ಪೀಠೋಪಕರಣಗಳ ಖರೀದಿ ಅವ್ಯವಹಾರ ಸಾಬೀತು; ಅಧೀನ ಕಾರ್ಯದರ್ಶಿ ಅಮಾನತು

ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದಿದೆ ಎನ್ನಲಾಗಿರುವ ಪೀಠೋಪಕರಣ ಖರೀದಿಯಲ್ಲಿನ ಅಕ್ರಮಗಳು ಸಾಬೀತಾಗಿವೆ. ಕಡತಗಳ ಬೆನ್ನು ಬಿದ್ದಿರುವ ಅಧಿಕಾರಿಗಳ ತನಿಖಾ ತಂಡ ವಿವಿಧ ಸ್ವರೂಪದ ಅವ್ಯವಹಾರಗಳನ್ನು ಪತ್ತೆಹಚ್ಚಿದೆ. ಅಧಿಕಾರಿಗಳು ಹಣವನ್ನು ಹೇಗೆಲ್ಲ ಲಪಟಾಯಿಸಿದ್ದಾರೆ ಎಂಬ ವಿವರ ಇಲ್ಲಿದೆ

ಬೆಂಗಳೂರಿನ ಶಾಸಕರ ಭವನಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡ ಎರಡು ತಿಂಗಳ ಹಿಂದೆ ವಶಕ್ಕೆ ಪಡೆದಿದ್ದ ಕಡತಗಳ ಪರಿಶೀಲನೆ ಕಾರ್ಯ ಬಿರುಸಿನಿಂದ ಸಾಗಿದೆ. ಶಾಸಕರ ಭವನದಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳನ್ನು ಈ ತಂಡ ದಾಖಲೆಗಳ ಸಮೇತ ರುಜುವಾತುಪಡಿಸಿದೆ. ಪೀಠೋಪಕರಣಗಳ ಖರೀದಿಯಲ್ಲಿ ಸುಳ್ಳು ಬಿಲ್ಲುಗಳನ್ನು ದೃಢೀಕರಿಸಿ ಹಣ ಲಪಟಾಯಿಸಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಪೈಕಿ, ಶಾಸಕರ ಭವನದಲ್ಲಿರುವ ಹೋಮಿಯೋಪತಿ ಚಿಕಿತ್ಸಾಲಯದ ಪೀಠೋಪಕರಣಗಳ ಖರೀದಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಿದೆ. ಹೋಮಿಯೋಪತಿ ಚಿಕಿತ್ಸಾಲಯದ ನಿರ್ದಿಷ್ಟ ಪ್ರಕರಣದಲ್ಲಿ ಶಾಸಕರ ಭವನದ ಖರೀದಿ ಮತ್ತು ನಿರ್ವಹಣೆ ಶಾಖೆಯ ಅಧೀನ ಕಾರ್ಯದರ್ಶಿ‌ ಪುಟ್ಟ ಓಬಳರೆಡ್ಡಿ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ಕರ್ನಾಟಕ ವಿಧಾನಸಭೆ ಸಚಿವಾಲಯದ ನಿರ್ದೇಶಕರಾದ ವಿಶಾಲಾಕ್ಷಿ ಅವರು, ೨೦೧೮ರ ಸೆ.೨೬ರಂದು ಈ ಆದೇಶ ಹೊರಡಿಸಿದ್ದಾರೆ.

ಹೋಮಿಯೋಪತಿ ಚಿಕಿತ್ಸಾಲಯಕ್ಕೆ ಪೀಠೋಪಕರಣ ಖರೀದಿ ಸಂಬಂಧ ೩ ಸಂಸ್ಥೆಗಳಿಂದ ಕಡಿಮೆ ದರ ಪಟ್ಟಿ ತರಿಸಿ, ಆ ಪೈಕಿ ಕಡಿಮೆ ದರ ನಮೂದಿಸಿರುವ ಕೊಹಿನೂರ್ ಫರ್ನಿಚರ್ಸ್‌ರಿಂದ ಪೀಠೋಪಕರಣಗಳನ್ನು ಖರೀದಿಸಲಾಗಿತ್ತು. ಆದರೆ, ಸಲ್ಲಿಸಿದ್ದ ಬಿಲ್‌ನಲ್ಲಿ ಸರಬರಾಜು ಮಾಡಿದ ಸಂಸ್ಥೆಯ ಮೊಹರು ಇರಲಿಲ್ಲ. ಅಲ್ಲದೆ, ವಾಸ್ತವದಲ್ಲಿ ಚಿಕಿತ್ಸಾಲಯಕ್ಕೆ ಪೀಠೋಪಕರಣಗಳನ್ನು ಸರಬರಾಜು ಮಾಡಿರಲಿಲ್ಲ ಎಂಬುದನ್ನು ಅಧಿಕಾರಿಗಳ ತಂಡ ತನಿಖೆ ವೇಳೆಯಲ್ಲಿ ದೃಢಪಡಿಸಿತ್ತು. ಹಾಗೆಯೇ, ಸಂಸ್ಥೆ ಸರಬರಾಜು ಮಾಡಿರುವ ಪೀಠೋಪಕರಣಗಳನ್ನು ದಾಸ್ತಾನಿಗೆ ತೆಗೆದುಕೊಳ್ಳಲಾಗಿದೆ ಎಂದು ಕಡತದಲ್ಲಿ ನಮೂದಿಸಿರಲಿಲ್ಲ. ಆದರೂ ಬಿಲ್‌ನ ಹಿಂಬದಿ ಪೀಠೋಪಕರಣ ಸರಬರಾಜು ಮಾಡಲಾಗಿದೆ ಎಂದು ನಮೂದಿಸಿ ಅದನ್ನು ದೃಢೀಕರಿಸಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಹೋಮಿಯೋಪತಿ ಚಿಕಿತ್ಸಾಲಯಕ್ಕೆ ಯಾವುದೇ ಪೀಠೋಪಕರಣಗಳು ಸರಬರಾಜು ಆಗಿಲ್ಲ ಎಂದು ವೈದ್ಯಾಧಿಕಾರಿಗಳು ತನಿಖಾ ತಂಡಕ್ಕೆ ಮಾಹಿತಿ ಒದಗಿಸಿರುವುದು ದಾಖಲೆಯಿಂದ ಗೊತ್ತಾಗಿದೆ.

ಅಮಾನತು ಆದೇಶದ ಪ್ರತಿ

“ಪೀಠೋಪಕರಣಗಳು ಸರಬರಾಜಾಗಿರುವುದನ್ನು ಖಾತರಿಪಡಿಸಿಕೊಳ್ಳದೆಯೇ ಸುಳ್ಳು ಬಿಲ್‌ಗಳನ್ನು ಅಧೀನ ಕಾರ್ಯದರ್ಶಿ ಪುಟ್ಟ ಓಬಳರೆಡ್ಡಿ ಅವರು ನಿಯಮಬಾಹಿರವಾಗಿ ದೃಢೀಕರಿಸಿದ್ದಾರೆ. ೧೯೬೬ರ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿಗಳನ್ವಯ ಮೇಲ್ನೋಟಕ್ಕೆ ದುರ್ನಡತೆ ಎಸಗಿದ್ದಾರೆ ಎಂದು ಕಂಡುಬರುತ್ತದೆ. ೧೯೫೭ರ ನಿಯಮ ಪ್ರಕಾರ, ಪುಟ್ಟ ಓಬಳರೆಡ್ಡಿ ಅವರ ವಿರುದ್ಧದ ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ,” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ : ಶಾಸಕರ ಭವನದಲ್ಲಿ ಅಕ್ರಮ ಆರೋಪ; ವಿಧಾನಸಭೆ ಸಚಿವಾಲಯ ಅಧಿಕಾರಿಗಳಿಂದ ಕಡತ ಶೋಧ!

ಈ ನಡುವೆ, ಶಾಸಕರ ಭವನದಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮ ಪ್ರಕರಣಗಳನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಬೆನ್ನತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆದಿರುವ ಹಾಸಿಗೆ, ದಿಂಬು, ಬೆಡ್‌ ಶೀಟ್‌, ಸೊಳ್ಳೆ ಪರದೆ, ಪೀಠೋಪಕರಣ ಖರೀದಿ ಪ್ರಕ್ರಿಯೆ ಮತ್ತು ಕೊಠಡಿಗಳ ದುರಸ್ತಿ, ನವೀಕರಣ ಕಾಮಗಾರಿಗಳಿಗೆ ಆಗಿರುವ ವೆಚ್ಚ ಮತ್ತು ಖಾಸಗಿ ಕಂಪನಿಗಳಿಗೆ ಪಾವತಿಯಾಗಿರುವ ಮೊತ್ತದ ಕುರಿತು ಲೆಕ್ಕ ತಪಾಸಣೆ ನಡೆಸಲು ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ಭವನದಲ್ಲಿಯೇ ಬೀಡು ಬಿಟ್ಟಿರುವ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡ, ಕಡತಗಳ ಶೋಧಕಾರ್ಯವನ್ನು ಮುಂದುವರಿಸಿದೆ. ಈಗಾಗಲೇ ವಶಕ್ಕೆ ಪಡೆದಿರುವ ೧೯೮ಕ್ಕೂ ಹೆಚ್ಚು ಕಡತಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.

ಈ ಹಿಂದೆ ಇವೇ ಕಡತಗಳನ್ನು ತಪಾಸಣೆಗೆ ಒಪ್ಪಿಸುವಂತೆ ಹಿರಿಯ ಅಧಿಕಾರಿಗಳ ತಂಡ ಸೂಚಿಸಿದ್ದರೂ ಶಾಸಕರ ಭವನದ ಕೆಲ ಅಧಿಕಾರಿಗಳು ಒಪ್ಪಿರಲಿಲ್ಲ. ಕಡತಗಳು ಶಾಖೆಯಲ್ಲಿ ಲಭ್ಯ ಇಲ್ಲ ಎಂದು ಸಬೂಬು ನೀಡಲಾಗುತ್ತಿತ್ತು. ಹೀಗಾಗಿ, ಅನಿರೀಕ್ಷಿತ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕೆಲ ಖಾಸಗಿ ಕಂಪನಿಗಳಿಗೆ ಸೇರಿರುವ ಸೀಲುಗಳು, ಇನ್‌ವಾಯ್ಸ್‌ಗಳು ಕೂಡ ಕಡತಗಳ ಶೋಧ ಕಾರ್ಯಾಚರಣೆ ವೇಳೆಯಲ್ಲಿ ದೊರೆತಿವೆ ಎಂದು ಮೂಲಗಳು ‘ದಿ ಸ್ಟೇಟ್‌’ಗೆ ತಿಳಿಸಿವೆ.

ಕಡತಗಳನ್ನು ತನಿಖಾ ತಂಡಕ್ಕೆ ಒಪ್ಪಿಸಲು ನಿರಾಕರಿಸಿದ್ದ ಅಧಿಕಾರಿಗಳಿಂದಲೇ ಬಲವಂತವಾಗಿ ಶಾಸಕರ ಭವನದಲ್ಲಿನ ಅಲ್ಮೇರಾಗಳನ್ನು ತೆಗೆಸಿ, ಅಲ್ಲಿಂದಲೂ ಬಹು ಮುಖ್ಯ ಕಡತಗಳನ್ನು ವಶಕ್ಕೆ ಪಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More