ರಫೇಲ್ ಡೀಲ್ | ಈಗ ಬಿಜೆಪಿ ಸರಿ ಎನ್ನುತ್ತಿರುವ ಸ್ವಾಮಿ 3 ವರ್ಷದ ಹಿಂದೆ ಹೇಳಿದ್ದೇನು?

ರಫೇಲ್ ಒಪ್ಪಂದ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸುವಂತಹ ಪುರಾವೆಗಳು ಕಾಂಗ್ರೆಸ್ ಬಳಿ ಇಲ್ಲ ಎನ್ನುತ್ತಿದ್ದಾರೆ ಸುಬ್ರಮಣಿಯನ್ ಸ್ವಾಮಿ. ಆದರೆ, 2015ರಲ್ಲಿ, ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು ಪಕ್ಷಕ್ಕೆ ಕಳಂಕ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು!

ರಫೇಲ್ ಯುದ್ಧ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರೋಧಪಕ್ಷ ಕಾಂಗ್ರೆಸ್ಸಿಗೆ ಬುದ್ಧಿಮಾತು ಹೇಳುವ, ಸವಾಲು ಹಾಕುವಂತೆ ಭಾಸವಾಗುವ ಮಾತುಗಳನ್ನಾಡುತ್ತಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿರುವ ಕಾಂಗ್ರೆಸ್, ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಪ್ರಧಾನಿ ಮೋದಿ ಭ್ರಷ್ಟರು ಎಂದು ಹೇಳುವ ಪುರಾವೆಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಆಧಾರಗಳೇ ಇಲ್ಲದೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಶಿಫಾರಸು ಮಾಡುವಂತೆ ಪಕ್ಷ ಆಗ್ರಹಿಸುವುದು ಸರಿಯಲ್ಲ,” ಇತ್ಯಾದಿ ಆರೋಪಗಳನ್ನು ಅವರು ಮಾಡುತ್ತಿದ್ದಾರೆ.

ಆದರೆ, ಇದೇ ಸುಬ್ರಮಣಿಯನ್ ಸ್ವಾಮಿ ಮೂರು ವರ್ಷಗಳ ಹಿಂದೆ, ಅಂದರೆ 2015ರಲ್ಲಿ, “ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಅದು ಬಿಜೆಪಿಗೆ ಕಳಂಕ ತರಲಿದೆ,” ಎಂಬ ಮಾತುಗಳನ್ನಾಡಿದ್ದರು! 2015ರ ಏಪ್ರಿಲ್ 11ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಜಾಲತಾಣದಲ್ಲಿ ಪ್ರಕಟವಾಗಿರುವ ವರದಿಯೊಂದು ಸ್ವಾಮಿ ಅವರ ಅಂದಿನ ನಿಲುವನ್ನು ವಿವರಿಸುತ್ತದೆ. “ಯಾರೂ ರಫೇಲ್ ಯುದ್ಧವಿಮಾನ ಖರೀದಿಸಲು ಬಯಸುತ್ತಿಲ್ಲ. ಕೇಂದ್ರ ಸರ್ಕಾರ ಮನಸ್ಸು ಮಾಡದಿದ್ದರೆ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಡಸಾಲ್ಟ್ ಹೇಳುತ್ತಿದೆ. ಮೊದಲು ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸ್ವಿಟ್ಜರ್ಲೆಂಡ್ ರೀತಿಯ ದೇಶಗಳು ನಂತರ ಅದನ್ನು ರದ್ದುಪಡಿಸಿದ್ದವು,” ಎಂದು ಅವರು ಹೇಳಿಕೆ ನೀಡಿದ್ದರು.

“ಸರ್ಕಾರ ಫ್ರಾನ್ಸ್ ದೇಶವನ್ನು ಓಲೈಸಲೇಬೇಕು ಎಂದಾಗಿದ್ದರೆ ಅದು ಈ ಒಪ್ಪಂದ ಮಾಡಿಕೊಳ್ಳುವ ಬದಲಿಗೆ ನಷ್ಟದಲ್ಲಿರುವ ಡಸಾಲ್ಟ್ ಕಂಪನಿಯನ್ನು ಖರೀದಿಸಬಹುದಿತ್ತು,” ಎಂದೂ ವ್ಯಂಗ್ಯವಾಡಿದ್ದರು. “ಒಂದು ವೇಳೆ, ಒಪ್ಪಂದದಿಂದ ಹಿಂದೆ ಸರಿಯದಿದ್ದರೆ ನಾನು ಕೋರ್ಟಿಗೆ ಹೋಗಬೇಕಾಗುತ್ತದೆ. ಇದೊಂದು ಭ್ರಷ್ಟ ಒಪ್ಪಂದ. ಇದರಿಂದ ಪಕ್ಷಕ್ಕೆ ಹೆಸರು ಕೆಡುತ್ತದೆ. ಅಧಿಕಾರಿಗಳು ನರೇಂದ್ರ ಮೋದಿ ಅವರಿಗೆ ತಪ್ಪು ಸಲಹೆಗಳನ್ನು ನೀಡುತ್ತಿದ್ದಾರೆ. ರಕ್ಷಣಾ ಸಚಿವಾಲಯದ ನಿಲುವು ಕೂಡ ಇದಲ್ಲ,” ಎಂದು ಅವರು ಹೇಳಿದ್ದರು. ಸೇನೆಗೆ ತುರ್ತಾಗಿ ಯುದ್ಧ ವಿಮಾನಗಳ ಅಗತ್ಯವಿರುವುದರಿಂದ ಫ್ರಾನ್ಸ್‌ನಿಂದ 36 ರಫೇಲ್ ವಿಮಾನಗಳನ್ನು ಖರೀದಿಸುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿಕೆ ನೀಡಿದ ಒಂದು ದಿನದ ಬಳಿಕ ಸ್ವಾಮಿ ಈ ರೀತಿ ಪ್ರತಿಕ್ರಿಯಿಸಿದ್ದರು.

ಆದರೆ, ಅದೇ ಸ್ವಾಮಿ ಮೂರು ವರ್ಷಗಳಲ್ಲಿ ತಮ್ಮ ನಿಲುವು ಬದಲಿಸಿದ್ದಾರೆ. ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಎರಡು ಅರ್ಥ ಇರುವಂತಿದೆ; ಬಿಜೆಪಿಯನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಮೊದಲನೆಯ ಅರ್ಥವಾದರೆ, ಇನ್ನಷ್ಟು ದಾಖಲೆಗಳೊಂದಿಗೆ ಬಂದರಷ್ಟೇ ಗುರಿ ನಿಖರವಾಗಿ ತಲುಪಲು ಆಗುತ್ತದೆ ಎಂಬುದು ಇನ್ನೊಂದು ಅರ್ಥ. ಇದು ಪಕ್ಷಕ್ಕೆ ನೀಡುತ್ತಿರುವ ಎಚ್ಚರಿಕೆಯೋ ಅಥವಾ ಕಾಂಗ್ರೆಸ್ಸಿಗೆ ನೀಡುತ್ತಿರುವ ಸಲಹೆಯೋ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಸ್ವಾಮಿ ತಮ್ಮ ನಿಲುವನ್ನು ಬದಲಿಸಿದ್ದೇಕೆ ಎಂಬುದನ್ನು ಗಮನಿಸಬೇಕು.

ರಫೇಲ್ ಒಪ್ಪಂದದ ವೇಳೆ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ, ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್ ನೀಡಿದ ಹೇಳಿಕೆ, ಬಳಿಕ ಹೊಲಾಂದ್ ಸಂಗಾತಿ ಜ್ಯೂಲಿ ಗಯೇ ಅವರಿಗೆ ಸಿನಿಮಾ ನಿರ್ಮಿಸಲು ರಿಲಯನ್ಸ್ ಎಂಟರ್ಟೇನ್ಮೆಂಟ್ ಸಂಸ್ಥೆ ಹಣ ತೊಡಗಿಸಿದ ಸಂಗತಿ, ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಅವರನ್ನು ರಕ್ಷಿಸಲು ಯುಪಿಎ-2 ಮತ್ತು ಮೋದಿ ಸರ್ಕಾರಗಳು ನಡೆದುಕೊಂಡ ರೀತಿ ಸಾಕ್ಷ್ಯ ಒದಗಿಸುತ್ತಿವೆ. ಜೊತೆಗೆ ಸುಬ್ರಮಣಿಯನ್ ಸ್ವಾಮಿ ಅವರ ಈ ಹಿಂದಿನ ಹೇಳಿಕೆಗಳೂ ಭ್ರಷ್ಟಾಚಾರದ ಹೊಗೆಯಾಡುತ್ತಿರುವುದನ್ನು ಸ್ಪಷ್ಟಪಡಿಸುತ್ತಿವೆ.

ಇದನ್ನೂ ಓದಿ : ರಫೇಲ್ ಡೀಲ್ ಹಗರಣ ಬೂದಿ ಮುಚ್ಚಿದ ಕೆಂಡದಂತೆ ಗೌಪ್ಯವಾಗಿರಲು ಕಾರಣವೇನು?

ಪ್ರಧಾನಿ ಮೋದಿ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬುದಕ್ಕೆ ಕಾಂಗ್ರೆಸ್ ಗಟ್ಟಿ ಸಾಕ್ಷ್ಯ ಒದಗಿಸಬೇಕು ಎಂಬುದು ಸುಬ್ರಮಣಿಯನ್ ಸ್ವಾಮಿ ಅವರ ಈಗಿನ ವಾದ. ಆದರೆ, ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಕೇಳಿರುವ ಪ್ರಶ್ನೆಗಳು, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ವ್ಯಕ್ತಪಡಿಸಿರುವ ಅನುಮಾನಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಿರುವ ಹೇಳಿಕೆಗಳು ಬಿಜೆಪಿ ಮತ್ತು ಪ್ರಧಾನಿ ಅವರತ್ತ ಬೊಟ್ಟು ಮಾಡುತ್ತಲೇ ಇವೆ. ಅಲ್ಲದೆ, ರಫೇಲ್ ಒಪ್ಪಂದದ ನಂಟು ಹೊಂದಿದ್ದ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳದೆ, ಯುಪಿಎ-2 ಆಡಳಿತ ಕೂಡ ಲೋಪ ಎಸಗಿದೆ. ದೇಶದ ಜನತೆಗೆ ಈಗ ಅಗತ್ಯವಿರುವುದು ಅವ್ಯವಹಾರ ನಡೆದಿದೆಯೇ ಎಂಬುದರ ಬಗ್ಗೆ. ಆ ನೆಲೆಯಲ್ಲಿ ಪಕ್ಷಾತೀತವಾದ ಸತ್ಯವೊಂದನ್ನು ಕಂಡುಕೊಳ್ಳುವ ಅಗತ್ಯವಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More