ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಮಹದಾಯಿ ನೀರು ಹಂಚಿಕೆ; ಒಂದೂವರೆ ತಿಂಗಳೊಳಗೆ ಮೇಲ್ಮನವಿಗೆ ನಿರ್ಧಾರ

ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ನ್ಯಾ. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿಯ ತೀರ್ಪಿನ ವಿರುದ್ಧವಾಗಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಇನ್ನೂ ಒಂದೂವರೆ ತಿಂಗಳ ಕಾಲಾವಕಾಶವಿದೆ. ಅಷ್ಟರೊಳಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ಸಮುದ್ರಕ್ಕೆ ಸೇರುವ ನೀರಿನಲ್ಲಿ ನಿರ್ದಿಷ್ಟ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕು ಎಂಬುದು ಸರ್ಕಾರದ ಬೇಡಿಕೆ ಎಂದಿದ್ದಾರೆ.

ನಗದು ಕೊರತೆ ಪರಿಣಾಮ ಪೇಟೆಯಲ್ಲಿ ಮಾರಾಟ ಒತ್ತಡ; ಸೆನ್ಸೆಕ್ಸ್ 110 ಅಂಶ ಕುಸಿತ

ಐಎಲ್ ಅಂಡ್ ಎಫ್ಎಸ್ ಕಂಪನಿ ಸಾಲ ಸುಸ್ತಿಯಾದ ಪರಿಣಾಮ ಉದ್ಭವಿಸಿರುವ ನಗದು ಕೊರತೆ ಸಮಸ್ಯೆ ಪೇಟೆಯನ್ನು ಬುಧವಾರವೂ ಕಾಡಿತು. ದಿನವಿಡೀ ಏರಿಳಿತದ ವಹಿವಾಟು ನಡೆದು ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 110 ಅಂಶ, ನಿಫ್ಟಿ 13 ಅಂಶ ಕುಸಿದವು. ಡಾಲರ್ ವಿರುದ್ಧ ರುಪಾಯಿ ಏರಿಳಿತದ ವಹಿವಾಟು ನಡೆಸಿ 72.62ಕ್ಕೆ ಸ್ಥಿರಗೊಂಡಿದೆ. ಚಿನಿವಾರ ಪೇಟೆಯಲ್ಲಿ ಚಿನ್ನ 155 ರುಪಾಯಿ ಕುಸಿದು 30660ಕ್ಕೆ ಇಳಿದಿದೆ. ನಿಫ್ಟಿ ರಿಯಾಲ್ಟಿ ಸೂಚ್ಯಂಕ ಶೇ.2.50ರಷ್ಟು ಜಿಗಿದರೆ, ನಿಫ್ಟಿ ಪಿಎಸ್ಯು ಬ್ಯಾಂಕ್ ಸೂಚ್ಯಂಕ ಶೇ.2ರಷ್ಟು ಕುಸಿದಿದೆ. ಸತತ ಕುಸಿತ ಕಂಡಿದ್ದ ದಿವಾನ್ ಹೌಸಿಂಗ್ ಮತ್ತು ಯೆಸ್ ಬ್ಯಾಂಕ್ ಶೇ.2ರಷ್ಟು ಏರಿವೆ.

ದೆಹಲಿಯಲ್ಲಿ ಕಟ್ಟಡ ಕುಸಿದು ಐದು ಮಂದಿ ಸಾವು

ದೆಹಲಿಯ ಅಶೋಕ್ ವಿಹಾರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ನಾಲ್ವರು ಮಕ್ಕಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿದ್ದು, ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವಶೇಷಗಳಡಿ ಯಿಂದ ಇದುವರೆಗೆ 8 ಮಂದಿಯನ್ನು ರಕ್ಷಿಸಲಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಸುಸ್ಥಿತಿಯಲ್ಲಿ ಇರಲಿಲ್ಲ ಈ ಬಗ್ಗೆ ವರ್ಷಗಳ ಹಿಂದೆಯೇ ದೆಹಲಿ ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು ಎಂದು ಕಟ್ಟಡದಲ್ಲಿ ಅಂಗಡಿ ಬಾಡಿಗೆ ಪಡೆದಿರುವ ಸುನಿಲ್ ಕುಮಾರ್ ಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಡಿಜಿಟಲ್ ಸಂಪರ್ಕ ನೀತಿಗೆ ಕೇಂದ್ರ ಸಂಪುಟ ಅನುಮೋದನೆ

ಕೇಂದ್ರ ಸಚಿವ ಸಂಪುಟ ಬುಧವಾರ ರಾಷ್ಟ್ರೀಯ ಡಿಜಿಟಲ್ ಸಂಪರ್ಕ ನೀತಿ(2018)ಗೆ ಅನುಮೋದನೆ ನೀಡಿದೆ. ನೂತನ ನೀತಿಯು ಡಿಜಿಟಲ್ ಸಂಪರ್ಕವಲಯದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮತ್ತು 4 ದಶಲಕ್ಷ ಉದ್ಯೋಗ ಸೃಷ್ಟಿಯ ಗುರಿಹೊಂದಿದೆ. ಕರಡು ನೀತಿಯ ಪ್ರಕಾರ ರಾಷ್ಟ್ರೀಯ ಡಿಜಿಟಲ್ ನೀತಿಯು ಹೈಸ್ಪೀಡ್ ಬ್ರಾಡ್ ಬ್ಯಾಂಕ್ ಕೇಂದ್ರಿತ ಉತ್ತೇಜನ, 5ಜಿ ಮತ್ತು ಆಪ್ಟಿಕಲ್ ಫೈಬರ್ ತಂತ್ರಜ್ಞಾನಗಳನ್ನು ಸುಲಭದರದಲ್ಲಿ ದೇಶವ್ಯಾಪಿ ಒದಗಿಸುವುದಕ್ಕೆ ಹೆಚ್ಚು ಒತ್ತು ನೀಡಿದೆ. 2022ರ ಹೊತ್ತಿಗೆ ದೇಶದ ಎಲ್ಲರಿಗೂ ಪ್ರತಿ ಸೆಕೆಂಟ್ ಗೆ 50 ಎಂಬಿ ವೇಗದ 5ಜಿ ಸೇವೆ ಒದಗಿಸುವ ಗುರಿ ಹೊಂದಿದೆ.

ಸಕ್ಕರೆ ಉದ್ಯಮಕ್ಕೆ 4500 ಕೋಟಿ ರುಪಾಯಿ ಪ್ಯಾಕೇಜ್ ಗೆ ಕೇಂದ್ರದ ಅನುಮೋದನೆ

ಸಂಕಷ್ಟದಲ್ಲಿರುವ ಸಕ್ಕರೆ ಉದ್ಯಮಕ್ಕೆ ನೆರವಾಗಲು 4500 ಕೋಟಿ ರುಪಾಯಿ ಪ್ಯಾಕೇಜ್ ಗೆ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿ (ಸಿಸಿಇಒ) ಅನುಮೋದನೆ ನೀಡಿದೆ. ದೇಶೀಯ ಸಕ್ಕರೆ ಉತ್ಪನ್ನ ಹೆಚ್ಚಿರುವುದರಿಂದ ಸಕ್ಕರೆ ದರ ಕುಸಿದಿದೆ. ನಷ್ಟದಲ್ಲಿರುವ ಕಾರ್ಖಾನೆಗಳು ರೈತರಿಗೆ ಬಾಕಿ ಪಾವತಿಸಿಲ್ಲ. ಈ ಬಾಕಿ ಮೊತ್ತವೇ 13,000 ಕೋಟಿ ರುಪಾಯಿ ಇದೆ. ಆಹಾರ ಸಚಿವಾಲಯವು ಸಕ್ಕರೆ ಉದ್ಯಮದ ಸಮಸ್ಯೆ ನಿವಾರಣೆ ಮಾಡಿ ರೈತರಿಗೆ ಬಾಕಿ ಪಾವತಿಸಲು 4500 ಕೋಟಿ ಪ್ಯಾಕೇಜ್ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಸಿಸಿಇಎ ಈಗ ಅನುಮೋದನೆ ನೀಡಿದೆ. 4500 ಕೋಟಿ ರುಪಾಯಿಗಳನ್ನು ರೈತರಿಗೆ ನೇರವಾಗಿ ಬಾಕಿ ಪಾವತಿ ಮಾಡಲು ಬಳಸಲಾಗುತ್ತದೆ. ಕಾರ್ಖಾನೆಗಳಲ್ಲಿರುವ ಸಕ್ಕರೆ ದಾಸ್ತಾನು ವಿಲೇವಾರಿಗೆ ಸರ್ಕಾರವು ನೆರವಾಗಲಿದೆ.

ಆಸಿಡ್ ದಾಳಿಗೆ ಒಳಗಾದವರಿಗೆ ಹರಿಯಾಣ ಕ್ಯಾಬಿನೆಟ್ ಪಿಂಚಣಿ ಅನುಮೋದನೆ

ಹರಿಯಾಣ ಕ್ಯಾಬಿನೆಟ್ ಮಂಗಳವಾರ ಹೊಸ ಯೋಜನೆಯನ್ನು ಅಂಗೀಕರಿಸಿದ್ದು, ಆಸಿಡ್ ದಾಳಿಯಲ್ಲಿ ಬದುಕುಳಿದ ಮಹಿಳೆ ಅಥವಾ ಹೆಣ್ಣು ಮಕ್ಕಳಿಗೆ ಪಿಂಚಣಿ ನೀಡಲು ಮುಂದಾಗಿದೆ. ಮೇ 2, 2011 ರಂದು ಅಥವಾ ನಂತರ ಆಸಿಡ್ ದಾಳಿಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳು ಈ ಪಿಂಚಣಿ ಯೋಜನೆಯಡಿ ಅರ್ಹತೆ ಪಡೆದುಕೊಳ್ಳುತ್ತಾರೆ. ಅಂಗವೈಕಲ್ಯದ ಹೆಚ್ಚಿನ ಹಣಕಾಸಿನ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ರಿಷಿ ಕಪೂರ್‌ ‘ರಾಜ್ಮಾ ಚಾವಲ್’

ರಿಷಿ ಕಪೂರ್ ನಟಿಸಿರುವ ‘ರಾಜ್ಮಾ ಚಾವಲ್‌’ ಕಿರುಚಿತ್ರ 2018ರ ನವೆಂಬರ್‌ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಲೀನಾ ಯಾದವ್‌ ನಿರ್ದೇಶನದ ಈ ಕಿರುಚಿತ್ರ ದಿಲ್ಲಿಯ ಚಾಂದಿನಿ ಚೌಕ್‌ನಲ್ಲಿ ಚಿತ್ರೀಕರಣಗೊಂಡಿದೆ. ಇಳಿವಯಸ್ಸಿನ ತಂದೆ ತನಗೆ ಹೊಸತಾದ ಸೋಷಿಯಲ್ ಮೀಡಿಯಾ ಮೂಲಕ ತನ್ನಿಂದ ದೂರವಾದ ಮಗನನ್ನು ಮರಳಿ ಪಡೆಯುವ ಕತೆಯಿದು. ಅಮೈರಾ ಡಸ್ಟರ್‌, ಅಪರಶಕ್ತಿ ಖುರಾನಾ, ಅನಿರುದ್ಧ ತನ್ವರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುವ ಮುನ್ನ ಕಿರುಚಿತ್ರ ಮುಂದಿನ ತಿಂಗಳಲ್ಲಿ ನಡೆಯಲಿರುವ ಲಂಡನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಇಂಡಿಯಾ ಸ್ಟಾರ್ಟ್ ಅಪ್ ಡೇ ಯೋಜನೆಗೆ ಫೇಸ್‌ಬುಕ್ ಚಿಂತನೆ

ಸ್ಟಾರ್ಟ್ ಅಪ್ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮುಂದಾಗಿದ್ದು ‘ಇಂಡಿಯಾ ಸ್ಟಾರ್ಟ್ ಅಪ್ ಡೇ’ ಯನ್ನು ಆಯೋಜಿಸಲು ತೀರ್ಮಾನಿಸಿದೆ. ಅಕ್ಟೋಬರ್ 9ರಂದು ಫೇಸ್‌ಬುಕ್ ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಸಲಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡು ನವೋದ್ಯಮ ಪ್ರಾರಂಭಿಸಿರುವ ಭಾರತೀಯ ನಾಯಕರು, ಸಂಸ್ಥಾಪಕರ ಕಥೆಗಳನ್ನು ಫೇಸ್‌ಬುಕ್ ಅಂದು ಪ್ರಸ್ತುತಪಡಿಸಲಿದೆ. ಅಲ್ಲದೇ ಹೊಸ ಪೀಳಿಗೆಗೆ ಇರುವ ಅವಕಾಶಗಳು, ಸವಾಲು, ಪ್ರಮುಖ ವ್ಯಾಪಾರ, ನೀತಿ ಪ್ರಮುಖ ಉದ್ಯಮಗಳ ಕುರಿತಂತೆ ಚರ್ಚಿಸಲಾಗುವುದು ಎಂದು ಸಾಮಾಜಿಕ ಜಾಲತಾಣ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

ಇಂಗ್ಲೆಂಡ್ ಸರಣಿಯಿಂದ ಮ್ಯಾಥ್ಯೂಸ್ ಔಟ್

ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಹೀನಾಯ ಸೋಲನುಭವಿಸಿದ ತಪ್ಪಿಗಾಗಿ ನಾಯಕ ಆಂಜೆಲೊ ಮ್ಯಾಥ್ಯೂಸ್ ತಲೆದಂಡವಾಗಿದ್ದು, ಅವರನ್ನು ಇಂಗ್ಲೆಂಡ್ ಸರಣಿಯಿಂದ ಕೈಬಿಡಲಾಗಿದೆ. ೩೧ರ ಹರೆಯದ ಆಲ್ರೌಂಡರ್ ಮ್ಯಾಥ್ಯೂಸ್ ಅವರನ್ನು ೧೫ ಮಂದಿ ಸದಸ್ಯರ ತಂಡದಿಂದ ಹೊರಗಿಡಲಾಗಿದೆ. ಅಕ್ಟೋಬರ್ ೧೦ರಿಂದ ಆರಂಭವಾಗಲಿರುವ ಸರಣಿಯಲ್ಲಿ ಐದು ಏಕದಿನ ಮತ್ತು ಒಂದು ಟಿ೨೦ ಪಂದ್ಯ ನಡೆಯಲಿದೆ. ತಂಡ ಇಂತಿದೆ: ದಿನೇಶ್ ಚಂಡೀಮಲ್, ಉಪುಲ್ ತರಂಗ, ಸದೀರಾ ಸಮರವಿಕ್ರಮ, ನಿರೋಷನ್ ಡಿಕ್ವೆಲ್ಲಾ, ಧನಂಜಯ ಡಿಸಿಲ್ವಾ, ದಾಸುನ್ ಶನಾಕ, ತಿಸಾರ ಪೆರೆರಾ, ಅಖಿಲ ಧನಂಜಯ, ದುಷ್ಮಂತ ಚಮೀರಾ, ಲಸಿತ್ ಮಾಲಿಂಗ, ಅಮಿಲ ಅಪೋನ್ಸೊ, ಲಕ್ಷನ್ ಸಂಡಾಕನ್, ನುವಾನ್ ಪ್ರದೀಪ್, ಕಾಸುನ್ ರಜಿತಾ ಮತ್ತು ಕುಶಾಲ್ ಪೆರೇರಾ

ರಹೀಮ್ ಬೊಂಬಾಟ್ ಬ್ಯಾಟಿಂಗ್

ಆಪದ್ಬಾಂಧವ ಮುಷ್ಪೀಕರ್ ರಹೀಮ್ ಪ್ರತಿರೋಧದ ಬ್ಯಾಟಿಂಗ್‌ನೊಂದಿಗೆ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧದ ಮಹತ್ವಪೂರ್ಣ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತದತ್ತ ಸಾಗಿದೆ. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿಂದು ನಡೆಯುತ್ತಿರುವ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಕಡೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ, ಅತ್ಯಂತ ಅಪಾಯಕಾರಿ ಆರಂಭ ಕಂಡಿತು. ಕೇವಲ ೧೨ ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ತತ್ತರಿಸಿದ ಬಾಂಗ್ಲಾದೇಶಕ್ಕೆ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ ಮುಷ್ಪೀಕರ್ ರಹೀಮ್ ಮತ್ತು ಮೊಹಮದ್ ಮಿಥುನ್ ೧೪೪ ರನ್ ಜತೆಯಾಟವಾಡಿ ತಂಡದ ಇನ್ನಿಂಗ್ಸ್‌ಗೆ ಬಲ ನೀಡಿದರು.೩೮ ಓವರ್‌ಗಳು ಮುಗಿಯುವಷ್ಟರಲ್ಲಿ ಬಾಂಗ್ಲಾದೇಶ ೫ ವಿಕೆಟ್ ನಷ್ಟಕ್ಕೆ ೧೭೬ ರನ್ ಗಳಿಸಿತ್ತು. ಮುಷ್ಪೀಕರ್ ರಹೀಮ್ ಮತ್ತು ಮಹಮುದುಲ್ಲಾ ಕ್ರಮವಾಗಿ ೮೭ ಮತ್ತು ೨ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More