ಜನಸಾಮಾನ್ಯರಲ್ಲಿ ದಿಗಿಲು ಹುಟ್ಟಿಸಿದ 7 ಬಗೆಯ ಆಧಾರ್ ಅವಾಂತರಗಳು

ಆಧಾರ್ ವ್ಯವಸ್ಥೆಯಲ್ಲಿ ಯಾವ ಲೋಪವೂ ಇಲ್ಲ ಎಂದು ಆಧಾರ್ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ನ್ಯಾಯಾಲಯಗಳ ಎದುರು ಪದೇಪದೇ ಹೇಳುತ್ತಲೇ ಇವೆ. ಆದರೆ, ಆ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುವಂಥ ಪ್ರಾತಿನಿಧಿಕ ಪ್ರಕರಣಗಳತ್ತ ಇಣುಕುನೋಟ ಇಲ್ಲಿದೆ

ಆಧಾರ್ ನಿರ್ವಹಣೆ ಮಾಡುತ್ತಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸದಾ ನಿರಾಕರಿಸುತ್ತಲೇ ಬಂದಿದ್ದರೂ, ಆಧಾರ್ ದುರ್ಬಳಕೆ ಮತ್ತು ಸುರಕ್ಷತಾ ಲೋಪಗಳು ಆಗಾಗ ವರದಿಯಾಗುತ್ತಲೇ ಇವೆ ಮತ್ತು ನ್ಯಾಯಾಲಯದ ಮುಂದೆಯೂ ಅಂತಹ ಪ್ರಕರಣಗಳು ಬಂದಿವೆ. ದತ್ತಾಂಶ ಜಾಲತಾಣ ‘ಇಂಡಿಯಾ ಸ್ಪೆಂಡ್’ ಪ್ರಕಾರ, ಈ ವರ್ಷದ ಮೇ ತಿಂಗಳವರೆಗೆ ದೇಶದ ಇಂಗ್ಲಿಷ್ ಮಾಧ್ಯಮಗಳಲ್ಲಿ ೭೩ ಆಧಾರ್ ಮಾಹಿತಿ ದುರ್ಬಳಕೆ ಪ್ರಕರಣಗಳು ವರದಿಯಾಗಿವೆ. ಆ ಪೈಕಿ ೫೨ ಪ್ರಕರಣಗಳು ನಕಲಿ ಅಥವಾ ಸುಳ್ಳು ಆಧಾರ್ ಸಂಖ್ಯೆಯ ಪ್ರಕರಣಗಳಾದರೆ, ಉಳಿದ ೨೧ ಆಧಾರ್ ಬಳಸಿ ಬ್ಯಾಂಕಿಗೆ ವಂಚನೆ ಎಸಗಿದ ಘಟನೆಗಳು. 2011ರ ಸೆಪ್ಟೆಂಬರ್‌ನಿಂದ ಈವರೆಗೆ ೧೬೪ ಆಧಾರ್ ವಂಚನೆಯ (ನಕಲಿ, ಸುಳ್ಳು ಮಾಹಿತಿಯ) ಮತ್ತು ಆಧಾರ್ ಸಂಬಂಧಿತ ಬ್ಯಾಂಕಿಂಗ್ ವಂಚನೆಯ ಪ್ರಕರಣಗಳು ವರದಿಯಾಗಿವೆ. ಇಂಗ್ಲಿಷ್ ಮಾಧ್ಯಮಗಳ ಗಮನಕ್ಕೆ ಬರದೆ ಇರುವ ಪ್ರಕರಣಗಳು ಈ ಪಟ್ಟಿಯಲ್ಲಿ ಸೇರಿಲ್ಲ.

ಆಧಾರ್ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುವಂಥ ಕೆಲವು ಪ್ರಾತಿನಿಧಿಕ ಪ್ರಕರಣಗಳು ಇಂತಿವೆ:

ನೋಟು ಅಮಾನ್ಯ

ನೋಟು ರದ್ದತಿ ಬಳಿಕ ಸಾರ್ವಜನಿಕ ವಲಯದ ಬ್ಯಾಂಕುಗಳ ಜನ್‌ಧನ್ ಖಾತೆಗಳಿಗೆ ಭಾರಿ ಪ್ರಮಾಣದ ಠೇವಣಿ ಹರಿದುಬಂದಿತ್ತು ಎಂದು ‘ಮನಿಲೈಫ್’ ಎಂಬ ಹಣಕಾಸು ಸಂಬಂಧಿತ ವೆಬ್‌ಸೈಟ್ ಕೆಲವು ದಿನಗಳ ಹಿಂದಷ್ಟೇ ಹೇಳಿತ್ತು. ಈ ಖಾತೆಗಳನ್ನು ಕೆವೈಸಿ ನಿಯಮ ಮೀರಿ ತೆರೆಯಲಾಗಿದ್ದು, ಆಧಾರ್ ಸಂಖ್ಯೆ ಜೋಡಣೆ ಮೂಲಕ ತೆರೆಯಲಾದ ಖಾತೆಗಳಾಗಿದ್ದವು. ಆರ್‌ಟಿಐ ಮಾಹಿತಿ ಪ್ರಕಾರ, ೧೮ ಬ್ಯಾಂಕುಗಳ ಸುಮಾರು ೨೦.೮೦ ಲಕ್ಷ ಜನ್‌ಧನ್‌ ಖಾತೆಗಳಿಗೆ ನಿಯಮಾನುಸಾರ ಮಿತಿಯಾದ ಒಂದೇ ವರ್ಷದಲ್ಲಿ ಒಂದು ಲಕ್ಷ ರು. ಮೀರಿದ ಠೇವಣಿ ಜಮಾ ಆಗಿತ್ತು. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಅಂತಹ ಒಂದು ಖಾತೆಯಲ್ಲೇ ೯೩.೮೨ ಕೋಟಿ ರು. ಜಮಾ ಆಗಿತ್ತು. ಬ್ಯಾಂಕ್ ಆಫ್‌ ಇಂಡಿಯಾದ ಮತ್ತೊಂದು ಖಾತೆಯಲ್ಲಿ ೩.೦೫ ಕೋಟಿ ಜಮಾ ಆಗಿತ್ತು. ಬಹುತೇಕ ಈ ಖಾತೆಗಳು ನಕಲಿ ಆಧಾರ್ ಕಾರ್ಡ್ ನೀಡಿ ತೆರೆಯಲಾಗಿರುವ ನಕಲಿ ಖಾತೆಗಳಿರಬಹುದು ಎಂದು ಬ್ಯಾಂಕ್ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ನಕಲಿ ಸಿಮ್ ಕಾರ್ಡು

ಆಧಾರ್ ದೃಢೀಕರಣ ವ್ಯವಸ್ಥೆಯಲ್ಲಿನ ಅಪಾಯಕಾರಿ ಲೋಪಗಳ ಕುರಿತು ಇದೇ ಸೆಪ್ಟೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರ ವಿಚಾರಣೆ ವೇಳೆ, ಮೊಬೈಲ್ ಅಂಗಡಿಯೊಂದರ ಮಾಲೀಕ, ಯಾವುದೇ ಅನುಮಾನಗಳಿಗೆ ಆಸ್ಪದವಿಲ್ಲದ ಸಾಮಾನ್ಯ ವ್ಯಕ್ತಿಯೊಬ್ಬರಿಗೆ ಪದೇಪದೇ ಬೆರಳಚ್ಚು ನೀಡುವಂತೆ ಮಾಡಿದ ಘಟನೆ ಬೆಳಕಿಗೆ ಬಂದಿತ್ತು. ಹಾಗೆ ಹಲವು ಬಾರಿ ಬೆರಳಚ್ಚು ಪಡೆಯುವ ಮೂಲಕ ಮಾಲೀಕ, ಬೆರಳಚ್ಚು ಕೊಟ್ಟ ವ್ಯಕ್ತಿಯ ಹೆಸರಿನಲ್ಲಿ ಇತರರಿಗೆ ನಕಲಿ ಸಿಮ್ ಕಾರ್ಡುಗಳನ್ನು ಮತ್ತು ಮೊಬೈಲ್ ಸಂಪರ್ಕಗಳನ್ನು ನೀಡಿದ್ದ. ವಿಮಾ ವಂಚನೆ ಅಕ್ರಮಕ್ಕೆ ಆ ಸಿಮ್ ಬಳಸಿ ಕರೆ ಮಾಡಲಾಗಿತ್ತು. ಈ ವಿವರದ ಬಳಿಕ ನ್ಯಾಯಾಲಯವು ದೆಹಲಿ ಸೈಬರ್ ಕ್ರೈಂ ಪೊಲೀಸರು, ಯುಐಡಿಎಐ ಮತ್ತು ಕೇಂದ್ರ ಗೃಹ ಇಲಾಖೆಗೆ ನೋಟಿಸ್ ನೀಡಿತು. ಆಧಾರ್ ಬಯೋಮೆಟ್ರಿಕ್ ಬಳಸಿ ಅಷ್ಟು ಸರಳವಾಗಿ ನಕಲಿ ಸಿಮ್ ಕಾರ್ಡು ಪಡೆಯುವುದು ಸಾಧ್ಯವಿದ್ದರೆ, ಆಧಾರ್ ದೃಢೀಕರಣದ ಉದ್ದೇಶಕ್ಕೆ ಅರ್ಥವಿಲ್ಲ ಎಂದೂ ನ್ಯಾಯಾಲಯ ಹೇಳಿತ್ತು.

ಪಡಿತರ ದುರ್ಬಳಕೆ

ಬಡವರಿಗೆ ವಿತರಿಸುವ ಪಡಿತರ ಧಾನ್ಯಗಳನ್ನು ಫಲಾನುಭವಿಗಳ ಆಧಾರ್ ಕಾರ್ಡು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ೨೨ ಮಂದಿ ನ್ಯಾಯಬೆಲೆ ಅಂಗಡಿ ಮಾಲೀಕರ ಮೇಲೆ ೨೦೧೮ರ ಆಗಸ್ಟ್‌ನಲ್ಲಿ ಎಫ್‌ಐಆರ್ ದಾಖಲಿಸಿತ್ತು. ೪೩ ಜಿಲ್ಲೆಗಳಲ್ಲಿ ನಿಜವಾದ ಫಲಾನುಭವಿಗಳ ಆಧಾರ್ ಮಾಹಿತಿಯನ್ನು ಬಳಸಿಕೊಂಡು ನಕಲಿ ಪಡಿತರ ಚೀಟಿ ಸೃಷ್ಟಿಸಿ ಈ ವಂಚನೆ ಎಸಗಲಾಗಿತ್ತು.

ಬ್ಯಾಂಕ್ ವಂಚನೆ

ಆಧಾರ್ ಸೇರಿದಂತೆ ನಕಲಿ ದಾಖಲೆಗಳನ್ನು ಬಳಸಿ ತೆರೆಯಲಾಗಿದ್ದ ೪೦ ಬ್ಯಾಂಕ್ ಖಾತೆಗಳನ್ನು ಈ ವರ್ಷದ ಮಾರ್ಚ್‌ನಲ್ಲಿ ಮುಂಬೈ ಪೊಲೀಸ್ ಕ್ರೈಮ್ ಬ್ರಾಂಚ್ ಪತ್ತೆ ಮಾಡಿತ್ತು. ಆಮದು ಮತ್ತು ರಫ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ಇಂತಹ ನಕಲಿ ಖಾತೆ ತೆರೆದಿರುವುದು ಆತನ ಮನೆ ಮೇಲೆ ದಾಳಿ ನಡೆಸಿದಾಗ ಪತ್ತೆಯಾಗಿತ್ತು.

ಅಡುಗೆ ಅನಿಲ ಸಬ್ಸಿಡಿ

ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಕಳೆದ ವರ್ಷ ತನ್ನ ಮೊಬೈಲ್ ಚಂದಾದಾರರ ಹೆಸರಿನಲ್ಲಿ ಸ್ವತಃ ಅವರ ಗಮನಕ್ಕೆ ಬರದಂತೆ ೩೧ ಲಕ್ಷ ಪೇಮೆಂಟ್ ಬ್ಯಾಂಕ್ ಖಾತೆ ತೆರೆದಿತ್ತು. ಆ ಖಾತೆಗಳಿಗೆ ಬರೋಬ್ಬರಿ ೧೯೦ ಕೋಟಿ ರು. ಅಡುಗೆ ಅನಿಲ ಸಬ್ಸಿಡಿಯನ್ನು ಗ್ರಾಹಕರಿಗೆ ಗೊತ್ತಿಲ್ಲದಂತೆ ವರ್ಗಾವಣೆ ಮಾಡಲಾಗಿತ್ತು. ಸಿಮ್‌ಗೆ ಆಧಾರ್ ಜೋಡಣೆಗೆ ಬಂದಾಗ, ಆಧಾರ್ ಮಾಹಿತಿಯನ್ನೇ ಬಳಸಿ ಗ್ರಾಹಕರ ಒಪ್ಪಿಗೆಯೇ ಇಲ್ಲದೆ ಈ ಖಾತೆಗಳನ್ನು ತೆರೆಯಲಾಗಿತ್ತು. ಪ್ರಕರಣ ಬಯಲಾಗುತ್ತಿದ್ದಂತೆ ಏರ್‌ಟೆಲ್‌ ಯುಐಡಿಎಐಗೆ ೨.೫ ಕೋಟಿ ರು. ದಂಡ ಕಟ್ಟಿ ಬಚಾವಾಯಿತು.

ದತ್ತಾಂಶ ಕೋಶಕ್ಕೆ ಲಗ್ಗೆ

ಆಂಧ್ರಪ್ರದೇಶ ಸರ್ಕಾರದ ವೆಬ್‌ಸೈಟ್‌ ಮೂಲಕ ಆಧಾರ್ ಮಾಹಿತಿ ಮುಕ್ತವಾಗಿ ಲಭ್ಯವಿದೆ ಎಂಬುದನ್ನು ಸುರಕ್ಷತಾ ತಜ್ಞ ಶ್ರೀನಿವಾಸ ಕೊಡಲಿ ಎಂಬುವರು ಈ ವರ್ಷದ ಏಪ್ರಿಲ್‌ನಲ್ಲಿ ತೋರಿಸಿಕೊಟ್ಟಿದ್ದರು. ಅಲ್ಲದೆ, ೧೩ ಜಿಲ್ಲೆಗಳ ಕುಟುಂಬಗಳ ವೈಯಕ್ತಿಕ ಮಾಹಿತಿ ಶೋಧಕ್ಕೂ ಅಲ್ಲಿ ಅವಕಾಶವಿತ್ತು. ಜಾತಿ, ಧರ್ಮ, ಲಿಂಗ ಕುರಿತ ಮಾಹಿತಿಯಷ್ಟೇ ಅಲ್ಲದೆ, ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಐಎಫ್‌ಎಸ್ಸಿ ಕೋಡ್‌ಗಳು ಕೂಡ ಸಾರ್ವಜನಿಕವಾಗಿ ಲಭ್ಯವಿತ್ತು.

ಇದನ್ನೂ ಓದಿ : ಸುಪ್ರೀಂ ತೀರ್ಪು; ಅಸಲಿ ರೂಪಕ್ಕೆ ಬಂದ ಆಧಾರ್, ಮೋದಿ ಸರ್ಕಾರಕ್ಕೆ ಹಿನ್ನೆಡೆ

ಪ್ರಮುಖ ದತ್ತಾಂಶ ಸೋರಿಕೆ

ಕಳೆದ ನವೆಂಬರ್‌ನಲ್ಲಿ ಆರ್‌ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಯುಐಡಿಎಐ, “ವಿವಿಧ ಯೋಜನೆಗಳ ಫಲಾನುಭವಿಗಳ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆ ಸೇರಿದಂತೆ ಹಲವು ಮಾಹಿತಿಯನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿವಿಧ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೇರಿದ ೨೧೦ ವೆಬ್‌ಸೈಟ್‌ಗಳು ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿವೆ,” ಎಂಬುದನ್ನು ಒಪ್ಪಿಕೊಂಡಿತ್ತು. ಆದರೆ, ಈ ದತ್ತಾಂಶ ಸೋರಿಕೆ ಯಾವಾಗ ಆಯಿತು ಮತ್ತು ಯಾವಾಗ ಪತ್ತೆಯಾಯಿತು, ಆ ಬಳಿಕ ಅದನ್ನು ಸರಿಪಡಿಸಲಾಯಿತೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ಯುಐಡಿಎಐ ಇದುವರೆಗೂ ಸ್ಪಷ್ಟಪಡಿಸಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More