ಆಧಾರ್ ವ್ಯವಸ್ಥೆಯ ರೆಕ್ಕೆಪುಕ್ಕ ಕತ್ತರಿಸಿ ಜನರ ಆತಂಕ ದೂರಮಾಡಿದ ಸುಪ್ರೀಂ

ನ್ಯಾಯಪೀಠದ ಬಹುಮತದ ಈ ತೀರ್ಪು ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆ ಎಂದೇ ಪರಿಗಣಿಸಿದೆ ಮತ್ತು ಅದರ ವ್ಯಾಪ್ತಿಯನ್ನು ಅಂಥ ಮಸೂದೆಗೆ ಸಂವಿಧಾನದಲ್ಲಿ ಗೊತ್ತು ಮಾಡಿರುವ ತೆರಿಗೆ, ಸರ್ಕಾರದ ಹಣಕಾಸು ಕ್ರೋಡೀಕರಣ ಮತ್ತು ಸರ್ಕಾರದ ಖಜಾನೆಯಿಂದ ಹಣಕಾಸು ಬಳಕೆಗೆ ಸೀಮಿತವಾಗಿಸಿದೆ

ಆಧಾರ್ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿರುವ ಬಹುಮತದ ತೀರ್ಪು, ನರೇಂದ್ರ ಮೋದಿ ಅವರ ಸರ್ಕಾರದ ನಿರೀಕ್ಷೆಗೆ ಪೂರಕವಾಗಿಲ್ಲ. ಹಣಕಾಸು ಮಸೂದೆಯಾಗಿ ಆಧಾರ್(ಹಣಕಾಸು ಮತ್ತು ಇತರೆ ಸಹಾಯಧನ, ನೆರವು ಮತ್ತು ಸೇವೆಗಳ ವಿಲೇವಾರಿ ಉದ್ದೇಶಿತ) ಕಾಯ್ದೆ ೨೦೧೬ರ ಸಂವಿಧಾನಿಕ ಮಾನ್ಯತೆಯನ್ನು ಈ ತೀರ್ಪು ಎತ್ತಿಹಿಡಿದಿದೆ ಎಂಬ ಕಾರಣಕ್ಕೆ ಬಿಜೆಪಿಗೆ ಭಾಗಶಃ ಜಯ ಸಿಕ್ಕಂತಾಗಿರಬಹುದು.

ಆದರೆ, ತೀರ್ಪಿನಲ್ಲಿ ಹಲವು ಷರತ್ತುಗಳನ್ನೂ ವಿಧಿಸಲಾಗಿದ್ದು, ಪರಿಣಾಮವಾಗಿ ಆಧಾರ್ ಇದೀಗ ೨೦೦೯ರಲ್ಲಿ ಅದು ಜಾರಿಗೆ ಬಂದಾಗ ಇದ್ದ ಸ್ಥಿತಿಗೆ ಕುಸಿದಿದೆ. ಅಂದಿನ ಯುಪಿಎ ಸರ್ಕಾರ, ವಿವಿಧ ಜನ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳಾದ ಬಡವರು ಮತ್ತು ದುರ್ಬಲ ವರ್ಗಗಳಿಗಾಗಿ ಒಂದು ವಿಶಿಷ್ಟ ಗುರುತು ಕಾರ್ಯಕ್ರಮವಾಗಿ ಜಾರಿಗೊಳಿಸಿತ್ತು. ಸರ್ಕಾರಿ ಸೇವೆಗಳ ವಿತರಣೆಯಲ್ಲಿ ಆಧಾರ್ ಅಳವಡಿಸುವ ಮೂಲಕ ಅನುದಾನ ಸೋರಿಕೆ, ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಉಪಟಳಕ್ಕೆ ಕಡಿವಾಣ ಹಾಕುವ ಗುರಿ ಹೊಂದಲಾಗಿತ್ತು.

ಆದರೆ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಈ ವಿಶಿಷ್ಟ ಗುರುತು ಯೋಜನೆಯ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿಕೊಂಡಿದ್ದ ಬಿಜೆಪಿ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತ್ತಲೇ ಆಧಾರ್‌ ಬಳಕೆಯ ವ್ಯಾಪ್ತಿಯನ್ನು ವಿಸ್ತರಿಸಿತು. ೧೨ ಅಂಕಿಗಳ ಈ ಆಧಾರ್ ಸಂಖ್ಯೆ ಬ್ಯಾಂಕಿಂಗ್, ಮೊಬೈಲ್, ವಿಮಾನಯಾನ, ಪೇಮೆಂಟ್ ಬ್ಯಾಂಕ್, ಶಾಲಾಕಾಲೇಜು ಪ್ರವೇಶಾತಿ, ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಬಳಸುವುದು ಅನಿವಾರ್ಯವಾಯಿತು. ಜನರ ನಿತ್ಯದ ಪ್ರತಿ ವ್ಯವಹಾರಕ್ಕೂ ಆಧಾರ ಜೋಡಣೆಯನ್ನು ಕಡ್ಡಾಯಗೊಳಿಸಲಾಯಿತು.

ಹಾಗಾಗಿ ಆಧಾರ್ ಎಂಬುದು ಇಡೀ ದೇಶದ ಜನರ ದಿಢೀರ್ ಅಗತ್ಯವಾಯಿತು. ಅದರಲ್ಲೂ ನೋಟು ಅಮಾನ್ಯೀಕರಣದ ಬಳಿಕ ಡಿಜಿಟಲ್ ಇಂಡಿಯಾ ಅಭಿಯಾನ ಯಶಸ್ವಿಗೂ ಆಧಾರ್ ವ್ಯವಸ್ಥೆಯನ್ನು ಆಶ್ರಯಿಸಿದ ಬಳಿಕವಂತೂ ಪ್ರತಿ ಹಣಕಾಸು ವಹಿವಾಟಿಗೂ ಆಧಾರ್ ಕಡ್ಡಾಯಗೊಳಿಸಲಾಯಿತು. ಅದೇ ಅವಕಾಶವನ್ನು ಬಳಸಿಕೊಂಡು ಹಲವು ಬ್ಯಾಂಕ್ ಮತ್ತು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳೂ ತಮ್ಮ ವ್ಯವಹಾರ ವಿಸ್ತರಿಸಿಕೊಂಡವು. ಗ್ರಾಹಕರ ಗುರುತು ಪತ್ತೆಯ ಸಾಧನವಾಗಿಯೂ ಆಧಾರ್ ಬಳಕೆಗೆ ಮುಂದಾದ ಕಾರ್ಪೊರೇಟ್‌ ಸಂಸ್ಥೆಗಳು ಕೂಡ ಈ ಅವಕಾಶವನ್ನು ಯಥೇಚ್ಛವಾಗಿ ಬಳಸಿಕೊಂಡವು.

ಇದನ್ನೂ ಓದಿ : ಸುಪ್ರೀಂ ತೀರ್ಪು; ಅಸಲಿ ರೂಪಕ್ಕೆ ಬಂದ ಆಧಾರ್, ಮೋದಿ ಸರ್ಕಾರಕ್ಕೆ ಹಿನ್ನೆಡೆ

ಆದರೆ, ಇದೀಗ ಸೆಪ್ಟೆಂಬರ್ ೨೬ರಂದು ಹೊರಬಿದ್ದಿರುವ ಸುಪ್ರೀಂಕೋರ್ಟ್ ತೀರ್ಪಿನ ಈ ಕೆಳಗಿನ ಅಂಶಗಳು, ಆಧಾರ್ ಕಾಯ್ದೆಯನ್ನು ಸಾಕಷ್ಟು ದುರ್ಬಲಗೊಳಿಸಿವೆ.

  • ಬ್ಯಾಂಕ್ ಖಾತೆ ತೆರೆಯಲು, ಮೊಬೈಲ್ ಸೇವೆ, ಶೈಕ್ಷಣಿಕ ಯೋಜನೆಗಳು, ಶಾಲಾ-ಕಾಲೇಜು ಪ್ರವೇಶ, ಪ್ರವೇಶ ಪರೀಕ್ಷೆಗಳಗೆ ಆಧಾರ್ ಕಡ್ಡಾಯವಲ್ಲ. ಸರ್ಕಾರದ ಅನುದಾನ ಪಡೆಯುವುದಾದರೆ ಮಾತ್ರ ಈ ಸೇವೆ ಮತ್ತು ಸೌಲಭ್ಯಗಳಿಗೆ ಆಧಾರ್ ಜೋಡಣೆ ಮಾಡಬೇಕಿದೆ.
  • ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿ ಹಣಕಾಸು ಲೇವಾದೇವಿ ಕಾಯ್ದೆ ನಿರ್ಬಂಧ(ಪಿಎಂಎಲ್‌ಎ)ಗೆ ಸರ್ಕಾರ ತಂದಿರುವ ಬದಲಾವಣೆಗಳು ಸಂವಿಧಾನಬಾಹಿರ ಎಂದು ಹೇಳಿರುವುದರಿಂದ ಈಗ ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಅಗತ್ಯವಿಲ್ಲ.
  • ಯಾವುದೇ ಉದ್ದೇಶಕ್ಕೆ ಸರ್ಕಾರಿ ಅಥವಾ ಕಾರ್ಪೊರೇಟ್ ಅಥವಾ ವೈಯಕ್ತಿವಾಗಿ ಯಾವುದೇ ವ್ಯಕ್ತಿ, ಇತರ ವ್ಯಕ್ತಿಗಳ ಗುರುತು ಖಾತ್ರಿಗಾಗಿ ಆಧಾರ್ ಸಂಖ್ಯೆ ಬಳಸಲು ಅವಕಾಶ ನೀಡಿದ್ದ ಆ ಕಾಯ್ದೆಯ ಸೆಕ್ಷನ್ ೫೭ನ್ನು ನ್ಯಾಯಾಲಯ ರದ್ದುಪಡಿಸಿದೆ. ಅಂದರೆ, ಆಧಾರ್ ಮಾಹಿತಿಯ ವಾಣಿಜ್ಯ ಬಳಕೆ ಮತ್ತು ಆ ಮೂಲಕ ಲಾಭಮಾಡಿಕೊಳ್ಳುವ ಅವಕಾಶ ಈಗ ಇಲ್ಲ.
  • ಹಾಗೇ, ಜಂಟಿ ಕಾರ್ಯದರ್ಶಿ ಮತ್ತು ಆ ಮೇಲಿನ ಹುದ್ದೆಯ ಅಧಿಕಾರಿಗಳು ಕೋರಿದರೆ, ರಾಷ್ಟ್ರೀಯ ಹಿತಾಸಕ್ತಿ ಕಾಯಲು ವ್ಯಕ್ತಿಯೊಬ್ಬರ ವಿಶಿಷ್ಟ ಗುರುತು ಮಾಹಿತಿಯನ್ನು ಬಹಿರಂಗಪಡಿಸುವ ಅವಕಾಶ ನೀಡಿದ್ದ ಕಾಯ್ದೆಯ ಸೆಕ್ಷನ್ ೩೩(ii)ರನ್ನು ಕೂಡ ರದ್ದುಮಾಡಲಾಗಿದೆ. ಅಂತಹ ಯಾವುದೇ ಕೋರಿಕೆಗಳಿಗೆ ನ್ಯಾಯಾಂಗದ ಅನುಮತಿ ಅಗತ್ಯ ಎಂದು ನ್ಯಾಯಾಲಯ ಹೇಳಿದೆ.
  • ಹಾಗೇ, ಯುಐಡಿಎಐ ಸ್ವತಃ ದೂರು ದಾಖಲಿಸದೇ ಇದ್ದಲ್ಲಿ, ಆಧಾರ್ ಮಾಹಿತಿ ಕುರಿತ ಯಾವುದೇ ಕಾನೂನು ಉಲ್ಲಂಘನೆ ಶಿಕ್ಷಾರ್ಹವಲ್ಲ ಎಂಬ ಕಾಯ್ದೆಯ ಸೆಕ್ಷನ್ ೪೭ನ್ನು ಕೂಡ ರದ್ದುಪಡಿಸಲಾಗಿದೆ. ಅಲ್ಲದೆ, ಪ್ರತಿ ನಾಗರಿಕನೂ ಆಧಾರ್ ಸಂಬಂಧಪಟ್ಟ ಮಾಹಿತಿ ವಿಷಯದಲ್ಲಿ ದೂರು ದಾಖಲಿಸಲು ಹಕ್ಕು ಹೊಂದಿದ್ದಾನೆ ಮತ್ತು ಅಂತಹ ದೂರು ಸಮಂಜಸವೆಂದುಕಂಡುಬಂದಲ್ಲಿ ಸಂಬಂಧಪಟ್ಟವರು ಅದನ್ನು ಪರಿಗಣಿಸಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದೂ ನ್ಯಾಯಾಲಯ ಹೇಳಿದೆ.

ಆ ಮೂಲಕ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರು ಆದೇಶಿಸಿದ ಮತ್ತು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾ.ಎ ಎಂ ಖಾನಿವಿಲ್ಕರ್ ಅನುಮೋದಿಸಿದ ಬಹುಮತದ ತೀರ್ಪು ಭಾರೀ ಪ್ರಚಾರ ಪಡೆದಿದ್ದ ಡಿಜಿಟಲ್‌ ಇಂಡಿಯಾ ಅಭಿಯಾನವನ್ನೇ ಬುಡಮೇಲು ಮಾಡಿದೆ. ಪೀಠದ ಮತ್ತೊಬ್ಬ ಸದಸ್ಯರಾಗಿದ್ದ ನ್ಯಾ.ಅಶೋಕ್ ಭೂಷಣ್ ಅವರು ಬಹುಮತದ ಅಭಿಪ್ರಾಯಕ್ಕೆ ಬಹುತೇಕ ಸರಿಹೊಂದುತ್ತಿದ್ದ ಪ್ರತ್ಯೇಕ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ನ್ಯಾ, ಡಿ ವೈ ಚಂದ್ರಚೂಡ್ ಅವರು ಮಾತ್ರ ‘ಆಧಾರ್ ಕಾಯ್ದೆ ಸಂವಿಧಾನಬಾಹಿರ’ ಎನ್ನುವ ಮೂಲಕ ಕಡು ವಿರೋಧದ ಅಭಿಪ್ರಾಯ ವ್ಯಕ್ತಪಡಿಸಿದರು.

ಆಧಾರ್ ಕಾಯ್ದೆಯ ರೆಕ್ಕೆಪುಕ್ಕ ಕತ್ತರಿಸಿರುವ ಈ ತೀರ್ಪಿನ ಮೂಲಕ ನ್ಯಾಯಾಂಗ, ಆಧಾರ್ ಮಸೂದೆ ಮಂಡನೆಯಾಗಿದ್ದರೆ ರಾಜ್ಯಸಭೆ ನಿರ್ವಹಿಸಬಹುದಾಗಿದ್ದ ಕೆಲಸವನ್ನು ತಾನೇ ಮಾಡಿದೆ ಎನ್ನಲೂಬಹುದು. ಏಕೆಂದರೆ, ರಾಜ್ಯಸಭೆಯಲ್ಲಿ ತನಗೆ ಬಹುಮತವಿಲ್ಲ ಎಂಬ ಹಿನ್ನೆಲೆಯಲ್ಲಿ ಸರ್ಕಾರ, ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆ ಎಂದು ಘೋಷಿಸಿ, ಲೋಕಸಭೆಯಲ್ಲಿ ಅನುಮೋದನೆ ನೀಡಿ ಜಾರಿಗೆ ತಂದಿತ್ತು. ಆ ಮೂಲಕ ಪ್ರತಿಪಕ್ಷಗಳ ಆಕ್ಷೇಪ ಮತ್ತು ವಿರೋಧದ ಪರಿಷ್ಕರಣೆಯ ಅವಕಾಶವನ್ನು ತಪ್ಪಿಸಿ, ಕಾಯ್ದೆ ಜಾರಿಗೆ ಬರುವಂತೆ ನೋಡಿಕೊಳ್ಳಲಾಗಿತ್ತು.

ಬಹುಮತದ ಈ ತೀರ್ಪು ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆ ಎಂದೇ ಪರಿಗಣಿಸಿದೆ ಮತ್ತು ಅದರ ವ್ಯಾಪ್ತಿಯನ್ನು ಅಂತಹ ಮಸೂದೆಗೆ ಸಂವಿಧಾನದಲ್ಲಿ ಗೊತ್ತುಮಾಡಿರುವ ತೆರಿಗೆ, ಸರ್ಕಾರದ ಹಣಕಾಸು ಕ್ರೋಡೀಕರಣ ಮತ್ತು ಸರ್ಕಾರದ ಖಜಾನೆಯಿಂದ ಹಣಕಾಸು ಬಳಕೆಗೆ ಸೀಮಿತವಾಗಿ ಕಡಿತಮಾಡಿದೆ. ಇದೇ ಅಭಿಪ್ರಾಯವನ್ನು ವಕೀಲರೊಬ್ಬರು ಕೂಡ ವ್ಯಕ್ತಪಡಿಸಿದ್ದು, ನ್ಯಾಯಾಲಯ ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆ ಎಂದೇ ಪರಿಗಣಿಸಿ, ಅದರ ವ್ಯಾಪ್ತಿಯನ್ನು ಕಡಿತಮಾಡಿದೆ ಎಂದಿದ್ದಾರೆ.

ಆಧಾರ್‌ನ ಮೂಲ ಸ್ವರೂಪವನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ಸಿಗೆ ಈ ತೀರ್ಪು ಖುಷಿಕೊಟ್ಟಿದೆ. ಕಾಂಗ್ರೆಸ್ ವಕ್ತಾರರಾಗಿರುವ ವಕೀಲ ಅಭಿಷೇಕ್ ಮನು ಸಿಂಘ್ವಿ, “ಮೂಲದ ಜಾಣ್ಮೆಯ ಚಿಂತನೆಯನ್ನು ಸುಪ್ರೀಂಕೋರ್ಟ್ ಮೆಚ್ಚಿದೆ. ಹಾಗಾಗಿ ಕಾಯ್ದೆಯ ಮೂಲ ಆಶಯವನ್ನು ರಕ್ಷಿಸಿದೆ. ಅದರ ಅನಗತ್ಯ ವಿಕಾರಗಳಿಗೆ ಕತ್ತರಿ ಪ್ರಯೋಗಿಸಿದೆ. ಬಿಜೆಪಿ, ಮೋದಿ ಕಟ್ಟಿನಿಲ್ಲಿಸಿದ್ದ ಕೊಳಚೆಯನ್ನು ತೆರವುಗೊಳಿಸಿ, ಆಧಾರ್ ಎಂಬ ಶಿಶುವನ್ನು ಉಳಿಸಿದೆ. ಹಾಗಾಗಿ, ದುರ್ಬಲ ವರ್ಗದ ಜನರಿಗೆ ಅಸ್ತಿತ್ವದ ಗುರುತು ನೀಡುವ ಯುಪಿಎಯ ಮೂಲ ಉದ್ದೇಶ ಈಗ ಬೆಳಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಹಾಗಿದ್ದರೂ ಆಧಾರ್‌ಗೆ ಸಂಬಂಧಿಸಿದಂತೆ ಕೆಲವು ಅಸ್ಪಷ್ಟ ಸಂಗತಿಗಳ ವಿಷಯದಲ್ಲಿ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಶಾಲೆ, ಸರ್ಕಾರಿ ಸಂಸ್ಥೆಗಳು, ಮೊಬೈಲ್ ಸೇವಾಸಂಸ್ಥೆಗಳು, ಬ್ಯಾಂಕ್ ಮತ್ತು ಇತರ ಕಾಪೊFರೇಟ್‌ ಸಂಸ್ಥೆಗಳು ಸಂಗ್ರಹಿಸಿರುವ ಆಧಾರ್‌ ಮಾಹಿತಿ ಏನಾಗಲಿದೆ ಎಂಬುದು ಆ ಪೈಕಿ ಪ್ರಮುಖವಾದದ್ದು. ಆ ಎಲ್ಲಾ ಮಾಹಿತಿಯನ್ನು ಆ ಸಂಸ್ಥೆಗಳು ನಾಶಪಡಿಸಬೇಕಿದೆ, ಅದೂ ಸರ್ಕಾರ ಅಥವಾ ಸ್ವತಃ ಯುಐಡಿಎಐ ಕಣ್ಗಾವಲಿನಲ್ಲಿಯೇ ನಾಶ ಕಾರ್ಯ ಆಗಬೇಕಿದೆ.

ಆಧಾರ್ ವ್ಯವಸ್ಥೆಯನ್ನು ಇಡಿಯಾಗಿ ರದ್ದು ಮಾಡಬೇಕು ಎಂದು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಕಾನೂನು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಈ ತೀರ್ಪು ನಿರಾಸೆ ತಂದಿದೆ. ಆದಾಗ್ಯೂ ನ್ಯಾ. ಚಂದ್ರಚೂಡ್ ಅವರ ಭಿನ್ನಮತದ ತೀರ್ಪು ಅವರಿಗೆ ಒಂದಿಷ್ಟು ಸಮಾಧಾನ ಕೊಟ್ಟಿದೆ. “ಹಣಕಾಸು ಮಸೂದೆಯಾಗುವ ಅರ್ಹತೆಯೇ ಇಲ್ಲದ ಮಸೂದೆಯನ್ನು ಹಣಕಾಸು ಮಸೂದೆಯ ಹೆಸರಿನಲ್ಲಿ ಅನುಮೋದಿಸಿರುವುದು ಸಂವಿಧಾನಕ್ಕೆ ಬಗೆದ ದ್ರೋಹ” ಎಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ. ಅಲ್ಲದೆ, “ಅಪಾಯಕಾರಿ ಪ್ರಬಲ ಕಣ್ಗಾವಲು ನಡೆಸುವುದು ಆಧಾರ್ ಮೂಲಕ ಸಾಧ್ಯ” ಎಂದೂ ಅವರು ಎಚ್ಚರಿಸಿದ್ದಾರೆ.

ಈ ವಿಷಯದಲ್ಲಿ ತೀರ್ಪಿನ ವಿವರಗಳು ಹೊರಬಿದ್ದ ಬಳಿಕ ಇನ್ನಷ್ಟು ವಿಷಯಗಳು ತಿಳಿದುಬರಲಿವೆ. ಸದ್ಯಕ್ಕೆ, ಹಣ ತೆತ್ತು ಪಡೆಯುವ ಮತ್ತು ಕಾನೂನು ಪ್ರಕಾರ ಹಕ್ಕು ಹೊಂದಿರುವ ಸೇವೆ ಮತ್ತು ಸೌಲಭ್ಯಗಳನ್ನು ಪಡೆಯಲು ಜನತೆ ಪ್ರತಿ ಬಾರಿ ಆಧಾರ್ ಕಾರ್ಡು ಹಿಡಿದುಕೊಂಡು ಅಲೆಯಬೇಕಾಗಿಲ್ಲ ಎಂದು ನಿಟ್ಟುಸಿರು ಬಿಡಬಹುದು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More