ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಪ್ರಮುಖ 8 ಸುದ್ದಿಗಳು

ಇಂದು ನೀವು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸುದ್ದಿಗಳು

ಅಕ್ಟೋಬರ್‌ ೩ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಅಕ್ಟೋಬರ್ ೩ರಂದು ನಡೆಯಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್‌ ಪಾಲಿನಲ್ಲಿ ಆರು ಸಚಿವ ಸ್ಥಾನಗಳು ಖಾಲಿಯಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಎಲ್ಲರಿಗೂ ಸಚಿವ ಸ್ಥಾನ ನೀಡಲಾಗದು. ೨೦ ಮಂದಿ ಶಾಸಕರಿಗೆ ನಿಗಮ ಮತ್ತು ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು. ಸಂಪುಟ ವಿಸ್ತರಣೆಯ ನಂತರವೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರ ಉರುಳಲಿದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.

ಕೋಲಾರದ ಕೆರೆಗಳಿಗೆ ಕೆ ಸಿ ವ್ಯಾಲಿ ನೀರು ಹರಿಸಲು ಹೈಕೋರ್ಟ್ ಸೂಚನೆ

ಕೋಲಾರದ ಕೆರೆಗಳಿಗೆ ಸಂಸ್ಕರಿತ ತ್ಯಾಜ್ಯ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ‌ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಬೂದಿಹಾಳರ ದ್ವಿ ಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿ ಆದೇಶ ಹೊರಡಿಸಿದೆ. ಈ ಮೊದಲು ನೀರು ಹರಿಸದಂತೆ ನಿರ್ಬಂಧ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ನ್ಯಾಯಪೀಠ ಇದೇ ವೇಳೆ ತೆರವುಗೊಳಿಸಿದೆ.

ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ: ಹಲವು ಕಟ್ಟಡಗಳು ನೆಲಸಮ

ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.5ರಷ್ಟು ದಾಖಲಾಗಿದೆ. ಘಟನೆಯಿಂದ ಹಲವು ಕಟ್ಟಡ ಹಾಗೂ ಮನೆಗಳು ದ್ವಂಸಗೊಂಡಿದೆ. ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯ ಭೂಕಂಪನ ಸಂಭವಿಸಿದ ಪರಿಣಾಮ ಒಬ್ಬ ವ್ಯಕ್ತಿ ಸಾವನಪ್ಪಿ ಹಲವು ಮಂದಿ ಗಾಯಗೊಂಡಿದ್ದರು. ಹೀಗಾಗಿ ಸುನಾಮಿ ಎಚ್ಚರಿಕೆಯನ್ನು ನೀಡಿದ ಅಧಿಕಾರಿಗಳು ಬಳಿಕ, ಇದನ್ನು ವಾಪಸ್ ಪಡೆದಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಸೆಂಟ್ರಲ್ ಸುಲಾವೆಸಿ ಪಟ್ಟಣದಿಂದ ಈಶಾನ್ಯಕ್ಕೆ 56 ಕಿ.ಮೀ ದೂರ, 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. 2004ರಲ್ಲಿ ಇಂಡೋನೇಷಿಯಾ ಸುಮಾತ್ರಾ ದ್ವೀಪದ ಬಳಿ 9.1ರ ತೀವ್ರತೆಯ ಭೂಕಂಪನ ಸಂಭವಿಸಿ ಸುನಾಮಿ ಉಂಟಾದ ಪರಿಣಾಮ ಭಾರತ ಸೇರಿ ಸುತ್ತ ಮುತ್ತಲ ರಾಷ್ಟ್ರಗಳಲ್ಲಿ ಸುಮಾರು ಎರಡು ಲಕ್ಷ ಮಂದಿ ಸಾವಿಗೀಡಾಗಿದ್ದರು.

ವಿತ್ತೀಯ ವಿವೇಕ ಪಾಲನೆ; 70,000 ಕೋಟಿ ಸಾಲ ತಗ್ಗಿಸಲು ಕೇಂದ್ರದ ನಿರ್ಧಾರ

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೇಂದ್ರ ಸರ್ಕಾರವು ಪಡೆಯಲು ಉದ್ದೇಶಿಸಿದ್ದ ಸಾಲದ ಪೈಕಿ 70,000 ಕೋಟಿ ರುಪಾಯಿಗಳಷ್ಟು ತಗ್ಗಿಸಲು ನಿರ್ಧರಿಸಿದೆ. ಬಜೆಟ್ ನಲ್ಲಿ ನಿಗದಿ ಪಡಿಸಿರುವ ವಿತ್ತೀಯ ಕೊರತೆ ಪ್ರಮಾಣ ಜಿಡಿಪಿಯ ಶೇ.3.3ರಷ್ಟು ಕಾಯ್ದುಕೊಳ್ಳುವ ಸಲುವಾಗಿ ಸಾಲ ಪ್ರಮಾಣ ತಗ್ಗಿಸಲಾಗುತ್ತಿದೆ ಎಂದು ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ತಿಳಿಸಿದ್ದಾರೆ. ಸರ್ಕಾರ ತನ್ನ ಆರ್ಥಿಕ ಅಗತ್ಯ ಪೂರೈಸಿಕೊಳ್ಳಲು ಹೊರಗಿನ ಸಾಲದ ಬದಲಿಗೆ ಸಣ್ಣ ಉಳಿತಾಯವನ್ನು ಅವಲಂಬಿಸಲಿದೆ. ಸದ್ಯಕ್ಕೆ ವಿತ್ತೀಯ ಲೆಕ್ಕಾಚಾರಗಳು ಸರ್ಕಾರದ ಹಿಡಿತದಲ್ಲೇ ಇವೆ. ವರ್ಷಾಂತ್ಯಕ್ಕೆ ವಿತ್ತೀಯಕೊರತೆ ಮಿತಿಯನ್ನು ಕಾಯ್ದುಕೊಳ್ಳುವ ವಿಶ್ವಾಸ ಇದೆ ಎಂದು ಗಾರ್ಗ್ ಹೇಳಿದ್ದಾರೆ.

ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ‘ಇನ್‌ಸೈಡ್‌ ಎಡ್ಜ್‌’

ಅಮೇಜಾನ್‌ ಸ್ಟ್ರೀಮಿಂಗ್‌ ಕಂಪನಿಯ ‘ಇನ್‌ಸೈಡ್‌ ಎಡ್ಜ್‌’ ವೆಬ್ ಸರಣಿ ಎಮ್ಮಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಕ್ರಿಕೆಟ್‌ ಥೀಮ್‌ನ ಈ ಭಾರತದ ಸರಣಿ ‘ಬೆಸ್ಟ್‌ ಡ್ರಾಮಾ’ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಬಾಲಿವುಡ್‌ ಚಿತ್ರನಿರ್ದೇಶಕರಾದ ಫರ್ಹನ್ ಅಖ್ತರ್ ಮತ್ತು ರಿತೇಶ್ ಸಿದ್ವಾನಿ ತಮ್ಮ ಎಕ್ಸೆಲ್ ಮೀಡಿಯಾ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. 2017ರ ಜುಲೈನಲ್ಲಿ ಸರಣಿ ಅಮೇಜಾನ್‌ನಲ್ಲಿ ಸ್ಟ್ರೀಮ್ ಆಗಿತ್ತು. ವಿವೇಕ್ ಒಬೆರಾಯ್‌, ರಿಚಾ ಛಡ್ಡಾ, ತನುಜ್ ವಿರ್ವಾನಿ, ಸಿದ್ಧಾಂತ್ ಚತುರ್ವೇದಿ, ಸಂಜಯ್ ಸೂರಿ, ಅಂಗದ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟಿ೨೦ ಲೀಗ್‌ನಲ್ಲಿ ಗೇಲ್, ಮಾಲಿಂಗ

ವಿಶ್ವ ಕ್ರಿಕೆಟ್‌ನ ಪ್ರಚಂಡ ಆಟಗಾರರಾದ ಕ್ರಿಸ್ ಗೇಲ್, ಲಸಿತ್ ಮಾಲಿಂಗ, ಮಾರ್ನಿ ಮಾರ್ಕೆಲ್ ಮತ್ತು ರಶೀದ್ ಖಾನ್ ಇದೇ ನವೆಂಬರ್ ೨೩ರಿಂದ ಡಿಸೆಂಬರ್ ೨ರವರೆಗೆ ಶಾರ್ಜಾದಲ್ಲಿ ನಡೆಯಲಿರುವ ವಿಶ್ವ ಟಿ೧೦ ಲೀಗ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಎಂಟು ತಂಡಗಳ ಈ ಎರಡನೇ ಆವೃತ್ತಿಯಲ್ಲಿ ೬೦ ಪ್ರಮುಖ ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ. ಕೇರಳ ಕಿಂಗ್ಸ್, ಪಂಜಾಬ್ ಲೆಜೆಂಡ್ಸ್, ಮರಾಠ ಅರೇಬಿಯನ್ಸ್, ಬೆಂಗಾಲ್ ಟೈಗರ್ಸ್, ದಿ ಕರಾಚಿಯನ್ಸ್, ರಜಪೂತ್ಸ್, ನಾರ್ದರ್ನ್ ವಾರಿಯರ್ಸ್ ಮತ್ತು ಪಾಕ್ಥೂನ್ಸ್ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಕಳೆದ ಬಾರಿ ಆರು ತಂಡಗಳಿತ್ತಾದರೂ, ದಿ ಕರಾಚಿಯನ್ಸ್ ಮತ್ತು ನಾರ್ದರ್ನ್ ವಾರಿಯರ್ಸ್‌ನ ಸೇರ್ಪಡೆಯಿಂದ ಈ ಬಾರಿ ಎಂಟು ತಂಡಗಳು ವಿಶ್ವ ಟಿ೧೦ ಲೀಗ್‌ನಲ್ಲಿ ಸೆಣಸಲಿವೆ. ಆಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್, ಮರಾಠ ಅರೇಬಿಯನ್ಸ್ ಅನ್ನು ಮುನ್ನಡೆಸುತ್ತಿರುವುದು ವಿಶೇಷ.

ಭಾರತ ವಿರುದ್ಧ ಹಠಾತ್ ಕುಸಿತ ಕಂಡ ಬಾಂಗ್ಲಾದೇಶ

ಆರಂಭಿಕ ಆಟಗಾರ ಲಿಟನ್ ದಾಸ್ (೧೨೪) ಚೊಚ್ಚಲ ಏಕದಿನ ಶತಕದಲ್ಲಿ ಸವಾಲಿನ ಮೊತ್ತದತ್ತ ಸಾಗಿದ್ದ ಬಾಂಗ್ಲಾದೇಶ, ಹಠಾತ್ ಕುಸಿತ ಕಂಡಿತು. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ನಡೆದ ಪ್ರತಿಷ್ಠಿತ ಏಷ್ಯಾ ಕಪ್ ಫೈನಲ್ ಹಣಾಹಣಿಯಲ್ಲಿ ಬಾಂಗ್ಲಾದೇಶ, ಲಿಟನ್ ದಾಸ್ ಅವರ ಭರ್ಜರಿ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಕಂಡಿತು. ೨೧ ಓವರ್‌ಗಳಲ್ಲಿ ಕೇವಲ ೧ ವಿಕೆಟ್ ನಷ್ಟಕ್ಕೆ ೧೨೦ ರನ್ ಗಳಿಸಿದ್ದ ಬಾಂಗ್ಲಾದೇಶ, ೪೦ನೇ ಓವರ್‌ನ ಕೊನೇ ಎಸೆತದಲ್ಲಿ ಲಿಟನ್ ದಾಸ್ ಕಳೆದುಳ್ಳುವ ಹೊತ್ತಿಗೆ ಒಂದರ ಹಿಂದೊಂದರಂತೆ ಐದು ವಿಕೆಟ್ ಕಳೆದುಕೊಂಡು ೧೮೮ ರನ್ ಗಳಿಸಿತು. ಮಧ್ಯಂತರದಲ್ಲಿ ಕುಸಿತ ಕಂಡ ಅದು, ಕೊನೆಯ ಐದು ಓವರ್‌ಗಳು ಬಾಕಿ ಇವೆ ಎನ್ನುವಾಗ ೭ ವಿಕೆಟ್ ನಷ್ಟಕ್ಕೆ ೨೦೨ ರನ್ ಗಳಿಸಿತ್ತು. ಸೌಮ್ಯ ಸರ್ಕಾರ್ ಮತ್ತು ನಜ್ಮುಲ್ ಇಸ್ಲಾಮ್ ಕ್ರಮವಾಗಿ ೨೩ ಮತ್ತು ೧ ರನ್ ಗಳಿಸಿ ಆಡುತ್ತಿದ್ದರು.

ಮೋದಿ ಸಮರ್ಥಿಸಿದ ಪವಾರ್; ಎನ್‌ಸಿಪಿ ತೊರೆದ ಅನ್ವರ್‌

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸುವ ಹೇಳಿಕೆ ನೀಡಿದ್ದ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರ ನಡೆಯನ್ನು ವಿರೋಧಿಸಿ ಎನ್‌ಸಿಪಿ ಸಂಸದ ತಾರೀಖ್‌ ಅನ್ವರ್‌ ಪಕ್ಷ ತೊರೆದಿದ್ದಾರೆ. “ರಫೇಲ್‌ ಹಗರಣದ ಕುರಿತು ಸಂಪೂರ್ಣ ತನಿಖೆಯಾಗಬೇಕು. ಶರದ್‌ ಪವಾರ್‌ ಹೇಳಿಕೆ ನೋವುಂಟು ಮಾಡಿದ್ದು, ಅದಕ್ಕಾಗಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ” ಎಂದು ಅನ್ವರ್ ತಿಳಿಸಿದ್ದಾರೆ. ಬಿಹಾರದ ಕಟಿಹಾರ್‌ನಿಂದ ಎನ್‌ಸಿಪಿ ಸಂದರಾಗಿ ಆಯ್ಕೆಯಾಗಿರುವ ಅನ್ವರ್ ಅವರು ಪವಾರ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಮರಾಠಿ ಸುದ್ದಿ ವಾಹಿನಿ ಜೊತೆ ಈಚೆಗೆ ಮಾತನಾಡಿದ್ದ ಶರದ್‌ ಪವಾರ್ ಅವರು “ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೋದಿಯವರ ಉದ್ದೇಶದ ಬಗ್ಗೆ ಜನರಿಗೆ ಅನುಮಾನವಿಲ್ಲ” ಎಂದು ಹೇಳಿಕೆ ನೀಡಿದ್ದರು. ಇದನ್ನೇ ಮುಂದು ಮಾಡಿ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಪ್ರತಿದಾಳಿ ಆರಂಭಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More