ಅನೈತಿಕ ಸಂಬಂಧ ವಿಷಯದಲ್ಲಿ ಹೆಣ್ಣನ್ನು ಸ್ವತ್ತೆಂದು ಪರಿಗಣಿಸುವ ಕಾನೂನು ಅಮಾನ್ಯ

ವಿವಾಹಬಾಹಿರ ಅನೈತಿಕ ಸಂಬಂಧಗಳ ವಿಚಾರದಲ್ಲಿ ಹೆಣ್ಣನ್ನು ಸ್ವತ್ತು ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 497 ಅನ್ನು ಸುಪ್ರೀಂ ಕೋರ್ಟ್ ಅಮಾನ್ಯ ಮಾಡಿದೆ. 158 ವರ್ಷಗಳಿಂದ ಚಾಲ್ತಿಯಲ್ಲಿದ್ದ ಈ ಕಾನೂನಿಗೆ ಅಂತ್ಯ ಕಾಣಿಸುವ ಮೂಲಕ ಹೆಣ್ಣು ಕೂಡ ಗಂಡಿನಷ್ಟೇ ಸಮಾನಳು ಎಂಬುದನ್ನು ಒತ್ತಿ ಹೇಳಿದೆ

“ವ್ಯಭಿಚಾರವು ಅಪರಾಧ,” ಎಂದು ಘೋಷಿಸಿದ್ದ 158 ವರ್ಷಗಳಷ್ಟು ಹಳೆಯದಾದ ಭಾರತೀಯ ದಂಡಸಂಹಿತೆ ಸೆಕ್ಷನ್ 497 ಅಸಾಂವಿಧಾನಿಕ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾ ಎ ಎಂ ಖನ್ವೀಲ್ಕರ್, ಆರ್ ಎಫ್ ನಾರಿಮನ್, ಡಿ ವೈ ಚಂದ್ರಚೂಡ್, ಇಂದು ಮಲ್ಹೋತ್ರಾ ಅವರಿದ್ದ ನ್ಯಾಯಪೀಠ ನೀಡಿರುವ ತೀರ್ಪಿನ ಮುಖ್ಯವಾದ ಹತ್ತು ಅಂಶಗಳು ಹೀಗಿವೆ:

  • ಮಹಿಳೆಯರ ವೈಯಕ್ತಿಕ ಘನತೆ ಮತ್ತು ಸಮಾನತೆಗೆ ಧಕ್ಕೆ ತರುವಂತಹ ಯಾವುದೇ ಕಾನೂನಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ.
  • ಗಂಡ ಹೆಂಡತಿಯ ಮಾಲೀಕನಲ್ಲ. ವ್ಯಭಿಚಾರ ಮಾಡಿದ ವ್ಯಕ್ತಿಯನ್ನು ದುಷ್ಕರ್ಮಿ ಎನ್ನುವ, ವ್ಯಭಿಚಾರಕ್ಕೆ ಒಳಗಾದ ಮಹಿಳೆಯನ್ನು ಬಲಿಪಶು ಎಂದು ಪರಿಗಣಿಸುವ ಪುರಾತನ ಕಲ್ಪನೆಯನ್ನು ಇನ್ನೂ ಮುಂದುವರಿಸುವುದು ಒಳ್ಳೆಯದಲ್ಲ. ಹೀಗಾದರೆ ಮಹಿಳೆಯನ್ನು ಸ್ವತ್ತು ಎಂದು ಪರಿಗಣಿಸಿದಂತಾಗುತ್ತದೆ.
  • ಸಂವಿಧಾನದ 14ನೇ ವಿಧಿಯಂತೆ ಕಾನೂನಿನ ಎದುರು ಹೆಣ್ಣು ಗಂಡು ಎಂಬ ಭೇದ ಇರುವುದಿಲ್ಲ.
  • ತೀರ್ಪಿನಿಂದಾಗಿ ಅಪರಾಧ ದಂಡ ಸಂಹಿತೆಯ 198 (2) ಸೆಕ್ಷನ್ ಕೂಡ ಅಮಾನ್ಯ.
  • ಲೈಂಗಿಕ ಸ್ವಾಯತ್ತತೆಯನ್ನು ಗೌರವಿಸುವುದಕ್ಕೆ ಒತ್ತು ನೀಡಬೇಕು. ವಿವಾಹಿತ ಮಹಿಳೆಯನ್ನು ಸೆಕ್ಷನ್ 497 ಅಧೀನ ವ್ಯಕ್ತಿಯಂತೆ ನೋಡುತ್ತಿದೆ.
  • ಸೆಕ್ಷನ್ 497 ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದ್ದು ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರುತ್ತದೆ.
  • ತ್ರಿವಳಿ ತಲಾಖ್ ಕುರಿತಂತೆ ನ್ಯಾ. ನಾರಿಮನ್ ನೀಡಿದ್ದ ತೀರ್ಪನ್ನೇ ಆಧರಿಸಿ ಈ ಮಹತ್ವದ ತೀರ್ಪು ಹೊರಬಿದ್ದಿದೆ ಪ್ರಾಣಾಪಾಯ ತರದ ಹೊರತು ವಿವಾಹೇತರ ಸಂಬಂಧ ಅಪರಾಧವಲ್ಲ.
  • ವಿವಾಹೇತರ ಸಂಬಂಧ ಅತ್ಯಂತ ಖಾಸಗಿ ಸಂಗತಿ. ಇದನ್ನು ಅಪರಾಧವೆಂದು ಪರಿಗಣಿಸಿದರೆ ಖಾಸಗಿತನಕ್ಕೆ ಧಕ್ಕೆ.
  • ಅಸಂತುಷ್ಟ ವಿವಾಹವೇ ವಿವಾಹೇತರ ಸಂಬಂಧಕ್ಕೆ ಕಾರಣವಾಗಿರಬಹುದು.
  • ಚೀನಾ, ಜಪಾನ್, ಬ್ರೆಜಿಲ್ ನಂತಹ ದೇಶಗಳಲ್ಲಿ ವಿವಾಹೇತರ ಸಂಬಂಧ ಅಪರಾಧವಲ್ಲ ಎಂಬುದನ್ನು ನ್ಯಾಯಾಲಯ ಪ್ರಸ್ತಾಪಿಸಿದೆ
ಇದನ್ನೂ ಓದಿ : ಸಲಿಂಗ ಪ್ರೇಮ ಅಪರಾಧವಲ್ಲ; ಸುಪ್ರೀಂ ಕೋರ್ಟ್‌ನಿಂದ ಸೆಕ್ಷನ್‌ 377 ರದ್ದು
ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More