ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು

ಅಧಿಕಾರಿಗಳ ಜೊತೆ ಸಿಎಂ ಕುಮಾರಸ್ವಾಮಿ ಸಭೆ

ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳ ಅನುಷ್ಠಾನ ಮತ್ತು ಖರ್ಚು-ವೆಚ್ಚದ ಕುರಿತಾಗಿ ಚರ್ಚಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜಕೀಯ ಬೆಳವಣಿಗೆಗಳು ವ್ಯಾಪಕವಾಗಿದ್ದರಿಂದ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸಭೆ ನಡೆಸುತ್ತಿದ್ದಾರೆ.

ಬಿಬಿಎಂಪಿ‌ ಮೇಯರ್ ಚುನಾವಣೆ

ತೀವ್ರ ಕುತೂಹಲ ಮೂಡಿಸಿರುವ ಬಿಬಿಎಂಪಿ‌ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಮಣಿಸಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಅತ್ತ, ಮೈತ್ರಿಕೂಟದ ಅಭ್ಯರ್ಥಿಯು ಆಯ್ಕೆಯಾಗುವಂತೆ ನೋಡಿಕೊಳ್ಳುವ ಮೂಲಕ ಬಿಜೆಪಿಗೆ ಮತ್ತೊಮ್ಮೆ ಹಿನ್ನಡೆ ಉಂಟುಮಾಡಲು ಮೈತ್ರಿಪಕ್ಷಗಳು ಕಾತರವಾಗಿವೆ.

ಏಷ್ಯಾ ಕಪ್‌ಗಾಗಿ ಭಾರತ-ಬಾಂಗ್ಲಾ ಕಾದಾಟ

ಪ್ರತಿಷ್ಠಿತ ಏಷ್ಯಾ ಕಪ್‌ಗಾಗಿ ಭಾರತ ಮತ್ತು ಬಾಂಗ್ಲಾದೇಶ ಇಂದು ಕಣಕ್ಕಿಳಿಯುತ್ತಿವೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿದರೂ, ಬಾಂಗ್ಲಾದೇಶ ಮತ್ತೊಮ್ಮೆ ಭಾರತದ ಎದುರು ಮಾಡು ಇಲ್ಲವೆ ಮಡಿ ಹೋರಾಟ ನಡೆಸಲು ಅಣಿಯಾಗಿದೆ. ವಿಶ್ವದ ಎರಡನೇ ಶ್ರೇಯಾಂಕಿತ ತಂಡ ಭಾರತ ಉತ್ತಮ ಫಾರ್ಮ್‌ನಲ್ಲಿದ್ದು, ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಇನ್ನು, ಏಳನೇ ಶ್ರೇಯಾಂಕಿತ ಬಾಂಗ್ಲಾ, ಗಾಯದ ಸಮಸ್ಯೆಯಲ್ಲೂ ಕೆಲವೊಂದು ಅಚ್ಚರಿ ಫಲಿತಾಂಶದೊಂದಿಗೆ ಫೈನಲ್ ತಲುಪಿದೆ. ಒಟ್ಟಾರೆ ೩೪ ಮುಖಾಮುಖಿಯಲ್ಲಿ ಭಾರತ ೨೮ರಲ್ಲಿ ಗೆದ್ದಿದ್ದರೆ, ಬಾಂಗ್ಲಾ ಜಯಿಸಿರುವುದು ಕೇವಲ ೫ ಪಂದ್ಯಗಳನ್ನಷ್ಟೆ. ಮೇಲಾಗಿ, ೨೦೧೬ರ ಏಷ್ಯಾ ಕಪ್ ಫೈನಲ್‌ನಲ್ಲಿ ಇದೇ ಭಾರತದ ಎದುರು ಸೋತಿದ್ದ ಬಾಂಗ್ಲಾದೇಶ, ಮಶ್ರಫೆ ನಾಯಕತ್ವದಲ್ಲಿ ಈಗ ಟ್ರೋಫಿ ಗೆಲ್ಲುವ ಛಲದಲ್ಲಿದೆ.

ಸೈನಾ- ಒಕುಹಾರ ನಡುವೆ ಹಣಾಹಣಿ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೊರಿಯಾ ಓಪನ್‌ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್ ಆಟಗಾರ್ತಿ ನೊಜೊಮಿ ಒಕುಹಾರ ವಿರುದ್ಧ ಕಾದಾಡಲಿದ್ದಾರೆ. ೬೦೦,೦೦೦ ಡಾಲರ್ ಬಹುಮಾನ ಮೊತ್ತದ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂದು ತುಡಿಯುತ್ತಿರುವ ಸೈನಾಗೆ ಒಕುಹಾರ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ವೃತ್ತಿಬದುಕಿನ ಒಟ್ಟಾರೆ ಮುಖಾಮುಖಿಯಲ್ಲಿ ಒಕುಹಾರ ವಿರುದ್ಧ ೬-೩ ಮುನ್ನಡೆ ಪಡೆದಿರುವ ಸೈನಾ, ಇತ್ತೀಚಿನ ಎರಡು ಹಣಾಹಣಿಯಲ್ಲಿ ಒಕುಹಾರಗೆ ಸೋತಿದ್ದರು. ಪ್ರಸ್ತುತ ಟೂರ್ನಿಯಲ್ಲಿ ಭಾರತದ ಮಿಕ್ಕ ಸ್ಪರ್ಧಿಗಳೆಲ್ಲರೂ ಎರಡನೇ ಸುತ್ತನ್ನೂ ತಲುಪಲಾಗದೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಸೈನಾ ಭಾರತದ ಸವಾಲನ್ನು ಏಕಾಂಗಿಯಾಗಿ ಮುಂದುವರೆಸಿದ್ದಾರೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More