ಆಧಾರ್ ತೀರ್ಪಿನ ಬಳಿಕ ಕೇಂದ್ರ ಸರ್ಕಾರ ಎದುರಿಸುತ್ತಿರುವ 6 ಸಮಸ್ಯೆಗಳು

ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್, ಸರ್ಕಾರಿ ಸೌಲಭ್ಯ ಪಡೆಯಲು ಮಾತ್ರ ಈ ಗುರುತಿನ ಚೀಟಿ ಪರಿಗಣಿಸಬೇಕು ಎಂಬ ಮಹತ್ವದ ಷರತ್ತು ವಿಧಿಸಿದೆ. ಇದು ಕೇಂದ್ರ ಸರ್ಕಾರ ಮತ್ತು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಂತಹ ಸಂಸ್ಥೆಗಳಿಗೆ ಹಲವು ಸವಾಲುಗಳನ್ನು ಒಡ್ಡಿದೆ

  1. ಮೊಬೈಲ್ ಸಂಖ್ಯೆ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಮಕ್ಕಳ ಶಾಲಾ ದಾಖಲಾತಿಗೆ, ಸಿಬಿಎಸ್ಇ ಅಥವಾ ಯುಜಿಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಚಿಕಿತ್ಸೆ ಪಡೆಯುವ ವಿಚಾರದಲ್ಲಿ ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಲ್ಲದೆ, ಖಾಸಗಿ ಸಂಸ್ಥೆಗಳಿಗೆ ಆಧಾರ್ ಬಯೋಮೆಟ್ರಿಕ್ ಮಾಹಿತಿ ನೀಡುವುದು ಕಾನೂನುಬಾಹಿರ. ಆಧಾರ್ ಪರಿಗಣಿಸಿ ನಾಗರಿಕ ಪೌರತ್ವ ನೀಡುವಂತಿಲ್ಲ. ಯಾವುದೇ ಖಾಸಗಿ ಸೌಲಭ್ಯಗಳನ್ನು ಪಡೆಯುವಾಗ ಗುರುತಿನ ಚೀಟಿ ತೋರಿಸುವುದು ಅನಗತ್ಯ ಎಂದು ಹೇಳಿದೆ.
  2. ಮುಖ್ಯವಾಗಿ, ಖಾಸಗಿ ಕಂಪನಿಗಳಿಗೆ ವಿಶಿಷ್ಟ ಗುರುತಿನ ಚೀಟಿಯ ಮೂಲ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದ ಆಧಾರ್ ಕಾಯ್ದೆಯ 57ನೇ ವಿಧಿಯನ್ನು ಕೋರ್ಟ್ ರದ್ದುಪಡಿಸಿದೆ. ಇದು ಸದ್ಯಕ್ಕೆ ಹಲವು ಗೊಂದಲಗಳನ್ನು ಉಂಟುಮಾಡಿದೆ.
  3. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, “ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಪಡೆಯುವುದನ್ನು ಕಾನೂನುಬದ್ಧಗೊಳಿಸಿದರೆ ಸಮಸ್ಯೆ ಇರುವುದಿಲ್ಲ,” ಎಂಬರ್ಥದ ಮಾತುಗಳನ್ನು ಹೇಳಿದ್ದಾರೆ. ಆದರೆ, ಇದು ಅಂದುಕೊಂಡಷ್ಟು ಸುಲಭವಿಲ್ಲ ಮತ್ತು ತಕ್ಷಣಕ್ಕೆ ಕಾರ್ಯಸಾಧುವಾಗುವಂತಹ ವಿಚಾರವೂ ಅಲ್ಲ. ಅದು ಸಂಸತ್ತಿನಲ್ಲಿ ಪ್ರಸ್ತಾಪವಾದ ನಂತರವಷ್ಟೇ ಕಾನೂನಾಗಿ ಮಾರ್ಪಾಡಾಗಲಿದೆ. ಕಾನೂನಿನ ಬಲ ನೀಡಿದರೂ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ತಳ್ಳಿಹಾಕಲು ಸಾಧ್ಯವಾಗುವುದಿಲ್ಲ ಎಂದು ಕಾನೂನು ಪರಿಣಿತರು ಹೇಳುತ್ತಿದ್ದಾರೆ. ಆಧಾರ್ ಕಾಯ್ದೆ ಸೆಕ್ಷನ್ 57 ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿರುವಾಗ ಅದಕ್ಕೆ ಕಾನೂನು ಬಲ ನೀಡುವುದು ಕೂಡ ಅಸಾಂವಿಧಾನಿಕವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
  4. ಆಧಾರ್ ಮಾಹಿತಿಯಿಂದಾಗಿಯೇ ರಿಲಯನ್ಸ್ ಜಿಯೋ, ಪೇಟಿಎಂನಂಥ ಕಂಪನಿಗಳು ಶೀಘ್ರವಾಗಿ ಬೆಳೆದವು ಎಂಬ ಆರೋಪವಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಇದಕ್ಕೆ ಹೊಡೆತ ಬೀಳಲಿದ್ದು, ಹೊಸ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಯಾವ ತಂತ್ರ ಅನುಸರಿಸಲಿವೆ ಎಂಬ ಕುತೂಹಲ ಮೂಡಿದೆ.
  5. ‘ರೀ ಥಿಂಕ್ ಆಧಾರ್’ ಎಂಬ ಪಕ್ಷಾತೀತ ಆಂದೋಲನವೊಂದು, "ಸರ್ಕಾರವು ಕೂಡಲೇ ಬ್ಯಾಂಕಿಂಗ್ ಮತ್ತು ಟೆಲಿಕಾಂ ಕಂಪನಿಗಳ ಬಳಿ ಇರುವ ಆಧಾರ್ ಮಾಹಿತಿಯನ್ನು ಅಳಿಸಿಹಾಕುವಂತೆ ಸೂಚಿಸಬೇಕು,” ಎಂದು ಒತ್ತಾಯಿಸಿದೆ. ಹೀಗಾಗಿ, ಈಗಾಗಲೇ ಖಾಸಗಿ ಕಂಪನಿಗಳೊಂದಿಗೆ ಹಂಚಿಕೊಂಡಿರುವ ಮಾಹಿತಿಯನ್ನು ಹಿಂಪಡೆಯಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.
  6. ಬ್ಯಾಂಕಿಂಗ್ ಮತ್ತು ಟೆಲಿಕಾಂ ಕಂಪನಿಗಳ ಬಳಿ ಇರುವ ಆಧಾರ್ ಮಾಹಿತಿ ಅಸಾಂವಿಧಾನಿಕ ಎಂದು ಕೋರ್ಟ್ ಹೇಳಿದಂತೆ, ಕಾಳಧನ ನಿಯಂತ್ರಣ ಕಾಯ್ದೆ ಮತ್ತು ದೂರಸಂಪರ್ಕ ಇಲಾಖೆ ಅಧಿಸೂಚನೆಗಳಿಗೂ ಮಾರ್ಪಾಡು ತರಬೇಕಿದೆ.
ಇದನ್ನೂ ಓದಿ : ಆಧಾರ್ ತೀರ್ಪಿಗೂ ಮುನ್ನ ಸುಪ್ರೀಂ ಕೋರ್ಟ್‌ನಲ್ಲಿ ಮಂಡನೆಯಾದ ಪರ-ವಿರೋಧ ವಾದವೇನು?
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More