ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ; ರಾಜ್ಯದಲ್ಲಿ ಶಿಕ್ಷೆ ಪ್ರಮಾಣ ಕುಂಠಿತ!

ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ೧೯೮೯ರ ಕುರಿತು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‌ ಅಸಮ್ಮತಿ ಸೂಚಿಸಿತು. ಕೇಂದ್ರ ಸರ್ಕಾರ ಈ ಕಾಯ್ದೆ ದುರ್ಬಲಗೊಳಿಸಿದೆ ಎಂಬ ಆರೋಪ ಈಗಲೂ ಇದೆ. ಈ ಮಧ್ಯೆ, ರಾಜ್ಯದಲ್ಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಕುಂಠಿತವಾಗಿದೆ

ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ಸವಣೀರ್ಯರಿಂದ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಳೆದ ೩ ವರ್ಷಗಳಲ್ಲಿ ಶೇ.೬ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದೆ. ಬೇರೆ ರಾಜ್ಯಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗಿದ್ದರೂ ರಾಜ್ಯದಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ೨೦೧೮ರ ಜುಲೈ ಅಂತ್ಯಕ್ಕೆ ೮೮ ಪ್ರಕರಣಗಳು ಖುಲಾಸೆಯಲ್ಲಿ ಕೊನೆಗೊಂಡಿದ್ದು, ೨ ಪ್ರಕರಣಗಳಲ್ಲಷ್ಟೇ ಶಿಕ್ಷೆ ವಿಧಿಸಿರುವುದು ಇನ್ನಷ್ಟು ಕಳವಳಕಾರಿಯಾಗಿದೆ.

ದೌರ್ಜನ್ಯ, ಹತ್ಯೆ, ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ, ಮರ್ಯಾದೆಗೇಡು ಹತ್ಯೆ, ಜಾತಿ ನಿಂದನೆ, ಅತ್ಯಾಚಾರ, ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ಕೋಮು ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿ‍ಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಗೆ ಪ್ರಾಸಿಕ್ಯೂಷನ್ ಇಲಾಖೆ ಮತ್ತು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಇಲಾಖೆ ಕಳೆದ ೩ ವರ್ಷಗಳ (೨೦೧೫, ೨೦೧೬, ೨೦೧೭, ೨೦೧೮ರ ಜುಲೈವರೆಗೆ) ಮಾಹಿತಿ ಒದಗಿಸಿದೆ.

ವಿಧಾನಸೌಧದ ಮೊದಲನೇ ಮಹಡಿಯಲ್ಲಿ ಎಚ್‌ ಕೆ ಕುಮಾರಸ್ವಾಮಿ ಅವರ ಅಧ್ಯಕ್ಷತೆಯ ಸಮಿತಿ ಇಂದು ಸಭೆ ನಡೆಸಿ ಚರ್ಚಿಸಿದ್ದು, ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕುಂಠಿತ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು, ದೌರ್ಜನ್ಯ ಪ್ರಕರಣಗಳ ವಿಚಾರಣೆಗೆಂದು ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಗಳು ಇರುವ ೮ ಜಿಲ್ಲೆಗಳಲ್ಲೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದನ್ನು ಸಮಿತಿ ಗುರುತಿಸಿದೆ ಎಂದು ತಿಳಿದುಬಂದಿದೆ. ಹಾಗೆಯೇ, ದೌರ್ಜನ್ಯಕ್ಕೆ ಸಂಬಂಧಪಟ್ಟ ಪ್ರಕರಣಗಳ ಸಂಬಂಧ ನ್ಯಾಯಾಲಯದಲ್ಲಿ ಹಲವಾರು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆಯಲ್ಲದೆ, ವಿಶೇಷ ನ್ಯಾಯಾಲಯಗಳಲ್ಲೂ ದೌರ್ಜನ್ಯ ಪ್ರಕರಣಗಳು ಶೀಘ್ರವಾಗಿ ವಿಲೇವಾರಿ ಆಗದಿರುವ ಕುರಿತು ಅಸಮಾಧಾನ ವ್ಯಕ್ತವಾಗಿದೆ.

ಅಲ್ಲದೆ, ಪೊಲೀಸ್ ಮತ್ತು ವಿಚಾರಣೆ ಇಲಾಖೆಯ ಅಧಿಕಾರಿಗಳ ಅಸಮರ್ಥತೆ, ನಿಯಮಾನುಸಾರ ಪ್ರಕರಣಗಳನ್ನು ದಾಖಲಿಸದಿರುವುದು, ಸಮರ್ಪಕವಾಗಿ ತನಿಖೆ ನಡೆಸದಿರುವುದು, ಕಾಲಮಿತಿಯಲ್ಲಿ ವಿಚಾರಣೆ ನಡೆಸದಿರುವುದು, ಸಾಕ್ಷಿಗಳೇ ಪ್ರತಿಕೂಲ ಸಾಕ್ಷಿ ನುಡಿಯುವುದು, ದೋಷಪೂರಿತ ಆರೋಪ ಪಟ್ಟಿ, ಸಾಕ್ಷಿಗಳನ್ನು ಖರೀದಿಸುವುದು, ಎಫ್‌ಐಆರ್‌ನಲ್ಲಿ ಅಗತ್ಯ ಸೆಕ್ಷನ್‌ಗಳನ್ನು ಹಾಕದಿರುವುದೇ ಶಿಕ್ಷೆಯ ಪ್ರಮಾಣ ಕುಂಠಿತವಾಗಲು ಮತ್ತು ಆರೋಪಿಗಳು ಖುಲಾಸೆಯಾಗಲು ಕಾರಣ ಎಂದು ಸಮಿತಿ ಅಭಿಪ್ರಾಯಪಟ್ಟಿತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಎಸ್ಸಿ,ಎಸ್ಟಿ ಕಾಯ್ದೆ; ಉಲ್ಟಾ ಹೊಡೆದ ಕೇಂದ್ರಕ್ಕೆ ಸುಪ್ರೀಂಕೋರ್ಟ್ ತರಾಟೆ

ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಶಿಕ್ಷೆಯ ಪ್ರಮಾಣ ತೀರಾ ಕಡಿಮೆಯಾಗಿದೆ. ಉತ್ತರ ಪ್ರದೇಶದಲ್ಲಿ ಶೇ.೫೪.೧, ತಮಿಳುನಾಡಿನಲ್ಲಿ ಶೇ.೧೨.೫, ಆಂಧ್ರದಲ್ಲಿ ಶೇ.೭.೬ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆ ವಿಧಿಸಲಾಗುತ್ತಿದೆ.

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ೨೦೧೮ರ ಜನವರಿಯಿಂದ ಜೂನ್‌ವರೆಗೆ ಒಟ್ಟು ೬೮೦ ದೂರು ವಿಚಾರಣೆ ಇಲಾಖೆಯಲ್ಲಿ ಸ್ವೀಕೃತವಾಗಿದೆಯಲ್ಲದೆ, ಜುಲೈ ತಿಂಗಳೊಂದರಲ್ಲೇ ೧೪೭ ದೂರುಗಳು ದಾಖಲಾಗಿವೆ. ಈ ಪೈಕಿ ಶಿಕ್ಷೆಯಾಗಿರುವುದು ಕೇವಲ ೨ ಪ್ರಕರಣಗಳಲ್ಲಿ (ಶಿವಮೊಗ್ಗ, ಬೀದರ್) ಮಾತ್ರ; ೮೮ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಇನ್ನು, ೨೦೧೫ರಲ್ಲಿ ಶೇ.೬, ೨೦೧೬ ಮತ್ತು ೨೦೧೭ರಲ್ಲಿ ಶೇ.೫, ೨೦೧೮ರಲ್ಲಿ ಶೇ.೫ರಷ್ಟು ಮಾತ್ರ ಶಿಕ್ಷೆಯಾಗಿದೆ. ಒಟ್ಟಾರೆ ಕಳೆದ ೩ ವರ್ಷಗಳಲ್ಲಿ ೩,೨೮೩ ಪ್ರಕರಣಗಳಲ್ಲಿ ಖುಲಾಸೆ ಆಗಿದ್ದು, ಶಿಕ್ಷೆ ಆಗಿರುವುದು ೧೭೭ ಪ್ರಕರಣಗಳಲ್ಲಷ್ಟೇ ಎಂಬ ಮಾಹಿತಿ ದಾಖಲೆಯಿಂದ ತಿಳಿದುಬಂದಿದೆ.

ಅದೇ ರೀತಿ, ಪರಿ‍ಶಿಷ್ಟರ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರಗಳಿಗೆ ಸಂಬಂಧಿಸಿದಂತೆ ಕಳೆದ ೩ ವರ್ಷಗಳಲ್ಲಿ (೨೦೧೬, ೨೦೧೭, ೨೦೧೮ರ ಅಗಸ್ಟ್‌ವರೆಗೆ) ಒಟ್ಟು ೫,೦೩೨ ಪ್ರಕರಣಗಳು ನಾಗರಿಕ ಜಾರಿ ನಿರ್ದೇಶನಾಲಯದಲ್ಲಿ ವರದಿಯಾಗಿವೆ. ಇದರಲ್ಲಿ ೫೦ ಕೊಲೆ, ೫೧೦ ಅತ್ಯಾಚಾರ ಮತ್ತು ೪,೩೩೭ ದೌರ್ಜನ್ಯ ಪ್ರಕರಣಗಳು ಸೇರಿವೆ. ಈ ಪೈಕಿ, ಕಳೆದ ಮೂರು ವರ್ಷಗಳಲ್ಲಿ ೭೯೭ ‘ಬಿ’ ರಿಪೋರ್ಟ್ ಹಾಕಲಾಗಿದೆ.

3 ವರ್ಷಗಳಲ್ಲಿನ ದೌರ್ಜನ್ಯ ಪ್ರಕರಣಗಳು

  • ೨೦೧೬: ೬೯ ಕೊಲೆ, ೧೮೮ ಅತ್ಯಾಚಾರ, ೧,೬೯೪ ದೌರ್ಜನ್ಯ ಪ್ರಕರಣ
  • ೨೦೧೭: ೭೨ ಕೊಲೆ, ೨೧೧ ಅತ್ಯಾಚಾರ, ೧,೮೪೪ ದೌರ್ಜನ್ಯ ಪ್ರಕರಣ
  • ೨೦೧೮: ೪೪ ಕೊಲೆ, ೧೧೧ ಅತ್ಯಾಚಾರ, ೭೯೯ ದೌರ್ಜನ್ಯ ಪ್ರಕರಣ

ಹಾಗೆಯೇ, ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ೨೦೧೬ರಿಂದ ೨೦೧೮ರ ಆಗಸ್ಟ್‌ ಅಂತ್ಯಕ್ಕೆ ಒಟ್ಟು ೧೦೨ ಪ್ರಕರಣ ವರದಿಯಾಗಿದೆ.

“ನ್ಯಾಯಾಲಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವ ಶೇ.೯೯ರಷ್ಟು ಮಂದಿ ನ್ಯಾಯವಾದಿಗಳು ಮತ್ತು ಅಧಿಕಾರಿಗಳು ಮೇಲ್ವರ್ಗಕ್ಕೆ ಸೇರಿದ್ದಾರೆ. ಹೀಗಾಗಿ, ಇಂತಹ ಪ್ರಕರಣಗಳಲ್ಲಿ ಇವರು ಸರಿಯಾದ ರೀತಿಯಲ್ಲಿ ಸಹಕಾರ ನೀಡದಿರುವುದು ಕೂಡ ಪ್ರಕರಣಗಳ ಹಿನ್ನೆಡೆಗೆ ಕಾರಣ,” ಎನ್ನುತ್ತಾರೆ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರೊಬ್ಬರು.

೨೦೧೬ರ ಅಂತ್ಯಕ್ಕೆ ದೇಶಾದ್ಯಂತ ಒಟ್ಟು ೪೭,೩೩೮ ಪ್ರಕರಣ ದಾಖಲಾಗಿದ್ದರೆ, ಶೇ.೨೪.೯ರಷ್ಟು ಮಾತ್ರ ರುಜುವಾತು ಆಗಿದ್ದವು. ಉಳಿದ ಶೇ.೮೯.೩ರಷ್ಟು ಪ್ರಕರಣ ಇನ್ನೂ ಇತ್ಯರ್ಥಗೊಳ್ಳಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More