ಶಬರಿಮಲೆ ದೇವಾಲಯ ಮಹಿಳೆಯರ ಪ್ರವೇಶ; ಸಮಾನತೆಯನ್ನು ಎತ್ತಿಹಿಡಿದ ಸಂವಿಧಾನ ಪೀಠ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನ ಸಂವಿಧಾನ ಪೀಠ, 800 ವರ್ಷಗಳ ಪದ್ದತಿಗೆ ತೆರೆ ಎಳೆಯುವ ಮೂಲಕ ಮಹಿಳೆಯರ ಸಮಾನತೆಯನ್ನು ಎತ್ತಿ ಹಿಡಿದಿದೆ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನ ಸಂವಿಧಾನ ಪೀಠ, 800 ವರ್ಷಗಳ ಪದ್ದತಿಗೆ ತೆರೆ ಎಳೆಯುವ ಮೂಲಕ ಮಹಿಳೆಯರ ಸಮಾನತೆಯನ್ನು ಎತ್ತಿ ಹಿಡಿದಿದೆ. ಸುಪ್ರೀಂಕೋರ್ಟ್ ನ ಸಿಜೆ ದೀಪಕ್ ಮಿಶ್ರಾ ಸೇರಿದಂತೆ ಐವರು ನ್ಯಾಯಾಧೀಶರ ಪೀಠ ತೀರ್ಪು ಪ್ರಕಟಿಸಿದ್ದು, ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುವುಮಾಡಿಕೊಟ್ಟಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠದ ಐವರು ನ್ಯಾಯಮೂರ್ತಿಗಳಾದ ಆರ್. ಎಫ್ ನಾರಿಮನ್, ಎ ಎಂ ಖಾನ್ವಿಲ್ಕರ್ ಮತ್ತು ಡಿ.ವಿ.ಚಂದ್ರಚೂದ್ ಮಿಶ್ರಾ ಅಭಿಪ್ರಾಯವನ್ನು ಅಂಗೀಕರಿಸಿದರೆ, ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಹೀಗಾಗಿ ಸಂವಿಧಾನಿಕ ಪೀಠ 4: 1 ರ ಬಹುಮತದೊಂದಿಗೆ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದೇ ವೇಳೆ ಮುಟ್ಟಿನ ಸಂದರ್ಭದಲ್ಲೂ ಮಹಿಳೆಯರು ಶಬರಿ ಮಲೆ ದೇವಾಲಯಕ್ಕೆ ಭೇಟಿ ನೀಡಬಹುದು ಎಂಬ ಅಂಶವನ್ನು ಎತ್ತಿಹಿಡಿದಿದೆ. ಮುಟ್ಟಾಗುವಿಕೆ ಸಹಜ ಪ್ರಕ್ರಿಯೆ. ಈ ಕಾರಣಕ್ಕೆ ಆಕೆ ಅಪವಿತ್ರಳು ಎನ್ನುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ನ ಸಂವಿಧಾನಿಕ ಪೀಠ ಇಂದು ನೀಡಿದ ಮಹತ್ವದ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಭಾರತದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರನ್ನು ದುರ್ಬಲರನ್ನಾಗಿ ನೋಡುವುದು ಸರಿಯಲ್ಲ. ನಮ್ಮ ದೇಶದಲ್ಲಿ ಮಹಿಳೆಗೆ ದೇವತೆಯ ಸ್ಥಾನ ನೀಡಲಾಗಿದೆ. ಮಹಿಳೆಯರ ಕುರಿತು ಸಮಾಜದ ಗ್ರಹಿಕೆ ಬದಲಾಗಬೇಕು ಎಂದು ಅಭಿಪ್ರಾಯ ಪಟ್ಟಿರುವ ಸಿಜೆಐ ದೀಪಕ್ ಮಿಶ್ರಾ, 10-50 ವರ್ಷ ವಯೋಮಾನದ ಮಹಿಳೆಯರನ್ನು ನಿಷೇಧಿಸಿರುವುದು ಸಂವಿಧಾನದ ಮೂಲ ತತ್ವಗಳ ಉಲ್ಲಂಘನೆಯಾಗಿದೆ ಎಂದು ಎಂದಿದ್ದಾರೆ.

ಕೇರಳದಲ್ಲಿರುವ ಶಬರಿಮಲೆ ದೇವಾಲಯದ ಆಡಳಿತ ಮಂಡಳಿ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣ ಪ್ರವೇಶಿಸುವಂತಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಕುರಿತಂತೆ ಪ್ರತಿಕ್ರಿಯೆ ನೀಡಿರುವ, ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪದ್ಮಕುಮಾರ್ , ‘ಈ ಕುರಿತಂತೆ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ತೀರ್ಪು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸುವುದಾಗಿ’ ಹೇಳಿದ್ದಾರೆ.

ಮಹಿಳೆಯರಿಗೆ ದೇವಸ್ಥಾನ ಪ್ರವೇಶದ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಕಳೆದ ವರ್ಷದ ಅಕ್ಟೋಬರ್ 13ರಂದು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು. ದೇವಸ್ಥಾನ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ.

ಇದನ್ನೂ ಓದಿ : ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ತಾರತಮ್ಯ ಸಲ್ಲದು ಎಂದು ಘೋಷಿಸಿದ ಸುಪ್ರೀಂ
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More