ಇನ್ನುಮುಂದೆ ಭೂವಿವಾದಗಳಿಗೆ ಕೋಮು ಬಣ್ಣ ಹಚ್ಚುವಂತಿಲ್ಲ: ಸುಪ್ರೀಂ ಕೋರ್ಟ್ ಕಟ್ಟಪ್ಪಣೆ

ಧಾರ್ಮಿಕ ಸ್ಥಳ ಎಂಬ ಕಾರಣಕ್ಕೆ ಭೂಮಿ ವಶಪಡಿಸಿಕೊಳ್ಳುವಿಕೆ ತಡೆಯಲಾಗದು ಎಂಬ 1994ರ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಇದು, ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದವನ್ನು ಧಾರ್ಮಿಕತೆಯಿಂದ ಅಚೆಗಿರಿಸಿ ವಿಚಾರಣೆ ನಡೆಸಲು ದಾರಿ ಮಾಡಿಕೊಟ್ಟಿದೆ

"ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ,” ಎಂಬ ೧೯೯೪ರ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲನೆಗಾಗಿ ವಿಸ್ತೃತ ಪೀಠಕ್ಕೆ ಒಪ್ಪಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ (ಸೆ.27) ಮಹತ್ವದ ತೀರ್ಪು ನೀಡಿದೆ. ಅ ಮೂಲಕ, ಮುಸ್ಲಿಮರಿಗೆ ನಮಾಜ್‌ ಮಾಡಲು ಮಸೀದಿ ಅನಿವಾರ್ಯವಲ್ಲ ಮತ್ತು ಮಸೀದಿ, ದೇವಾಲಯ, ಚರ್ಚುಗಳ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ ಎನ್ನುವ ೧೯೯೪ರ ಅಯೋಧ್ಯೆಯ ಬಾಬರಿ ಮಸೀದಿ-ರಾಮಮಂದಿರ ವಿವಾದ ಕುರಿತ ತೀರ್ಪನ್ನು ವಿಸ್ತೃತ ಪೀಠಕ್ಕೆ ಕೊಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದೇ ವೇಳೆ, ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗ ಹೌದೋ, ಅಲ್ಲವೋ ಎನ್ನುವ ವಿಷಯ ಅಯೋಧ್ಯೆಯ ವಿವಾದಾಸ್ಪದ ರಾಮಜನ್ಮಭೂಮಿ -ಬಾಬರಿ ಮಸೀದಿ ಭೂ ಒಡೆತನದ ಪ್ರಕರಣವನ್ನು ತೀರ್ಮಾನಿಸಲು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಈ ತೀರ್ಪು ನೀಡಿದೆ.

ಆಯೋಧ್ಯೆಯ ಭೂ ಒಡೆತನದ ಸಿವಿಲ್‌ ವಿವಾದವನ್ನು ಪರಿಹರಿಸಲು ಸಾಕ್ಷ್ಯಗಳು ಮುಖ್ಯವಾಗುತ್ತವೆಯೇ ಹೊರತು ವಿವಾದಾಸ್ಪದ ಭೂ ಒಡೆತನದ ವಿಚಾರಣೆಯ ಸಂದರ್ಭದಲ್ಲಿ ನೀಡಲಾಗಿದ್ದ ತೀರ್ಪಿನ ಉಲ್ಲೇಖವಲ್ಲ ಎಂದು ೨:೧ರ ಅನುಪಾತದ ತೀರ್ಪಿನಲ್ಲಿ ತಿಳಿಸಲಾಗಿದೆ. ತೀರ್ಪಿನಿಂದಾಗಿ ಅಯೋಧ್ಯೆಯ ವಿವಾದಾಸ್ಪದ ಭೂಮಿಯ ಒಡೆತನದ ಕುರಿತಾದ ವಿಚಾರಣೆಯನ್ನು ನಡೆಸಲು ಇದ್ದ ಅಡ್ಡಿ ನಿವಾರಣೆಯಾಗಿದ್ದು, ಅಕ್ಟೋಬರ್‌ ೨೯ರಿಂದ ಭೂಒಡೆತನದ ಕುರಿತಾದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಳ್ಳಲಿದೆ.

ಪೀಠವು ಎರಡು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹಾಗೂ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ಬಹುಮತದ ತೀರ್ಪನ್ನು ಅಶೋಕ್‌ ಭೂಷಣ್‌ ನ್ಯಾಯಾಲಯದಲ್ಲಿ ಓದಿದರು. ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಎಸ್ ಅಬ್ದುಲ್‌ ನಜೀರ್‌ ಅವರು ಪ್ರತ್ಯೇಕ ತೀರ್ಪನ್ನು ನೀಡಿದ್ದು, ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗ ಹೌದೋ, ಅಲ್ಲವೋ ಎನ್ನುವ ಬಗ್ಗೆ ವಿಸ್ತೃತ ವಿಚಾರಣೆಯ ಅಗತ್ಯವಿದ್ದು, ಧಾರ್ಮಿಕ ನಂಬಿಕೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಆದರೆ, ಬಹುಮತದ ತೀರ್ಪಿನಲ್ಲಿ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರು, ೧೯೯೪ರ ಐವರು ನ್ಯಾಯಮೂರ್ತಿಗಳ ಪೀಠ ನೀಡಿದ ತೀರ್ಪಿನ ಹಿನ್ನೆಲೆಯನ್ನು ನಾವು ಅರಿಯಬೇಕು ಎಂದು ಹೇಳುವ ಮೂಲಕ, ೯೪ರ ತೀರ್ಪನ್ನು ಭೂವಿವಾದದ ವಿಚಾರಣೆಗೆ ಅನ್ವಯಿಸುವ ಅಗತ್ಯವಿಲ್ಲ ಎನ್ನುವುದನ್ನು ಖಚಿತಪಡಿಸಿದರು. ಆಗ, ಇಸ್ಮಾಯಿಲ್‌ ಫಾರೂಖಿ ಪ್ರಕರಣದಲ್ಲಿ ನೀಡಿದ್ದ ತೀರ್ಪಿನಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವ ವೇಳೆ ಮಸೀದಿ, ಮಂದಿರ, ಚರ್ಚ್‌ ಮುಂತಾಗಿ ಧಾರ್ಮಿಕ ಸ್ಥಳಗಳೆನ್ನುವ ಹಿನ್ನೆಲೆಯಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಪ್ರಸಕ್ತ ತೀರ್ಪು ಸಹ ಇದನ್ನು ಎತ್ತಿಹಿಡಿದಿದ್ದು, ಇದರಿಂದ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಭೂಮಿ, ಕಟ್ಟಡಗಳ ರಕ್ಷಣೆ ಪಡೆಯುವ, ವಿವಾದಾಸ್ಪದಗೊಳಿಸುವ, ನ್ಯಾಯಿಕ ಪ್ರಕ್ರಿಯೆಗಳನ್ನು ವಿಳಂಬಗೊಳಿಸುವ ಪ್ರಯತ್ನಗಳು ವಿಫಲವಾಗಲಿವೆ. ಸಹಜವಾಗಿಯೇ ಈ ತೀರ್ಪು ದೂರಗಾಮಿ ಪರಿಣಾಮಗಳಿಗೆ ಕಾರಣವಾಗಲಿದ್ದು, ಭೂವಿವಾದಗಳಿಗೆ ಕೋಮುಬಣ್ಣವನ್ನು ಹಚ್ಚುವ ಪ್ರಯತ್ನಗಳಿಗೆ ಹಿನ್ನೆಡೆಯುಂಟು ಮಾಡಲಿದೆ.

ಇದನ್ನೂ ಓದಿ : ಬಾಬರಿ ಮಸೀದಿ ಪ್ರಕರಣ; ಲೆಬರ್ಹಾನ್ ಆಯೋಗದ ವರದಿ ಈಗಲೂ ಪ್ರಸ್ತುತ ಏಕೆ?

ಅಲಹಾಬಾದ್‌ ಹೈಕೋರ್ಟ್‌ ೨೦೧೦ರಲ್ಲಿ ನೀಡಿದ್ದ ತೀರ್ಪಿನ ಕುರಿತಾಗಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡ ಸಂದರ್ಭದಲ್ಲಿ, ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗ ಹೌದೋ-ಅಲ್ಲವೋ ಎನ್ನುವ ಪ್ರಶ್ನೆಯು ಪೀಠದ ಮುಂದೆ ಎದುರಾಗಿತ್ತು. ತನ್ನ ೨೦೧೦ರ ತೀರ್ಪಿನಲ್ಲಿ ಅಲಹಾಬಾದ್‌ ಕೋರ್ಟ್ ರಾಮಜನ್ಮಭೂಮಿ-ಬಾಬ್ರಿ ಮಸೀದಿಯ‌ ವಿವಾದಾಸ್ಪದ ೨.೭೭ ಎಕರೆ ಭೂಪ್ರದೇಶವನ್ನು ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾಡ ಹಾಗೂ ರಾಮ್‌ ಲಲ್ಲಾ ನಡುವೆ ಮೂರು ಸಮಭಾಗಗಳಾಗಿ ಹಂಚುವಂತೆ ತೀರ್ಪು ನೀಡಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More