ಅಕ್ರಮ ಸಂಬಂಧ ಕುರಿತ ತೀರ್ಪಿನ ಮೂಲಕ ಮಹಿಳೆ ಪುರುಷನ ಸ್ವತ್ತಲ್ಲವೆಂದ ಸುಪ್ರೀಂ

ವ್ಯಕ್ತಿಯ ಗೌರವ ಮತ್ತು ಮಹಿಳಾ ಸಮಾನತೆಯ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಕಾಯ್ದೆ, ಕಾನೂನನ್ನು ಸಾಂವಿಧಾನಿಕವೆಂದು ಪರಿಗಣಿಸಲು ಸಾಧ್ಯವಿಲ್ಲ; ಪತಿಯು ಪತ್ನಿಯ ಒಡೆಯನಲ್ಲ, ಮಹಿಳೆ ಪುರುಷನ ಚರಾಸ್ತಿಯಲ್ಲ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ

ಅಕ್ರಮ ಸಂಬಂಧ ಕ್ರಿಮಿನಲ್‌ ಅಪರಾಧ ಅಲ್ಲವೆಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸುತ್ತಿದ್ದ ಐಪಿಸಿ ಸೆಕ್ಷನ್‌ 497 ಅನ್ನು ಐವರು ನ್ಯಾಯಮೂರ್ತಿಗಳನ್ನೊಂಡ ಪೀಠ ರದ್ದುಗೊಳಿಸಿದ್ದು, ಆ ಮೂಲಕ, ಲಿಂಗ ಸಮಾನತೆಯನ್ನು ಎತ್ತಿಹಿಡಿದಿದೆ. ಅಕ್ರಮ ಸಂಬಂಧದ ಬಗೆಗಿನ ಒಮ್ಮತದ ತೀರ್ಪುಗಳಲ್ಲಿ ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 158 ವರ್ಷಗಳ ಹಿಂದಿನ ಕಾನೂನು ಸಾಂವಿಧಾನಿಕವಾಗಿ ಒಪ್ಪಿತವಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠವು, ಲೈಂಗಿಕ ವಿಚಾರದಲ್ಲಿ ವೈಯಕ್ತಿಯ ಸ್ವಾತಂತ್ರ್ಯದ ಹಕ್ಕು ಮತ್ತು ಸಮಾನತೆಯ ಹಕ್ಕುಗಳನ್ನು ಉಲ್ಲೇಖಿಸಿದೆ.

ಪತಿಯೊಬ್ಬ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಪುರುಷನ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದನ್ನು ಅಸಾಂವಿಧಾನಿಕವೆಂದು ಕರೆದಿರುವ ಪೀಠವು, ಸಿಆರ್‌ಪಿಸಿ ಸೆಕ್ಷನ್‌ 198(1) ಮತ್ತು 198 (2)ಗಳನ್ನು ಅಸಿಂಧು ಎಂದು ಪರಿಗಣಿಸಿ ತೀರ್ಪು ನೀಡಿದೆ. ಅಕ್ರಮ ಸಂಬಂಧವು ವಿವಾಹ ವಿಚ್ಛೇದನ ಹಾಗೂ ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದ ಸಿವಿಲ್ ಮೊಕದ್ದಮೆಗಳಿಗೆ ಆಧಾರವಾಗಬಹುದೇ ಹೊರತು ಕ್ರಿಮಿನಲ್‌ ಅಪರಾಧ ಅಲ್ಲವೆಂದು ಮುಖ್ಯ ನ್ಯಾ.ದೀಪಕ್‌ ಮಿಶ್ರಾ ಹೇಳಿದ್ದಾರೆ.

“ಅಕ್ರಮ ಸಂಬಂಧವು ಸಾಮಾಜಿಕ ತಪ್ಪುಗಳಿಗೆ ನೆಲೆ ಒದಗಿಸಬಹುದು. ಸಂಸಾರ ನಾಶ ಮಾಡಲು ಸಾಮಾಜಿಕವಾಗಿ ಯಾವುದೇ ಪರವಾನಗಿ ಇಲ್ಲ. ಆದರೆ, ಅಕ್ರಮ ಸಂಬಂಧ ಕ್ರಿಮಿನಲ್‌ ಅಪರಾಧ ಅಲ್ಲ,” ಎಂದು ಮುಖ್ಯ ನ್ಯಾ.ದೀಪಕ್‌ ಮಿಶ್ರಾ ತಿಳಿಸಿದ್ದಾರೆ. ಪತ್ನಿಯು ಪತಿಯ ಸ್ವತ್ತಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯ ನ್ಯಾ.ಮಿಶ್ರಾ ಅವರು, “ವ್ಯಕ್ತಿಯ ಗೌರವ ಮತ್ತು ಮಹಿಳಾ ಸಮಾನತೆಯ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಕಾಯ್ದೆ, ಕಾನೂನು ಸಾಂವಿಧಾನಿಕವೆಂದು ಪರಿಗಣಿಸಲು ಸಾಧ್ಯವಿಲ್ಲ. ಪತಿಯು ಪತ್ನಿಯ ಒಡೆಯನಲ್ಲ. ಅಕ್ರಮ ಸಂಬಂಧ ಹತ್ಯೆಗೆ ಅಥವಾ ಆತ್ಮಹತ್ಯೆಗೆ ಕಾರಣವಾದ ಸಂದರ್ಭದಲ್ಲಿ ಮಾತ್ರ ಅದೊಂದು ಕ್ರಿಮಿನಲ್‌ ಅಪರಾಧವಾಗಿ ಪರಿಗಣಿಸಬಹುದು,” ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸುತ್ತಿದ್ದ ಸೆಕ್ಷನ್‌ 497 ಅನ್ನು ಪುರಾತನ ಮತ್ತು ಒಪ್ಪಿತವಲ್ಲದ ಕಾನೂನು ಎಂದು ವ್ಯಾಖ್ಯಾನಿಸಿರುವ ನ್ಯಾ.ನಾರಿಮನ್‌ ಅವರು, “158 ವರ್ಷಗಳ ಹಿಂದಿನ ಈ ಕಾನೂನು ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ,” ಎಂದು ಹೇಳಿದ್ದಾರೆ. ಇದೇ ವೇಳೆ, ತಮ್ಮ ತೀರ್ಪಿನ ಸಾರಾಂಶ ತಿಳಿಸಿದ ನ್ಯಾ.ಚಂದ್ರಚೂಡ್ ಅವರು, “ಸೆಕ್ಷನ್‌ 497 ಪುರುಷ ಪ್ರಧಾನ ಸಮಾಜದ ಲಿಂಗ ತಾರತಮ್ಯ ಎತ್ತಿಹಿಡಿದಿದೆ. ಮಹಿಳೆಯ ಖಾಸಗಿತನಕ್ಕೆ ಧಕ್ಕೆ ಉಂಟುಮಾಡಿದೆ. ಸಮಾಜವು ಪುರುಷ ಮತ್ತು ಮಹಿಳೆಯ ನೈತಿಕತೆ ಬಗ್ಗೆ ಭಿನ್ನ ನಿಲುವು ಹೊಂದಿದೆ. ಬ್ರಿಟಿಷರ ಕಾನೂನು ಪೂರ್ವಗ್ರಹದಿಂದ ಕೂಡಿದ್ದು, ಮಹಿಳೆಯ ವೈಯಕ್ತಿಯ ಧ್ವನಿಯನ್ನು ಹತ್ತಿಕ್ಕಿದೆ,” ಎಂದು ಹೇಳಿದ್ದಾರೆ.

ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿರುವ ಇಂದು ಮಲ್ಹೋತ್ರ ಅವರು, ಸೆಕ್ಷನ್‌ 497 ನ್ಯಾಯಸಮ್ಮತವಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಬ್ರಿಟಿಷರ ಕಾಲದ ಕಾನೂನು ಸಾಂವಿಧಾನಿಕವಾಗಿ ರೂಪಿಸಲ್ಪಟ್ಟ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದೆ. ಸಂವಿಧಾನವು ವ್ಯಕ್ತಿಯ ಖಾಸಗಿತನ ಮೂಲಭೂತ ಹಕ್ಕೆಂದು ಪರಿಗಣಿಸುತ್ತದೆ. ಆ ಮೂಲಕ, ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸಲಾಗದು,” ಎಂದು ತಿಳಿಸಿದ್ದಾರೆ.

ಲಿಂಗ ತಾರತಮ್ಯಕ್ಕೆ ಒತ್ತು ನೀಡುವ ಐಪಿಸಿ ಸೆಕ್ಷನ್‌ 497 ಅನ್ನು ಪ್ರಶ್ನಿಸಿ ಕೇರಳದ ಜೋಸೆಫ್ ಶೈನ್‌ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. “ಬ್ರಿಟಿಷರು ರೂಪಸಿದ ಕಾನೂನಿನಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಅದು ನ್ಯಾಯಸಮ್ಮತವಲ್ಲದ್ದು. ಇಬ್ಬರ ನಡುವಿನ ಒಪ್ಪಿತ ಸಂಬಂಧದಲ್ಲಿ ಪುರುಷನನ್ನು ತಪ್ಪಿತಸ್ಥನೆಂದು ಪರಿಗಣಿಸಿ, ಮಹಿಳೆಯನ್ನು ಸಂತ್ರಸ್ತೆ ಆಗಿಸುವುದು ಎಷ್ಟು ಸರಿ?” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸೆಕ್ಷನ್‌ 497 ಕಾನೂನು ಪ್ರಕಾರ, ವಿವಾಹಿತ ಮಹಿಳೆ ತನ್ನ ಪತಿಯ ಒಪ್ಪಿಗೆಯಿಂದ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದಲ್ಲಿ ಆ ವ್ಯಕ್ತಿ ಶಿಕ್ಷಾರ್ಹನಾಗುವುದಿಲ್ಲ. “ಅರ್ಜಿದಾರರು ಹೇಳಿದಂತೆ, ಒಟ್ಟಾರೆ ಕಾನೂನು ಮಹಿಳಾ ಪರವಾಗಿದೆ ಎಂದು ಅನಿಸಿದರೂ ನಿಜವಾಗಿಯೂ ಮಹಿಳಾ ವಿರೋಧಿಯಾಗಿದೆ. ಪತಿಯ ಒಪ್ಪಿಗೆ ಪಡೆದು ಮಹಿಳೆ ಮತ್ತೊಬ್ಬ ವ್ಯಕ್ತಿಯ ಲೈಂಗಿಕ ಆಶಯ ಈಡೇರಿಸಬಹುದು ಎನ್ನುವುದು ಭಾರತೀಯ ನೈತಿಕತೆಯಲ್ಲ,” ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇದನ್ನೂ ಓದಿ : ಅಕ್ರಮ ಸಂಬಂಧ ಅಪರಾಧ ಮುಕ್ತವಲ್ಲವೆಂದು ಸುಪ್ರೀಂಗೆ ತಿಳಿಸಿದ ಕೇಂದ್ರ ಸರ್ಕಾರ

ಈ ಬಗ್ಗೆ ‘ದಿ ಸ್ಟೇಟ್‌’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನ್ಯಾಯವಾದಿ ಅಂಜಲಿ ರಾಮಣ್ಣ, “ಪುರುಷ ಮತ್ತು ಮಹಿಳೆ ನಡುವೆ ಸಮಾನತೆ ತರುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಸರಿಯಾಗಿದೆ. ಬ್ರಿಟಿಷರ ಕಾಲದ ಕಾನೂನನ್ನು ಬಹಳ ಹಿಂದೆಯೇ ಅಸಂವಿಧಾನಿಕವೆಂದು ಪರಿಗಣಿಸಬೇಕಿತ್ತು. ಆದರೆ, ಆ ಕಾನೂನು ಹಾಗೂ ಅಕ್ರಮ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸ್ವಾಗತಾರ್ಹ,” ಎಂದು ತಿಳಿಸಿದರು.

“ಅಕ್ರಮ ಸಂಬಂಧವನ್ನು ಕ್ರಿಮಿನಲ್‌ ಅಪರಾಧ ಮುಕ್ತವೆಂದು ಒಪ್ಪಲು ಸಾಧ್ಯವಿಲ್ಲ,” ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ಹೇಳಿತ್ತು. “ಮದುವೆಯಾಚೆಯ ಸಂಬಂಧಗಳು ನಮ್ಮ ವಿವಾಹ ವ್ಯವಸ್ಥೆಯನ್ನು ಬಲಹೀನಗೊಳಿಸುವುದಲ್ಲದೆ, ವೈವಾಹಿಕ ಬದುಕನ್ನು ಹದಗೆಡಿಸುತ್ತದೆ ಎಂಬ ಅಭಿಪ್ರಾಯ ಕೇಂದ್ರ ಸರ್ಕಾರದ್ದಾಗಿತ್ತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ 11 ಪುಟಗಳ ಅಫಿಡವಿಟ್‌ನಲ್ಲಿ ಸರ್ಕಾರವು, “ಭಾರತದಲ್ಲಿ ವಿವಾಹ ವ್ಯವಸ್ಥೆಗೆ ತನ್ನದೇ ಆದ ಪಾವಿತ್ರ್ಯತೆ ಇದೆ. ಭಾರತೀಯ ದಂಡಸಂಹಿತೆ (497) ವಿವಾಹ ವ್ಯವಸ್ಥೆಗೆ ಬೆಂಬಲ ಹಾಗೂ ರಕ್ಷಣೆ ಒದಗಿಸುತ್ತಿದ್ದು, ಇದನ್ನು ರದ್ದು ಮಾಡುವುದರಿಂದ ವೈವಾಹಿಕ ಬಂಧ ಸಡಿಲಗೊಳ್ಳಲಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More