ದೇಶದ ಆರ್ಥಿಕ ಬಿಕ್ಕಟ್ಟಿನ ಹೊತ್ತಿನಲ್ಲಿ ಮನಮೋಹನ್ ಸಿಂಗ್ ನೆನಪಾಗುತ್ತಾರೇಕೆ?

ಮನಮೋಹನ್ ಸಿಂಗ್ ಇಂದು ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ೮೫ ಪೂರೈಸಿರುವ ಸಿಂಗ್‌ ಅವರ ಹತ್ತು ವರ್ಷಗಳ ಆಡಳಿತ, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ನೆನಪಾಗುತ್ತಿದ್ದಾರೆ. ಆರ್ಥಿಕ ತಜ್ಞ, ವಿತ್ತ ಸಚಿವ, ಪ್ರಧಾನಿಯಾಗಿ ಸೇವೆಸಲ್ಲಿಸಿ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ

ಪೆಟ್ರೋಲ್ ಬೆಲೆ ಮುಂಬೈನಲ್ಲಿ 90 ರುಪಾಯಿ ಗಡಿ ದಾಟಿ ಉಳಿದೆಡೆ 90 ರ ಸಮೀಪ ಬಂದಿರುವ ಹೊತ್ತಿನಲ್ಲಿ ಜನಸಾಮಾನ್ಯರಿಗೂ ಒಂದು ಪ್ರಶ್ನೆ ಕಾಡುತ್ತಿದೆ ಈ ದೇಶಕ್ಕೇನಾಗಿದೆ? ಈ ದೇಶದ ಆರ್ಥಿಕ ಪರಿಸ್ಥಿತಿಗೆ ಏನಾಗಿದೆ? ಅಂತಾ. ಇದು ಬರೀ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯ ಪ್ರಶ್ನೆ ಮಾತ್ರವಲ್ಲ. ನಿತ್ಯೋಪಯೋಗಿ ವಸ್ತುಗಳ ಬೆಲೆ ಏರುತ್ತಲೇ ಇದೆ. ಜನಸಾಮಾನ್ಯರ ಬದುಕು ಮತ್ತಷ್ಟು ಅಸಹನೀಯವಾಗುತ್ತಿದೆ. ಇವುಗಳ ಜತೆಜತೆಗೆ ರುಪಾಯಿ ಮೌಲ್ಯ ಕುಸಿಯುವ ಮತ್ತು ಕಚ್ಚಾ ತೈಲ ಬೆಲೆ ಏರುವ ಸುದ್ದಿಗಳು ಮತ್ತಷ್ಟು ಆತಂಕ್ಕಕ್ಕೆ ಈಡುಮಾಡುತ್ತಿವೆ.

ಈ ದೇಶಕ್ಕೇನಾಗಿದೆ? ಈ ಪ್ರಶ್ನೆಗೆ ಉತ್ತರ ಸಿಗದಿರಬಹುದು. ಆದರೆ, ಈ ದೇಶದ ಆರ್ಥಿಕತೆಗೆ ಏನಾಗಿದೆ ಎಂಬ ಪ್ರಶ್ನೆಗೆ ಉತ್ತರ ಇದೆ. ದೇಶದ ಆರ್ಥಿಕತೆ ಹದಗೆಟ್ಟಿದೆ. ಹಣಕಾಸು ಪರಿಸ್ಥಿತಿ ಬಿಕ್ಕಟ್ಟು ಎದುರಿಸುತ್ತಿದೆ. ಸಮರ್ಥ ಮತ್ತು ಪರಿಣಾಮಕಾರಿ ಆರ್ಥಿಕ ನೀತಿಗಳ ಜಾರಿ ಹೆಸರಿನಲ್ಲಿ ದಮನಕಾರಿ ನೀತಿಗಳನ್ನು ಜಾರಿ ಮಾಡಲಾಗುತ್ತಿದೆ.

ಈ ಹೊತ್ತಿನಲ್ಲಿ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೆನಪಾಗುತ್ತಾರೆ. ಅವರಿಗೆ ಈಗ 85 ವರ್ಷ. ಅವರು ಜಾರಿಗೆ ತಂದ ಆರ್ಥಿಕ ಉದಾರೀಕರಣಕ್ಕೆ 27ವರ್ಷಗಳಾಗಿವೆ. ಅವರು ಪ್ರಧಾನಿಯಾಗಿ 10 ವರ್ಷಗಳ ಕಾಲ ದೇಶವನ್ನು ಆರ್ಥಿಕ ಔನ್ನತ್ಯಕ್ಕೆ ಕೊಂಡೊಯ್ದ ರೀತಿ ಜಾಗತಿಕ ಆರ್ಥಿಕತಜ್ಞರನ್ನೂ ಬೆರಗುಗೊಳಿಸಿದೆ.

ಮನಮೋಹನ್ ಸಿಂಗ್ ನಮಗೆ ನೆನಪಾಗುತ್ತಾರೆ ಮತ್ತು ಅವರ ಆರ್ಥಿಕ ನೀತಿಗಳೇ ಶ್ರೇಷ್ಠ ಎಂದು ನಮಗೆ ಅನಿಸುವುದಕ್ಕೆ ಮುಖ್ಯ ಕಾರಣ- ಅವರು 27 ವರ್ಷಗಳ ಹಿಂದೆ ಆರ್ಥಿಕ ಉದಾರೀಕರಣ ಜಾರಿಗೆ ತಂದಾಗಲೂ ಅವರ ಲೆಕ್ಕಾಚಾರಗಳು ಪಕ್ಕಾ ಆಗಿದ್ದವು ಮತ್ತು ಜನಸ್ನೇಹಿ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನೇ ಹೊಂದಿದ್ದವು. ಅವರ ಅಧಿಕಾರದ ಮೊದಲ ಐದು ವರ್ಷದಲ್ಲಿ ಈ ದೇಶದ ಆರ್ಥಿಕತೆ ಶೇ.8.5ರಷ್ಟು ಅಭಿವೃದ್ಧಿ ದಾಖಲಿಸಿದೆ. ಇದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರಥಮ.

ಮನಮೋಹನ್ ಸಿಂಗ್ ಅವರ ಅಂದಾಜುಗಳು ಎಂದೂ ತಪ್ಪಾಗಿಲ್ಲ. 2014ರ ಚುನಾವಣಾ ವೇಳೆ ನರೇಂದ್ರ ಮೋದಿ ಅವರ ಬಗ್ಗೆ ಪ್ರಸ್ತಾಪಿಸಿ ಹೇಳಿದ್ದರು- ನರೇಂದ್ರಮೋದಿ ಅವರು ಪ್ರಧಾನಿಯಾದರೆ ದೇಶದ ಪಾಲಿಗೆ ವಿಪತ್ಕಾಲ ತಪ್ಪಿದ್ದಲ್ಲ ಎಂದಿದ್ದರು. ಪೆಟ್ರೋಲ್ ಡಿಸೇಲ್ ದರದ ಜತೆಗೆ ಜನೋಪಯೋಗಿ ವಸ್ತುಗಳ ದರ ಏರಿಕೆ, ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ, ಚಾಲ್ತಿ ಖಾತೆ ಕೊರತೆ ಹೆಚ್ಚಳದ, ಹಣದುಬ್ಬರ ಹೆಚ್ಚಳ ಬಡ್ಡಿದರ ಏರಿಕೆ ಈಗ ಹೊಸದಾಗಿ ಬಯಲಿಗೆ ಬಂದಿರುವ ನಗದು ಕೊರತೆಯಿಂದಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ಸಮಸ್ಯೆಗಳು- ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ದೇಶ ವಿಪತ್ಕಾಲದಲ್ಲಿದೆ ಎಂಬುದಕ್ಕೆ ಇವಿಷ್ಟೇ ಸಾಕು.

2016 ನವೆಂಬರ್ 8 ರಂದು ಜಾರಿಗೆ ತಂದ ಅಪನಗದೀಕರಣದ ಬಗ್ಗೆ ಮನಮೋಹನ್ ಸಿಂಗ್ ಅವರು ಸಂಸತ್ತಿನಲ್ಲಿ ಕಟುವಾಗಿ ಟೀಕಿಸಿ, ‘ಇಡೀ ಅಪನಗದೀಕರಣ ಯೋಜನೆಯು ಜನಸಾಮಾನ್ಯರನ್ನು ಸಂಘಟಿತವಾಗಿ ಲೂಟಿ ಮಾಡುವ ಯೋಜನೆ’ ಎಂದು. ಈ ದುಸ್ಸಾಹಸದಿಂದಾಗಿ ದೇಶದ ಜಿಡಿಪಿ ಶೇ.2ರಷ್ಟು ತಗ್ಗುತ್ತದೆ ಎಂದು ಹೇಳಿದ್ದರು. ಆಗ ನರೇಂದ್ರ ಮೋದಿ ಮತ್ತು ಅವರ ತಂಡದ ಸದಸ್ಯರು ಮನಮೋಹನ್ ಸಿಂಗ್ ಅವರನ್ನು ಕುಹಕವಾಡಿದ್ದರು.

ಆದರೆ, ಅಪನಗದೀಕರಣದ ನಂತರ ವರ್ಷದಲ್ಲಿ ದೇಶದ ಜಿಡಿಪಿ ಶೇ.5.7ಕ್ಕೆ ಕುಸಿದಿತ್ತು. ಹಿಂದಿನ ವರ್ಷ ಶೇ.7.7ರಷ್ಟಿದ್ದ ಜಿಡಿಪಿ ಶೇ.5.7ಕ್ಕೆ ಕುಸಿಯಿತೆಂದರೆ ಶೇ.2ರಷ್ಟು ಕುಸಿತವಾಯಿತು ತಾನೇ? ಮನಮೋಹನ್ ಸಿಂಗ್ ಅವರು ಮಾತ್ರವೇ ಇಂತಹ ಆರ್ಥಿಕ ಸತ್ಯಗಳನ್ನು ಕರಾರುವಕ್ಕಾಗಿ ನುಡಿಯಲು ಸಾಧ್ಯ. ಮೋದಿ ಪ್ರಣೀತ ಯೋಜನೆಗಳನ್ನು ಮೆಚ್ಚುವ ಆರ್ಥಿಕ ತಜ್ಞರು ಅಪನಗದೀಕರಣದ ಅಪಾಯಗಳನ್ನು ಗ್ರಹಿಸುವ ಬದಲು ಮೋದಿ ಸರ್ಕಾರವನ್ನು ತುಷ್ಟೀಕರಿಸುವಲ್ಲೇ ಕಾಲ ಕಳೆದರು. ಮನಮೋಹನ್ ಸಿಂಗ್ ವಿರೋಧ ಪಕ್ಷದ ನಾಯಕನಾಗಿ ಎಂದು ಅಪನಗದೀಕರಣ ಯೋಜನೆಯನ್ನು ನೋಡಲಿಲ್ಲ. ಅವರು ಒಬ್ಬ ಆರ್ಥಿಕ ತಜ್ಞನಾಗಿ ಮಾತ್ರ ಅಪನಗದೀಕರಣ ಯೋಜನೆಯನ್ನು ನೋಡಿದರು. ಅದರ ಅಪಾಯಗಳನ್ನು ಕರಾರುವಕ್ಕಾಗಿ ಹೇಳಿದರು. ಈಗಲೂ ಅಸಂಘಟಿತ ವಲಯದಲ್ಲಿರುವ ಜನರು ಅಪನಗದೀಕರಣದ ಕರಾಳತೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಅಸಂಘಟಿತ ವಲಯದ ನಿರುದ್ಯೋಗ ಪ್ರಮಾಣ ಹೆಚ್ಚಿದೆ. ಅದನ್ನು ಮುಚ್ಚಿಕೊಳ್ಳಲು ಇಪಿಎಫ್ಒ ಅಂಕಿ ಅಂಶಗಳನ್ನ ಬಳಸಿಕೊಳ್ಳುವ ಮೋದಿ ಸರ್ಕಾರ ಪ್ರಯತ್ನವೂ ವಿಫಲವಾಗಿದೆ.

ಅಪನಗದೀಕರಣವು ಅಲ್ಪಕಾಲದ ನೋವು ದೀರ್ಘಕಾಲದ ನಲಿವು ಎಂದು ಪ್ರಧಾನಿ ಮೋದಿ ಪ್ರಾಸಬದ್ಧವಾಗಿ ಬಣ್ಣಿಸಿದ್ದರು. ಅದಕ್ಕೆ ಪ್ರತಿಯಾಗಿ ಮನಮೋಹನ್ ಸಿಂಗ್ ಅವರು ಆರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ನ ಮಾತು ‘ದೀರ್ಘಕಾಲದಲ್ಲಿ ನಾವೆಲ್ಲರೂ ನಶಿಸಿಹೋಗುತ್ತೇವೆ’ ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದರು. ಅಪನಗದೀಕರಣದಿಂದಾಗಿ ಅಸಂಘಟಿತ ವರ್ಗವು ನಶಿಸುವ ಹಾದಿಯಲ್ಲಿದೆ. ದೇಶದ ಸುಸ್ಥಿರ ಆರ್ಥಿಕತೆಯು ನಶಿಸುವ ಹಾದಿಯಲ್ಲಿದೆ.

ಅಪನಗದೀಕರಣವು ದೇಶದ ನಾಗರಿಕರ ಮೇಲೆ ಹೇರಿದ ಆರ್ಥಿಕ ನಿರ್ಬಂಧ. ಜನರಿಗೆ ಬೇಕಾದಷ್ಟು ಖರ್ಚು ಮಾಡುವಷ್ಟು ನಗದು ಕೂಡಾ ಎಟಿಎಂಗಳಲ್ಲಿ ದಕ್ಕದ ಪರಿಸ್ಥಿತಿ ತಲೆದೋರಿದೆ. ನೀವು ಎಲ್ಲೆಲ್ಲಿ ಎಷ್ಟೆಷ್ಟು ಹಣ ಹೇಗೆ ಖರ್ಚು ಮಾಡಬೇಕೆಂಬುದನ್ನು ಸರ್ಕಾರವೇ ಪರೋಕ್ಷವಾಗಿ ನಿಯಂತ್ರಿಸುವ ದುಸ್ಸಾಹಸ. ಅದರ ಭಾಗವಾಗಿಯೇ ತರಾತುರಿಯಲ್ಲಿ ಮೋದಿ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದು ಆರ್ಥಿಕತೆಯನ್ನು ಮತ್ತಷ್ಟು ಹದಗೆಡಿಸಿತ್ತು.

ಇಡೀ ದೇಶದ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ತಂದ ಮನಮೋಹನ್ ಸಿಂಗ್ ಅವರ ನೀತಿಗಳೆಂದೂ ನಾಗರಿಕರನ್ನು ದಮನಿಸುವ ಪ್ರಯತ್ನವಾಗಿರಲಿಲ್ಲ. ಬದಲಿಗೆ ನಾಗರಿಕರ ಸ್ವಾತಂತ್ರ್ಯ ಉದ್ದೀಪಿಸುವ ಗೌರವಿಸುವಂತಹ ನೀತಿಗಳಾಗಿದ್ದವು. ಮಾಹಿತಿ ಹಕ್ಕು ಕಾಯ್ದೆ ಮನಮೋಹನ್ ಸಿಂಗ್ ಜಾರಿಗೆ ತಂದ ಅಂತಹದ್ದೊಂದು ಪ್ರಮುಖ ಕಾಯ್ದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಆಹಾರ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಇಂತಹ ಪ್ರಮುಖ ಜನಪರ ಕಾಯ್ದೆಗಳನ್ನು ಮನಮೋಹನ್ ಸಿಂಗ್ ಅವಧಿಯಲ್ಲಿ ಜಾರಿಗೆ ಬಂದವು. ಅಮೆರಿಕದೊಂದಿಗೆ ಅಣುಒಪ್ಪಂದ ಮನಮೋಹನ್ ಸಿಂಗ್ ಅವಧಿಯ ಪ್ರಮುಖ ನಿರ್ಧಾರ. ಮನಮೋಹನ್ ಸಿಂಗ್ ಅವರ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿಗಳು ಯಾವತ್ತೂ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಮಾದರಿಯಾಗಿದ್ದವು.

ಪೆಟ್ರೋಲ್ ದರ ಏರಿ ಜನರು ಕಂಗಾಲಾದಾಗ ಮನಮೋಹನ್ ಸಿಂಗ್ ಸರ್ಕಾರ ಎಂದೂ ಕೈಚೆಲ್ಲಿ ಕೂತಿರಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯತ್ತ ಕೈತೋರಿಸಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿರಲಿಲ್ಲ. ಗ್ರಾಹಕರಿಂದ ಪಡೆದ ತೆರಿಗೆಯನ್ನು ವಾಪಸು ನೀಡದ ಜಿಪುಣತನ ಪ್ರದರ್ಶಿಸಿರಲಿಲ್ಲ. ಅಷ್ಟಕ್ಕೂ ತೈಲದರ ಏರಿದಾಗ, ರುಪಾಯಿ ಮೌಲ್ಯ ಕುಸಿದಾಗಲೂ ಜನರು ಸಂಕಷ್ಟ ಪರಿಸ್ಥಿತಿ ಎದುರಿಸಿರಲಿಲ್ಲ. ನಿರಾಶಾರಾಗಿರಲಿಲ್ಲ. ಹತಾಶರಾಗಿರಲಿಲ್ಲ.

ಮನಮೋಹನ್ ಸಿಂಗ್ ಅವರಿಗೆ ಈಗ 85 ವರ್ಷ. ಅವರ ಜನುಮದಿನದಂದು ಇಡೀ ದೇಶದ ಜನತೆ ನೆನಪಿಸಿಕೊಳ್ಳುತ್ತದೆ. ಇಂತಹ ಸಂಕಷ್ಟಗಳನ್ನು ನಾವೆಂದೂ ಹತ್ತು ವರ್ಷಗಳ ಅವಧಿಯಲ್ಲಿ ಅನುಭವಿಸಿರಲಿಲ್ಲ ಎಂದು.

ಇದನ್ನೂ ಓದಿ : ಶೇ.5ರಷ್ಟು ಇಳಿದ ಕಚ್ಚಾ ತೈಲ; ಪೆಟ್ರೋಲ್, ಡಿಸೇಲ್ ದರ ಮಾತ್ರ ಏರಿಕೆ 

ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಭುಗಿಲೆದ್ದ ಆದರ್ಶ ಹೌಸಿಂಗ್ ಹಗರಣ, 2ಜಿ ಹಗರಣಗಳಿಂದಾಗಿ ಮನಮೋಹನ್ ಸಿಂಗ್ ಸರ್ಕಾರಕ್ಕೆ ಹಗರಣಗಳ ಸರ್ಕಾರ ಎಂಬ ಹಣೆ ಪಟ್ಟಿ ಹಚ್ಚಲಾಗಿತ್ತು. ಅವರ ಉತ್ತಮ ಕೆಲಸಗಳೆಲ್ಲವನ್ನು ಮರೆಮಾಚಿಸುವ ಅಪಪ್ರಚಾರ ನಿರಂತರವಾಗಿ ನಡೆದಿತ್ತು. ಆಗ ಮನಮೋಹನ್ ಸಿಂಗ್ ಅವರು ಹೇಳಿದ್ದರು ‘ನನ್ನ ಬಗ್ಗೆ ಇತಿಹಾಸವು ಹೆಚ್ಚು ದಯಾಳುವಾಗಿರುತ್ತದೆ’ ಎಂದು.

ಆದರೆ, ಈ ಕ್ಷಣಕ್ಕೆ ಇಡೀ ದೇಶದ ಜನತೆಯೇ ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಮನಮೋಹನ್ ಸಿಂಗ್ ಅವರ ಬಗ್ಗೆ ಹೆಚ್ಚು ಪ್ರೀತಿ ಮತ್ತು ಮಮತೆಯಿಂದಲೇ ಹೇಳುತ್ತಾರೆ. ‘ಮಾನ್ಯ ಮನಮೋಹನ್ ಸಿಂಗ್ ಅವರೇ ನಿಮಗಿಂತ ಶ್ರೇಷ್ಠ ಮತ್ತು ಮಾನವೀಯತೆಯ ಪ್ರಧಾನಿ ಈ ದೇಶಕ್ಕೆ ದಕ್ಕಿಲ್ಲ. ಮುಂದಿಯುವ ದಕ್ಕುವುದಿಲ್ಲ’ ಎಂದು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More