ಕಲಾಪಗಳ ವಿಡಿಯೋ ನೇರ ಪ್ರಸಾರಕ್ಕೆಸಮ್ಮತಿ ಸೂಚಿಸಿದ ಸುಪ್ರೀಂ ಕೋರ್ಟ್

ನ್ಯಾಯಾಲಯಗಳ ಕಲಾಪದ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಪಾರದರ್ಶಕ ವ್ಯವಸ್ಥೆ ಹಾಗೂ ಸಮಾಜದ ಸ್ವಾಸ್ಥ್ಯ ನಿರ್ವಹಣೆಗೆ ನ್ಯಾಯಲಯಗಳಲ್ಲಿನ ಕಲಾಪದ ನೇರ ಪ್ರಸಾರ ಅಗತ್ಯವಿದೆ ಎಂದು ಇಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ

ನ್ಯಾಯಾಲಯಗಳ ಕಲಾಪದ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಪಾರದರ್ಶಕ ವ್ಯವಸ್ಥೆ ಹಾಗೂ ಸಮಾಜದ ಸ್ವಾಸ್ಥ್ಯ ನಿರ್ವಹಣೆಗೆ ನ್ಯಾಯಲಯಗಳಲ್ಲಿನ ಕಲಾಪದ ನೇರ ಪ್ರಸಾರ ಅಗತ್ಯವಿದೆ ಎಂದು ಇಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ , ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಇಂದು ಈ ಕುರಿತು ತೀರ್ಪು ನೀಡಿತು. ನ್ಯಾಯಲಯಗಳಲ್ಲಿನ ಕಲಾಪದ ನೇರ ಪ್ರಸಾರದಿಂದಾಗಿ ಪ್ರಕರಣಗಳ ಹಾಗೂ ತೀರ್ಪುಗಳ ಕುರಿತು ಜನಸಾಮಾನ್ಯರಲ್ಲಾಗುವ ತಪ್ಪು ಗ್ರಹಿಕೆಗಳನ್ನು ತಡೆಯಬಹುದೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತು. ಕಲಾಪದ ನೇರ ಪ್ರಸಾರ ಅನುಷ್ಠಾನಕ್ಕೆ ಅನುಸರಿಸಬೇಕಾಗಿರುವ ನಿಯಮಗಳನ್ನು ಸುಪ್ರೀಂ ಕೋರ್ಟ್‌ ಶೀಘ್ರದಲ್ಲಿಯೇ ರೂಪಿಸಲಿದೆ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್ ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹಾಗೂ ಕಾನೂನು ವಿದ್ಯಾರ್ಥಿನಿ ಸ್ವಪ್ನಿಲ್ ತ್ರಿಪಾಟಿ ನ್ಯಾಯಾಲಯಗಳ ಕಲಾಪದ ನೇರ ಪ್ರಸಾರ ಮಾಡಬೇಕೆಂದು ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳ ವಿಚಾರಣೆ ನಡೆಸಿದ್ದ ಎ.ಎಂ.ಖಾನ್ವಿಲ್ಕರ್‌, ಡಿ.ವೈ.ಚಂದ್ರಚೂಡ್‌ ಅವರ ದ್ವಿಸದಸ್ಯ ಪೀಠವೂ ಕಲಾಪದ ನೇರ ಪ್ರಸಾರದ ಕುರಿತು ಸರ್ಕಾರದ ಪರ ನ್ಯಾಯವಾದಿ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರ ಸಹಕಾರ ಅಪೇಕ್ಷಿಸಿತ್ತು, ಅರ್ಜಿದಾರರ ಮನವಿಗಳನ್ನು ಆಧರಿಸಿ ವೇಣುಗೋಪಾಲ್‌ ನೇರ ಪ್ರಸಾರ ಅನುಷ್ಠಾನಕ್ಕಾಗಿ ಕೆಲವು ನೀತಿ ನಿಯಮಗಳನ್ನು ಸಿದ್ಧಪಡಿಸಿ ಕೋರ್ಟ್ ಗೆ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ನ, ಕಲಾಪದ ನೇರ ಪ್ರಸಾರದ ತೀರ್ಪಿನ ಕುರಿತಂತೆ ಹೈಕೊರ್ಟ್ ನ್ಯಾಯವಾದಿ ಬಿ.ಟಿ ವೆಂಕಟೇಶ್ ದಿ ಸ್ಟೇಟ್ ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಸುಪ್ರೀಂ ಕೋರ್ಟ್ ನ ತೀರ್ಪು ಸ್ವಾಗತಾರ್ಹ, ನಮ್ಮ ದೇಶದಲ್ಲಿರುವುದು ಮುಕ್ತ ನ್ಯಾಯಾಂಗ ವ್ಯವಸ್ಥೆಯಾದರೂ ಸಾರ್ವಜನಿಕರು ಕೋರ್ಟಿನ ಕಲಾಪದ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳುವುದು ಕಷ್ಟಸಾಧ್ಯವಾಗಿತ್ತು. ಇನ್ನುಮುಂದೆ ನ್ಯಾಯವಾದಿಗಳು ಕಕ್ಷಿದಾರರಲ್ಲಿ ಗೊಂದಲ ಸೃಷ್ಟಿಸಲು ಅವಕಾಶಗಳಿರುವುದಿಲ್ಲ. ಪ್ರಕರಣದ ವಿಚಾರಣೆಗಳ ಕುರಿತಾದ ಸಂಪೂರ್ಣ ಮಾಹಿತಿ ಸರಳವಾಗಿ ಜನಸಾಮಾನ್ಯರ ವರೆಗೂ ತಲುಪುತ್ತಿರುವುದು ಖುಷಿಯ ಸಂಗತಿ ಈಗಾಗಲೇ ಹಲವು ದೇಶಗಳಲ್ಲಿ ಈ ಮಾದರಿ ಜಾರಿಯಲ್ಲಿದೆ ನಮ್ಮ ದೇಶಕ್ಕೂ ನಿಯಮ ಅವಶ್ಯಕ ಎಂದಿದ್ದಾರೆ.

ಇದನ್ನೂ ಓದಿ : ಸಲಿಂಗ ಪ್ರೇಮ ಅಪರಾಧವಲ್ಲ; ಸುಪ್ರೀಂ ಕೋರ್ಟ್‌ನಿಂದ ಸೆಕ್ಷನ್‌ 377 ರದ್ದು

ತೀರ್ಪಿನ ಕುರಿತಂತೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ದಿ ಸ್ಟೇಟ್ ನೊಂದಿಗೆ ಮಾತನಾಡಿದ್ದು; ನ್ಯಾಯಾಲಯದಲ್ಲಾಗುವ ವಿಚಾರಣೆ ಹಾಗೂ ತೀರ್ಪಿಗೆ ಸಂಬಂಧಿಸಿದಂತೆ ಜನಸಾಮಾನ್ಯರು ಅಥವಾ ಕಕ್ಷಿದಾರರಲ್ಲಿ ಯಾವ ಸ್ಪಷ್ಟ ಚಿತ್ರಣವೂ ಇರುವುದಿಲ್ಲ, ನೇರ ಪ್ರಸಾರದಿಂದಾಗಿ ಜನಸಾಮಾನ್ಯರಲ್ಲಿನ ಗೊಂದಲಗಳು ನಿವಾರಣೆಯಾಗುತ್ತವೆ. ಈ ನಿಯಮ ದೇಶದ ಪ್ರತಿ ನ್ಯಾಯಾಲಯದಲ್ಲೂ ಕಾರ್ಯರೂಪಕ್ಕೆ ಬರಬೇಕೆಂಬುದು ನನ್ನ ಆಶಯ ಎಂದರು.

ನೇರ ಪ್ರಸಾರ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದ ಬೆನ್ನಲ್ಲೇ, ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು, ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ ವಿಚಾರಣೆಗಳು ಹಾಗೂ ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ನೇರ ಪ್ರಸಾರದ ವ್ಯಾಪ್ತಿಗೆ ತರಬಾರದು ಎಂದು ನ್ಯಾಯವಾದಿಗಳು,ನ್ಯಾಯಮೂರ್ತಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದ ಅಭಿಪ್ರಾಯ ವ್ಯಕ್ತವಾಗಿದೆ.

ನೇರ ಪ್ರಸಾರದ ಸೌಲಭ್ಯವನ್ನು ಕೆಲವರು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದು, ವೈಯಕ್ತಿಕ, ಅಥವಾ ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಿಕೊಳ್ಳದಂತೆ ನಿರ್ಬಂಧ ಹೇರಬೇಕೆಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More