ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡಿಸೇಲ್ ಕುರಿತು ನಿರ್ಧಾರ ಕೈಗೊಳ್ಳದ ಮಂಡಳಿ

ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡಿಸೇಲ್ ತರಬೇಕೆಂಬ ವಿಷಯದ ಕುರಿತಂತೆ 30ನೇ ಜಿಎಸ್ಟಿ ಮಂಡಳಿ ಸಭೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸತತ ಏರುತ್ತಿರುವುದರಿಂದ ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಇದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ!

ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರುವ ಸಾಧ್ಯತೆ ಕ್ಷೀಣಿಸಿದೆ. ಶುಕ್ರವಾರ ನಡೆದ ಜಿಎಸ್ಟಿ ಮಂಡಳಿಯ 30ನೇ ಸಭೆಯಲ್ಲಿ ಸಹ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಕುರಿತಂತೆ ಚರ್ಚೆ ನಡೆಸಲಿಲ್ಲ.

ರಾಷ್ಟ್ರವ್ಯಾಪಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರುತ್ತಲೇ ಇರುವ ಹಿನ್ನೆಲೆಯಲ್ಲಿ ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಹೆಚ್ಚಿದೆ. ಪೆಟ್ರೋಲ್ ಮತ್ತು ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ತಂದರೆ ದರ ಇಳಿಯುತ್ತದೆ ಎಂಬುದು ಲೆಕ್ಕಾಚಾರ. ಅಂದರೆ ಜಿಎಸ್ಟಿಯ ಗರಿಷ್ಠ ಹಂತದ ತೆರಿಗೆ ಅಂದರೆ ಶೇ.28ರಷ್ಟು ವಿಧಿಸಿದರೂ ಈಗಿರುವ ಪೆಟ್ರೋಲ್ ಮತ್ತು ಡಿಸೇಲ್ ದರವು ಕನಿಷ್ಠ ಶೇ.40ರಷ್ಟು ತಗ್ಗುತ್ತದೆ. ಪ್ರಸ್ತುತ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಕೇಂದ್ರ ಮತ್ತು ರಾಜ್ಯಗಳು ವಿಧಿಸುತ್ತಿರುವ ಪ್ರತ್ಯೇಕ ತೆರಿಗೆಗಳಿಂದಾಗಿ ತೆರಿಗೆ ಪ್ರಮಾಣವೇ ಶೇ.100ಕ್ಕಿಂತಲೂ ಹೆಚ್ಚಿದೆ.

ಪೆಟ್ರೋಲಿಯಂ ಸಚಿವಾಲಯವೂ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಇಟ್ಟಿದೆ. ಆದರೆ, ಹಣಕಾಸು ಸಚಿವಾಲಯವು ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಕೆಲವು ರಾಜ್ಯಗಳು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಇಟ್ಟಿದ್ದರೂ ಎಲ್ಲಾ ರಾಜ್ಯಗಳು ಈ ಬೇಡಿಕೆ ಇಟ್ಟಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕದಿಂದ ದೊಡ್ಡ ಪ್ರಮಾಣದಲ್ಲಿ ತೆರಿಗೆ ಆದಾಯ ಸಂಗ್ರಹವಾಗುತ್ತಿದೆ. ಒಂದು ವೇಳೆ ಜಿಎಸ್ಟಿ ವ್ಯಾಪ್ತಿಗೆ ತಂದರೆ ಈ ತೆರಿಗೆ ಆದಾಯ ಕಡಿತವಾಗುತ್ತದೆ. ಅದನ್ನು ಸರಿದೂಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಷ್ಟವಾಗುತ್ತದೆ. ಹೀಗಾಗಿ ವ್ಯವಸ್ಥಿತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತುರುವ ಕುರಿತಂತೆ ಜಿಎಸ್ಟಿ ಮಂಡಳಿಯಲ್ಲಿ ಚರ್ಚೆ ನಡೆಸಲು ಮುಂದಾಗುತ್ತಿಲ್ಲ.

ಶುಕ್ರವಾರ ಜಿಎಸ್ಟಿ ಮಂಡಳಿ ಸಭೆ ನಂತರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ವಿಚಾರವು ಮಂಡಳಿ ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ ಎಂದಷ್ಟೇ ಹೇಳಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕ ಕಡಿತ ಮಾಡುವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಎಂದು ಜೇಟ್ಲಿ ಸ್ಪಷ್ಟ ಪಡಿಸಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬಳಕೆ ಪ್ರಮಾಣವನ್ನು ತಗ್ಗಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ ಎಂದು ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಜಿನ್ಯೂಸ್ ವರದಿ ಮಾಡಿದೆ. ಪೆಟ್ರೋಲ್, ಡಿಸೇಲ್ ಬಳಕೆ ತಗ್ಗಿದರೆ ಚಾಲ್ತಿ ಖಾತೆ ಕೊರತೆ ಪ್ರಮಾಣವು ತಗ್ಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ. ಅಂದರೆ, ಸದ್ಯಕ್ಕೆ ಕೇಂದ್ರ ಸರ್ಕಾರ ಸುಂಕ ತಗ್ಗಿಸುವ ಸಾಧ್ಯತೆ ಇಲ್ಲ.

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ ಹಿಗ್ಗಿದೆ. ಹೀಗಾಗಿ ಅನಗತ್ಯ ಮತ್ತು ಐಷಾರಾಮಿ ವಸ್ತುಗಳ ಆಮದು ಮೇಲೆ ಕೇಂದ್ರ ನಿರ್ಬಂಧ ಹೇರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುತ್ತಿರುವುದರಿಂದ ಪ್ರಸಕ್ತ ವಿತ್ತೀಯ ವರ್ಷದ ಅಂತ್ಯದೊಳಗೆ ಚಾಲ್ತಿ ಖಾತೆ ಕೊರತೆ ಪ್ರಮಾಣ ಶೇ.5ಕ್ಕೇರುವ ಸಾಧ್ಯತೆ ಇದೆ.

ಇದನ್ನೂ ಓದಿ : ಮೋದಿ ಮ್ಯಾಜಿಕ್: ಈ ವರ್ಷ ಡಿಸೇಲ್ ₹15.15, ಪೆಟ್ರೋಲ್ ₹13.24 ದರ ಏರಿಕೆ

ಈ ನಡುವೆ, ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮುಂದುವರಿದಿದೆ. ರಾಜ್ಯ ಸರ್ಕಾರ 2 ರುಪಾಯಿ ತೆರಿಗೆ ಕಡಿತ ಮಾಡಿದ ನಂತರವೂ ಬೆಂಗಳೂರಿನಲ್ಲಿ ಪೆಟ್ರೋಲ್ ದರ 83.88 ರುಪಾಯಿಗೆ ಏರಿದ್ದರೆ, ಡಿಸೇಲ್ 74.80 ರುಪಾಯಿಗೆ ಏರಿದೆ.

ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡಿದ ನಂತರದ ಏರಿಕೆಯಲ್ಲಿ ಪೆಟ್ರೋಲ್ 1 ರುಪಾಯಿ ಹೆಚ್ಚಿದ್ದು, ಡಿಸೇಲ್ 75 ಪೈಸೆಯಷ್ಟು ಹೆಚ್ಚಿದೆ. ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡುವ ಪೂರ್ವದಲ್ಲಿದ್ದ ದರವನ್ನು ತಲುಪಲಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More