ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು  

ಶಿಕ್ಷಕರ ವರ್ಗಾವಣೆ ಇಂದಿನಿಂದ

ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶನಿವಾರದಿಂದ ಅಕ್ಟೋಬರ್ ೧ರವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ತಿಳಿಸಿದ್ದಾರೆ. “ಶಿಕ್ಷಣ ಕಾಯ್ದೆ ಅನ್ವಯವೇ ಶಿಕ್ಷಕರ ವರ್ಗಾವಣೆ ಮಾಡುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಸದ್ಯ ಎಲ್ಲ ಗೊಂದಲ ನಿವಾರಣೆಯಾಗಿದ್ದು, ಅ.1ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೊದಲು ಕೋರಿಕೆ ವರ್ಗಾವಣೆ, ನಂತರ ಹೆಚ್ಚುವರಿ ಹಾಗೂ ಕಡ್ಡಾಯ ವರ್ಗಾವಣೆ ಮಾಡಲಾಗುವುದು,” ಎಂದಿದ್ದಾರೆ ಸಚಿವರು.

ಬೆಂಗಳೂರಿನಲ್ಲಿ ಉದ್ಯೋಗ ಮೇಳ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇದೇ 29 ಮತ್ತು 30ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿರುವ ಈ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆ ಮತ್ತು ಸ್ವವಿವರ ದಾಖಲಾತಿಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಐದನೇ ಐಎಸ್‌ಎಲ್ ಫುಟ್ಬಾಲ್‌ಗೆ ಕ್ಷಣಗಣನೆ

ಬರೋಬ್ಬರಿ ಆರು ತಿಂಗಳು ನಡೆಯುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದ್ದು, ಇಂದು ಮೊದಲ ಪಂದ್ಯ ಜರುಗಲಿದೆ. ಹಿಂದಿನ ಚಾಂಪಿಯನ್ ೨೦೧೪ ಮತ್ತು ೨೦೧೬ರ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕೊತಾ (ಎಟಿಕೆ) ಮತ್ತು ಎರಡು ಬಾರಿಯ ರನ್ನರ್‌ಅಪ್ ಕೇರಳ ಬ್ಲಾಸ್ಟರ್ಸ್ ತಂಡಗಳು ಈ ಋತುವಿನ ಮೊದಲ ಪಂದ್ಯದಲ್ಲಿ ಕಾದಾಡಲಿವೆ. ಪ್ರಶಸ್ತಿಗಾಗಿ ಒಟ್ಟು ೧೦ ತಂಡಗಳು ಸೆಣಸಲಿದ್ದು, ಆರಂಭಿಕ ಪಂದ್ಯದಲ್ಲೇ ರೋಚಕ ಕಾದಾಟವನ್ನು ನಿರೀಕ್ಷಿಸಲಾಗಿದೆ. ಇಲ್ಲೀವರೆಗಿನ ಒಟ್ಟಾರೆ ಮುಖಾಮುಖಿಯಲ್ಲಿ ಹತ್ತು ಬಾರಿ ಇತ್ತಂಡಗಳು ಸೆಣಸಿದ್ದು, ಎಟಿಕೆ ಐದರಲ್ಲಿ ಗೆದ್ದಿದ್ದರೆ, ಕೇರಳ ಬ್ಲಾಸ್ಟರ್ಸ್ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಷ್ಟೆ. ಉಳಿದ ಪಂದ್ಯಗಳು ಡ್ರಾ ಕಂಡಿವೆ. ಪಂದ್ಯ ಆರಂಭ: ಸಂಜೆ ೭.೩೦ | ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಶಸ್ತಿಗಾಗಿ ಸಬಲೆಂಕಾ, ಕೊಂಟಾವೀಟ್ ಹಣಾಹಣಿ

ವುಹಾನ್ ಓಪನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಾಗಿ ಅರಿನಾ ಸಬಲೆಂಕಾ ಮತ್ತು ಅನೆಟ್ ಕೊಂಟಾವೀಟ್ ಪೈಪೋಟಿ ನಡೆಸಲಿದ್ದಾರೆ. ಸಂಜೆ ಸುಮಾರು ೪.೩೦ರ ಹೊತ್ತಿಗೆ ಆರಂಭವಾಗಲಿರುವ ಪಂದ್ಯದಲ್ಲಿ ಬೆಲಾರಸ್‌ನ ಸಬಲೆಂಕಾ ಪ್ರಶಸ್ತಿ ಜಯಿಸುವ ಫೇವರಿಟ್ ಎನಿಸಿದ್ದಾರೆ. ಇತ್ತ, ಇಸ್ಟೋನಿಯಾದ ಕೊಂಟಾವೀಟ್ ಕೂಡ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದು, ಪಂದ್ಯ ಕುತೂಹಲ ಕಾಯ್ದುಕೊಂಡಿದೆ. ನಿನ್ನೆ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಸಬಲೆಂಕಾ ೭-೬ (೭/೨), ೬-೪ ಸೆಟ್‌ಗಳಿಂದ ಗೆಲುವು ಸಾಧಿಸಿದರೆ, ಚೀನಾದ ವಾಂಗ್ ಕಿಯಾಂಗ್ ಅವರನ್ನು ಕೊಂಟಾವೀಟ್ ವಿರುದ್ಧ ಗೆಲುವು ಪಡೆದರು. ಮೊದಲ ಸೆಟ್ ಅನ್ನು ೬-೨ರಿಂದ ಗೆದ್ದ ಕೊಂಟಾವೀಟ್, ಎರಡನೇ ಸೆಟ್‌ನಲ್ಲಿ ೨-೧ ಮುನ್ನಡೆ ಸಾಧಿಸಿದ್ದಾಗ ಚೀನಿ ಆಟಗಾರ್ತಿ ಪಂದ್ಯದಿಂದ ಹಿಂದೆ ಸರಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More