ಎಸ್‌ ಸಿ, ಎಸ್‌ ಟಿ ಬಡ್ತಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅಸ್ತು

ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕಾಯ್ದರಿಸಿದ್ದ ತೀರ್ಪು ಹೊರಬಿದ್ದಿದೆ. ಮೀಸಲಾತಿ ನಿರ್ಧಾರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಡಲಾಗಿದೆ ಎಂದು ದೀಪಕ್‌ ಮಿಶ್ರಾ ನೇತೃತ್ವದ ಪೀಠ ಇಂದು ನೀಡಿದ ತೀರ್ಪಿನಲ್ಲಿ ಹೇಳಿದೆ 

ಸರ್ಕಾರಿ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆ ಸಂಬಂಧವಾಗಿ ಇದ್ದ ನಿರ್ಬಂಧಗಳನ್ನ ಕೋರ್ಟ್ ರದ್ದುಗೊಳಿಸಿದೆ.

ಈ ತೀರ್ಪನ್ನು ೨೦೧೯ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ನೋಡಲಾರಂಭಿಸಿವೆ. ಪ್ರತಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ದಲಿತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿರುವ ನಡುವೆಯೇ ಸುಪ್ರೀಂ ಕೋರ್ಟ್‌ ನೀಡಿರುವ ಅಂತಿಮ ತೀರ್ಪಿನ ಕುರಿತು ರಾಜಕೀಯ ಲೆಕ್ಕಾಚಾರಗಳು ನಡೆಯಲಾರಂಭಿಸಿವೆ.

ಬಡ್ತಿಯಲ್ಲಿ ಮೀಸಲಾತಿ ಕುರಿತಂತೆ ೨೦೦೬ರಲ್ಲಿ ಎಂ ನಾಗರಾಜು ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದ ತೀರ್ಪಿನಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆಯಬೇಕು ಮತ್ತು ಪ್ರಕರಣವನ್ನು ಸಪ್ತ ಸಂವಿಧಾನಪೀಠಕ್ಕೆ ವರ್ಗಾಯಿಸಬೇಕು ಎಂದುಎಂದು ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಅಂತಿಮ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲು ನಿರಾಕರಿಸಿದೆ. ‌ಹಾಗೆಯೇ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ೨೦೦೬ರಲ್ಲಿ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ವಿವರಿಸಿದೆ. ಹಿಂದಿನ ತೀರ್ಪಿನಲ್ಲಿದ್ದ ನಿರ್ಬಂಧಗಳನ್ನು ತೆಗೆದು ಹಾಕಿದೆ.

ಬಡ್ತಿ ಮೀಸಲಾತಿ ಕುರಿತಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ತಲೆದೋರಿತ್ತು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಡ್ತಿಯಲ್ಲಿ ಮೀಸಲಾತಿ ಮತ್ತು ಪರಿಶಿಷ್ಟ ನೌಕರರ ಹಿತ ಕಾಯುವ ಕುರಿತು ಹಿಂದಿನ ಕಾಂಗ್ರೆಸ್‌ ಸರ್ಕಾರ ತಂದಿದ್ದ ಮಸೂದೆಯನ್ನು ಜಾರಿಗೊಳಿಸಲು ಪಟ್ಟು ಹಿಡಿದಿದ್ದರು. ಈ ವಿಚಾರ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಗೆ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬಡ್ತಿ ಮೀಸಲಾತಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ವಿವೇಚನೆಯನ್ನು ಆಯಾ ರಾಜ್ಯ ಸರ್ಕಾರಗಳ ಹೆಗಲಿಗೆ ಹಾಕಿರುವುದು ಕುತೂಹಲ ಮೂಡಿಸಿದೆ. ಈ ಕುರಿತು ಪವಿತ್ರಾ ಪ್ರಕರಣದಲ್ಲಿ ಶೀಘ್ರದಲ್ಲಿಯೇ ಅಂತಿಮ ತೀರ್ಪು ಪ್ರಕಟವಾಗುವ ಸಂಭವವಿದೆ.

ಇದನ್ನೂ ಓದಿ : ಮುಂಬಡ್ತಿ ಮೀಸಲಾತಿ; ಶೇಕಡ ೧೮ರ ನೀತಿಯನ್ನೂ ಪಾಲಿಸದ ಇಲಾಖೆಗಳು

ಎಸ್ಸಿ, ಎಸ್ಟಿ ನೌಕರರಿಗೆ ಮೀಸಲಾತಿ ಕೊಡುವ ಸಂದರ್ಭದಲ್ಲೇ ಆ ವ್ಯಕ್ತಿ ಆ ಸ್ಥಾನಕ್ಕೆ ಅರ್ಹನೇ? ಅನರ್ಹನೇ? ದಕ್ಷನೇ? ಅಥವಾ ಹಿಂದುಳಿದಿದ್ದಾನೆಯೇ ? ಬಡ್ತಿ ಮೀಸಲಾತಿಯಲ್ಲಿ ಅನುಪಾತ ಸರಿಯಾಗಿದೆಯೇ , ಅಂಥ ನಿರ್ಧಾರದಿಂದ ಆಡಳಿತದ ಮೇಲೆ ಬೀರುವ ಪರಿಣಾಮಗಳು ಏನು ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡು ಕೊಂಡ ನಂತರ ಮೀಸಲಾತಿ ನೀಡಬೇಕೆಂದು ಸುಪ್ರೀಂ ಕೋರ್ಟ್‌ ೨೦೦೬ರಲ್ಲಿ ತೀರ್ಪಿನಲ್ಲಿ ತಿಳಿಸಿತ್ತು. ಪರಿಶಿಷ್ಟ ವರ್ಗದ ನೌಕರರಿಗೆ ಉದ್ಯೋಗ ನೀಡುವಾಗಲೇ ಈ ಎಲ್ಲ ಅಂಶಗಳನ್ನು ಪರಿಶೀಲನೆ ನಡೆಸಲಾಗಿರುತ್ತದೆ.

ಈ ಸಂಬಂಧ ಸೂಕ್ತ ದಾಖಲೆಗಳನ್ನೂ ಒದಗಿಸಲಾಗಿತ್ತು. ಹೀಗಾಗಿ ಪುನಃ ದಕ್ಷತೆ, ಹಿಂದುಳಿದಿರುವಿಕೆ, ಪ್ರಾತಿನಿಧ್ಯತೆ ಕೊರತೆ ಕುರಿತು ಅಂಕಿ ಅಂಶಗಳ ಮಾಹಿತಿಯನ್ನು ಕಲೆ ಹಾಕುವುದು ಬೇಡ ಎಂದು ತೀರ್ಪಿನಲ್ಲಿ ವ್ಯಾಖ್ಯಾನಿಸಿದೆ. ಒಂದು ವೇಳೆ ಮಾಹಿತಿ ಕಲೆ ಹಾಕುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ವಾದ ಮಂಡಿಸಿದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಹತ್ತಿರುವ ಕಳಂಕ ಈಗಲೂ ನಿರ್ಮೂಲನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಬಡ್ತಿಯಲ್ಲಿ ಮೀಸಲಾತಿ ನೀಡುವ ಅಗತ್ಯವಿದೆ. ಈ ಕುರಿತು ರಾಜ್ಯ, ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದಿದೆ.

ಎಸ್ಸಿ, ಎಸ್ಟಿ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲು ನೀಡಲು ೨೦೦೬ರಲ್ಲಿ ರೂಪಿಸಿದ್ದ ಮಾನದಂಡವನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೊರೆ ಇಟ್ಟಿತ್ತು. ಅಲ್ಲದೆ, ಈ ಸಮುದಾಯಗಳು ಹಿಂದುಳಿದಿವೆ ನಿಜ. ಆದರೆ ಪ್ರಾತಿನಿಧ್ಯ ಕೊರತೆ ಇದೆ ಎಂಬುದನ್ನು ಸಾಬೀತುಪಡಿಸಲು ಬೇಕಾದ ಮಾಹಿತಿ, ದತ್ತಾಂಶವನ್ನು ಕಲೆ ಹಾಕುವುದು ಅಸಾಧ್ಯ ಎಂದು ಕೇಂದ್ರ ಸರ್ಕಾರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್‌ ಅವರು ವಾದಿಸಿದ್ದರು.

ಈ ವಾದವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್‌, ಪ್ರಾತಿನಿಧ್ಯ ಕೊರತೆ ಮತ್ತು ಒಟ್ಟು ಹಿಂದುಳಿದಿರುವಿಕೆಯ ದತ್ತಾಂಶಗಳ ಅಧಾರದಲ್ಲಿ ಬಡ್ತಿ ಮೀಸಲಾತಿ ನೀಡಬೇಕು ಎಂದು ೨೦೦೬ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ್ದ ಯಾವುದೇ ವ್ಯಕ್ತಿ ಮೀಸಲಾತಿ ಪಡೆದು ಒಮ್ಮೆ ಉದ್ಯೋಗಕ್ಕೆ ಸೇರಿದ ಮೇಲೆ ಅವರ ಹಿಂದುಳಿದಿರುವಿಕೆ ನಿವಾರಣೆಯಾಗಿರುತ್ತದೆ. ದರ್ಜೆ-3 ಮತ್ತು ದರ್ಜೆ-4ರ ಹುದ್ದೆಗಳಿಗೆ ಮಾತ್ರ ಬಡ್ತಿ ಮೀಸಲಾತಿ ನೀಡಬಹುದು. ಉನ್ನತ ಹಂತದ ಹುದ್ದೆಗಳಲ್ಲಿ ಬಡ್ತಿ ಮೀಸಲು ಸೌಲಭ್ಯ ಕಲ್ಪಿಸಬಾರದು ಎಂದು ಉದ್ಯೋಗದಲ್ಲಿ ಬಡ್ತಿ ಮೀಸಲು ವಿರೋಧಿಸುತ್ತಿರುವ ಅರ್ಜಿದಾರರ ಪರ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ವಾದಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More