ಆಧಾರ್ ತೀರ್ಪನ್ನು ‘ದೇಶದ ಜನರಿಗೆ ಸಿಕ್ಕ ಅಧಿಕಾರ’ ಎಂದು ಶ್ಲಾಘಿಸಿದ ನಂದನ್ ನಿಲೇಕಣಿ

ಸುಪ್ರೀಂ ಕೋರ್ಟ್ ಆಧಾರ್ ಬಗ್ಗೆ ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಆಧಾರ್ ಪ್ರಾಧಿಕಾರದ ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇಂದಿನ ಕೋರ್ಟ್ ತೀರ್ಪು ಆಧಾರ್‌ನ ಮೂಲ ತತ್ವಗಳನ್ನು ಎತ್ತಿಹಿಡಿದಿದೆ ಎಂದಿದ್ದಾರೆ

ಆಧಾರ್ ಯೋಜನೆಯ ಬಗ್ಗೆ ಸಾಕಷ್ಟು ವಿರೋಧಗಳು ಮತ್ತು ಖಾಸಗಿ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎನ್ನುವ ಕೂಗು ಕೇಳಿಬರುತ್ತಿದ್ದ ಸಂದರ್ಭದಲ್ಲಿಯೂ ಆಧಾರ್ ಬಗ್ಗೆ ಸಕಾರಾತ್ಮಕವಾಗಿ ಪ್ರಚಾರ ಮಾಡಿ ಅದರ ಇಂದಿನ ವಿರಾಟ್ ಸ್ವರೂಪಕ್ಕೆ ಕಾರಣವಾದವರಲ್ಲಿ ನಂದನ್ ನಿಲೇಕಣಿ ಪ್ರಮುಖರು. ಆಧಾರ್ ಯೋಜನೆ ನಂದನ್ ನಿಲೇಕಣಿ ಅವರ ಕನಸಿನ ಕೂಸು ಎಂದು ಹೇಳಿದರೂ ಸರಿ. ಇದೀಗ ಸುಪ್ರೀಂ ಕೋರ್ಟ್ ಆಧಾರ್ ಬಗ್ಗೆ ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನಂದನ್ ನಿಲೇಕಣಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

“ಇದು ಆಧಾರ್ ಪರವಾಗಿ ನೀಡಿದ ಮಹತ್ವದ ತೀರ್ಪು. ಕಾಯ್ದೆಯ ಸಂವಿಧಾನಾತ್ಮಕ ವಿಚಾರಗಳತ್ತ ಅಭಿಪ್ರಾಯ ನೀಡುವುದಕ್ಕೆ ಸೀಮಿತವಾಗಿರದೆ, ಸುಪ್ರೀಂ ಕೋರ್ಟ್ ಆಧಾರ್‌ನ ಮೂಲ ತತ್ವಗಳನ್ನು ಎತ್ತಿಹಿಡಿದು ಮಾನ್ಯತೆ ನೀಡಿದೆ. ಆಧಾರ್ ದೇಶದ ಅಭಿವೃದ್ಧಿಗೆ ಅಗತ್ಯವಿರುವ ಒಂದು ವಿಶೇಷ ಗುರುತಿನ ಯೋಜನೆಯಾಗಿದೆ,” ಎಂದು ನಂದನ್ ನಿಲೇಕಣಿ ಟ್ವೀಟ್ ಮಾಡಿದ್ದಾರೆ.

ಆಧಾರ್ ಯಾವುದನ್ನೂ ಹೊರಗೆ ಇಡುವುದಿಲ್ಲ, ಎಲ್ಲವನ್ನೂ ಒಳಗೊಳ್ಳುತ್ತದೆ ಎಂದೂ ನಿಲೇಕಣಿ ತಮ್ಮ ಟ್ವೀಟ್‌ಗಳಲ್ಲಿ ಹೇಳಿದ್ದಾರೆ. “ಯೋಜನೆಯ ಒಳಗಿದ್ದುಕೊಂಡು ತಮ್ಮ ವಿವರಗಳ ಮಾಲೀಕರಾಗುವ ಹೊಸ ಅಧಿಕಾರ ಜನರಿಗೆ ಸಿಕ್ಕಿದೆ. ಜನರೇ ಈ ಯೋಜನೆಯ ಹೃದಯಭಾಗ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ‘ಬ್ಯಾಂಕಿಂಗ್‌ಗೆ ಆಧಾರ್ ಕಡ್ಡಾಯ ಮಾಡುವುದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ’

ಆಧಾರ್ ಬಗ್ಗೆ ಎದ್ದಿರುವ ಪ್ರಶ್ನೆಗಳೆಲ್ಲವೂ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಪರಾಮರ್ಶೆಗೆ ಬಂದಿದೆ ಎನ್ನುವುದನ್ನೂ ಅವರು ಹೇಳಿದ್ದಾರೆ. “ಆಧಾರ್ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಪರಾಮರ್ಶೆಗೆ ಒಳಗಾಗಿದೆ. ಬಹಳಷ್ಟು ಶಿಫಾರಸುಗಳನ್ನು ಇದರಲ್ಲಿ ಸೇರಿಸಲಾಗಿದೆ. ಚರ್ಚೆ ಮತ್ತು ಮಾತುಕತೆಯಂತಹ ಪ್ರಜಾಸತ್ತಾತ್ಮಕ ವಿಧಾನದ ಮೂಲಕ ನಾವು ಉತ್ತಮ ಮತ್ತು ಬಲವಾದ ಆಧಾರ್‌ ಯೋಜನೆಯನ್ನು ಸೃಷ್ಟಿಸಿದ್ದೇವೆ," ಎಂದು ನಿಲೇಕಣಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More