ರಫೇಲ್ ಡೀಲ್ | ಬಿಲದಿಂದ ಒಂದೊಂದಾಗಿ ಹೊರಬರುತ್ತಲೇ ಇವೆ ಹೆಗ್ಗಣಗಳು

ಹೊಲಾಂದ್ ಸಂಗಾತಿ ಜ್ಯೂಲಿಯ ಸಿನಿಮಾಕ್ಕೆ ಹಣ ಹೂಡಲು ಮುಂದಾಗಿದ್ದು ನಿಜ ಎಂದು ರಿಲಯನ್ಸ್ ಸಮೂಹ ಒಪ್ಪಿಕೊಂಡಿದೆ. ಮತ್ತೊಂದೆಡೆ, ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಬಗ್ಗೆ ಯುಪಿಎ ಸರ್ಕಾರ ಮೌನ ವಹಿಸಿದ್ದೇಕೆ? ಆತ ಪರಾರಿಯಾದರೂ ಮೋದಿ ಸರ್ಕಾರ ಸುಮ್ಮನಿದ್ದಿದ್ದೇಕೆ ಎಂಬ ಪ್ರಶ್ನೆ ಹುಟ್ಟಿವೆ

ಸಾವಿರಾರು ಕೋಟಿ ರುಪಾಯಿ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿರುವ ರಫೇಲ್ ಯುದ್ಧವಿಮಾನ ಖರೀದಿ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್ ಅವರು, "ಸಹಪಾಲುದಾರನಾಗಿ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಯ್ದುಕೊಳ್ಳಲು ಮೋದಿ ಸರ್ಕಾರ ಸೂಚಿಸಿತ್ತು,” ಎಂಬ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಬಳಿಕ ಹೊರಬೀಳುತ್ತಿರುವ ವಿವಿಧ ಹೇಳಿಕೆಗಳು ವಿವಾದದ ಸ್ವರೂಪವನ್ನು ಇನ್ನಷ್ಟು ಆಳವಾಗಿಸುತ್ತವೆ.

ಹೊಲಾಂದ್ ಸಂಗಾತಿ ನಟಿ ಜ್ಯೂಲಿ ಗಯೇ ನಿರ್ಮಿಸಿದ್ದ ‘ಟೌಟ್ ಲಾ ಹಾಟ್’ ಸಿನಿಮಾಗೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಎಂಟರ್ಟೇನ್ಮೆಂಟ್ ಸಂಸ್ಥೆ ಶೇ.15ರಷ್ಟು ಹಣಕಾಸಿನ ನೆರವು ನೀಡಿರುವುದು ಕಡೆಗೂ ಬಹಿರಂಗವಾಗಿದೆ. 2017ರ ಡಿಸೆಂಬರ್‌ನಲ್ಲಿ ತನ್ನ ಪಾಲುದಾರ ಸಂಸ್ಥೆ ವಿಸ್ವಿರೀಸ್ ಕ್ಯಾಪಿಟಲ್ ಮೂಲಕ 1.48 ದಶಲಕ್ಷ ಯೂರೋಗಳನ್ನು ಸಿನಿಮಾ ನಿರ್ಮಾಣಕ್ಕಾಗಿ ಹೂಡಲಾಗಿತ್ತು. ಒಪ್ಪಂದದಂತೆ, ಸಿನಿಮಾ ಬಿಡುಗಡೆಗೆ ಎರಡು ವಾರಗಳ ಮುನ್ನ ಈ ಹಣ ಸಂದಾಯ ಮಾಡಲಾಗಿತ್ತು ಎಂದು ವಿಸ್ವರೀಸ್ ಕ್ಯಾಪಿಟಲ್ ಪ್ರಕಟಣೆ ಮೂಲಕ ತಿಳಿಸಿದೆ. ವಿಸ್ವರೀಸ್ ಕ್ಯಾಪಿಟಲ್ ಜೊತೆಗೆ ರಿಲಯನ್ಸ್ ಇನ್ನೂ ಅನೇಕ ಹೂಡಿಕೆಗಳನ್ನು ಮಾಡಿತ್ತು. ಇದು ಭಾರತೀಯ ಸಂಜಾತ ಸಿಂಗಪುರ ಉದ್ಯಮಿ ರವಿ ವಿಶ್ವನಾಥನ್ ಅವರಿಗೆ ಸೇರಿದ ಕಂಪನಿ. ಆತ ಅಂಬಾನಿ ಜೊತೆಗೆ ದೀರ್ಘಕಾಲದ ಗೆಳೆತನ ಹೊಂದಿದ್ದರು ಎಂಬ ವಿಚಾರ ಹೊರಬಿದ್ದಿದೆ. ಆದರೆ, ಜ್ಯೂಲಿ ಅಥವಾ ಅವರ ಕಂಪನಿಯೊಂದಿಗೆ ನೇರವಾಗಿ ಯಾವುದೇ ಒಪ್ಪಂದಕ್ಕೆ ಸಹಿ ಹಾಕದ ರಿಲಯನ್ಸ್ ಎಂಟರ್‌ಟೇನ್ಮೆಂಟ್ ಸಂಸ್ಥೆ ವಿಸ್ವರೀಸ್ ಕ್ಯಾಪಿಟಲ್ ಮೂಲಕವೇ ತನ್ನ ವ್ಯವಹಾರ ಕುದುರಿಸಿತ್ತು. ಅಲ್ಲದೆ, ನಿರ್ಮಾಣ ಸೇವೆ ಒದಗಿಸಿದ್ದಕ್ಕಾಗಿ ಫ್ರೆಂಚ್ ನಿರ್ಮಾಪಕರಿಂದ 3 ಲಕ್ಷ ಯೂರೊಗಳನ್ನು ರಿಲಯನ್ಸ್ ಪಡೆದಿತ್ತು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಇದಕ್ಕಿಂತಲೂ ಗಂಭೀರವಾದ ವಿವಾದವೊಂದು ಈಗ ಹೊಗೆಯಾಡುತ್ತಿದೆ. ಅದು ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಅವರಿಗೆ ಸಂಬಂಧಿಸಿದ್ದು. ಸಂಜಯ್ ವಿರುದ್ಧ ಯುಪಿಎ-2ರ ಆಡಳಿತಾವಧಿಯಲ್ಲೇ ಆರೋಪಗಳು ಕೇಳಿಬಂದಿದ್ದರೂ, ಅವರ ವಿರುದ್ಧ ಮನಮೋಹನ್ ಸಿಂಗ್ ಸರ್ಕಾರ ಯಾವುದೇ ವಿಚಾರಣೆ ನಡೆಸಿರಲಿಲ್ಲ. ಇದೇ ಕಳಂಕ ಮೋದಿ ಸರ್ಕಾರಕ್ಕೂ ಅಂಟಿದೆ. ಸಂಜಯ್ ಭಂಡಾರಿ 2016ರಲ್ಲಿ ದೇಶ ಬಿಟ್ಟು ಲಂಡನ್‌ಗೆ ಪಲಾಯನ ಮಾಡಿದರೂ ಕೇಂದ್ರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪಗಳಿವೆ. 2013ರಲ್ಲಿ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋ ನಡೆದಾಗಲೇ ಅವರ ವಿರುದ್ಧ ತನಿಖೆ ಆರಂಭವಾಗಬೇಕಿತ್ತು ಎಂದು ‘ಫಸ್ಟ್ ಪೋಸ್ಟ್’ ಜಾಲತಾಣದ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ : ರಫೇಲ್ ಡೀಲ್ | ಹೊಲಾಂದ್ ಮಾತಿನಲ್ಲಿ ತಮಗೆ ಬೇಕಾದ ಸಾಲನ್ನಷ್ಟೇ ಸುದ್ದಿ ಮಾಡಿದ ಮಾಧ್ಯಮಗಳು!

ಸಂಜಯ್ ಭಂಡಾರಿ ಅವರ ಮೂರು ಕಂಪನಿಗಳು ರಫೇಲ್ ನಿರ್ಮಾಣದ ಹೊಣೆ ಹೊತ್ತಿರುವ ಡಸಾಲ್ಟ್ ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ಸರಬರಾಜು ಕಂಪನಿಗಳಿಂದ ಕಿಕ್‌ಬ್ಯಾಕ್ ಪಡೆದಿರುವ ವಿಚಾರ ಕೇಂದ್ರ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿತ್ತು. ಈ ಬಗ್ಗೆ 2013ರಲ್ಲಿ ಸಣ್ಣ ಮಟ್ಟಿಗೆ ತನಿಖೆ ಆರಂಭವಾದರೂ, ಯುಪಿಎ ಆಡಳಿತದ ಕೊನೆಯ ಕ್ಷಣಗಳಲ್ಲಿ ಅದನ್ನು ಕೈಬಿಡಲಾಯಿತು. ನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, ಸಂಜಯ್ ವಿರುದ್ಧ 2016ರಲ್ಲಿ ಆದಾಯ ತೆರಿಗೆ ಇಲಾಖೆ ಮೂಲಕ ದಾಳಿ ನಡೆಸಿತು. ಸಾಕಷ್ಟು ದಾಖಲೆಗಳನ್ನು ಸಂಜಯ್ ನಿವಾಸದಿಂದ ವಶಪಡಿಸಿಕೊಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ವಿಳಂಬವಾಯಿತು. ಅಧಿಕೃತ ರಹಸ್ಯ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿ ಎರಡು ತಿಂಗಳ ಬಳಿಕ ಸಂಜಯ್, ನೇಪಾಳದ ಮೂಲಕ ಲಂಡನ್‌ಗೆ ಪಲಾಯನ ಮಾಡಿದರು. ಈಗ ಎಚ್ಚೆತ್ತಿರುವ ಬಿಜೆಪಿ, ಸಂಜಯ್ ವಿರುದ್ಧ ಬೆಟ್ಟು ಮಾಡುತ್ತಿದ್ದರೂ, 2013ರಿಂದಲೇ ಕೇಳಿಬಂದ ಆರೋಪಗಳ ಬಗ್ಗೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಎದ್ದಿದೆ.

ರಿಲಯನ್ಸ್ ಕಂಪನಿಯು, ಜ್ಯೂಲಿ ಅವರ ಸಿನಿಮಾಕ್ಕೆ ಹಣ ವಿನಿಯೋಗಿಸಿದ್ದು ಎಷ್ಟು ತಪ್ಪೋ ಅಷ್ಟೇ ದೊಡ್ಡ ತಪ್ಪು ಯುಪಿಎ ಮತ್ತು ಎನ್‌ಡಿಎ ಸಂಜಯ್ ಬಂಢಾರಿ ಪ್ರಕರಣದಲ್ಲಿ ಸರ್ಕಾರಗಳಿಂದ ನಡೆದಿದೆ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿಬಾಗಿಲು ಎಳೆದಂತೆ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More