ಭೀಮಾ ಕೊರೆಗಾಂವ್ ಘರ್ಷಣೆ | ಮಾನವ ಹಕ್ಕು ಹೋರಾಟಗಾರರ ಗೃಹಬಂಧನ ೪ ವಾರ ವಿಸ್ತರಣೆ

ಮಹಾರಾಷ್ಟ್ರದ ಭೀಮಾ ಕೋರೇಗಾಂವ್ ನಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಘರ್ಷಣೆಗೆ ಕಾರಣಕರ್ತರು ಎಂಬ ಆರೋಪದಡಿ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಲಾಗಿತ್ತು. ಈ ಸಂಬಂಧ ವಿಚಾರಣೆ ಆಲಿಸಿದ ನ್ಯಾ.ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಶುಕ್ರವಾರ ತೀರ್ಪು ನೀಡಿದೆ

ಭೀಮಾ ಕೊರೆಗಾಂವ್‌ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಐವರು ಮಾನವ ಹಕ್ಕುಗಳ ಹೋರಾಟಗಾರರ ಬಂಧನ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ತನಿಖೆಗೆ ಅನುಕೂಲವಾಗಲೆಂದು ಐವರ ಗೃಹಬಂಧನವನ್ನು ೪ ವಾರ ವಿಸ್ತರಿಸಿ ತೀರ್ಪು ನೀಡಿದೆ.

ಎಸ್‌ಐಟಿ ತನಿಖೆ ಹಾಗೂ ಬಿಡುಗಡೆಗಾಗಿ ಆರೋಪಿಗಳ ಪರ ಇತಿಹಾಸಕಾರರಾದ ರೋಮಿಲಾ ಥಾಪರ್‌ ಸೇರಿದಂತೆ ಹಲವು ಪ್ರಮುಖರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ತಳ್ಳಿಹಾಕಿದೆ.

ಭೀಮಾ ಕೊರೆಗಾಂವ್‌ ಹಿಂಸಾಚಾರದ ಹಿಂದೆ ಕೈವಾಡವಿದೆ ಎಂಬ ಆರೋಪದ ಮೇಲೆ, ಕಳೆದ ತಿಂಗಳು ಪುಣೆ ಪೊಲೀಸರು ಮಾನವ ಹಕ್ಕುಗಳ ಹೋರಾಟಗಾರರಾದ ವರವರ ರಾವ್, ಸುಧಾ ಭಾರದ್ವಾಜ್‌, ಅರುಣ್‌ ಫರೇರಾ, ವೆರ್ನನ್‌ ಗೋನ್ಸಾಲ್ವೆಸ್‌ ಮತ್ತು ಗೌತಮ್‌ ನವ್ಲಾಖ ಅವರನ್ನು ಬಂಧಿಸಿದ್ದರು. ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಗೃಹಬಂಧನಕ್ಕೆ ಆದೇಶಿಸಿತ್ತು.

ಈ ಕುರಿತು ನ್ಯಾಯಮೂರ್ತಿ ಮಿಶ್ರಾ, "ಭಿನ್ನಮತದ ಕಾರಣಕ್ಕೆ ಬಂಧಿಸಲಾಗಿಲ್ಲ. ಆದರೆ, ನಿಷೇಧಿತ ಮಾವೋ ಸಂಘಟನೆಗಳೊಂದಿಗೆ ಅವರಿಗೆ ಸಂಬಂಧ ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ,'' ಎಂದು ಉಲ್ಲೇಖಿಸಿದರು. ಈ ಪ್ರಕರಣದಲ್ಲಿ ತಮ್ಮ ಸ್ವಾತಂತ್ರ್ಯ ಹರಣವಾಗಿದೆ ಎಂಬ ಆರೋಪಿಗಳ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.

ನ್ಯಾ.ಮಿಶ್ರಾ ಅವರ ಅಭಿಪ್ರಾಯವನ್ನು ಒಪ್ಪದ ನ್ಯಾಯಮೂರ್ತಿ ಚಂದ್ರಚೂಡ ಅವರು, “ಹೋರಾಟಗಾರರ ಬಂಧನವು ಭಿನ್ನಮತ ಹತ್ತಿಕ್ಕುವ ಪ್ರಯತ್ನ,” ಎಂದು ಹೇಳಿದರಲ್ಲದೆ, ವಿರೋಧ ಮತ್ತು ಭಿನ್ನಮತಗಳ ನಡುವೆ ವ್ಯತ್ಯಾಸ ತಿಳಿದುಕೊಳ್ಳುವಂತೆ ಮಹಾರಾಷ್ಟ್ರ ಪೊಲೀಸರಿಗೆ ತಿಳಿಹೇಳಿದರು. “ಕಾನೂನು ಸುವ್ಯವಸ್ಥೆ ಹಾಳು ಮಾಡುವ, ಗಲಭೆ ಸೃಷ್ಟಿಸುವ ಪ್ರಯತ್ನಕ್ಕೂ ಹಾಗೂ ಸರ್ಕಾರವನ್ನೇ ಕಿತ್ತೊಗೆಯುವ ಪ್ರಯತ್ನಕ್ಕೂ ಇರುವ ವ್ಯತ್ಯಾಸ ಅರಿಯಬೇಕು,” ಎಂದೂ ಪೊಲೀಸರಿಗೆ ಸಲಹೆ ನೀಡಿದರು.

ಅಲ್ಲದೆ, ಹೋರಾಟಗಾರರ ಬಂಧನದ ನಂತರದಲ್ಲಿ ಪುಣೆ ಪೊಲೀಸರು ಪತ್ರಿಕಾಗೋ‍ಷ್ಠಿ ನಡೆಸಿದ್ದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆ ಪತ್ರಿಕಾಗೋಷ್ಠಿಯು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವುದಕ್ಕೆ ಕಾರಣವಾಗಿದೆ ಎಂದರಲ್ಲದೆ, “ಸೂಕ್ತ ತನಿಖೆಯಾಗದೆ ಕಾರ್ಯಕರ್ತರನ್ನು ಶಿಕ್ಷಿಸುವುದರಿಂದ ಸಂವಿಧಾನ ಪೋಷಿಸಿದ ಸ್ವಾತಂತ್ರ್ಯದ ಕಲ್ಪನೆಗೆ ಅರ್ಥವಿಲ್ಲದಂತಾಗುತ್ತದೆ,” ಎಂದೂ ನ್ಯಾಯಮೂರ್ತಿ ಚಂದ್ರಚೂಡ ಅಭಿಪ್ರಾಯಪಟ್ಟರು.

ಒಂದು ವೇಳೆ, ಆರೋಪಿಗಳು ಹೇಳುವಂತೆ ಪತ್ರ ಸೇರಿದಂತೆ ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂಬುದು ಸಾಬೀತಾದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶಿಸುವುದಾಗಿಯೂ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಬಂಧಿತ ಹೋರಾಟಗಾರರ ಪರ ವಾದ ಮಂಡಿಸಿದ ನ್ಯಾಯವಾದಿ ಆನಂದ್‌ ಗ್ರೋವರ್‌, ಅಶ್ವಿನಿ ಕುಮಾರ್‌ ಮತ್ತು ಪ್ರಶಾಂತ್‌ ಭೂಷಣ್‌, ಇಡೀ ಪ್ರಕರಣ ಪೊಲೀಸರ ಸೃಷ್ಟಿ ಎಂದಿದ್ದು, ಬಂಧಿತ ಐವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು. ಇನ್ನೊಂದೆಡೆ, “ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಕಾರ್ಯಕರ್ತರ ಗೃಹಬಂಧನ ಅವಧಿಯನ್ನು ವಿಸ್ತರಿಸಬೇಕು,” ಎಂದು ಪೊಲೀಸರು ಬೇಡಿಕೆ ಸಲ್ಲಿಸಿದರು.

ತೀರ್ಪಿಗೆ ಸಂಬಂಧಿಸಿದಂತೆ ಬಂಧಿತ ವೆರ್ನಾನ್‌ ಗೋನ್ಸಾಲ್ವೆಸ್‌ ಪತ್ನಿ ಸುಸಾನ್‌ ಅಬ್ರಹಾಂ ಪ್ರತಿಕ್ರಿಯಿಸಿದ್ದು, ''ಸುಪ್ರೀಂ ಕೋರ್ಟ್‌ ಆದೇಶವನ್ನು ಸ್ವಾಗತಿಸುತ್ತೇನೆ. ಕೋರ್ಟ್‌ಗೆ ನಮ್ಮ ಆಗ್ರಹದಲ್ಲಿ ಸತ್ಯವಿದೆ ಎಂಬುದು ಮನವರಿಕೆಯಾಗಿದೆ. ಕೆಳಹಂತದ ಕೋರ್ಟ್‌ಗೆ ಹೋಗಲು ಅವಕಾಶ ನೀಡಿದ್ದು, ನಾಲ್ಕು ವಾರಗಳ ರಕ್ಷಣೆಯನ್ನು ಒದಗಿಸಿದೆ. ಶೀಘ್ರದಲ್ಲೇ ಕೆಳಹಂತದ ಕೋರ್ಟ್‌ಗೆ ತೆರಳುತ್ತೇವೆ,'' ಎಂದಿದ್ದಾರೆ.

ಪ್ರಶಾಂತ್‌ ಭೂಷಣ್‌ ತಮ್ಮ ಟ್ವೀಟ್‌ನಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್‌ ಪೊಲೀಸರಿಗೆ ತರಾಟೆ ತೆಗೆದುಕೊಂಡ ಅಂಶವನ್ನು ಪ್ರಸ್ತಾಪಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆಯ್ದ ಕೆಲವು ಹೀಗಿವೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More