ್ಯಕ್ತಿಗೆ ಕೇವಲ ೨೦೦ ರೂ.ನಿಗದಿ ಮಾಡಿದಂತಾಗುತ್ತದೆ.

ಆರೋಗ್ಯ ವಿಮೆಯನ್ನು ಎಲ್ಲರೂ ಬಳಸುವ ಪ್ರಮೇಯ ಬರುವುದಿಲ್ಲ. ಕಂತಿನ ಮೊತ್ತ ಗುಣಕ ಪರಿಣಾಮವನ್ನು ಹೊಂದಿದೆ ಎನ್ನುವಂತ ಭ್ರಮೆಯನ್ನು ಆರೋಗ್ಯ ವಿಮೆಯ ವಿಷಯದಲ್ಲಿ ಮೂಡಿಸಲಾಗುತ್ತದೆ. ಆದರೆ ಎಲ್ಲಾ ಸಂದರ್ಭದಲ್ಲೂ ಇದು ನಿಜವಾಗದು. ಅಗತ್ಯದಷ್ಟು ಹಣವನ್ನು ಮೀಸಲಿಡದ ಪಕ್ಷದಲ್ಲಿ ವಿಮೆಯ ನೆರವು ಹೆಚ್ಚು ಅಗತ್ಯ ಇರುವವರಿಗಷ್ಟೆ ಲಭಿಸುತ್ತದೆ ಎನ್ನುವ ಅರ್ಥವನ್ನು ಹೊಮ್ಮಿಸುತ್ತದೆ. ಅದೇನಿದ್ದರೂ, ಪ್ರತಿ ಫಲಾನುಭವಿಗೆ ಸರ್ಕಾರ ನಿಗದಿ ಮಾಡಿದ ಆರೋಗ್ಯ ವೆಚ್ಚ ೨೦೦ ರೂ. ದಾಟುವುದಿಲ್ಲ. ತಲಾ ಆರೋಗ್ಯ ವೆಚ್ಚ ಇಷ್ಟೊಂದು ಕಡಿಮೆ ಇದ್ದಾಗ್ಯೂ,ಇದು “ವಿಶ್ವದ ದೊಡ್ಡ ಆರೋಗ್ಯ ಯೋಜನೆ’’ ಹೇಗಾದೀತು ಎನ್ನುವುದು ತಜ್ಞರ ಪ್ರಶ್ನೆ.“ ದಿಕ್ಕು ತಪ್ಪಿಸುವ ಹೇಳಿಕೆಯಿದು.ಚುನಾವಣಾ ತಂತ್ರಗಾರಿಕೆ ಅಷ್ಟೆ,’’ಎನ್ನುವ ಟೀಕೆಯೂ ವ್ಯಕ್ತವಾಗಿದೆ. “ಅತಿದೊಡ್ಡದೆನ್ನುವುದು ೫೦ ಕೋಟಿ ಫಲಾನುಭವಿಗಳ ಸಂಖ್ಯೆ ಕುರಿತದ್ದಿರಬಹುದು. ಈ ಅರ್ಥದಲ್ಲಿಯೂ ಜಗತ್ತಿನಲ್ಲೇ ಅತಿದೊಡ್ಡ ವಿಮೆ ಎನ್ನುವುದೂ ನಿಜವಲ್ಲ. ಪ್ರತಿ ವ್ಯಕ್ತಿಯ ಮೇಲೆ ಭಾರತಕ್ಕಿಂತ ಐದು ಪಟ್ಟು ಹೆಚ್ಚು ಆರೋಗ್ಯ ವೆಚ್ಚ ಮಾಡುವ ಚೀನಾದ ಆರೋಗ್ಯ ರಕ್ಷಣಾ ವ್ಯವಸ್ಥೆ ವಿಶ್ವದಲ್ಲಿಯೇ ಅತಿ ದೊಡ್ಡದು,’’ಎನ್ನುತ್ತಾರೆ ತಜ್ಞರು.

ಅಲ್ಲದೆ, ಸಾರ್ವತ್ರಿಕ ಆರೋಗ್ಯ ಆರೈಕೆ (ಯುಎಚ್‌ಸಿ)ಯ ಗುರಿಯನ್ನು ಶ್ರೀಮಂತ ದೇಶಗಳು ಮಾತ್ರವಲ್ಲ, ಬ್ರೆಜಿಲ್, ಮೆಕ್ಸಿಕೋ, ಶ್ರೀಲಂಕಾ, ಥೈಲ್ಯಾಂಡ್ ಮುಂತಾದ ಹಲವು ಅಭಿವೃದ್ಧಿಶೀಲ ದೇಶಗಳೂ ಸೇರಿದಂತೆ ಅನೇಕ ದೇಶಗಳು ಸಾಧಿಸಿವೆ; ಇನ್ನು ಕೆಲವು ದೇಶಗಳು ಸಾಧನೆಯ ಸನಿಹದಲ್ಲಿವೆ. ಆದರೆ, ಭಾರತ ಈ ವಿಷಯದಲ್ಲಿ ಇನ್ನೂ ಗಂಭೀರವಾದ ಚರ್ಚೆ ಮತ್ತು ಪ್ರಯತ್ನ ಆರಂಭಿಸಬೇಕಿದೆಯಷ್ಟೆ. ಸಾಮಾಜಿಕ ವಿಮೆ ಈ ನಿಟ್ಟಿನಲ್ಲೊಂದು ಪ್ರಮುಖ ಭಾಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಬಜೆಟ್‌ ಹಂಚಿಕೆಯನ್ನು ಹೆಚ್ಚಿಸದೆ; ಪ್ರಾಥಮಿಕ ಆರೋಗ್ಯ ಸೇವೆ ಮತ್ತು ಸೌಕರ್ಯಗಳಲ್ಲಿ ಸಮಗ್ರ ಸ್ವರೂಪದ ಬದಲಾವಣೆಯನ್ನು ತಾರದೆ ಇದನ್ನು ಸಾಧಿಲಾಗದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ವಸ್ತು ಸ್ಥಿತಿ ಹೀಗಿದ್ದರೂ,“ಜಗತ್ತಿನಲ್ಲೇ ಅತಿ ದೊಡ್ಡ ಯೋಜನೆ,’’ಎನ್ನುವ ಹುಸಿಯನ್ನೇ ಯಾಕೆ ಬೃಹತ್ ಸತ್ಯದಂತೆ ಬಿಂಬಿಸಲಾಗುತ್ತಿದೆ ಎನ್ನುವುದಕ್ಕೆ ಉತ್ತರ ನಿಗೂಢವೇನಲ್ಲ. ಕಡುಬಡವರ ಆರೋಗ್ಯ ಕಾಳಜಿಗಿಂತ ಮಿಗಿಲಾದ ಒಳ ಉದ್ದೇಶ; ತಂತ್ರಗಳು ಇದರ ಹಿಂದೆ ಇಲ್ಲದೆ ಇಲ್ಲ. ಈ ಪೈಕಿ ಕೆಲವು ಹೀಗಿವೆ:

  • ಆರೋಗ್ಯ ಕ್ಷೇತ್ರವನ್ನೀಗ ಕಾರ್ಪೋರೇಟ್ ಕುಳಗಳು, ಖಾಸಗಿ ಬಂಡವಾಳಿಗರು ಆಳುತ್ತಿದ್ದು, ಆರೋಗ್ಯ ಸೇವೆ ಬೃಹತ್ ಉದ್ಯಮ ಮತ್ತು ದಂಧೆಯ ಸ್ವರೂಪ ಪಡೆದಿದೆ. ಖಾಸಗಿ ಮತ್ತು ಸರ್ಕಾರಿ ಪ್ರಾಯೋಜಿತ ‘ಆರೋಗ್ಯ ವಿಮೆ’ಗಳು, ಅವುಗಳನ್ನು ನಿರ್ವಹಿಸುವ ಸಂಸ್ಥೆಗಳೂ ಈ ದಂಧೆಯ ಪಾಲುದಾರರು. ಸಣ್ಣ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ಹೋಗುವ ರೋಗಿ ‘ಆರೋಗ್ಯ ವಿಮೆ’ ಹೊಂದಿದ್ದರೆ ಆ ಆಸ್ಪತ್ರೆಗಳು ನೋಡಿಕೊಳ್ಳುವ ರೀತಿಗೂ,ವಿಮೆ ಇಲ್ಲದವರನ್ನು ನೋಡಿಕೊಳ್ಳುವ ರೀತಿಗೆ ವ್ಯತ್ಯಾಸವಿದೆ.ಆರೋಗ್ಯ ಸೇವೆಯಲ್ಲಿ ಅಗತ್ಯ ಇರಬೇಕಾದ ಮಾನವೀಯ ಕಾಳಜಿ ತೆರೆಯ ಮರೆಗೆ ಸರಿದು,“ವ್ಯವಹಾರ ಧರ್ಮ’’ ತಲೆ ಎತ್ತಿ ನಿಂತಿದೆ. ಜನರ ಆರೋಗ್ಯ ವಿಷಯದಲ್ಲಿ ಒಳಿತೂ ಆಗುತ್ತಿದೆ. ಅಂತೆಯೇ ಒಳಿತನ ವೇಷದಲ್ಲಿ ವಂಚನೆಯೂ ನಡೆಯುತ್ತಿದೆ. ಒಳಿತನ ಹೆಸರಿನಲ್ಲಿ ಈ ದಂಧೆಗೆ ದೇಶಾದ್ಯಂತ ಇನ್ನಷ್ಟು ರೋಗಿಗಳನ್ನು ಒದಗಿಸುವುದು ಹೊಸ ಯೋಜನೆ ಉದ್ದೇಶ ಇದ್ದಿರಲೂಬಹುದು.
  • ಸರ್ಕಾರಿ ಮತ್ತು ಸಹಕಾರಿ ರಂಗದ ಆಸ್ಪತ್ರೆಗಳನ್ನು ಬಡ, ಮಧ್ಯಮ ವರ್ಗದವರು ಆಶ್ರಯಿಸಿದ್ದರು.ಅಂಥ ಆಸ್ಪತ್ರೆಗಳನ್ನು ಮೂಲ ಸೌಕರ್ಯ, ತಜ್ಞ ವೈದ್ಯರ ನೇಮಕ, ಆಧುನಿಕ ಆರೋಗ್ಯ ಸಲಕರಣೆಗಳ ಪೂರೈಕೆ ಮುಂತಾದ ವಿಧಾನಗಳ ಮೂಲಕ ಬಲಗೊಳಿಸುವುದು; ಖಾಸಗಿಯವರಿಗೆ ಸವಾಲಿನ ರೂಪದಲ್ಲಿ ಅವುಗಳನ್ನು ಬೆಳೆಸುವುದು ಸರ್ಕಾರಗಳ ಆದ್ಯ ಕರ್ತವ್ಯ. ಈ ವಿಷಯದಲ್ಲಿ ಸೋತಿರುವ ಅಥವಾ ಉದ್ದೇಶಪೂರ್ವಕವಾಗಿ ಕರ್ತವ್ಯ ವಿಮುಖವಾಗಿರುವ ಸರ್ಕಾರಗಳು ‘ವಿಮೆ’ಗಳ ಮೂಲಕ ಖಾಸಗಿ ಆಸ್ಪತ್ರೆಗಳ ಹಿತ ಪೊರೆಯುತ್ತಿವೆ ಎನ್ನುವ ಅಪವಾದವಿದೆ. ‘ಆಯುಷ್ಮಾನ್ ಭಾರತ’ ಇದಕ್ಕೆ ಹೊರತಾದಂತೆ ಕಾಣುತ್ತಿಲ್ಲ.
  • ಒಂದು ಕೊಠಡಿ ಮನೆಯಲ್ಲಿ ವಾಸಿಸುವ ಕುಟುಂಬಗಳು,ಎಸ್‍ಸಿ,ಎಸ್‍ಟಿ, ಬುಡಕಟ್ಟು ಸಮುದಾಯದವರು, ನಿರ್ವಸಿತಗರು, ಕೂಲಿ ಕಾರ್ಮಿಕರು, ಜೀತ ವಿಮುಕ್ತರು, ಚಿಂದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರು, ದರ್ಜಿಗಳು, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾ ನಡೆಸುವವರು, ಎಲೆಕ್ಟ್ರಿಷಿಯನ್, ಮೆಕಾನಿಕ್ ವೃತ್ತಿ ನಿರತರು, ಅವರ ಸಹಾಯಕರು ಮುಂತಾದವರು ಈ ಯೋಜನೆ ಫಲಾನುಭವಿಗಳು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂದರೆ, ಬಡತನ ರೇಖೆಗಿಂತ ಕೆಳಗಿರುವ ಕಡು ಬಡವರಿಗೆ ಯೋಜನೆಯ ಲಾಭ ದೊರೆಯಲಿದೆ. ಇವರೆಲ್ಲ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಒಂದಲ್ಲ ಒಂದು ಆರೋಗ್ಯ ಯೋಜನೆಗಳ ಫಲಾನುಭವಿಗಳಾಗಿದ್ದರೂ,ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಇನ್ಮುಂದೆ ಇವರೆಲ್ಲ ಖಾಸಗಿ/ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ‘ ಆರೋಗ್ಯ ಆರೈಕೆ’ ಪಡೆಯಲಿದ್ದಾರೆ ಅಥವಾ ಅಂಥ ಆಸ್ಪತ್ರೆಗಳ ಆರೋಗ್ಯ ವ್ಯವಹಾರದಲ್ಲಿ ‘ವಸ್ತು’ಗಳಾಗಲಿದ್ದಾರೆ. ಅದಕ್ಕಿಂತ ಮುಖ್ಯ, ಕಡು ಬಡವರ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಬೃಹತ್‌ ಪ್ರಮಾಣದಲ್ಲಿ ಸಂಗ್ರಹಿಸಿ, ಖಾಸಗಿ/ಕಾರ್ಪೋರೇಟ್ ಕುಳಗಳಿಗೆ ಒಪ್ಪಿಸುವುದು ಯೋಜನೆಯ ಉದ್ದೇಶ ಇದ್ದಂತಿದೆ ಎನ್ನುವ ಶಂಕೆಯೂ ಇದೆ.
  • ಮಾಹಿತಿ ತಂತ್ರಜ್ಞಾನ ಕ್ಷೇತ್ರದ ‘ಮಾಂತ್ರಿಕರ’ ನೈಪುಣ್ಯವನ್ನು ಬಳಿಸಿಕೊಂಡು ಸರ್ಕಾರದ ಯೋಜನೆಗಳ ಕುರಿತಂತೆ ಸಾರ್ವಜನಿಕವಾಗಿ ಲಾಭದಾಯಕ ಚರ್ಚೆಗೆ ವೇದಿಕೆ ಸೃಜಿಸುವಲ್ಲಿ ಮತ್ತು ಇಂಥ ಪ್ರಚಾರ ತಂತ್ರಗಳ ಮೂಲಕವೇ ಮೇಲುಗೈ ಸಾಧಿಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಗರಿಷ್ಠ ಬಳಸಿಕೊಳ್ಳಲಾರಂಭಿಸಿದೆ. ಕಡು ಬಡವರಿಗಷ್ಟೆ ಸಲ್ಲುವ ಮತ್ತು ತಲಾ ಆರೋಗ್ಯ ವೆಚ್ಚ ಅತ್ಯಂತ ಕಡಿಮೆ ಇರುವ ಯೋಜನೆ ಇದಾಗಿದ್ದರೂ,ವಿಶ್ವದಲ್ಲೇ ಅತಿ ದೊಡ್ಡ ಯೋಜನೆ ಎನ್ನುವಂತೆ ಬಿಂಬಿಸುತ್ತಿರುವುದು ಮುಂಬರುವ ಚುನಾವಣೆಗಳಲ್ಲಿ ಮತಗಳನ್ನು ಗರಿಷ್ಠ ಗೆಲ್ಲುವ ತಂತ್ರಗಾರಿಕೆಯಂತೆ ಕಾಣುತ್ತಿದೆ.

ಹೀಗೆ, ಕಡು ಬಡ ಜನರ ಆರೋಗ್ಯ ಕಾಳಜಿಗಿಂತ ‘ಮತ ಕಾಳಜಿ’ ಮತ್ತಿತರ ಸಂಗತಿಗಳೇ ಮಿಗಿಲೆನ್ನುವುದನ್ನು ಆಯುಷ್ಮಾನ್‌ ಭಾರತಕ್ಕೆ ಜಾರ್ಖಂಡ್ ನಲ್ಲಿ ಚಾಲನೆ ನೀಡಿದ ಸಂದರ್ಭ ಪ್ರಧಾನಿ ಮೋದಿ ಆಡಿದ ಮಾತುಗಳು ಶೃತಪಡಿಸಿವೆ. “ಹಿಂದೆ ದೇಶ ಆಳಿದ ಸರಕಾರಗಳು ಬಡವರಿಗೆ ಬಲ ನೀಡದೆ ಕೇವಲ ವೋಟ್‌ ಬ್ಯಾಂಕ್‌ ರಾಜಕೀಯ ಮಾಡಿದವು. ಜನರಿಗೆ ಭರವಸೆ ನೀಡಿದಂತೆ ಯೋಜನೆಗಳನ್ನು ಜಾರಿ ಮಾಡಿದ್ದರೆ ದೇಶ ಇನ್ನಷ್ಟು ಅಭಿವೃದ್ಧಿ ಹೊಂದಿರುತ್ತಿತ್ತು,’’ಎನ್ನುವುದು ಮೋದಿ ಕಟಕಿ. “ಆಯುಷ್ಮಾನ್‌ ಭಾರತ ಜಾತಿ, ಧರ್ಮ, ಪ್ರದೇಶಗಳ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ಪ್ರತಿಯೊಬ್ಬ ಅರ್ಹನಿಗೂ ಯೋಜನೆಯ ಲಾಭ ದೊರೆಯಲಿದೆ,’’ ಎಂದೂ ಹೇಳಿದ್ದಾರೆ. ಎಂದಿನಂತೆ,ಈ ಹಿಂದಿನ ಯಾವ ಸರ್ಕಾರಗಳೂ ಮಾಡದಂತ ಘನಂದಾರಿ ಕೆಲಸವನ್ನು ತಾವು ಮಾಡುತ್ತಿರುವುದಾಗಿ ಪ್ರಚುರ ಪಡಿಸಿಕೊಂಡಿದ್ದಾರೆ. ಆದರೆ, ಕುಟುಂಬ ಕಲ್ಯಾಣದ ಜೊತೆ ಆರೋಗ್ಯ ವಿಮೆಯನ್ನು ಬೆಸೆಯುವಂತ ಯೋಜನೆ ( ಕುಟುಂಬ ಆರೋಗ್ಯ ರಕ್ಷಣಾ ಯೋಜನೆ- ಎಫ್‌ ಎಚ್‌ ಪಿ ಪಿ) ಆರಂಭವಾಗಿದ್ದು ತಮ್ಮದೇ ಪಕ್ಷದ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ (೨೦೦೩) ಕಾಲದಲ್ಲಿ ಎನ್ನುವುದನ್ನವರು ಸೌಜನ್ಯಕ್ಕೂ ನೆನಪಿಸಿಕೊಂಡಿಲ್ಲ. ಮಾತ್ರವಲ್ಲ, ದುರ್ಬಳಕೆ ಇತ್ಯಾದಿಗಳ ಹೊರತಾಗಿಯೂ ಹಿಂದಿನ ಕೇಂದ್ರ ಸರ್ಕಾರಗಳು,ಕೆಲವು ರಾಜ್ಯ ಸರ್ಕಾರಗಳು ಹಲವು ಯೋಗ್ಯ ಆರೋಗ್ಯ ಯೋಜನೆಗಳನ್ನು ಘೋಷಿಸಿ, ಜಾರಿಗೊಳಿಸಿದ್ದನ್ನೂ ಅವರು ಮರೆವಿಗೆ ತಳ್ಳಿದ್ದಾರೆ.

ಇಂಥ ಹಲವು ಯೋಜನೆಗಳನ್ನೇ ಬೆರಕೆ ಮಾಡಿ, ಹೊಸ ಬಣ್ಣ ಬಳಿದು, ‘ಆಯುಷ್ಮಾನ್ ಭಾರತ’ ಎಂದು ಮರು ನಾಮಕರಣ ಮಾಡಿ ಜಾರಿಗೆ ತಂದಿರುವುದನ್ನು ‘ಜಗತ್ತಿನಲ್ಲೇ ಅತಿ ದೊಡ್ಡ ಯೋಜನೆ’ ಎನ್ನುವ ಭ್ರಾಂತಿನಲ್ಲಿ ಮರೆಸಿ, ತಮ್ಮದಷ್ಟೆ ಶ್ರೇಷ್ಠ ಎಂದು ಮೆರೆಸುವ ಪ್ರಯತ್ನ ಮಾಡುತ್ತಿದ್ದಾರೆ. ‘ಆಯುಷ್ಮಾನ್‌ ಭಾರತ’ ಎನ್ನುವ ಪದ ಕೂಡ; ‘ಆಯುಷ್ಮಾನ್‌ ಭವ’ ಎನ್ನುವ ದಿವ್ಯ ಆಶೀರ್ವಾದವನ್ನು ನೆನಪಿಸುವಂತಿದೆ. ಇಂಥ ಮಾತಿನ ಮಾಟ, ಅಂಕಿ ಸಂಖ್ಯೆಯ ಕಣ್ಕಟ್ಟುಗಳನ್ನು ವಿಜೃಂಭಿಸುವುದರಿಂದ ‘ಭಾರತದ ಆಯಸ್ಸು’, ಕಡು ಬಡ ಜನರ ಆರೋಗ್ಯ ವೃದ್ಧಿಸದು. ಯೋಜನೆಯ ಅನುಷ್ಠಾನದಲ್ಲಿ ಹುಸಿ ಅಂಕಿಸಂಖ್ಯೆ, ಮತಬ್ಯಾಂಕ್‌ ತಂತ್ರಗಾರಿಕೆ, ಕಾರ್ಪೊರೇಟ್/ ಖಾಸಗಿ ಆರೋಗ್ಯ ಉದ್ದಿಮೆಗಳ ಹಿತಗಳನ್ನು ಮೀರಿ ನಿಜ ಜನ ಬದ್ಧತೆ; ಆರೋಗ್ಯ ಕಾಳಜಿ ಮುಖ್ಯವಾಗಬೇಕು. ಎಲ್ಲಕ್ಕಿಂತ ಯೋಜನಗೆ ಅಗತ್ಯದಷ್ಟು ಹಣಕಾಸನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಬೇಕು. ವಿಮಾ ಸೌಲಭ್ಯದ ಜೊತೆಗೇ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳ ವ್ಯವಸ್ಥೆಯನ್ನು ಹಳ್ಳಿಯಿಂದ ನಗರದ ವರೆಗೆ ಸರ್ವ ವಿಧದಲ್ಲಿ ಸುಧಾರಿಸುವ ನಿಟ್ಟಿನಲ್ಲಿಯೂ ತೊಡಗಿಸಿಕೊಳ್ಳಬೇಕು. ಈ ದಿಸೆಯಲ್ಲಿ ನೋಡಿದರೆ ‘ಆಯುಷ್ಮಾನ್‌ ಭಾರತ’ದ ಎದುರು ಹಲವು ಸವಾಲುಗಳು ಕಾಣಿಸುತ್ತವೆ. ಅವೆಲ್ಲವನ್ನು ಮೀರಿ ಅನುಷ್ಠಾನ ಸಾಧ್ಯವಾದರಷ್ಟೆ “ಜಗತ್ತಿನಲ್ಲೇ ದೊಡ್ಡ ಆರೋಗ್ಯ ರಕ್ಷಣಾ ಯೋಜನೆ’’ ಎನ್ನುವ ಮೋದಿ ಸರ್ಕಾರದ ವರ್ತಮಾನದ ಸ್ವಯಂ ಬಹುಪರಾಕು, ಭವಿಷ್ಯದಲ್ಲಾದರೂ ನಿಜವಾದೀತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More