ಟ್ವಿಟರ್ ಸ್ಟೇಟ್| ಋತುಸ್ರಾವದ ಮಾನಸಿಕ ತಲ್ಲಣದತ್ತ ಗಮನ ಸೆಳೆದ ಶೆಹ್ಲಾ ರಶೀದ್

ಶೆಹ್ಲಾ ರಶೀದ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಋತುಸ್ರಾವದ ಸಂದರ್ಭದ ತಮ್ಮ ಖಾಸಗಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಋತುಸ್ರಾವದ ಹಾರ್ಮೋನ್ ಅಸಮತೋಲನದ ಸಂದರ್ಭದಲ್ಲಿ ಮಹಿಳೆಯರಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುವ ಬಗ್ಗೆ ಅವರು ಬರೆದುಕೊಂಡಿದ್ದಾರೆ

ಫೈರ್ ಬ್ರಾಂಡ್ ವಿದ್ಯಾರ್ಥಿ ನಾಯಕಿ ಎಂದೇ ಪ್ರಸಿದ್ಧರಾಗಿರುವ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶೆಹ್ಲಾ ರಶೀದ್ ಇತ್ತೀಚೆಗೆ ಟ್ವಿಟರ್‌ನಲ್ಲಿ ತಮ್ಮ ಖಾಸಗಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಶೆಹ್ಲಾ ರಶೀದ್ ಅವರನ್ನು ವಿರೋಧಿಸಿ ಸದಾ ದ್ವೇಷದ ಮಾತುಗಳನ್ನು ಬಳಸುವವರು ಈ ವಿಚಾರವಾಗಿ ಲೇವಡಿ ಮಾಡಿರುವುದು ಸಹಜವೇ. ಆದರೆ ಬಹಳಷ್ಟು ಮಂದಿ ಶೆಹ್ಲಾ ರಶೀದ್ ಅವರ ಧೈರ್ಯ ಮತ್ತು ಉತ್ತಮ ಉದ್ದೇಶವನ್ನು ಕೊಂಡಾಡಿದ್ದಾರೆ. “ನಾನು ಇವತ್ತು ಬಹಳ ವೈಯಕ್ತಿಕವಾದ ವಿಚಾರವೊಂದನ್ನು ಟ್ವಿಟರ್ ಮೂಲಕ ಹಂಚಿಕೊಳ್ಳಲು ಬಯಸಿದ್ದೇನೆ. ಟ್ವಿಟರ್ ದಯಾಳುವಲ್ಲ ಎನ್ನುವುದು ಗೊತ್ತಿದ್ದೂ ಇದನ್ನು ಬಹಿರಂಗಪಡಿಸುತ್ತಿದ್ದೇನೆ. ನಾನು ಸಾರ್ವಜನಿಕ ಹಿತಾಸಕ್ತಿಯಿಂದ ಈ ಖಾಸಗಿ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಬಗ್ಗೆ ಹೆಚ್ಚು ತಿಳಿಯಲು ಬಯಸಿರುವ ವ್ಯಕ್ತಿಗಳಿಗೆ ಇದರಿಂದ ನೆರವಾಗಲಿದೆ ಎನ್ನುವ ಭರವಸೆ ನನಗಿದೆ” ಎಂದು ಶೆಹ್ಲಾ ರಶೀದ್ ತಮ್ಮ ಕತೆಯನ್ನು ಆರಂಭಿಸಿದ್ದಾರೆ.

“ಕೆಲವು ದಿನಗಳ ಹಿಂದೆ ನನಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಬಹಳ ಅನಿಸುತ್ತಿತ್ತು. ಎರಡು ವಾರಗಳಿಂದ ಅದೇ ರೀತಿ ಭಾವನೆ ಪದೇ ಪದೇ ಬರುತ್ತಿತ್ತು. ಆದರೆ ಆ ರಾತ್ರಿ ನಾನು ಹೇಗೆ ಸಾಯುವುದು ಎಂದು ಯೋಚಿಸಲಾರಂಭಿಸಿದ್ದೆ. ನನ್ನ ಆಲೋಚನೆಗಳಲ್ಲಿಯೇ ಹಲವು ದಾರಿಗಳನ್ನು ಪ್ರಯತ್ನಿಸಿ ನೋಡಿದೆ. ಮರುದಿನ ನನ್ನ ಋತುಸ್ರಾವದ ದಿನ. ನಾನು “ಪಿಎಂಎಸ್‌+ ಆತ್ಮಹತ್ಯೆ” ಎನ್ನುವ ವಿಚಾರವನ್ನು ಹುಡುಕಿ ನೋಡಿದಾಗ ಪಿಎಂಡಿಡಿ (ಪ್ರಿಮೆನುಸ್ಟ್ರಾಲ್ ಡಿಸ್ಫೋರಿಕ್ ಡಿಸಾರ್ಡರ್‌) ಎನ್ನುವ ರೋಗದ ವಿಚಾರ ತಿಳಿದು ಬಂತು” ಎಂದು ಟ್ವೀಟ್ ಮಾಡಿದ್ದಾರೆ ಶೆಹ್ಲಾ ರಶೀದ್.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಪೌರಕಾರ್ಮಿಕನ ಕುಟುಂಬಕ್ಕೆ ನೆರವು ಸಂಗ್ರಹಿಸಿದ ಟ್ವೀಟಿಗರು

ಮುಂದುವರಿದು ತಮ್ಮ ಟ್ವೀಟ್‌ಗಳಲ್ಲಿ ಶೆಹ್ಲಾ ರಶೀದ್ ಅವರು ಪಿಎಂಡಿಡಿ ಬಗ್ಗೆಯೂ ಬಹಳಷ್ಟು ವಿವರಗಳನ್ನು ನೀಡಿದ್ದಾರೆ. “ಪಿಎಂಡಿಡಿಯನ್ನು ಸಾಮಾನ್ಯವಾಗಿ ಮಹಿಳೆಯ ಸಮಸ್ಯೆ ಎನ್ನುವಂತೆ ನೋಡಲಾಗುತ್ತದೆ. ಆದರೆ ನೀವು ನಿಮ್ಮ ಸಹೋದರಿ, ಸಂಗಾತಿ ಅಥವಾ ಸ್ನೇಹಿತೆಯ ಬಗ್ಗೆ ನಿಜವಾಗಿಯೂ ಅಕ್ಕರೆ ಹೊಂದಿದ್ದಾರೆ ಪಿಎಂಡಿಡಿ ಬಗ್ಗೆ ಜಾಗೃತಿ ಬೆಳೆಸಿ. ವಾಸ್ತವದಲ್ಲಿ ಇದು ಹೇಗೆ ಮಾನಸಿಕವಾಗಿ ಸಮಸ್ಯೆಯೊಡ್ಡುತ್ತದೆ ಎನ್ನುವುದು ನಿಜಕ್ಕೂ ಭಯಾನಕ. ಆತ್ಮಹತ್ಯೆ ಮಾಡಿಕೊಳ್ಳಲು ನಾವು ದಾರಿ ಹುಡುಕುತ್ತಾ ಹೋಗುತ್ತೇವೆ. ಅದಕ್ಕಾಗಿ ಯೋಜನೆಯನ್ನೂ ರೂಪಿಸುತ್ತೇವೆ” ಎಂದು ಪಿಎಂಡಿಡಿ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ನಡುವೆ ತಮ್ಮ ಮೊಬೈಲ್‌ನಲ್ಲಿ ಆತ್ಮಹತ್ಯೆಗಾಗಿ ಯಾವೆಲ್ಲಾ ದಾರಿಗಳಿವೆ ಎಂದು ಶೆಹ್ಲಾ ಅವರು ಪ್ರಯತ್ನಿಸಿದ್ದರು. ಅವರ ಸರ್ಚ್ ರಿಸಲ್ಟ್‌ಗಳನ್ನೇ ಬಳಸಿಕೊಂಡು @Quora ಅವರಿಗೊಂದು ಇಮೇಲ್ ಕಳುಹಿಸುತ್ತದೆ. ಶೆಹ್ಲಾ ಅವರು ಇನ್ನೂ ಆತ್ಮಹತ್ಯೆಯ ಬಗ್ಗೆ ವಿವರ ಹುಡುಕುತ್ತಿದ್ದರೆ ತಾನು ಸಹಾಯ ಮಾಡುವುದಾಗಿ @Quora ಕಳುಹಿಸಿದ ಇಮೇಲ್ ಹೇಳಿದೆ! ಇದು ಯಾಂತ್ರಿಕವಾಗಿ ಸಾಫ್ಟ್‌ವೇರ್ ಮೂಲಕ ಉತ್ಪತ್ತಿಯಾದ ಇಮೇಲ್. ಅಲ್ಗಾರಿದಂಗಳು (ಅಂಕಿ ಅಂಶಗಳು) ಹೇಗೆ ಬಹಳ ಯಾಂತ್ರಿಕವಾಗಿ, ಯಾವುದೇ ಭಾವನೆಗಳಿಗೂ ಆಸ್ಪದವಿಲ್ಲದೆ ಸರ್ಚ್ ರಿಸಲ್ಟ್‌ಗಳನ್ನಷ್ಟೇ ಬಳಸಿಕೊಂಡು ಎಂತಹ ಭಯಾನಕ ಕೆಲಸಕ್ಕೂ ನೆರವು ನೀಡಲು ಮುಂದಾಗುತ್ತದೆ ಎನ್ನುವ ಆತಂಕವನ್ನೂ ಶೆಹ್ಲಾ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. “ನೀವು ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸಿದಲ್ಲಿ ಅಲ್ಗಾರಿತಂಗಳು ನಿಮಗೆ ನೆರವು ನೀಡುವ ಕಾಲದಲ್ಲಿ ನಾವಿದ್ದೇವೆ. ನಾನು ಲಾಗಿನ್ ಆಗಿದ್ದೆ ಎನ್ನುವ ಬಗ್ಗೆಯೂ ಯೋಚಿಸದೆಯೇ ನಾನು ಸರ್ಚ್ ಮಾಡಿದ್ದೆ. ಹೀಗಾಗಿ ಇಂದು ಬೆಳಿಗ್ಗೆ @Quora ನನಗೆ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ನೆರವು ನೀಡುವುದಾಗಿ ಹೇಳಿದೆ” ಎಂದು ಶೆಹ್ಲಾ ಬರೆದಿದ್ದಾರೆ.

“ಅಲ್ಗಾರಿದಂಗಳು ಆತ್ಮಹತ್ಯೆಗೆ ನೆರವಾಗುವ ಜಗತ್ತಿನಲ್ಲಿ ಪಿಎಂಡಿಡಿ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಅಗತ್ಯ. ಪಿಎಂಎಸ್‌ನ ಗಂಭೀರ ರೂಪವು ನಿಜವಾಗಿಯೂ ಆತ್ಮಹತ್ಯೆಗೆ ಪ್ರೇರಣೆಯಾಗಬಹುದು. ಹೀಗಾಗಿ ಅದರ ಬಗ್ಗೆ ತಿಳಿದುಕೊಂಡಿರುವುದು ಮುಖ್ಯ. ನಿಮ್ಮ ವಲಯದಲ್ಲಿ ಅಥವಾ ಕುಟುಂಬದಲ್ಲಿ ನಿಮಗೆ ಆಪ್ತವಾಗಿರುವ ಮಹಿಳೆಯರಿದ್ದರೆ, ಪಿಎಂಡಿಡಿಯನ್ನು ಮೂಡ್‌ನಲ್ಲಾಗುವ ಬದಲಾವಣೆ ಎಂದು ತಳ್ಳಿ ಹಾಕಬೇಡಿ. ಅದು ಆಕೆಯ ಕಲ್ಪನೆ ಎಂದು ಹೇಳಬೇಡಿ. ಇದು ಹಾರ್ಮೋನ್ ಬದಲಾವಣೆ. ಆಕೆಗೆ ಬೆಂಬಲವಾಗಿರಿ. “ಪುರುಷರಿಗೂ ಒತ್ತಡವಿರುತ್ತದೆ” ಎಂದು ಹೇಳಿ ತಳ್ಳಿ ಹಾಕಬೇಡಿ. ಪುರುಷರ ಸಮಸ್ಯೆಗಳಿಗೆ ಮಹಿಳೆಯರು ಅತೀ ಹೆಚ್ಚು ಮುತುವರ್ಜಿ ವಹಿಸುವುದು ಗೊತ್ತೇ ಇರುವ ವಿಚಾರ” ಎಂದು ಶೆಹ್ಲಾ ಹೇಳಿದ್ದಾರೆ.

ಶೆಹ್ಲಾ ಅವರು ತಮ್ಮ ಖಾಸಗಿ ಅನುಭವ ಮತ್ತು ಅಭಿಪ್ರಾಯಗಳಿಗೆ ದ್ವೇಷಪೂರಿತ ಟ್ವೀಟ್‌ಗಳು ಬರುವ ಬಗ್ಗೆ ನಿರೀಕ್ಷಿಸಿಯೇ ಇದ್ದರು. ಹೀಗಾಗಿ ಅವರು ಅವುಗಳತ್ತ ಹೆಚ್ಚು ಗಮನಕೊಟ್ಟಿಲ್ಲ. ಆದರೆ ಬಹಳಷ್ಟು ಟ್ವೀಟಿಗರು ಶೆಹ್ಲಾ ಅವರು ಬಹಳ ಕಡಿಮೆ ಜನರು ಮಾತನಾಡುವ ಸಮಸ್ಯೆಯ ಬಗ್ಗೆ ಟ್ವಿಟರ್ ಮೂಲಕ ಗಮನ ಹರಿಸಲು ಪ್ರಯತ್ನಿಸಿದ್ದನ್ನು ಪ್ರಶಂಸಿಸಿದ್ದಾರೆ.

ಅಂಕಿತ್ ನಾರಾಯಣ್ ಎನ್ನುವ ವ್ಯಕ್ತಿ ಶೆಹ್ಲಾ ರಶೀದ್ ಅವರಿಗೆ ವೈದ್ಯರ ಬಳಿಗೆ ಹೋಗುವಂತೆ ಸಲಹೆ ನೀಡಿದ್ದಾರೆ. “ಟ್ವಿಟರ್‌ನಲ್ಲಿ ಈ ವಿವರಗಳನ್ನು ಹೇಳುವ ಬದಲಾಗಿ ವೈದ್ಯರನ್ನು ಕಾಣು. ಧೈರ್ಯವಾಗಿರು” ಎಂದು ಅಂಕಿತ್ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಶೆಹ್ಲಾ, “ನಾನು ಈಗಲೂ ದಿಟ್ಟೆಯೇ. ಆದರೆ ಇದು ಹಾರ್ಮೋನ್ ಬದಲಾವಣೆಯಷ್ಟೇ. ಇವು ನೀವು ತಪ್ಪಿಸಿಕೊಳ್ಳಬಹುದಾದ ಆಲೋಚನೆಗಳಲ್ಲ. ಹಾರ್ಮೋನ್ ಬದಲಾವಣೆಗೆ ನಮ್ಮ ದೇಹ ಪ್ರತಿಕ್ರಿಯಿಸುವ ರೀತಿ ಇದು” ಎಂದು ಉತ್ತರಿಸಿದ್ದಾರೆ.

ಆದರೆ ಬಹಳಷ್ಟು ಮಂದಿ ಶೆಹ್ಲಾ ರಶೀದ್ ದಿಟ್ಟವಾಗಿ ಟ್ವಿಟರ್ ಮೂಲಕ ತಮ್ಮ ಅನುಭವ ಹಂಚಿಕೊಂಡು ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದೇ ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಶೆಹ್ಲಾ ರಶೀದ್ ಅವರು ಈ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂದು ವಿವರಿಸಿದ್ದಾರೆ. ಲೇಖಕಿ ಕಾವೇರಿ ಗೋಪಕುಮಾರ್ ಶೆಹ್ಲಾ ಅವರ ಟ್ವೀಟ್ ಬರಹವನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. “ಪಿಸಿಒಎಸ್‌ ಕೂಡ ಮಹಿಳೆಯರಲ್ಲಿ ಹತಾಶೆಗೆ ಕಾರಣವಾಗುತ್ತದೆ. ಕೂದಲು ಉದುರುವುದು, ಆಹಾರ ಸಮಸ್ಯೆಗಳೂ ಬರುತ್ತವೆ. ಬಹಳಷ್ಟು ಮಂದಿಗೆ ಇದು ಹಾರ್ಮೋನ್ ಅಸಮತೋಲನದ ಸಮಸ್ಯೆ ಎನ್ನುವುದೂ ತಿಳಿದಿರುವುದಿಲ್ಲ. ಅವರ ಜೀವನವೇ ಗೊಂದಲದ ಗೂಡಾಗಿರುತ್ತದೆ” ಎಂದು ಕಾವೇರಿ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಮಹಿಳೆಯರು ಶೆಹ್ಲಾ ಅವರ ಟ್ವೀಟ್‌ಗಳಿಗೆ ಹೆಚ್ಚು ಸ್ಪಂದಿಸಿದ್ದಾರೆ. ಸದಾ ರಾಜಕೀಯ ಮತ್ತು ದೇಶದ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಟ್ವೀಟ್‌ಗಳನ್ನು ಮಾಡುವ ಶೆಹ್ಲಾ ರಶೀದ್ ಅವರು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಜನರು ಹೆಚ್ಚು ಮಾತನಾಡದೆ ಇರುವ ಮಹಿಳೆಯರ ಕೆಲವು ಸಮಸ್ಯೆಗಳತ್ತ ಗಮನ ಸೆಳೆಯಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More