ಆಧಾರ್ ತೀರ್ಪಿಗೂ ಮುನ್ನ ಸುಪ್ರೀಂ ಕೋರ್ಟ್‌ನಲ್ಲಿ ಮಂಡನೆಯಾದ ಪರ-ವಿರೋಧ ವಾದವೇನು?

ಕೊನೆಗೂ ಆಧಾರ್ ಕುರಿತ ಅಂತಿಮ ತೀರ್ಪು ಹೊರಬಿದ್ದಿದೆ. ಆಧಾರ್ ವ್ಯವಸ್ಥೆಯ ಕುರಿತ ಈ ಸುದೀರ್ಘ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠದ ಮುಂದೆ ಕೇಳಿಬಂದ ವಾದ-ಪ್ರತಿವಾದಗಳು ಏನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ

ಐದು ತಿಂಗಳ ಕಾಲ ಸುಮಾರು ೩೮ ಕಲಾಪದ ಮೂಲಕ ವಾದ-ಪ್ರತಿವಾದ ಮಂಡನೆಯಾದ ಆಧಾರ್ ಪ್ರಕರಣವು ಸುಪ್ರೀಂ ಕೋರ್ಟಿನ ಎದುರು ಈವರೆಗೆ ವಿಚಾರಣೆಗೊಳಗಾದ ಪ್ರಕರಣಗಳಲ್ಲೇ ಎರಡನೇ ಅತ್ಯಂತ ದೀರ್ಘ ಪ್ರಕರಣ. ೨೦೧೮ರ ಜ.೧೭ರಂದು ಆರಂಭವಾದ ಪ್ರಕರಣದ ವಿಚಾರಣೆ, ಮೇ ೧೦ರಂದು ಮುಕ್ತಾಯ ಕಂಡಿತು. ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಸರ್ವೋಚ್ಚ ನ್ಯಾಯಾಲಯ ಸೆ.೨೬ರಂದು ತೀರ್ಪು ಘೋಷಿಸಿದೆ.

ಆಧಾರ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ೨೭ ಮಂದಿ ಅರ್ಜಿದಾರರ ಪರ ಶ್ಯಾಮ್ ದಿವಾನ್, ಗೋಪಾಲ್ ಸುಬ್ರಮಣಿಯಮ್, ಕಪಿಲ್ ಸಿಬಲ್, ಕೆ ವಿ ವಿಶ್ವನಾಥನ್, ಮೀನಾಕ್ಷಿ ಅರೋರಾ, ಸಜನ್ ಪೂವಯ್ಯ, ಅರವಿಂದ್ ದಾತಾರ್, ಪಿ ಚಿದಂಬರಂ, ಆನಂದ ಗ್ರೋವರ್, ಸಿ ಯು ಸಿಂಗ್, ಪಿ ವಿ ಸುರೇಂದ್ರನಾಥ್ ಹಾಗೂ ಸಂಜಯ್ ಹೆಗಡೆ ಅವರನ್ನೊಳಗೊಂಡ ಹಿರಿಯ ವಕೀಲರ ದೊಡ್ಡ ಪಡೆಯೇ ವಾದ ಮಂಡಿಸಿತ್ತು.

ಪ್ರಕರಣದ ಪ್ರತಿವಾದಿಗಳನ್ನು- ಭಾರತ ಸರ್ಕಾರ ಮತ್ತು ಯುಐಡಿಎಐ- ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ, ನೀರಜ್ ಕಿಶನ್ ಕೌಲ್ ಮತ್ತು ಜಯಂತ್ ಭೂಷಣ್, ವಕೀಲರಾದ ಗೋಪಾಲ್ ಶಂಕರನಾರಾಯಣನ್ ಮತ್ತು ಜೋಯೆಬ್ ಹೊಸೇನ್ ಪ್ರತಿನಿಧಿಸಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನಡೆಸಿದ ಈ ವಿಚಾರಣೆಯಲ್ಲಿ ಆಧಾರ ಪರ ಮತ್ತು ವಿರೋಧ ವಾದಗಳು ಇಂತಿವೆ:

ಆಧಾರ್ ವಿರುದ್ಧದ ವಾದ

 • ಹಣಕಾಸು ಮಸೂದೆಯಾಗಿ ಆಧಾರ್ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಆದರೆ, ಸಂವಿಧಾನದ ಪ್ರಕಾರ, ಹಣಕಾಸು ಮಸೂದೆಯ ವ್ಯಾಪ್ತಿಗೆ ತೆರಿಗೆ, ಸರ್ಕಾರದ ಹಣಕಾಸು ಕ್ರೋಡೀಕರಣ ಮತ್ತು ಭಾರತ ಸರ್ಕಾರದ ಸಂಚಿತ ನಿಧಿ ಬಳಕೆ ವಿಷಯಗಳು ಮಾತ್ರ ಸೇರಿವೆ. ಹಾಗಾಗಿ, ಹಣಕಾಸು ಮಸೂದೆಯ ಹೆಸರಿನಲ್ಲಿ ತಪ್ಪಾಗಿ ಅಂಗೀಕರಿಸಿದ ಯಾವುದೇ ಮಸೂದೆ ಸಂವಿಧಾನದ ಮೂಲ ಸ್ವರೂಪವಾದ ಒಕ್ಕೂಟ ವ್ಯವಸ್ಥೆಗೇ ಪೆಟ್ಟು ನೀಡುತ್ತದೆ.
 • ಆಧಾರ್ ನೋಂದಣಿ ಮತ್ತು ಅಧಿಕೃತಗೊಳಿಸುವಿಕೆ ಪ್ರಕ್ರಿಯೆಗಳು ಅನುಮಾನಾಸ್ಪದ. ೨೦೦೯ರಲ್ಲಿ ಈ ಪ್ರಕ್ರಿಯೆ ಅರಂಭವಾದಾಗಿನಿಂದ ೨೦೧೬ರಲ್ಲಿ ಆಧಾರ್ ಕಾಯ್ದೆ ಜಾರಿ ಆಗುವವರೆಗೆ ಯಾವುದೇ ಕಾನೂನು ನೆಲೆಯೇ ಇಲ್ಲದೆ ಜನರ ಬಯೋಮೆಟ್ರಿಕ್ ದತ್ತಾಂಶ ಸಂಗ್ರಹ ಮಾಡಲಾಗಿದೆ. ಯುಐಡಿಎಐ ನಿಯಂತ್ರಣವಾಗಲೀ, ಯಾವುದೇ ಕಾನೂನು ಮಾನ್ಯತೆಯಾಗಲೀ ಇಲ್ಲದೆ ಖಾಸಗಿ ಮತ್ತು ಇತರ ಏಜೆನ್ಸಿಗಳ ಮೂಲಕ ಆ ದತ್ತಾಂಶ ಸಂಗ್ರಹಿಸಲಾಗಿದೆ. ಸುಮಾರು ೪೯ ಸಾವಿರಕ್ಕೂ ಅಧಿಕ ನೋಂದಣಿ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ದತ್ತಾಂಶ ಸಂಗ್ರಹವಷ್ಟೇ ಅಲ್ಲದೆ, ಸಂಗ್ರಹಿಸಿದ ಆ ಮಾಹಿತಿಯನ್ನು ಸೋರಿಕೆ ಮತ್ತು ಮಾರಾಟ ಮಾಡಿದ ಹಲವು ಉದಾಹರಣೆಗಳೂ ಇವೆ.
 • ಕಾಯ್ದೆಯ ಸೆಕ್ಷನ್ ೫೯ ಆಧಾರ್‌ಗೆ ಪೂರ್ವಾನ್ವಯದ ಮಾನ್ಯತೆ ನೀಡಿದೆ. ಆದರೆ, ಮೂಲಭೂತ ಹಕ್ಕಿನ ಉಲ್ಲಂಘನೆಗೆ ಇಂತಹ ಅವಕಾಶ ನೀಡಬಾರದು.
 • ಬಯೋಮೆಟ್ರಿಕ್ ಮಾಹಿತಿ ಸಂಗ್ರಹ ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ.
 • ಸರ್ಕಾರಿ ಸೌಲಭ್ಯ ಮತ್ತು ಜಲಕಲ್ಯಾಣ ಯೋಜನೆಗಳ ಪ್ರಯೋಜನಕ್ಕೆ ಆಧಾರ್ ನೋಂದಣಿ ಕಡ್ಡಾಯ ಎಂಬುದು ನಾಗರಿಕರ ಸಂವಿಧಾನಿಕ ಹಕ್ಕಿನ ಉಲ್ಲಂಘನೆ.
 • ಬಯೋಮೆಟ್ರಿಕ್ ಮಾಹಿತಿ ಮೂಲಕ ಖಾತ್ರಿಪಡಿಸಿಕೊಳ್ಳುವುದು ಗುರುತು ವಂಚನೆಯನ್ನು ಮಾತ್ರ ತಡೆಯಬಹುದೇ ಹೊರತು, ಸಬ್ಸಿಡಿ ಅರ್ಹರಿಗೇ ತಲುಪಿದೆ ಎಂಬುದನ್ನು ಖಾತ್ರಿಪಡಿಸುವುದಿಲ್ಲ. ಪಡಿತರ ಮತ್ತು ಪಿಂಚಣಿ ವ್ಯವಸ್ಥೆಯಲ್ಲಿ ಆಧಾರ್‌ನಿಂದಾಗಿ ಅರ್ಹರು ಹೊರಗುಳಿಯುವುದೇ ಹೆಚ್ಚು.
 • ಆಧಾರ್ ದಾಖಲೆ ಮತ್ತು ಬಳಕೆಯ ಮಾಹಿತಿ ನಾಗರಿಕರ ಚಲನವಲನದ ಮೇಲೆ ಕಣ್ಣಿಡಲು ಅವಕಾಶ ನೀಡುತ್ತದೆ. ಆ ಮೂಲಕ ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯಾಗುತ್ತದೆ. ವಿದೇಶಗಳಲ್ಲಿ ಇಂತಹ ಕಣ್ಗಾವಲು (ಸರ್ವೈಲೆನ್ಸ್) ವ್ಯವಸ್ಥೆ ಹೇಗೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿರುವ ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ.
 • ಸಂವಿಧಾನದ ೨೧ನೇ ಪರಿಚ್ಛೇದ ಪ್ರತಿಪಾದಿಸುವ ಆಯ್ಕೆ ಮತ್ತು ಸ್ವಇಚ್ಛೆಯ ಸ್ವಾತಂತ್ರ್ಯಕ್ಕೆ ಆಧಾರ್ ವ್ಯತಿರಿಕ್ತ. ಈ ಮಾಹಿತಿ ಸಂಗ್ರಹದ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಥವಾ ಹೊರಗುಳಿಯುವ ಆಯ್ಕೆ ಜನರಿಗೆ ಇರಬೇಕು.
 • ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮೂಲಕ ಆಧಾರ್ ಜೋಡಣೆಯಾಗದ ಖಾತೆಗಳನ್ನು ಸ್ಥಗಿತಗೊಳಿಸಲಾಯಿತು. ಅದು ನಾಗರಿಕರ ಆಯ್ಕೆಯನ್ನು ನಿರಾಕರಿಸಿದಂತೆ.
 • ಬಯೋಮೆಟ್ರಿಕ್ ಖಾತ್ರಿಪಡಿಸುವಿಕೆ ಅದರ ಮೂಲ ಉದ್ದೇಶವನ್ನೂ ಮೀರಿ ವಿವಿಧ ಸೇವೆ, ಸೌಲಭ್ಯಗಳಿಗೆ ವಿಸ್ತರಣೆ ಆಗಿರುವುದರಿಂದ ಕಾಯ್ದೆಯಲ್ಲಿನ ನಾಗರಿಕರ ಒಪ್ಪಿಗೆ ಕುರಿತ ಅಂಶಗಳು ಗೊಂದಲಕಾರಿ ಆಗಿವೆ. ಬ್ಯಾಂಕ್ ಮತ್ತು ಟೆಲಿಕಾಂ ಕಂಪನಿಗಳು ವ್ಯಕ್ತಿಗಳ ಒಪ್ಪಿಗೆ ಇಲ್ಲದೆ ಆಧಾರ್ ಜೋಡಣೆ ಮಾಡುತ್ತಿವೆ.
 • ಆಧಾರ್ ಕಾಯ್ದೆಯನ್ನು ಸಂವಿಧಾನಬಾಹಿರ ಎಂದು ರದ್ದುಪಡಿಸಬೇಕು.

ಆಧಾರ್ ಪರ ವಾದ

ಇದನ್ನೂ ಓದಿ : ಆಧಾರ್ ವ್ಯವಸ್ಥೆಯ ರೆಕ್ಕೆಪುಕ್ಕ ಕತ್ತರಿಸಿ ಜನರ ಆತಂಕ ದೂರಮಾಡಿದ ಸುಪ್ರೀಂ
 • ಸುಮಾರು ೯ ಸಾವಿರ ಕೋಟಿ ಅನುದಾನದೊಂದಿಗೆ ವಿಶಿಷ್ಟ ಗುರುತು ವ್ಯವಸ್ಥೆ ರಚಿಸಲಾಯಿತು. ಸ್ಮಾರ್ಟ್ ಕಾರ್ಡ್ ಸೇರಿದಂತೆ ಹಲವು ಆಯ್ಕೆಗಳು ಆಗ ಸರ್ಕಾರದ ಮುಂದಿದ್ದವು. ಆದರೆ, ಅಂತಿಮವಾಗಿ ಕೇಂದ್ರೀಕೃತ ವ್ಯವಸ್ಥೆಯನ್ನು ಆಯ್ಕೆಮಾಡಿಕೊಳ್ಳಲಾಯಿತು.
 • ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಆಧಾರ್ ವಿನ್ಯಾಸಗೊಳಿಸಲಾಗಿದೆ.
 • ಅದು ಅತ್ಯಂತ ಯೋಜಿತ ಮತ್ತು ಸುರಕ್ಷಿತ ವ್ಯವಸ್ಥೆ. ನೋಂದಣಿ ಮತ್ತು ಖಾತ್ರಿ ಪ್ರಕ್ರಿಯೆಗಳು ಉನ್ನತ ಸುರಕ್ಷತೆ ಹೊಂದಿದ್ದು, ಸಂಗ್ರಹಿಸಿದ ದತ್ತಾಂಶ ಸಂಪೂರ್ಣ ಸುರಕ್ಷಿತ.
 • ನ್ಯಾಯಸಮ್ಮತ ಹಂಚಿಕೆಗಿಂತ ವೈಯಕ್ತಿಕ ಹಕ್ಕುಗಳು ಹೆಚ್ಚಲ್ಲ. ಸುಮಾರು ಒಂದು ಸಾವಿರ ಕೋಟಿ ಸರ್ಕಾರದ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜನರಿಗಾಗಿ ಇರುವ ಸರ್ಕಾರದ ಅನುದಾನ ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ವ್ಯರ್ಥವಾಗಬಾರದು ಎಂದು ಕಾರಣಕ್ಕೆ ಆಧಾರ್ ಜಾರಿಗೊಳಿಸಲಾಗಿದೆ.
 • ಇದು ಬದುಕುವ ಹಕ್ಕು ವರ್ಸಸ್ ಖಾಸಗೀತನದ ಹಕ್ಕಿನ ಪ್ರಶ್ನೆ. ಅಂತಹ ಸಂದರ್ಭದಲ್ಲಿ ಬದುಕುವ ಹಕ್ಕಿಗೆ ಆದ್ಯತೆ ನೀಡಬೇಕು. ಬಡತನ ಕೂಡ ಮಾನವ ಹಕ್ಕು ಉಲ್ಲಂಘನೆ. ಆ ಹಿನ್ನೆಲೆಯಲ್ಲಿ ಅಧಿಕೃತ ಗುರುತು ಮಾನ್ಯತೆ ಕೂಡ ನಾಗರಿಕ ಮೂಲಭೂತ ಹಕ್ಕು.
 • ಆಧಾರ್‌ನಿಂದಾಗಿ ಯಾವುದೇ ಸೌಲಭ್ಯದಿಂದ ವಂಚಿತರಾದ ಬಗ್ಗೆ ಜನರಿಂದ ಯಾವ ದೂರೂ ಇಲ್ಲ. ಆದರೆ, ಕೆಲವು ಎನ್‌ಜಿಒ ಮತ್ತು ಸ್ವಹಿತಾಸಕ್ತಿಯ ಗುಂಪುಗಳು ಅಂತಹ ಮಾತು ಆಡುತ್ತಿವೆ.
 • ಯುಐಡಿಎಐ ಯಾವುದೇ ಐಪಿ ಅಥವಾ ಜಿಪಿಎಸ್ ಮಾಹಿತಿಯನ್ನು ಟ್ರ್ಯಾಕ್‌ ಮಾಡುವುದಿಲ್ಲ.
 • ಬ್ಯಾಂಕಿಂಗ್ ವಲಯದ ಹಣಕಾಸು ವಂಚನೆ ತಡೆಯಲು ಖಾತೆಗಳಿಗೆ ಆಧಾರ್ ಜೋಡಣೆ ಅನಿವಾರ್ಯ. ಜೋಡಣೆ ಮಾಡದ ಖಾತೆಗಳನ್ನು ಸ್ಥಗಿತಗೊಳಿಸುವದರಿಂದ ಹಣವನ್ನು ವಶಪಡಿಸಿಕೊಳ್ಳಲಾಗದು, ಬದಲಾಗಿ ಕೇವಲ ಖಾತೆಯ ನಿರ್ವಹಣೆಗೆ ನಿರ್ಬಂಧ ಹೇರಲಾಗುವುದು. ಹಾಗಾಗಿ ಅದು ಆಸ್ತಿ ಹಕ್ಕಿನ ಉಲ್ಲಂಘನೆಯಾಗದು. ಲೇವಾದೇವಿ ವ್ಯವಹಾರ ತಡೆಯುವ ಉದ್ದೇಶ ಕೂಡ ಇದರ ಹಿಂದಿದೆ.
 • ಆಧಾರ್ ಜೋಡಣೆಯಿಂದಾಗಿ ೧೧ ಲಕ್ಷ ನಕಲಿ ಪಾನ್ ಖಾತೆಗಳನ್ನು ರದ್ದು ಮಾಡಲಾಗಿದೆ.
 • ಭಯೋತ್ಪಾದಕರು ಮೊಬೈಲ್ ಬಳಸದಂತೆ ತಡೆಯಲು ಸಿಮ್‌ ಕಾರ್ಡಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಯಿತು.
 • ಆರ್ಟಿಐ ಕಾಯ್ದೆಯಂತೆ ಆಧಾರ್ ಕೂಡ ಖಾಸಗಿತನ ಹಕ್ಕಿನ ಸೀಮಿತ ನಿರ್ಬಂಧಗಳನ್ನು ಒಳಗೊಂಡಿದೆ. ಕಪ್ಪುಹಣ, ಹಣಕಾಸು ವಂಚನೆ ಮತ್ತು ಸರ್ಕಾರಿ ಅನುದಾನ ದುರ್ಬಳಕೆ ತಡೆಯಲು ಅಂತಹ ಕ್ರಮ ಅನಿವಾರ್ಯ.
 • ತನ್ನ ಮೂಲ ಆಶಯದಲ್ಲಿ ಆಧಾರ್ ಹಣಕಾಸು ಮಸೂದೆಯ ಯಾವುದೇ ಲೋಪಗಳನ್ನು ಸರಿಪಡಿಸಬೇಕೇ ವಿನಾ ಇಡಿಯಾಗಿ ಅದನ್ನು ರದ್ದುಪಡಿಸಬಾರದು.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More