ಟ್ವಿಟರ್ ಸ್ಟೇಟ್ | ಸರ್ಜಿಕಲ್ ದಾಳಿ ದಿನಾಚರಣೆಯ ರಾಜಕೀಯ ಉದ್ದೇಶಗಳ ಬಗ್ಗೆ ಬಿಸಿ ಚರ್ಚೆ

ಯುಜಿಸಿ ಆದೇಶದ ಮೇರೆಗೆ ವಿಶ್ವವಿದ್ಯಾಲಯಗಳಲ್ಲಿ ಸರ್ಜಿಕಲ್ ದಾಳಿ ದಿನಾಚರಣೆ ಆಯೋಜಿಸಲಾಗಿರುವ ಬಗ್ಗೆ ಟ್ವಿಟರ್‌ನಲ್ಲಿ ತೀವ್ರ ಚರ್ಚೆಯಾಗಿದೆ. ಸೇನೆ ಮತ್ತು ವಿವಿಗಳನ್ನು ಮೋದಿ ಸರ್ಕಾರ ತನ್ನ ಪ್ರಚಾರಾಭಿಯಾನದ ಸಾಧನಗಳನ್ನಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂದು (ಸೆ.೨೯) ಸರ್ಜಿಕಲ್ ದಾಳಿ ದಿನಾಚರಣೆ ನಡೆದಿದೆ. ಯುಜಿಸಿ ಕಳುಹಿಸಿದ ಸುತ್ತೋಲೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಇಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಈ ಆಚರಣೆಯ ನಡುವೆಯೇ, ಭಾರತದ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರು ಇತ್ತೀಚೆಗೆ ಗಡಿಯಲ್ಲಿ ಭಾರತೀಯ ಸೈನಿಕನನ್ನು ಕ್ರೂರವಾಗಿ ಹತ್ಯೆಗೈದಿರುವ ಪಾಕಿಸ್ತಾನದ ಕ್ರಮವನ್ನು ಖಂಡಿಸಿ, ಗಡಿ ಭದ್ರತಾ ದಳದ ಸೈನಿಕನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಮತ್ತು ‘ಕಠಿಣ ಕ್ರಮ’ ಕೈಗೊಳ್ಳುವ ಮಾತನಾಡಿದ್ದಾರೆ. ಹೀಗಾಗಿ, ಮತ್ತೊಂದು ಸರ್ಜಿಕಲ್ ದಾಳಿ ನಡೆಯುವ ಸಾಧ್ಯತೆಯ ಬಗ್ಗೆಯೂ ಚರ್ಚೆಯಾಗುತ್ತಿದೆ.

ಕೇಂದ್ರ ಸರ್ಕಾರ ಕಾರ್ಯಯೋಜಿತ ಗುರಿಗಳಿಗೆ ಬದಲಾಗಿ ಜನರಲ್ಲಿ ಮಾನಸಿಕ ಭಾವೋದ್ರೇಕಗಳನ್ನು ಕೆರಳಿಸುವ ಆಯ್ಕೆಗಳನ್ನು ಮಾಡುತ್ತಿದೆ ಎಂದು ಬಹಳಷ್ಟು ಟ್ವೀಟಿಗರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಕಾರ, ಪಾಕಿಸ್ತಾನಕ್ಕೆ ಭಾರತ ಕಠಿಣ ಉತ್ತರ ಕೊಟ್ಟ ದಿನವಾಗಿ ಸರ್ಜಿಕಲ್ ಸ್ಟ್ರೈಕ್ ದಿನವನ್ನು ಆಚರಿಸಲಾಗುತ್ತಿದೆ. ಆದರೆ, ರಾಜಕೀಯ ಉದ್ದೇಶದಿಂದ ಬಿಜೆಪಿಗೆ ಇದು ನೆರವಾಗಬಹುದಾದರೂ, ಸರ್ಜಿಕಲ್ ದಾಳಿ ತನ್ನ ಗುರಿಯಲ್ಲಿ ವಿಫಲವಾಗಿದೆ ಎಂದು ಹಲವು ಟ್ವೀಟಿಗರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಮುಖ್ಯವಾಗಿ, ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದಲ್ಲಿ ಉಗ್ರವಾದ ಮತ್ತು ಗಡಿಯಲ್ಲಿ ಗುಂಡಿನ ಚಕಮಕಿಯಕ್ಕೆ ಬಲಿಯಾದ ಸೈನಿಕರ ಲೆಕ್ಕಾಚಾರವನ್ನೂ ಟ್ವಿಟರ್‌ನಲ್ಲಿ ಹರಿಯಬಿಡಲಾಗುತ್ತಿದೆ.

ಸರ್ಜಿಕಲ್ ದಾಳಿ ನಂತರ ಕಾಶ್ಮೀರದಲ್ಲಿ ಉಗ್ರವಾದದ ಸಮಸ್ಯೆ ಹೆಚ್ಚಾಗಿದೆ. ಸರ್ಜಿಕಲ್ ದಾಳಿಗೆ ಮೊದಲು ವರ್ಷಕ್ಕೆ ಸರಾಸರಿ ೨೬೭ ಕಾಶ್ಮೀರಿ ಉಗ್ರವಾದಕ್ಕೆ ಸಂಬಂಧಿಸಿದ ಹತ್ಯೆಗಳಾಗಿದ್ದರೆ, ೨೦೧೭ರಲ್ಲಿ ೩೫೮ ಪ್ರಕರಣಗಳು ದಾಖಲಾಗಿವೆ. ೨೦೧೭ರಲ್ಲಿ ಉಗ್ರವಾದಕ್ಕೆ ಬಲಿಯಾದ ನಾಗರಿಕರ ಸಂಖ್ಯೆ ಶೇ. ೧೬೬ರಷ್ಟು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಹಲವು ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕ ದಾಳಿಗಳನ್ನು ಭಾರತೀಯ ಸೇನೆ ಎದುರಿಸಿದೆ. ಸರ್ಜಿಕಲ್ ದಾಳಿಗೆ ಉತ್ತರವಾಗಿ ಉರಿ ದಾಳಿ ನಡೆದಿರುವುದನ್ನೂ ಟ್ವೀಟಿಗರು ಜ್ಞಾಪಿಸಿಕೊಂಡಿದ್ದಾರೆ. ಹೀಗಾಗಿ, ಭಯೋತ್ಪಾದಕ ದಾಳಿಗೆ ಪಾಠ ಕಲಿಸುವ ಉದ್ದೇಶವನ್ನು ಸರ್ಜಿಕಲ್ ದಾಳಿ ನೆರವೇರಿಸಿಲ್ಲ ಎನ್ನುವುದು ಟ್ವಿಟರ್‌ನಲ್ಲಿ ಚರ್ಚೆಯಾಗಿದೆ.

ಲೇಖಕ ಮತ್ತು ಮಾರ್ಕೆಟಿಂಗ್ ತಜ್ಞ ಸುಶೀಲ್ ಸೇತ್‌ ಟ್ವೀಟ್ ಮಾಡಿ, “ಸರ್ಜಿಕಲ್ ದಾಳಿ ದಿನವನ್ನು ಆಚರಿಸುವಂತೆ ಯುಜಿಸಿಗೆ ಆದೇಶಿಸುವುದು ಎಂತಹ ಮೂರ್ಖತನ! ಇವುಗಳು ಕಾಲೇಜುಗಳೇ ವಿನಾ ಸೇನಾ ಅಕಾಡೆಮಿಗಳಲ್ಲ. ನಾವು ಒತ್ತಡಪೂರ್ವಕ ರಾಷ್ಟ್ರೀಯತೆಯನ್ನು ಹೇರಲು ಪ್ರಯತ್ನಿಸುತ್ತಿದ್ದೇವೆಯೆ?” ಎಂದು ಅಭಿಪ್ರಾಯಪಟ್ಟಿದ್ದಾರೆ. “ಪ್ರಕಾಶ್ ಜಾವಡೇಕರ್ ಅವರೇ, ಶಿಕ್ಷಣವನ್ನು ರಾಜಕಾರಣಿಗಳ ನಿಯಂತ್ರಣದಿಂದ ಯಾವಾಗ ಹೊರಗೆ ತರುತ್ತೀರಿ? ಸರ್ಜಿಕಲ್ ದಾಳಿ ದಿನ ಆಚರಿಸುವಂತೆ ವಿಶ್ವವಿದ್ಯಾಲಯಗಳಿಗೆ ಆದೇಶಿಸುವುದು ಯುಜಿಸಿಯ ಕೆಲಸವೇ? ಇದು ರಾಜಕೀಯ ಉದ್ದೇಶ. ಕಾಲೇಜುಗಳನ್ನು ದಯವಿಟ್ಟು ರಾಜಕೀಯದಿಂದ ಹೊರಗಿಡಿ,” ಎಂದು ಪತ್ರಕರ್ತ ಸುನೀಲ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಸುದ್ದಿಪತ್ರಿಕೆಯು, “ಸರ್ಜಿಕಲ್ ದಾಳಿ ದಿನದಂದು ಉತ್ತಮವಾದ ನೆರೆಹೊರೆ ಸಂಬಂಧ ನಿರ್ಮಿಸುವ ರಾಜತಾಂತ್ರಿಕ ಪಾತ್ರಗಳನ್ನು ನೆನಪಿಸಿಕೊಳ್ಳಲು ಆಚರಿಸಬೇಕು,” ಎಂದು ಸಂಪಾದಕೀಯ ಅಭಿಪ್ರಾಯವನ್ನು ಪ್ರಕಟಿಸಿದೆ.

ಪತ್ರಕರ್ತ ಶೇಖರ್ ಗುಪ್ತಾ ಅವರು ‘ದಿ ಪ್ರಿಂಟ್‌’ನಲ್ಲಿ ಪ್ರಕಟವಾಗಿರುವ ಲೆಫ್ಟಿನೆಂಟ್ ಜನರಲ್ ಎಚ್‌ ಎಸ್ ಪನಗ್ ಅವರ ಲೇಖನವನ್ನು ಟ್ವೀಟ್ ಮಾಡಿದ್ದಾರೆ. “ಸರ್ಜಿಕಲ್ ದಾಳಿ ದಿನಾಚರಣೆಯು ಮೋದಿ ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಸಂಭ್ರಮಿಸಲು ಬಹಳ ಕಡಿಮೆ ಅಂಶಗಳಿವೆ ಎನ್ನುವುದನ್ನು ತೋರಿಸುತ್ತದೆ,” ಎಂದು ಎಚ್‌ ಎಸ್ ಪನಗ್ ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ರಾಮಚಂದ್ರ ಗುಹಾ ಟ್ವೀಟ್ ಮಾಡಿ, “ಸೇನೆಯ ರಾಜಕೀಯ ಬಳಕೆ ಹೆಚ್ಚಾಗುತ್ತಿರುವುದನ್ನು ಸ್ವತಃ ಸೇನೆಯೇ ವಿರೋಧಿಸಬೇಕು. ಸೇನೆಯನ್ನು ಅಧಿಕಾರದಲ್ಲಿ ಉಳಿದುಕೊಳ್ಳಲು ಸಾಧನವಾಗಿ ಬಳಸಿಕೊಳ್ಳುವುದು ಮತ್ತು ಇತರ ಸ್ವತಂತ್ರ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸಂಸ್ಥೆಗಳನ್ನು ನಾಶ ಮಾಡಲು ಬಳಸುವ ಅವಕಾಶವನ್ನು ನೀಡಬಾರದು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಹಳಷ್ಟು ಟ್ವೀಟಿಗರು ಸರ್ಜಿಕಲ್ ದಾಳಿ ನಡೆದ ನಂತರವೂ ಕಾಶ್ಮೀರದಲ್ಲಿ ಭದ್ರತಾ ದಳದ ಅಧಿಕಾರಿಗಳು ಹತ್ಯೆಯಾಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. “ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗುವ ಪೊಲೀಸರ ಸಂಖ್ಯೆ ಹೆಚ್ಚುತ್ತಲೇ ಇದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ನೈತಿಕ ಸ್ಥೈರ್ಯ ಬಹಳ ಕಡಿಮೆ ಇದೆ. ಹೀಗಿರುವಾಗ ನಾವು ಸರ್ಜಿಕಲ್ ದಾಳಿ ದಿನಾಚರಣೆ ಆಯೋಜಿಸುತ್ತಿದ್ದೇವೆ,” ಎಂದು ಪತ್ರಕರ್ತೆ ನಿಧಿ ರಾಜ್ದಾನ್ ಟ್ವೀಟ್ ಮಾಡಿದ್ದಾರೆ. ರಕ್ಷಣಾ ವಿಚಾರಗಳ ಬಗ್ಗೆ ವರದಿ ಮಾಡುವ ಪತ್ರಕರ್ತ ಅಜಯ್ ಶುಕ್ಲಾ, “ನರೇಂದ್ರ ಮೋದಿಯವರು ಸರ್ಜಿಕಲ್ ದಾಳಿ ವಿಚಾರವಾಗಿ ರಾಜಕೀಯ ಮಾಡುತ್ತಿರುವ ಸಮಯದಲ್ಲಿ ಭಾರತೀಯ ಸೈನಿಕ ಬೆಲೆ ತೆರುತ್ತಿದ್ದಾನೆ. ಈ ಬಗ್ಗೆ ನನ್ನ ಲೇಖನ ಓದಿ,” ಎಂದು ತಮ್ಮ ಲೇಖನದ ಲಿಂಕ್ ಕೊಟ್ಟು ಅವರು ಅಭಿಪ್ರಾಯ ಟ್ವೀಟ್ ಮಾಡಿದ್ದಾರೆ.

ಸಿಪಿಐ(ಎಂ) ಮುಖಂಡರಾದ ಸೀತಾರಾಮ್ ಯೆಚೂರಿ ಅವರೂ ಸರ್ಕಾರ ಏನನ್ನು ಸಂಭ್ರಮಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ. “ಸರ್ಕಾರ ಸರ್ಜಿಕಲ್ ದಾಳಿ ದಿನಾಚರಣೆಯನ್ನು ಆಯೋಜಿಸಿ ಗಡಿ ಭಾಗದಲ್ಲಿ ಸತತವಾಗಿ ನಡೆಯುತ್ತಿರುವ ಗುಂಡಿನ ಚಕಮಕಿಯ ಬಗ್ಗೆ ಸಂಭ್ರಮ ಪಡುತ್ತಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ. ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರೂ ಹಲವು ಯುದ್ಧಗಳಲ್ಲಿ ಗೆದ್ದ ಸೈನಿಕರ ಶೌರ್ಯವನ್ನು ಪಕ್ಕಕ್ಕಿಟ್ಟು ಸರ್ಜಿಕಲ್ ದಾಳಿಗೆ ಪ್ರಾಮುಖ್ಯತೆ ಕೊಡಲಾಗುತ್ತಿದೆ ಎನ್ನುವ ಅಭಿಪ್ರಾಯವನ್ನು ತಮ್ಮ ಕಾರ್ಟೂನ್‌ನಲ್ಲಿ ಪ್ರಕಟಿಸಿದ್ದಾರೆ. ಬಹಳಷ್ಟು ಇತರ ಟ್ವೀಟಿಗರೂ ಇಂತಹುದೇ ಅಭಿಪ್ರಾಯವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ರಾಜತಾಂತ್ರಿಕ ಭಾಷೆಯ ಮೌಲ್ಯ ತಗ್ಗಿಸಿದ ಭಾರತ-ಪಾಕ್ ಬಗ್ಗೆ ಆಕ್ರೋಶ

ಪತ್ರಕರ್ತೆ ಸ್ವಾತಿ ಚತುರ್ವೇದಿ ಟ್ವೀಟ್ ಮಾಡಿ, ಸರ್ಜಿಕಲ್ ದಾಳಿ ದಿನಾಚರಣೆಯಂತಹ ಸಂಭ್ರಮ ಅಪಾಯಕಾರಿ ಟ್ರೆಂಡ್ ಎಂದು ಹೇಳಿದ್ದಾರೆ. “ಮೋದಿ ಸರ್ಕಾರ ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದೆ. ಮತಕ್ಕಾಗಿ ಸರ್ಜಿಕಲ್ ದಾಳಿ ದಿನ ಆಚರಿಸುತ್ತಿದೆ. ಸೇನಾಪಡೆಯನ್ನು ರಾಜಕೀಯಕ್ಕೆ ಎಳೆಯುವುದು ಅಪಾಯಕಾರಿ. ಕಾಶ್ಮೀರ ಇನ್ನೂ ಕುದಿಯುತ್ತಿರುವಾಗ ನಾವು ಏನನ್ನು ಸಂಭ್ರಮಿಸುತ್ತಿದ್ದೇವೆ,” ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನೂ ಹಲವು ಟ್ವೀಟಿಗರು ಸರ್ಜಿಕಲ್ ದಾಳಿ ದಿನಾಚರಣೆ ಬದಲಾಗಿ ಸೇನೆಯ ಶೌರ್ಯವನ್ನು ಸಂಭ್ರಮಿಸಲು ಇತರ ಯಾವ ರಾಜಕೀಯ ಲಾಭದ ಪ್ರಶ್ನೆಯಿಲ್ಲದ ವಿಧಾನಗಳನ್ನು ಅನುಸರಿಸಬಹುದು ಎಂದು ಚರ್ಚಿಸಿದ್ದಾರೆ.

ಮಾಜಿ ರಾ ಅಧಿಕಾರಿಯಾಗಿರುವ ಆರ್ ಕೆ ಯಾದವ್ ಟ್ವೀಟ್ ಮಾಡಿ, “ಸರ್ಜಿಕಲ್ ದಾಳಿಯ ವಾರ್ಷಿಕಾಚರಣೆ ಬದಲಾಗಿ ೧೯೬೫ ಯುದ್ಧದ ಗೆಲುವನ್ನು ಸೆಪ್ಟೆಂಬರ್‌ನಲ್ಲಿ ಆಚರಿಸಬಹುದು. ಆ ಯುದ್ಧದಲ್ಲಿ ೩೦೦೦ ಸೈನಿಕರು ಬಲಿಯಾಗಿದ್ದಾರೆ. ಭಾರತ ಸುಮಾರು ೩೮೮೫ ಕಿಮೀಗಳಷ್ಟು ಪಾಕಿಸ್ತಾನಿ ಪ್ರಾಂತ್ಯವನ್ನು ವಶಪಡಿಸಿಕೊಂಡಿತ್ತು,” ಎಂದು ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, “ಸರ್ಜಿಕಲ್ ದಿನಾಚರಣೆ ಬದಲಾಗಿ ಪ್ರಧಾನಿ ನರೇಂದ್ರ ಮೋದಿಯವರು ಇದೇ ವಾರ ಪಾಕಿಸ್ತಾನದಿಂದ ಹಿಂಸೆಗೆ ಒಳಗಾದ ನರೇಂದ್ರ ಸಿಂಗ್ ಕುಟುಂಬವನ್ನು ಭೇಟಿ ಮಾಡಲಿ,” ಎಂದು ಟ್ವೀಟ್ ಮಾಡಿದ್ದಾರೆ.

ಸಹಜವಾಗಿ ಕಾಂಗ್ರೆಸ್ ಟ್ವೀಟಿಗರು ಕೇಂದ್ರ ಸರ್ಕಾರ ಸರ್ಜಿಕಲ್ ದಾಳಿ ದಿನಾಚರಣೆ ಮೂಲಕ ರಾಜಕೀಯ ಮಾಡುತ್ತಿರುವುದನ್ನು ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿ ತರೂರು, ಕಪಿಲ್ ಸಿಬಲ್ ಅವರು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ‘ಎನ್‌ಎಸ್‌ಯುಐ’ ಕೂಡ ಸರ್ಕಾರದ ಪ್ರಚಾರಾಭಿಯಾನಕ್ಕೆ ಶೈಕ್ಷಣಿಕ ಸಂಸ್ಥೆಗಳನ್ನು ಬಳಸಲು ಸರ್ಜಿಕಲ್ ದಾಳಿ ದಿನಾಚರಣೆ ಆಯೋಜಿಸಲು ಆದೇಶಿಸಿರುವುದನ್ನು ಪ್ರಶ್ನಿಸಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಬಿಜೆಪಿ ಪರ ಟ್ವೀಟಿಗರು ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಜಿಕಲ್ ದಿನಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More