ಸುಪ್ರೀಂ ತೀರ್ಪು; ಅಸಲಿ ರೂಪಕ್ಕೆ ಬಂದ ಆಧಾರ್, ಮೋದಿ ಸರ್ಕಾರಕ್ಕೆ ಹಿನ್ನೆಡೆ

ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ಖಾಸಗಿ ಹಕ್ಕಿನ ಉಲ್ಲಂಘನೆಯ ಪ್ರಶ್ನೆಗೆ ಕಾರಣವಾಗಿದ್ದ ಕೆಲವು ಅಂಶಗಳನ್ನು ರದ್ದುಪಡಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ. ಮೋದಿಯವರ ಆಧಾರ್ ತೀರ್ಪಿನ ನಂತರ ಯುಪಿಎ ಸರ್ಕಾರದ ಆಧಾರ್ ಆಗಿ ಕಾಣುತ್ತಿದೆ!

ಆಧಾರ್‌ ನಿಂದ‌ ಖಾಸಗಿ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರಿಂ ಕೋರ್ಟ್‌ ಅದರ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿಯುವ ಮೂಲಕ ಬುಧವಾರ ಮಹತ್ತರ ತೀರ್ಪನ್ನು ನೀಡಿದೆ. ಇದೇ ವೇಳೆ, ಖಾಸಗಿ ಸಂಸ್ಥೆಗಳು ಆಧಾರ್‌ ಮಾಹಿತಿಯನ್ನು ಬಳಸಲು ಅನುವಾಗುವಂತೆ ರೂಪಿಸಲಾಗಿದ್ದ ಸೆಕ್ಷನ್‌‌ ೫೭ ಸೇರಿದಂತೆ ಚರ್ಚೆಗೆ ಕಾರಣವಾಗಿದ್ದ ಸೆಕ್ಷನ್‌ ೩೩(೨) ಹಾಗೂ ಸೆಕ್ಷನ್‌ ೪೭ಅನ್ನು ರದ್ದುಪಡಿಸಿದೆ.

ಸರ್ಕಾರದ ಸವಲತ್ತು ಹಾಗೂ ಯೋಜನೆಗಳನ್ನು ಸಮಾಜದ ಅಂಚಿನಲ್ಲಿರುವ ಬಡವರಿಗೆ ತಲುಪಿಸುವ ಉದ್ದೇಶಕ್ಕೆ ಆಧಾರ್‌ ಪೂರಕವಾಗಿದೆ ಎನ್ನುವ ವಿಚಾರಕ್ಕೆ ಸುಪ್ರೀಂಕೋರ್ಟ್‌ ತೀರ್ಪು ಸಹಮತ ವ್ಯಕ್ತಪಡಿಸಿದೆ. ಅದರೆ, ಇದೇ ವೇಳೆ, ಬ್ಯಾಂಕ್‌ ಖಾತೆಗಳಿಗೆ ಆಧಾರ್ ಲಿಂಕ್‌ ಮಾಡುವುದನ್ನಾಗಲಿ, ಮೊಬೈಲ್‌ ಫೋನ್‌ ಕನೆಕ್ಷನ್‌ ಪಡೆಯಲಿಕ್ಕಾಗಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೇವೆಗಳನ್ನು ಪಡೆಯಲಾಗಲಿ ಆಧಾರ್‌ ನ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆ ಮೂಲಕ ವ್ಯಕ್ತಿಯ ದೃಢೀಕರಣಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗಿದ್ದ ಆಧಾರ್‌ ಮೇಲಿನ ಅತಿಯಾದ ಅವಲಂಬನೆಗೆ ಲಗಾಮು ಹಾಕಿದೆ. ಆಧಾರ್‌ ದತ್ತಾಂಶಗಳನ್ನು ಖಾಸಗಿ ಸೇವಾ ಸಂಸ್ಥೆಗಳು, ಕಾರ್ಪೊರೆಟ್‌ ಸಂಸ್ಥೆಗಳು ಪದೇ ಪದೇ ದೃಢೀಕರಣಕ್ಕಾಗಿ ಬಳಸುತ್ತಿದ್ದುದನ್ನು ತಡೆ ಹಿಡಿದಿದೆ. ಆದರೆ, ಆದಾಯ ತೆರಿಗೆ ಕಾನೂನಿನ ಸೆಕ್ಷನ್‌ ೧೩೯ಎಎ ಯನ್ನು ಎತ್ತಿ ಹಿಡಿದಿರುವ ನ್ಯಾಯಾಲಯ ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಜೋಡಣೆಯನ್ನು ಎತ್ತಿ ಹಿಡಿದಿದ್ದು ಅದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಆಧಾರ್‌ ಅಗತ್ಯವೆಂದಿದೆ.‌ ತೀರ್ಪನ್ನು ಸ್ಥೂಲವಾಗಿ ಗಮನಿಸಿದರೆ, ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್‌ ಅನ್ನು ಮೊದಲ ಬಾರಿಗೆ ಜಾರಿಗೊಳಿಸಲು ಮುಂದಾದಾಗ ಅದರ ಮೂಲಸ್ವರೂಪ ಹೇಗಿತ್ತೋ, ಹೆಚ್ಚುಕಡಿಮೆ ಅದೇ ಸ್ಥಿತಿಗೆ ಸುಪ್ರೀಂ ಕೋರ್ಟ್‌ ಅದನ್ನು ಮಿತಿಗೊಳಿಸಿದೆ. ಇದು ಆಧಾರ್‌ ಬಳಕೆಯನ್ನು ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ವ್ಯಾಪಕಗೊಳಿಸಲು ಮುಂದಾಗಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.

ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠದಲ್ಲಿ ಬಹುಮತದ ತೀರ್ಪನ್ನು ಎ ಕೆ ಸಿಕ್ರಿಯವರು ಬರೆದಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹಾಗೂ ಎ ಎಂ ಖಾನ್ವಿಲ್ಕರ್‌ ಇದಕ್ಕೆ ಸಹಮತಿಸಿದ್ದಾರೆ. ನ್ಯಾಯಮೂರ್ತಿಗಳಾದ ಚಂದ್ರಚೂಡ್‌ ಮತ್ತು ಅಶೋಕ್‌ ಭೂಷಣ್‌ ಅವರು ಅನೇಕ ವಿಷಯಗಳಲ್ಲಿ ಬಹುಮತದ ತೀರ್ಪಿಗೆ ಭಿನ್ನವಾದ ನಿಲುವು ಹೊಂದಿದ್ದು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದಾರೆ. ಅದರಲ್ಲಿಯೂ, ಆಧಾರ್‌ ಕುರಿತ ವಿಧೇಯಕವನ್ನು ಹಣಕಾಸು ವಿಧೇಯಕವಾಗಿ ಚರ್ಚೆಗೆ ಆಸ್ಪದವಿಲ್ಲದಂತೆ ಸಂಸತ್ತಿನಲ್ಲಿ ಅನುಮೋದನೆ ಪಡೆದ ವಿಧಾನವನ್ನು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ತಮ್ಮ ತೀರ್ಪಿನಲ್ಲಿ ‘ಕುತಂತ್ರ’ ಎಂದು ಕಟುವಾಗಿ ಕರೆದಿದ್ದಾರೆ. ಆಧಾರ್‌ ಅನ್ನು ಸಂವಿಧಾನಬದ್ಧ ಎಂದು ಒಪ್ಪಿರುವ ಅವರು, ದತ್ತಾಂಶದ ಕುರಿತಾದ ಸೂಕ್ತ ರಕ್ಷಣೆಯನ್ನು ಹಾಗೂ ಆಧಾರ್‌ ನಿಂದ ಹೊರಗುಳಿಯುವ ವೈಯಕ್ತಿಕ ಸ್ವಾತಂತ್ರ್ಯವನ್ನು ಈ ಪ್ರಕ್ರಿಯೆ ಹೊಂದಿಲ್ಲದಿರುವ ಬಗ್ಗೆ ಗಮನಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಇಡೀ ಯೋಜನೆ “ಖಾಸಗಿತನದ ಸಂಪೂರ್ಣ ಉಲ್ಲಂಘನೆ” ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನಬದ್ಧವಾಗಿ ಕೊಡಮಾಡಲಾಗಿರುವ ಖಾತರಿಗಳನ್ನು ಅಲ್ಗಾರಿದಮ್‌ನ (ಗಣಕೀಕೃತ ವ್ಯವಸ್ಥೆ) ಸಾಧ್ಯಾಸಾಧ್ಯತೆಗಳಿಗೆ ‌ಮತ್ತು ತಾಂತ್ರಿಕ ಏರಿಳಿತಗಳಿಗೆ ಒಪ್ಪಿಸಲಾಗದು,” ಎಂದಿದ್ದಾರೆ. ಅ ಮೂಲಕ ತಂತ್ರಜ್ಞಾನದಲ್ಲಿನ ಲೋಪ ಅಥವಾ ಅಸಮರ್ಪಕತೆಯ ಕಾರಣಕ್ಕೆ ಸರ್ಕಾರದಿಂದ ನ್ಯಾಯಬದ್ಧವಾಗಿ ದೊರೆಯಬೇಕಾದ ಸವಲತ್ತುಗಳ ವಿಚಾರದಲ್ಲಿ ಲೋಪವಾಗಬಾರದು ಎನ್ನುವ ಅಂಶವನ್ನು ಪ್ರತಿಪಾದಿಸಿದ್ದಾರೆ. ನ್ಯಾಯಮೂರ್ತಿ ಭೂಷಣ್‌ ಅವರು ಆಧಾರ್‌ನಿಂದ ಖಾಸಗಿತನದ ಉಲ್ಲಂಘನೆಯಾಗಿಲ್ಲ ಎಂದಿದ್ದಾರಾದರೂ, ವಿತ್ತೀಯ ವಿದೇಯಕವಾಗಿ ಇದನ್ನು ಪರಿಗಣಿಸಿರುವ ಬಗ್ಗೆ ಮರುಪರಿಶೀಲಿಸಬಹುದು ಎಂದಿದ್ದಾರೆ.

ಸುಪ್ರೀಂಕೋರ್ಟ್‌ ಇಂದು ನೀಡಿರುವ ತೀರ್ಪು ಪ್ರಮುಖವಾಗಿ ಸೆಕ್ಷನ್‌ ೩೩ (೨), ಸೆಕ್ಷನ್‌ ೪೭ ಹಾಗೂ ಸೆಕ್ಷನ್‌ ೫೭ ಅನ್ನು ರದ್ದುಪಡಿಸಿದೆ. ಇದು ವೈಯಕ್ತಿಕ ಮಾಹಿತಿಯ ಸೋರಿಕೆಯಿಂದ ಉಂಟಾಗಬಹುದಾದ ಖಾಸಗಿತನದ ಹಕ್ಕಿನ ಉಲ್ಲಂಘನೆಯ ಕುರಿತಾಗಿ ಎದ್ದಿದ್ದ ಆಕ್ಷೇಪಗಳನ್ನು ಕೆಲಮಟ್ಟಿಗೆ ಪರಿಹರಿಸುವಲ್ಲಿ ಯಶಸ್ವಿಯಾಗಿದೆ.

ಆಧಾರ್ ಕುರಿತ ಕಾನೂನಿನ ಸೆಕ್ಷನ್‌ ೩೩ (೨)ರ ಅಡಿಯಲ್ಲಿ ದೇಶದ ಭದ್ರತೆಯ ದೃಷ್ಟಿಯಿಂದ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಗಳ ನಿರ್ದೇಶನದನ್ವಯ ಆಧಾರ್ ದೃಢೀಕರಣದ ಮಾಹಿತಿಗಾಗಿ ಬೇಡಿಕೆ ಬಂದರೆ ಪರಿಗಣಿಸುವ ಅವಕಾಶವನ್ನು ನೀಡಿತ್ತು. ತೀರ್ಪಿನಲ್ಲಿ ಈ ನಿಯಮವನ್ನು ರದ್ದುಪಡಿಸಲಾಗಿದೆ.

ಸೆಕ್ಷನ್‌ ೪೭ರ ಅನ್ವಯ ಯುಐಎಡಿಐ ( ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ) ಹೊರತುಪಡಿಸಿ ಬೇರೆ ಯಾರೂ ಆಧಾರ್‌ ಸಂಬಂಧಿತ ಕಾನೂನಿನ ದುರ್ಬಳಕೆ, ಉಲ್ಲಂಘನೆಯ ಕುರಿತು ಯಾವುದೇ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತಿಲ್ಲ ಎನ್ನಲಾಗಿತ್ತು. ಇದನ್ನು ಸಹ ತೀರ್ಪು ರದ್ದುಗೊಳಿಸಿದೆ. ಅಲ್ಲದೆ ಖಾಸಗಿತನದ ಉಲ್ಲಂಘನೆಗೆ ಸಂಬಂಧಿಸಿದಂತೆ ಆಧಾರ್ ಸಂಬಂಧಿತ ವೈಯಕ್ತಿಕ ದೂರು ಸಲ್ಲಿಕೆಗೆ ಅವಕಾಶ ಕಲ್ಪಿಸುವ ಅಗತ್ಯತೆಯ ಬಗ್ಗೆ ತಿಳಿಸಿದೆ.

ಇನ್ನು ಸೆಕ್ಷನ್‌ ೫೭ ವ್ಯಕ್ತಿಯ ದೃಢೀಕರಣಕ್ಕಾಗಿ ಸರ್ಕಾರವೂ ಸೇರಿದಂತೆ ಕಾರ್ಪೊರೇಟ್‌ ಸಂಸ್ಥೆಗಳಾಗಲಿ, ಖಾಸಗಿ ಸಂಸ್ಥೆಗಳಾಗಲಿ ಅಧಾರ್‌ ಬಳಸುವುದಕ್ಕೆ ಆಧಾರ್‌ ಕಾನೂನಿನಡಿ ಯಾವುದೇ ಅಡಚಣೆ ಇಲ್ಲ ಎಂದು ಪ್ರತಿಪಾದಿಸಿತ್ತು. ಇದು ಖಾಸಗಿ ಸಂಸ್ಥೆಗಳು ವ್ಯಕ್ತಿಗಳ ದೃಢೀಕರಣಕ್ಕಾಗಿ ಆಧಾರ್ ಸಂಖ್ಯೆಗಾಗಿ ಒತ್ತಾಯಿಸುವುದನ್ನು ವ್ಯಾಪಕಗೊಳಿಸಿತ್ತು. ನ್ಯಾಯಾಲಯದ ತೀರ್ಪು ಇದನ್ನೂ ಸಹ ರದ್ದುಗೊಳಿಸಿದೆ.

ಇದನ್ನೂ ಓದಿ : ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು

ಆದರೆ, ಆಧಾರ್ ಸಮಾಜದ ಅಂಚಿನ ಬಡವರನ್ನು ಒಳಗೊಳ್ಳುವ ಬದಲು ಅವರನ್ನು ಸವಲತ್ತುಗಳಿಂದ ವಂಚಿಸಲು ಅನುವು ಮಾಡುತ್ತದೆ ಎನ್ನುವ ವಾದವನ್ನು ನ್ಯಾಯಾಲಯ ಪುರಸ್ಕರಿಸಿಲ್ಲ. ವಿವಿಧ ಸಂಘಟನೆಗಳು, ಮಾನವ ಹಕ್ಕುಗಳ ಕಾರ್ಯಕರ್ತರುಗಳು ನಿರಂತರವಾಗಿ ಮಾಡಿಕೊಂಡು ಬಂದಿದ್ದ ಈ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ಸರ್ಕಾರದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯ, ಸವಲತ್ತು ಪಡೆಯಲು ಆಧಾರ್‌ ಕಾನೂನಿನ ಸೆಕ್ಷನ್‌ ೭ರಡಿ ಮಾಡಲಾಗಿರುವ ಆಧಾರ್‌ ನ ಅಗತ್ಯವನ್ನು ಎತ್ತಿ ಹಿಡಿದಿದೆ. ಆಧಾರ್ ನಂತರದ ದಿನಗಳಲ್ಲಿ ಸವಲತ್ತುಗಳಿಂದ ವಂಚಿತರಾದವರ ಸಂಖ್ಯೆ ಹೆಚ್ಚಾಗಿದೆ ಎನ್ನುವುದನ್ನು ನಿರೂಪಿಸಲು ಯಾವುದೇ ಗುರುತರ ಸಾಕ್ಷ್ಯಗಳಿಲ್ಲ ಎಂದು ತೀರ್ಪಿನಲ್ಲಿ ಅಭಿಪ್ರಾಯ ಪಡಲಾಗಿದೆ.

ಇನ್ನು ಅಕ್ರಮವಲಸಿಗರಿಗೆ ಯಾವುದೇ ಕಾರಣಕ್ಕೂ ಆಧಾರ್ ನೀಡಬಾರದು ಎಂದಿರುವ ನ್ಯಾಯಾಲಯ, ಆಧಾರ್‌ ಅನ್ನು ನಕಲು ಮಾಡುವ ಮೂಲಕ ವ್ಯಕ್ತಿಯೊಬ್ಬನ ಪೂರ್ಣ ವಿವರವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಬಹುಮುಖ್ಯವಾಗಿ ಯಾವುದೇ ಅರ್ಹ ನಾಗರಿಕನಿಗೆ ಆಧಾರ್ ದೃಢೀಕರಣದ ವೈಫಲ್ಯದ ಕಾರಣ ನೀಡಿ ಸೌಲಭ್ಯ, ಸವಲತ್ತುಗಳನ್ನು ನಿರಾಕರಿಸುವಂತಿಲ್ಲ. ಅಂತಹವರಿಗೆ ಪರ್ಯಾಯ ಪರಿಹಾರೋಪಾಯಗಳನ್ನು ರೂಪಿಸುವುದು ಅಗತ್ಯ ಎಂದಿದೆ. ಆ ಮೂಲಕ ಇತ್ತೀಚಿನದ ದಿನಗಳಲ್ಲಿ ವರದಿಯಾಗಿದ್ದ ಆಧಾರ್‌ ದೃಢೀಕರಣದ ವೈಫಲ್ಯದ ಕಾರಣಕ್ಕೆ ಸವಲತ್ತುಗಳ ವಿತರಣೆಯನ್ನು ತಡೆಹಿಡಿದಿದ್ದ ಪ್ರಕರಣಗಳು ಅಸಮರ್ಥನೀಯ ಎನ್ನುವ ನಿಲುವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More