ಅಯೋಧ್ಯೆ ಕುರಿತ ಸುಪ್ರೀಂ ತೀರ್ಪಿನಿಂದ ರಾಜಕೀಯ ಲಾಭ- ನಷ್ಟ ಯಾರಿಗೆ?

೨೦೧೯ರ ಚುನಾವಣೆಯಲ್ಲಿ ರಾಮನಾಮವಷ್ಟೇ ಹಿಂದೂ ಮತ ಬ್ಯಾಂಕ್‌ ಕ್ರೋಢೀಕರಣದ ಅಸ್ತ್ರವಾಗಿರದು;  ಹಲವು ಪುರಾಣ ಪುರುಷರು ವರ್ತಮಾನದ ರಾಜಕೀಯ ಅಖಾಡದಲ್ಲಿ ಕಾದಾಡುವ ಸಾಧ್ಯತೆ ಎದ್ದುಕಾಣುತ್ತಿದೆ. ಅಯೋಧ್ಯೆಗೆ ಸಂಬಂಧಿಸಿದ ತೀರ್ಪು ಇದಕ್ಕೆಲ್ಲ ತುಸು ಚುರುಕು ನೀಡಿದಂತಿದೆ

ದಶಕಗಳಿಂದ ಕಾನೂನು ಸಂಘರ್ಷಕ್ಕೆ ಒಡ್ಡಿಕೊಂಡಿರುವ ಅಯೋಧ್ಯೆಯ ರಾಮಮಂದಿರ ಮತ್ತು ಬಾಬರಿ ಮಸೀದಿ ಭೂಮಿ ವ್ಯಾಜ್ಯ, ಇತ್ತೀಚಿನ ದಶಕಗಳಲ್ಲಿ ರಾಜಕೀಯ ಮೇಲಾಟಕ್ಕೆ ತುತ್ತಾಗಿ ದೇಶದ ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸಿದೆ. ಜನಸಮುದಾಯಗಳ ಮಧ್ಯದ ಸಾಮರಸ್ಯ, ಸೌಹಾರ್ದ ಕದಡಿದೆ. ಮಂದಿರ-ಮಸೀದಿ ವಿಷಯದಲ್ಲಿ ಏನೇ ಘಟಿಸಿದರೂ ದುಗುಡ, ಆತಂಕಗಳಿಂದ ಎದುರುಗೊಳ್ಳುವುದು ದೇಶಕ್ಕೆ ಅಭ್ಯಾಸವಾಗಿಹೋಗಿದೆ. ಇಂಥ ಕಾರಣಕ್ಕಾಗಿಯೇ ೨೪ ವರ್ಷದ ಹಿಂದಿನ ತೀರ್ಪಿನ ಸಂಬಂಧ ಗುರುವಾರ (ಸೆ.೨೭) ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನೀಡಿದ ಆದೇಶ ಕುತೂಹಲ ಸೃಷ್ಟಿಸಿತ್ತು. “ನಮಾಝ್ ಅನ್ನು ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇನಲ್ಲ,’’ ಎನ್ನುವ ೧೯೯೪ರ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ.ಅಶೋಕ್‌ ಭೂಷಣ್, ನ್ಯಾ. ಅಬ್ದುಲ್‌ ನಜೀರ್ ಅವರಿದ್ದ‌ ತ್ರಿಸದಸ್ಯ ಪೀಠ ಎತ್ತಿಹಿಡಿದಿದ್ದು, ಮರುಪರಿಶೀಲನೆಗಾಗಿ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆನ್ನುವ ಬೇಡಿಕೆಯನ್ನು ತಿರಸ್ಕರಿಸಿತು.

ಬಾಬರಿ ಮಸೀದಿ ಸ್ಥಳ ಮತ್ತು ಸುತ್ತಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ೧೯೯೪ರಲ್ಲಿ ಸುಪ್ರೀಂ ಕೋರ್ಟ್ ಇಂಥದೊಂದು ತೀರ್ಪು ನೀಡಿದ ಬಳಿಕ, ೨೦೧೦ರಲ್ಲಿ ಅಲಹಾಬಾದ್‌ ಹೈಕೋರ್ಟ್ ಅಯೋಧ್ಯೆಯ ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಈ ೩ ಭಾಗಗಳು ರಾಮ್‌ ಲಲ್ಲಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್‌ ಮಂಡಳಿಗಳಿಗೆ ಸೇರುತ್ತವೆ ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಹಿಂದೂ, ಮುಸ್ಲಿಂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದೆದುರೇ ೧೯೯೪ರ ತೀರ್ಪಿಗೆ ಸಂಬಂಧಿಸಿದ ಮೊಕದ್ದಮೆಯೂ ಬಂದಿತು. “ಅಲಹಾಬಾದ್‌ ಹೈಕೋರ್ಟ್ ತೀರ್ಪಿನಲ್ಲಿ ಗುಮ್ಮಟದ ಕೆಳಗಿನ ಭೂಮಿ ಹಿಂದೂಗಳ ಪಾಲಿಗೆ ಹೋಗಿದೆ. ಆದ್ದರಿಂದ ೧೯೯೪ರ ತೀರ್ಪಿನ ಮರುಪರಿಶೀಲನೆಗಾಗಿ ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು,’’ ಎಂದು ಮುಸ್ಲಿಂ ಸಮುದಾಯ ಬೇಡಿಕೆ ಮಂಡಿಸಿತ್ತು. ಮಸೀದಿಯು ಮುಸ್ಲಿಂ ಸಮುದಾಯದವರ ಪ್ರಾರ್ಥನಾ ಸ್ಥಳ, ಧಾರ್ಮಿಕ ನಂಬಿಕೆಯ ಅವಿಭಾಜ್ಯ ಎಂದು ಋಜು ಮಾಡುವ ಮೂಲಕ ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡುವ ಪ್ರಯತ್ನ ಸಮುದಾಯದ ಮುಖಂಡರದ್ದಾಗಿತ್ತು.

ಅವರ ಈ ಬೇಡಿಕೆಯನ್ನೀಗ ನ್ಯಾ.ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ನಿರಾಕರಿಸಿದೆ. “ಪ್ರಾರ್ಥನೆಯನ್ನು ಮಸೀದಿಯಲ್ಲಷ್ಟೇ ಅಲ್ಲ, ಬಯಲಿನಲ್ಲೂ ಮಾಡಬಹುದು,’’ ಎನ್ನುವ ೧೯೯೪ರ ತೀರ್ಪನ್ನು ಎತ್ತಿಹಿಡಿದಿದೆ. ಮಾತ್ರವಲ್ಲ, “೧೯೯೪ರ ತೀರ್ಪು, ಭೂಸ್ವಾಧೀನ ಸಂದರ್ಭದಲ್ಲಿ ಮಾತ್ರ ಗಣನೆಗೆ ಬರುತ್ತದೆಯಾದ್ದರಿಂದ ಈ ತೀರ್ಪು ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಸೀದಿಯಷ್ಟೇ ಅಲ್ಲ, ಮಂದಿರ, ಚರ್ಚುಗಳ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ,’’ ಎಂದೂ ಕೋರ್ಟ್ ಹೇಳಿದೆ. ಆದಾಗ್ಯೂ, ನ್ಯಾ.ಅಬ್ದುಲ್‌ ನಜೀರ್ ಈ ಬಹುಮತದ ತೀರ್ಮಾನವನ್ನು ಒಪ್ಪಿಲ್ಲ. “ಬಹುಮತದ ತೀರ್ಪು ಬಹುಪಾಲು ಜನರನ್ನು ಮೆಚ್ಚಿಸುವಂತಿದೆ. ಅಲ್ಪಸಂಖ್ಯಾತ ತೀರ್ಪು ಅಲ್ಪಸಂಖ್ಯಾತರನ್ನು ಮೆಚ್ಚಿಸುತ್ತದೆ. ಅದೇನಿದ್ದರೂ ನಾವು ಎತ್ತಿದ ಸಮಸ್ಯೆಯನ್ನು ಸರ್ವೋಚ್ಚ ನ್ಯಾಯಾಲಯ ಪರಿಹರಿಸಿಲ್ಲ,’’ ಎಂದಿದ್ದಾರೆ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌. ತೀರ್ಪಿನ ಮರುಪರಿಶೀಲನೆಗಾಗಿ ಇಡೀ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆಂದು ಧವನ್‌ ವಾದಿಸಿದ್ದರು.

“ತೀರ್ಪು ಮುಸ್ಲಿಂ ಸಮುದಾಯಕ್ಕಾದ ಹಿನ್ನಡೆ. ಹಿಂದೂ ಸಂಘಟನೆಗಳಿಗೆ ದೊರಕಿದ ಗೆಲುವು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಪರಿವಾರಕ್ಕೆ ಇದರಿಂದ ಲಾಭವಾಗಲಿದೆ,’’ ಎಂದೆಲ್ಲ ಬಿಂಬಿಸಲಾಗುತ್ತಿದೆ. ಆದರೆ, ‘ಹಿನ್ನಡೆ’ ಎನ್ನುವುದನ್ನು ಮುಸ್ಲಿಂ ಸಮುದಾಯದ ಮುಖಂಡರೇ ಒಪ್ಪುತ್ತಿಲ್ಲ. “ಹಿನ್ನಡೆ ಖಂಡಿತ ಅಲ್ಲ,’’ ಎನ್ನುತ್ತಾರೆ ಹಿರಿಯ ವಕೀಲ, ಎಐಎಂಪಿಎಲ್‌ಬಿ ಸದಸ್ಯ ಜಫರ್ಯಾಬ್‌ ಜಿಲಾನಿ. ಮಾತ್ರವಲ್ಲ, ಇಂದಿನ ತೀರ್ಪಿನಿಂದ ಸಾಮಾಜಿಕ, ರಾಜಕೀಯವಾಗಿ ಯಾರಿಗಾದರೂ ಲಾಭ-ನಷ್ಟ ಆಗುವಂತೆ ಮೇಲ್ನೋಟಕ್ಕೆ ಕಾಣುವುದಿಲ್ಲ. ಆದರೆ, ೧೯೯೪ರ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದಲ್ಲಿ, ಅಂತಿಮ ವಿಚಾರಣೆ ಮತ್ತಷ್ಟು ಮುಂದಕ್ಕೆ ಹೋಗುವುದು ನಿಶ್ಚಿತವಾಗಿತ್ತು. ಈ ಬೇಡಿಕೆಯನ್ನು ತಿರಸ್ಕರಿಸಿರುವ ಕೋರ್ಟ್, ಅಂತಿಮ ವಿಚಾರಣೆ ಅಕ್ಟೋಬರ್ 29ರಂದು ಪ್ರಾರಂಭವಾಗುತ್ತದೆಂದು ಪ್ರಕಟಿಸಿದೆ. ಈ ಮೂಲಕ, ಪ್ರಕರಣದ ವಿಚಾರಣೆಯ ವೇಗವನ್ನು ಹೆಚ್ಚಿಸುವ ಸೂಚನೆ ರವಾನಿಸಿದೆ. ರಾಜಕೀಯ ಪಕ್ಷಗಳ ಎದೆಬಡಿತ, ರಣೋತ್ಸಾಹ ಹೆಚ್ಚಲು ಬಹುಶಃ ಇದೇ ಕಾರಣ. ಇದೇ ಅ.೨ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಿವೃತ್ತರಾಗಲಿದ್ದು, ಹೊಸ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ಆರಂಭಿಸಲಿರುವುದು ಇನ್ನೊಂದು ಗಮನಾರ್ಹ ಸಂಗತಿ.

“ವಿಚಾರಣೆಗೆ ಅಡಚಣೆ ಒಡ್ಡುತ್ತಿದ್ದವರಿಗೆ ಸೋಲಾಗಿದ್ದು ತೃಪ್ತಿ ತಂದಿದೆ. ರಾಮಜನ್ಮಭೂಮಿ- ಬಾಬ್ರಿ ಮಸೀದಿಗೆ ಸಂಬಂಧಿಸಿದ ವಿಚಾರಣೆ ಮಾರ್ಗ ಈಗ ಸರಾಗವಾಗಿದೆ ಎಂದಿದ್ದಾರೆ,’’ ವಿಶ್ವ ಹಿಂದೂ ಪರಿಷತ್‌ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌. ಆರ್ ‌ಎಸ್‌ಎಸ್‌ ಕೂಡ ಸುಪ್ರೀಂ ಆದೇಶವನ್ನು ಸ್ವಾಗತಿಸಿದೆ. ಈ ವಿಷಯದಲ್ಲಿ ಶೀಘ್ರ ತೀರ್ಪನ್ನು ನಿರೀಕ್ಷಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಕ್ಕಿಂತ ಗಮನ ಸೆಳೆದದ್ದು ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಪ್ರತಿಕ್ರಿಯೆ. “ಪ್ರಕರಣದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು,’’ ಎಂದಿದ್ದಾರೆ ಅವರು. ಬಿಜೆಪಿ ಪರಿವಾರ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪಿನ ‘ತುರ್ತು’ ನಿರೀಕ್ಷೆಯಲ್ಲಿರುವುದು ಈ ನಡೆಯಲ್ಲಿ ಎದ್ದುಕಾಣುತ್ತದೆ.

ತ್ವರಿತಗತಿಯಲ್ಲಿ ವಿಚಾರಣೆ ನಡೆದು ಮೂರ್ನಾಲ್ಕು ತಿಂಗಳಲ್ಲಿ ತೀರ್ಪು ಪ್ರಕಟವಾದಲ್ಲಿ ಮತ್ತು ಅದು ಹಿಂದೂ ಸಂಘಟನೆಗಳಿಗೆ ಪೂರಕವಾಗಿದ್ದಲ್ಲಿ, ಮುಂಬರುವ ೨೦೧೯ರ ಚುನಾವಣೆಯಲ್ಲಿ ತನಗೆ ವರವಾಗಲಿದೆ ಎನ್ನುವುದು ಬಿಜೆಪಿಯ ನಿರೀಕ್ಷೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಯಾವತ್ತೂ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುತ್ತಿರುವ ಮತ್ತು ಈಗಾಗಲೇ ಉದ್ದೇಶಿತ ಸ್ಥಳದಲ್ಲಿ ಕಲ್ಲು, ಇಟ್ಟಿಗೆಗಳನ್ನು ಪೇರಿಸಿಟ್ಟು ಆಗಾಗ ತನಗೆ ತಾನೇ ಹಾಕಿಕೊಂಡ ಗಡುವುಗಳನ್ನು ತಾನೇ ವಿಸ್ತರಿಸಿಕೊಳ್ಳುತ್ತಿರುವ ಪರಿವಾರ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ರಾಮನಾಮ ಮತ್ತು ರಾಮಮಂದಿರ ವಿಷಯವನ್ನು ಗರಿಷ್ಠ ನಗದು ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಅಪನಗದೀಕರಣ, ರಫೇಲ್‌ ಹಗರಣ, ಆಧಾರ್ ವಿವಾದ, ತೈಲ ಬೆಲೆ ವಿಪರೀತ ಹೆಚ್ಚಳ ಮುಂತಾದ ಹಲವು ಕಾರಣಗಳಿಂದ ಜನಾಕ್ರೋಶಕ್ಕೆ‌ ತುತ್ತಾಗಿರುವ ಮತ್ತು ಅದೆಲ್ಲ ಮುಂಬರುವ ಚುನಾವಣೆಯಲ್ಲಿ ‘ಆಡಳಿತ ವಿರೋಧಿ ಅಲೆ’ಯಾಗಿ ಅಪ್ಪಳಿಸಬಹುದು ಎಂದು ಆತಂಕಿಸುತ್ತಿರುವ ಬಿಜೆಪಿಗೆ ರಾಮ-ಮಂದಿರ ಎನ್ನುವ ಧಾರ್ಮಿಕ ವಿಷಯವೇ ಮುಂದಿನ ಗತಿ ಎನ್ನುವಂತಾಗಿದೆ. ಹಾಗೆಂದೇ, ‘ತ್ವರಿತ ವಿಚಾರಣೆ’ಗೆ ಮನವಿ ಸಲ್ಲಿಸುವ ತಂತ್ರಕ್ಕೆ ಮೊರೆ ಹೋಗಿರುವಂತಿದೆ.

ಈ ಮಧ್ಯೆ,“ಮುಸ್ಲಿಂ ಸಮುದಾಯಕ್ಕೆ ಆದ ಹಿನ್ನಡೆ ಎನ್ನುವುದು ಕಾಂಗ್ರೆಸ್ ಪಕ್ಷದ ಹಿನ್ನಡೆಯೂ ಹೌದು,’’ ಎನ್ನುವ ಅರ್ಥವನ್ನು ಪರಿವಾರದ ಹಿತಾಸಕ್ತರು ಬಿಂಬಿಸತೊಡಗಿದ್ದಾರೆ. ಕಾಂಗ್ರೆಸ್ ಪಾಳಯದ ಆತಂಕ ಕೂಡ ಇದೇ ಅರ್ಥ ಹೊಮ್ಮಿಸುತ್ತಿದೆ. ಈ ಕಾರಣಕ್ಕೇ ಈ ಪ್ರಕರಣದ (೧೯೯೪ರ ತೀರ್ಪಿನ) ವಿಚಾರಣೆಯನ್ನು ೨೦೧೯ರ ಲೋಕಸಭಾ ಚುನಾವಣೆ ಮುಗಿಯುವವರೆಗೂ ಮುಂದೂಡುವಂತೆ ಕಳೆದ ಡಿಸೆಂಬರರಿನಲ್ಲೇ ನ್ಯಾಯವಾದಿ, ಕಾಂಗ್ರೆಸ್ ಮುಖಂಡ ಕಪಿಲ್‌ ಸಿಬಲ್‌ ನ್ಯಾಯಲಯವನ್ನು ಕೋರಿದ್ದರು. ಒಂದೊಮ್ಮೆ ಪ್ರಕರಣದ ಅಂತಿಮ ವಿಚಾರಣೆ ವೇಗವಾಗಿ ನಡೆದು, ಹಿಂದೂ ಸಂಘಟನೆಗಳ ಪರ ತೀರ್ಪು ಪ್ರಕಟವಾದರೆ ಅದು ಬಿಜೆಪಿಗೆ ಪೂರಕವಾಗುತ್ತದೆ ಎನ್ನುವುದು ಅವರ ಭಯ ಇದ್ದಂತಿತ್ತು. ಇಂದು ತೀರ್ಪು ಪ್ರಕಟವಾಗುತ್ತಿದ್ದಂತೆ ಬಿಜೆಪಿ-ಪರಿವಾರದ ಅನೇಕರು ಕಪಿಲ್‌ ಕೋರಿಕೆಯನ್ನು ಚರ್ಚೆಯಲ್ಲಿ ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷದ ಭಯವನ್ನು ಜಾಹೀರುಗೊಳಿಸಲು ಪ್ರಯತ್ನಿಸಿದರು ಕೂಡ.

ರಾಜಕೀಯ ಪಕ್ಷಗಳ ತಂತ್ರ, ಲೆಕ್ಕಾಚಾರ ಏನೇ ಇರಲಿ. “ಸಾವಿರಾರು ಪುಟಗಳ ಕಡತ, ದಾಖಲೆಗಳನ್ನು ಹೊಂದಿರುವ ಈ ಪ್ರಕರಣವನ್ನು ಎಷ್ಟೇ ತ್ವರಿತಗತಿಯಲ್ಲಿ ವಿಚಾರಣೆಗೆ ಒಳಪಡಿಸಿದರೂ, ೨೦೧೯ರ ಮೇ ಒಳಗೆ (ಸಾರ್ವತ್ರಿಕ ಚುನಾವಣೆಗೆ ಮುನ್ನ) ಅಂತಿಮ ತೀರ್ಪು ಪ್ರಕಟವಾಗುವುದು ಅಸಂಭವ. ಆದ್ದರಿಂದ, ಅಯೋಧ್ಯೆಗೆ ಸಂಬಂಧಿಸಿದ ಇಂದಿನ ತೀರ್ಪು ಮತ್ತು ಅಂತಿಮ ವಿಚಾರಣೆ ನಂತರದ ತೀರ್ಪು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಹಿತ ಯಾವುದೇ ರಾಜಕೀಯ ಪಕ್ಷಕ್ಕೆ ಪೂರಕ ಅಥವಾ ಮಾರಕ ಆಗುವ ಸಾಧ್ಯತೆಯಿಲ್ಲ. ಹೆಚ್ಚೆಂದರೆ, ಪರಸ್ಪರ ದೋಷಾರೋಪಗಳ ಪಟ್ಟಿಯನ್ನು ಬೆಳೆಸಿಕೊಳ್ಳಬಹುದಷ್ಟೆ,’’ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತ.

ಒಂದೊಮ್ಮೆ ಬಿಜೆಪಿಯ ನಿರೀಕ್ಷೆಯಂತೆ ತ್ವರಿತ ವಿಚಾರಣೆ ನಡೆದು, ತೀರ್ಪು ಪ್ರಕಟವಾಗಿ, ಅದು ಹಿಂದೂ ಸಂಘಟನೆಗಳ ಪರ ಇದ್ದರೂ ಬಿಜೆಪಿಗೆ ಹೆಚ್ಚಿನ ಲಾಭ ತಂದುಕೊಟ್ಟೇ ಕೊಡುತ್ತದೆ ಎನ್ನಲಾಗದು. ರಾಮ ಮತ್ತು ರಾಮಮಂದಿರ ಹೆಸರಿನಲ್ಲಿ ಈಗಾಗಲೇ ಬಿಜೆಪಿ ಪರಿವಾರ ನೀಡಿದ ಭರವಸೆಗಳು ನಿಜವಾಗಿಲ್ಲ ಎನ್ನುವುದನ್ನು ದೇಶದ ಜನ ಹೆಚ್ಚೇ ಬಲ್ಲವರಾಗಿದ್ದಾರೆ. ಬಾಬರಿ ಧ್ವಂಸದ ನಂತರ ನಡೆದ ಚುನಾವಣೆಯಲ್ಲಿ ಒಂದಷ್ಟು ಲಾಭ ಆಗಿದ್ದರ ಹೊರತು ಉಳಿದಂತೆ ಬಿಜೆಪಿಗೆ ಎದ್ದು ಕಾಣುವಂಥ ಲಾಭವಾಗಿದ್ದಿಲ್ಲ. ವಿವಾದದ ‘ಉಗಮ ಸ್ಥಳ’ದಲ್ಲೇ ಬಿಜೆಪಿ ಲಾಗ ಹೊಡೆದ ನಿರ್ದಶನವೂ ಇದೆ. ಈಗ ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿನ್ಯಾಥರ ದರ್ಬಾರಿನ ಬಗ್ಗೆ ದೊಡ್ಡ ಮಟ್ಟದ ಅಸಹನೆ ವ್ಯಕ್ತವಾಗಲಾರಂಭಿಸಿದೆ. ಈ ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಶಿವಭಕ್ತ’ನ ವೇಷ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್‌ ‘ವಿಷ್ಣ ನಾಮ’ ಸ್ಮರಣೆ ಆರಂಭಿಸಿದ್ದಾರೆ. ಅಂದರೆ, ೨೦೧೯ರ ಚುನಾವಣೆಯಲ್ಲಿ ‘ರಾಮನಾಮ’ವಷ್ಟೇ ಹಿಂದೂ ಮತ ಬ್ಯಾಂಕ್‌ ಕ್ರೋಡೀಕರಣದ ಅಸ್ತ್ರವಾಗಿ ಉಳಿದಿರುವುದಿಲ್ಲ. ಹಲವು ‘ಪುರಾಣ ಪುರುಷರು’ ವರ್ತಮಾನದ ರಾಜಕೀಯ ಅಖಾಡದಲ್ಲಿ ಪರಸ್ಪರ ಕಾದಾಡುವ ಸಾಧ್ಯತೆ ಎದ್ದುಕಾಣುತ್ತಿದೆ. ಅಯೋಧ್ಯೆಗೆ ಸಂಬಂಧಿಸಿದ ಇಂದಿನ ತೀರ್ಪು ಇದಕ್ಕೆಲ್ಲ ತುಸು ಚುರುಕು ನೀಡಿದಂತೆ ತೋರುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More