ಮುಟ್ಟಿನ ದೇವಿಯನ್ನೇ ಆರಾಧಿಸುವ ಕೇರಳದಲ್ಲಿ ಶಬರಿಮಲೆ ದೇಗುಲ ಪ್ರವೇಶಕ್ಕೆ ನಿಷೇಧವೇಕೆ?

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಂಪ್ರದಾಯವಾದಿಗಳ ಕಣ್ಣು ತೆರೆಸುವಂತಿದೆ. ಇದು ನಿಜಕ್ಕೂ ಸಮಾಜ ಯೋಚಿಸಬೇಕಾದ ವಿಚಾರ. ಈ ಹಿನ್ನೆಲೆಯಲ್ಲಿ, ‘ಲೈವ್ ಮಿಂಟ್’ ಜಾಲತಾಣ ಪ್ರಕಟಿಸಿದ ಲೇಖನದ ಭಾವಾನುವಾದ ಇಲ್ಲಿದೆ

ಕೇರಳದಲ್ಲಿ ಋತುಸ್ರಾವಕ್ಕೆ ಒಳಗಾಗುವ ದೇವತೆಯೊಬ್ಬಳು ಇದ್ದಾಳೆ. ಚೆಂಗಾನೂರಿನ ಪ್ರಸಿದ್ಧ ಮಹಾದೇವ ದೇಗುಲದಲ್ಲೇ ಇರುವ ಈ ದೇವತೆ ಅಸಂಖ್ಯ ಆಸ್ತಿಕರಿಂದ ಪೂಜಿಸಲ್ಪಡುತ್ತಿದ್ದಾಳೆ. ದೇವತೆಯ ಪುತ್ಥಳಿಗೆ ಸುತ್ತಿರುವ ಬಿಳಿ ವಸ್ತ್ರದ ಮೇಲೆ ಆಗಾಗ ಕೆಂಪುಬಣ್ಣದ ಕಲೆಗಳು ಕಾಣುತ್ತವೆ. ಆ ವಸ್ತ್ರವನ್ನು ಹಳೆಯ ಬ್ರಾಹ್ಮಣ ಕುಟುಂಬವೊಂದರ ಮಹಿಳೆಯರು ಸ್ವೀಕರಿಸುತ್ತಾರೆ. ಬಳಿಕ ಅದು ದೈವಿಕವಾದ ಸ್ರಾವವೇ ಅಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ಅದು ನಿಜವೇ ಆಗಿದ್ದರೆ ದೇವತೆಯ ಮೂರ್ತಿಯನ್ನು ಸಮೀಪದ ನದಿಯ ಬಳಿಗೆ ಕೊಂಡೊಯ್ದು ಮಜ್ಜನ ಮಾಡಿಸಿ ನಂತರ ಗರ್ಭಗುಡಿಗೆ ಕರೆತರಲಾಗುತ್ತದೆ.

ಆಸಕ್ತಿಯ ಸಂಗತಿ ಎಂದರೆ, ಈ ಮುಟ್ಟಿನ ದೇವತೆಯನ್ನು ಆರಾಧಿಸುವ ಬ್ರಾಹ್ಮಣ ಕುಟುಂಬದಿಂದಲೇ ರಾಜ್ಯದ ಪ್ರಮುಖ ದೇವಾಲಯವೊಂದಕ್ಕೆ ಅನೇಕರು ಪುರೋಹಿತರಾಗಿ ನೇಮಕವಾಗಿದ್ದಾರೆ. ಆದರೆ ಅದೇ ಕೇರಳದ ಇನ್ನೊಂದೆಡೆ, ಶಬರಿಮಲೆಯ ತುದಿಯಲ್ಲಿ ಕುಳಿತಿರುವ ದೇವರು ಬ್ರಹ್ಮಚಾರಿ; ಋತುಬಂಧದಲ್ಲಿರುವ ಹೆಣ್ಣುಮಕ್ಕಳು ಈ ದೇಗುಲಕ್ಕೆ ಪ್ರವೇಶಿಸುವಂತಿಲ್ಲ.

ಅಯ್ಯಪ್ಪನ ಕುರಿತಾದ ದಂತಕತೆಯ ಪ್ರಕಾರ, ಆತ ಶಿವ ಮತ್ತು ಮೋಹಿನಿಯ ರೂಪದಲ್ಲಿರುವ ವಿಷ್ಣುವಿನ ಮಿಲನದ ಫಲ. ಸಮೀಪದಲ್ಲೇ ಅಯ್ಯಪ್ಪ ಸ್ವಾಮಿಯ ಆರಾಧಕರು ಪವಿತ್ರ ನೃತ್ಯ ಮಾಡುವ ದರ್ಗಾ ಕೂಡ ಇದೆ. ಮತ್ತೊಂದೆಡೆ ಇರುವ ಪ್ರತ್ಯೇಕ ದೇಗುಲದಲ್ಲಿ ಅಯ್ಯಪ್ಪನ ನಿರೀಕ್ಷೆಯಲ್ಲಿರುವ ವಧುವೇ ದೇವತೆಯಾಗಿದ್ದಾಳೆ. ದಟ್ಟ ಕಾಡಿನಿಂದ ಸುತ್ತುವರಿದ ಪರ್ವತದ ಮಧ್ಯದಲ್ಲೆಲ್ಲೋ ಪ್ರತಿವರ್ಷ ಮಕರ ಜ್ಯೋತಿ ದರ್ಶನವಾಗುವುದಿದೆ. ದೇಗುಲದ ಸಿಬ್ಬಂದಿಯೇ ಜ್ಯೋತಿ ಬೆಳಗಿಸುವುದಾದರೂ ಅಯ್ಯಪ್ಪನ ಕುರಿತಾದ ಅಚಲ ನಂಬಿಕೆಯನ್ನು ಇದು ಸ್ವಲ್ಪವೂ ಕದಲಿಸಿಲ್ಲ.

ದೇಗುಲದ ತಂತ್ರಿಗಳು, ಆಡಳಿತ ವರ್ಗ ಮಹಿಳೆಯರ ಪ್ರವೇಶದ ಬಗ್ಗೆ ನಿರ್ಧರಿಸುತ್ತಾರೆ. ತೃಪ್ತಿ ದೇಸಾಯಿ (ಶನಿ ಶಿಂಗ್ಣಾಪುರ, ಕೊಲ್ಲಾಪುರದ ಮಹಾಲಕ್ಷ್ಮಿ ದೇಗುಲ, ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶಿಸಲು ಯತ್ನಿಸಿ ಸುದ್ದಿಯಲ್ಲಿದ್ದವರು) ಎಂಬ ಮಹಿಳೆಗೆ ಇಲ್ಲಿ ಪ್ರವೇಶ ನೀಡಬಾರದು ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಅಯ್ಯಪ್ಪ ಅಪ್ಪಟ ಬ್ರಹ್ಮಚಾರಿ ಎಂಬುದು ಹಾಗೆ ಪ್ರವೇಶ ನಿರಾಕರಿಸುವವರ ವಾದ. ಆದರೆ, ಈ ವಾದಕ್ಕೆ ಬಲವಿಲ್ಲ. ಏಕೆಂದರೆ, ರಾಜ್ಯದ ಉಳಿದ ಅಯ್ಯಪ್ಪ ಪುಣ್ಯಕ್ಷೇತ್ರಗಳಲ್ಲಿ ಋತುಬಂಧದಲ್ಲಿರುವ ಹೆಣ್ಣುಮಕ್ಕಳ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇಲ್ಲ. ಅಲ್ಲದೆ, ದಟ್ಟ ಕಾಡಿನಿಂದ ಸುತ್ತುವರಿದ ಶಬರಿಮಲೆಯಲ್ಲಿ ಹೆಣ್ಣುಮಕ್ಕಳು ಸುಳಿದಾಡುವುದು ಅವರ ಪಾಲಿಗೆ ಸುರಕ್ಷಿತವಲ್ಲ ಎಂಬ ವಾದವನ್ನೂ ಹರಿಬಿಡಲಾಗಿದೆ. ಆದರೆ, ಉತ್ತಮ ರಸ್ತೆ ಸಂಪರ್ಕ, ಪೊಲೀಸರ ರಕ್ಷಣೆ, ಸಾರಿಗೆ ಸೌಲಭ್ಯ ಇರುವ ಈ ಕಾಲದಲ್ಲಿ ಅಂತಹ ಮಾತುಗಳು ಮಹತ್ವ ಕಳೆದುಕೊಂಡಿವೆ.

ರಾಜ್ಯದ ಉಳಿದ ಅಯ್ಯಪ್ಪ ದೇವಾಲಯಗಳಂತಲ್ಲದೆ, ಶಬರಿಮಲೆಯಲ್ಲಿ ಪ್ರತಿಷ್ಠಾಪನೆ ವೇಳೆಯೇ ಸಂಕಲ್ಪ ಕೈಗೊಂಡಿರುವುದರಿಂದ ಸಂತಾನೋತ್ಪತ್ತಿ ಶಕ್ತಿ ಇರುವ ಮಹಿಳೆಯರಿಗೆ ಪ್ರವೇಶ ನಿಷಿದ್ಧ ಎಂಬ ಬಲವಾದ ವಾದವೊಂದಿದೆ. “ಮಹಿಳೆಯರಿಗೆ ಪ್ರವೇಶ ನೀಡುವುದರಿಂದ ದೇವರ ಏಕಾಗ್ರತೆಗೆ ಭಂಗ ತಂದಂತಾಗುತ್ತದೆ. ಅದನ್ನು ತಪ್ಪಿಸಲು ನಾವು ನಿಷೇಧ ಹೇರಬೇಕಾಗುತ್ತದೆ,” ಎಂಬುದು ಪುರೋಹಿತಶಾಹಿಯ ವಾದ. ಇಂತಹ ಉತ್ಪ್ರೇಕ್ಷಿತ ಮಾತುಗಳು ಅವರ ವ್ಯಾಪಾರಿ ಮನಸ್ಥಿತಿಯ ಭಾಗ ಆಗಿರುವುದರಿಂದ ಅದನ್ನು ಕ್ಷಮಿಸಿಬಿಡಬಹುದಾದರೂ ಇತಿಹಾಸದಿಂದ ಪಾಠ ಕಲಿತು ಬದಲಾವಣೆ ತರುವುದು ಅವಶ್ಯ.

ಇದನ್ನೂ ಓದಿ : ಸಮಾನತೆ ನಂಬುವ ಎಲ್ಲ ಸಮುದಾಯಗಳೂ ಒಗ್ಗೂಡಿ ಒಳಮೀಸಲಾತಿಗೆ ದನಿಯೆತ್ತಬೇಕಿದೆ

ಕೇರಳದಲ್ಲಿ ಕೆಲ ಸಮುದಾಯಗಳು ನಿರ್ದಿಷ್ಟ ದೇಗುಲಗಳಿಗೆ ಪ್ರವೇಶಿಸುವಂತಿಲ್ಲ. ಕುಮಾರನಲ್ಲೂರು, ತ್ರಿಕ್ಕರಿಯೂರು ದೇಗುಲಗಳಿಗೆ ಕ್ಷತ್ರಿಯರು ಹೋಗುವಂತಿಲ್ಲ. ತಿರುವಲ್ಲಾದ ಗರ್ಭಗುಡಿಗೆ ಮಹಿಳೆಯರಷ್ಟೇ ಅಲ್ಲ, ಕೆಲ ಕಾರಣಗಳಿಗೆ ಆನೆಗಳೂ ತೆರಳುವಂತಿಲ್ಲ (ಬಹಳ ಹಿಂದೆ ಈ ದೇಗುಲದ ಗರ್ಭಗುಡಿಯನ್ನು ಆಕಸ್ಮಿಕವಾಗಿ ಪ್ರವೇಶಿಸಿದ ಮಹಿಳೆಯೊಬ್ಬರು ದೇವರೊಳಗೆ ಅಂತರ್ಧಾನವಾದರು ಎಂಬ ಮಾತುಗಳಿವೆ). ಮೋಕ್ಷ ಪಡೆಯಲು ಮಹಿಳೆಯರು ಅರ್ಹರಲ್ಲ ಎಂಬ ನಂಬಿಕೆಯೇ ಇಂತಹ ನಿಷೇಧಗಳ ಹಿಂದೆ ಕೆಲಸ ಮಾಡಿರುವಂತಿದೆ. ಆದರೆ, ಜ್ಯೋತಿಷಿಗಳು 1968ರಲ್ಲಿ ಮಹಿಳೆಯರ ಪ್ರವೇಶದಿಂದ ದೇಗುಲಕ್ಕೆ ಅಪಚಾರವಾಗುವುದಿಲ್ಲ ಎಂದು ಹೇಳಿದ್ದರಿಂದ ಇಲ್ಲಿ ನಿಷೇಧವನ್ನು ಹಿಂಪಡೆಯಲಾಯಿತು. ಆಗ ಆನೆಗಳ ಪ್ರವೇಶದ ಬಗ್ಗೆ ಯಾವ ನಿರ್ಧಾರಕ್ಕೂ ಬರಲಿಲ್ಲ.

ಸುಪ್ರೀಂ ಕೋರ್ಟಿನಲ್ಲಿದ್ದ ಶಬರಿಮಲೆ ಮಹಿಳೆಯರ ಪ್ರವೇಶ ಪ್ರಕರಣ, ನಂಬಿಕೆ ಮತ್ತು ಕಾನೂನಿನ ಸಂಘರ್ಷಕ್ಕೆ ಸಾಕ್ಷಿ. ಅಲ್ಲಿ ಧಾರ್ಮಿಕ ಹಕ್ಕಿನ ಚರ್ಚೆಯೂ ಇದೆ. ಆದರೆ, ಕಾನೂನುಗಳೇ ಇಲ್ಲದ ಸಂದರ್ಭದಲ್ಲಿ ಕೂಡ ದೇಗುಲಗಳಲ್ಲಿ ಸುಧಾರಣೆ ಸಾಧ್ಯವಾಗಿದ್ದ ಉದಾಹರಣೆಗಳನ್ನು ನೋಡಬಹುದು. ಇಷ್ಟಾದರೂ ಕಾನೂನಿನಂತಹ ಮಧ್ಯಸ್ಥಿಕೆ, ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತದೆ ಎಂದು ಬಿಂಬಿಸುವುದನ್ನೂ ಕಂಡಿದ್ದೇವೆ.

1932ನೇ ಇಸವಿ. ಕೆಲ ಶೋಷಿತ ಸಮುದಾಯಗಳು ಮತಾಂತರವಾದ ಹೊತ್ತಿನಲ್ಲಿ ತಿರುವಾಂಕೂರಿನ ಮಹಾರಾಜ, ಅವರಿಗೂ ದೇವಾಲಯ ಪ್ರವೇಶಕ್ಕೆ ಅನುವು ಕಲ್ಪಿಸಬೇಕೇ ಎಂಬುದನ್ನು ನಿರ್ಧರಿಸಲು ಸಮಿತಿಯೊಂದನ್ನು ನೇಮಿಸುತ್ತಾರೆ. 1934ರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಸಮಿತಿ, "ಇಂತಹ ಸಮುದಾಯಗಳನ್ನು ದೇಗುಲಗಳಿಂದ ಬಹಿಷ್ಕರಿಸಬೇಕು. ಇಂತಹ ಜನರ ಪ್ರವೇಶದಿಂದ ದೇವತಾಮೂರ್ತಿಯ ಸುತ್ತಲೂ ಇರುವ ದೈವಾಂಶ ಸಂಭೂತ ವಾತಾವರಣಕ್ಕೆ ಧಕ್ಕೆಯಾಗುತ್ತದೆ. ಇದರಿಂದ ಸ್ವತಃ ಕೆಳಜಾತಿಗಳಿಗೂ ಒಳಿತಾಗುವುದಿಲ್ಲ,” ಎಂದು ಅಭಿಪ್ರಾಯಪಡುತ್ತದೆ. ಹೀಗಾಗಿ, ಕೆಳಜಾತಿಗಳಿಗೆ ವಿನಾಯಿತಿ ನೀಡುವುದು ಮಹಾರಾಜರಿಗೆ ಅಷ್ಟು ಸರಳವಾದ ವಿಚಾರ ಆಗಿರಲಿಲ್ಲ.

1936ರಲ್ಲಿ ಅಂತಿಮ ನಿರ್ಣಯವೊಂದನ್ನು ಕೈಗೊಂಡ ಮಹಾರಾಜ, ತಿರುವಾಂಕೂರು ರಾಜ್ಯದಲ್ಲಿ (ತಮಿಳುನಾಡು ಮತ್ತು ಕೇರಳದ ಅನೇಕ ಭಾಗಗಳನ್ನು ಹೊಂದಿದ್ದ ಸಂಸ್ಥಾನ) ಹಿಂದೂ ಧರ್ಮದ ಎಲ್ಲರೂ ದೇಗುಲ ಪ್ರವೇಶಿಸಬಹುದು ಎಂಬ ಸುಧಾರಣೆ ಜಾರಿಗೆ ತರುತ್ತಾರೆ. ಮಹಾತ್ಮ ಗಾಂಧಿಯಿಂದ ಚಕ್ರವರ್ತಿ ರಾಜಗೋಪಾಲಾಚಾರಿವರೆಗೆ ಒಂದು ರೀತಿಯ ದೇವಾಲಯಗಳ ಸುಧಾರಣೆ ನಡೆದರೆ, ಮತ್ತೊಂದು ಹಾದಿಯಲ್ಲಿ ಅಂಬೇಡ್ಕರ್ ಕೂಡ ಬದಲಾವಣೆಗೆ ನಾಂದಿ ಹಾಡಿದರು. ಈಗ ಪುರೋಹಿತಶಾಹಿ ಅರಗಿಸಿಕೊಳ್ಳಲು ಸಾಧ್ಯವಾಗದಂತಹ ಸುಧಾರಣೆಯೊಂದನ್ನು ಕೇರಳದಲ್ಲಿ ಜಾರಿಗೆ ತರುವ ಸ್ಥಿತಿ ಎದುರಾಗಿದೆ. ಶಬರಿಮಲೆಯ ವಿಚಾರಕ್ಕೆ ಬಂದರೆ, ಮುಟ್ಟಿನ ದೇವತೆಯನ್ನು ಒಪ್ಪಿಕೊಳ್ಳುವ ಅಲ್ಲಿನ ಪುರೋಹಿತ ವರ್ಗ ಋತುಸ್ರಾವಕ್ಕೆ ಒಳಗಾಗುವವರನ್ನು ದೂರ ಇಟ್ಟಿರುವುದು ವಿಪರ್ಯಾಸದ ಸಂಗತಿ.

ಈ ಮಧ್ಯೆ, 2006ರಲ್ಲಿ ಶಬರಿಮಲೆಯ ದೇವತಾಮೂರ್ತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿ ಸುದ್ದಿಗೆ ಗ್ರಾಸವಾಗಿದ್ದ ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿರುವ ತೀರ್ಪನ್ನು ಸ್ವಾಗತಿಸಿದ್ದಾರೆ. “ಇದೊಂದು ಐತಿಹಾಸಿಕ ತೀರ್ಪು. ದೇಶದ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಂತಾಗಿದೆ. ಇದಕ್ಕಿಂತ ಸಂತೋಷ ಬೇರೆ ಇಲ್ಲ. ಅಂಬೇಡ್ಕರ್ ಕೊಟ್ಟ ಸಂವಿಧಾನಕ್ಕೆ ನಾವು ಚಿರಋಣಿ. ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಿಂದೆ ನಡೆದ ಘಟನೆಯಿಂದ ನೋವಾಗಿತ್ತು. ಹೆಣ್ಣುಕುಲವೇ ನೊಂದಿತ್ತು. ಈ ತೀರ್ಪು ಆ ಎಲ್ಲ ನೋವನ್ನೂ ಮರೆಸಿದೆ. ಆಗಲೂ ನಮಗೆ ಜಯ ಸಿಗುವ ವಿಶ್ವಾಸವಿತ್ತು. ಈಗ ಅದು ನಿಜವಾಗಿದೆ,” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More