ಐಎಎಸ್‌ ಅಧಿಕಾರಿ ವರ್ತನೆಗೆ ರೋಸಿಹೋದ ಸಚಿವರಿಂದ ಖಾತೆ ಬದಲಿಸಲು ಸಿಎಂಗೆ ಮೊರೆ!

ಅಕ್ಟೋಬರ್‌ ೩ರ ನಂತರ ಸಂಪುಟ ವಿಸ್ತರಣೆ ಎಂಬ ಸುದ್ದಿ ಸಚಿವ ಆಕಾಂಕ್ಷಿಗಳಲ್ಲಿ ಹೊಸ ಆಸೆ ಗರಿಗೆದರಿಸಿದೆ. ಆದರೆ, ಐಎಎಸ್ ಅಧಿಕಾರಿಗಳ ವರ್ತನೆಯಿಂದ ಬೇಸತ್ತಿರುವ ಕೆಲ ಹಾಲಿ ಸಚಿವರು, ಈಗಿರುವ ಖಾತೆಯನ್ನು ಬದಲಾಯಿಸಿಕೊಡಿ ಎಂದು ಅಲವತ್ತುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದರ ಭಾಗವಾಗಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒಂದೆಡೆ ತಲೆನೋವಾಗಿ ಪರಿಣಿಮಿಸಿವೆ. ಮತ್ತೊಂದೆಡೆ, ಸಚಿವ ಸ್ಥಾನ ಸಿಗದೆ ಇರುವ ಹಲವು ಆಕಾಂಕ್ಷಿಗಳಲ್ಲಿನ ಅಸಮಾಧಾನವನ್ನು ತಣ್ಣಗಾಗಿಸುವ ಯತ್ನಕ್ಕೆ ಕೈ ಹಾಕಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಅಕ್ಟೋಬರ್‌ ೩ರ ನಂತರ ಸಂಪುಟ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಲಾಭ ಪಡೆದಿರುವಂತೆ ವರ್ತಿಸುತ್ತಿರುವ ಅಧಿಕಾರಶಾಹಿ, ರಾಜಕೀಯವಾಗಿ ಅಷ್ಟೊಂದು ಪ್ರಬಲವಲ್ಲದ ಮತ್ತು ಮೃದು ಧೋರಣೆ ಹೊಂದಿರುವ ಸಚಿವರನ್ನು ನಿರ್ಲಕ್ಷ್ಯಿಸುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಸಚಿವರ ಮಾತುಗಳನ್ನು ಅನೇಕ ಐಎಎಸ್‌ ಅಧಿಕಾರಿಗಳು ಕೇಳುತ್ತಿಲ್ಲ. ಇಲಾಖೆಗಳ ಕಾರ್ಯದರ್ಶಿ ಹುದ್ದೆಯಲ್ಲಿರುವ ಐಎಎಸ್‌ ಅಧಿಕಾರಿಗಳು ಇಂತಹ ಸಚಿವರಿಗೆ ಬಹುಮುಖ್ಯ ಕಡತಗಳನ್ನು ಕಳಿಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರಲ್ಲದೆ, ಸಚಿವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಅಧಿಕಾರಶಾಹಿಯ ಈ ಧೋರಣೆಗೆ ಹಲವು ಸಚಿವರು ಬೇಸತ್ತಿದ್ದರೆ, ಕೆಲವರು ರೋಸಿಹೋಗಿದ್ದಾರೆ. ಐಎಎಸ್ ಅಧಿಕಾರಿಗಳು ತಮ್ಮನ್ನು ಗಂಭೀರವಾಗಿ ಪರಿಗಣಿಸದ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಸಚಿವರುಗಳು ಸಾಕಷ್ಟು ಬಾರಿ ಮೌಖಿಕವಾಗಿ ದೂರು ಸಲ್ಲಿಸಿದ್ದಾರಲ್ಲದೆ, ಖಾತೆ ಬದಲಾಯಿಸಿಕೊಡಿ ಎಂದು ಅಲವತ್ತುಕೊಂಡಿದ್ದಾರೆ. ಇದಕ್ಕೆ ಈಚಿನ ಸೇರ್ಪಡೆ ಕಾರ್ಮಿಕ ಇಲಾಖೆ ಸಚಿವ ವೆಂಕಟರಮಣಪ್ಪ. ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಖಾತೆ ಬದಲಾಯಿಸಿಕೊಡಿ ಎಂದು ವೆಂಕಟರಮಣಪ್ಪ ಕೇಳಿಕೊಂಡಿದ್ದಾರೆ ಎಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ. ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ಕಾರ್ಯವೈಖರಿ ಮತ್ತು ಧೋರಣೆಯೇ ಇದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.

ಕಾರ್ಮಿಕ ಇಲಾಖೆ ಅಧೀನದಲ್ಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಚಟುವಟಿಕೆಗಳು, ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ಬಳಕೆ, ಉಪಕರಣಗಳ ಖರೀದಿ, ಮೂರನೇ ಸಂಸ್ಥೆಯ ಮೌಲ್ಯಮಾಪನವಿಲ್ಲದೆಯೇ ೧೦೦ ಕೋಟಿ ರು.ಗಳಿಗೂ ಅಧಿಕ ಮೊತ್ತದ ಯೋಜನೆಗೆ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ತಮ್ಮ ಹಂತದಲ್ಲೇ ಅನುಮೋದನೆ ನೀಡುತ್ತಿದ್ದಾರೆ. ಯೋಜನೆಯ ಸಾಧಕ-ಬಾಧಕಗಳ ಕುರಿತು ಸೂಕ್ತ ವರದಿ ಇಲ್ಲದೆಯೇ ಖಾಸಗಿ ಕಂಪನಿ, ಸಂಸ್ಥೆಗಳಿಗೆ ಬೇಕಾಬಿಟ್ಟಿಯಾಗಿ ಹಣ ಪಾವತಿಸಲು ಒಪ್ಪಿಗೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ. ಬಹುತೇಕ ನಿರ್ಧಾರಗಳು ಕಾರ್ಯದರ್ಶಿ ಮಟ್ಟದಲ್ಲೇ ಅಂತಿಮಗೊಳ್ಳುತ್ತಿರುವ ಕಾರಣ, ಸಚಿವ ವೆಂಕಟರಮಣಪ್ಪ ಅವರು ಆಪ್ತರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರಲ್ಲದೆ, ಹಲವು ಸಂದರ್ಭಗಳಲ್ಲಿ ಮುಜುಗರಕ್ಕೊಳಗಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಐಎಎಸ್‌ ಅಧಿಕಾರಿಗಳ ನಿರ್ಲಕ್ಷ್ಯ; ತೆರಿಗೆ ಇಲಾಖೆಯಿಂದ ೪೫೦ ಕೋಟಿ ರು. ಮುಟ್ಟುಗೋಲು

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯಲ್ಲಿರುವ ೫,೫೦೦ ಕೋಟಿ ರು. ಪೈಕಿ ೪೫೦ ಕೋಟಿ ರು.ಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಇದಕ್ಕೆ ನೇರವಾಗಿ ಇಲಾಖೆಯ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಮಂಡಳಿಯ ಸಿಇಒ ಐಎಎಸ್‌ ಅಧಿಕಾರಿ ಸುನೀಲ್ ಕುಮಾರ್‌ ಅವರೇ ಕಾರಣ ಎಂಬ ಮಾತು ಕೇಳಿಬಂದಿದೆ. ಇವರ ನಿರ್ಲಕ್ಷ್ಯದ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೆ, ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಿಫಾರಸು ಮಾಡಿದೆ. ಈ ಇಬ್ಬರು ಅಧಿಕಾರಿಗಳ ಅಸಡ್ಡೆ ವರ್ತನೆಯನ್ನೂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ. ‌

ಈ ಬೆಳವಣಿಗೆಗಳಿಂದಾಗಿಯೇ ಸಚಿವರು, ತಮಗೆ ಕಾರ್ಮಿಕ ಖಾತೆಯೇ ಬೇಡ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಕೂಡ ನೋಡೋಣ ಎಂದಷ್ಟೇ ಹೇಳಿ ಕಳಿಸಿದ್ದಾರೆ ಎಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ.

ಇನ್ನು, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹೊರಗುತ್ತಿಗೆ ಮೂಲಕ ನೇಮಕವಾಗಿರುವ ನಿವೃತ್ತ ಅಧಿಕಾರಿ, ನೌಕರರಿಗೆ ನಿಯಮಬಾಹಿರವಾಗಿ ವೇತನ ನೀಡುತ್ತಿದ್ದಾರೆ ಎಂಬ ದೂರುಗಳು ಸಚಿವ ವೆಂಕಟರಮಣಪ್ಪ ಅವರಿಗೆ ಸಲ್ಲಿಕೆಯಾಗಿವೆ. ಸರ್ಕಾರದ ಕಾರ್ಯದರ್ಶಿಗೆ ಆಪ್ತ ಕಾರ್ಯದರ್ಶಿ ಹುದ್ದೆಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಂಡಿದ್ದಾರೆ. ಈ ಹುದ್ದೆಗೆ ಸಹಜವಾಗಿ ಸಚಿವಾಲಯದಲ್ಲಿ ಜೇಷ್ಠತೆ ಹೊಂದಿರುವ ಅಧಿಕಾರಿಯನ್ನು ನೇಮಿಸಬೇಕಾಗಿತ್ತು. ಹೊರಗುತ್ತಿಗೆ ಮೂಲಕ ನೇಮಿಸಿರುವ ಕಾರಣ ಈ ಹುದ್ದೆಗೆ ಬಡ್ತಿ ಹೊಂದಬೇಕಿದ್ದ ಅಧಿಕಾರಿಗಳಿಗೆ ತೊಡಕಾಗಿದೆ ಎನ್ನಲಾಗಿದೆ. ಅಲ್ಲದೆ, ಈ ಸಂಗತಿಯನ್ನು ಹಲವು ಅಧಿಕಾರಿಗಳು ಸಚಿವ ವೆಂಕಟರಮಣಪ್ಪ ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರು ಸಚಿವರಿಗೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ. ಬಿಸ್ವಾಸ್‌ ಅವರ ಧೋರಣೆ ಕುರಿತು ಇಲಾಖೆಯ ಕೆಳ ಹಂತದ ಅಧಿಕಾರಿ, ನೌಕರರ ವರ್ಗದಲ್ಲಿಯೂ ಅಸಮಾಧಾನ ವ್ಯಕ್ತವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More