ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 7 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಉದ್ದೇಶಿತ ವಿದ್ಯುತ್ ಶಕ್ತಿ ಕಾಯ್ದೆ ತಿದ್ದುಪಡಿ ಅಪಾಯಕಾರಿ: ಅರವಿಂದ್ ಕೇಜ್ರಿವಾಲ್

ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ವಿದ್ಯುತ್ ಶಕ್ತಿ ಕಾಯ್ದೆ ತಿದ್ದುಪಡಿ ಅತ್ಯಂತ ಅಪಾಯಕಾರಿಯಾದದ್ದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಕೇಜ್ರಿವಾಲ್, “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲು ಉದ್ದೇಶಿಸಿರುವ ವಿದ್ಯುತ್ ಶಕ್ತಿ ಕಾಯ್ದೆಯಿಂದ ಕೆಲವೇ ಕೆಲವು ವಿದ್ಯುತ್ ಕಂಪನಿಗಳಿಗೆ ಭಾರಿ ಲಾಭವಾಗಲಿದೆಯೇ ಹೊರತು, ಜನಸಾಮಾನ್ಯರು ಹಾಗೂ ರೈತರಿಗಲ್ಲ. ತಿದ್ದುಪಡಿಯಿಂದಾಗಿ ಸಬ್ಸಿಡಿ ಕೂಡ ಕೊನೆಗೊಳ್ಳಲಿದ್ದು, ವಿದ್ಯುತ್ ಯೂನಿಟ್ ಬೆಲೆ ಎರಡರಿಂದ ಐದು ಪಟ್ಟು ಹೆಚ್ಚಾಗಲಿದೆ,” ಎಂದಿದ್ದಾರೆ. ಈ ಬಗ್ಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.

ಭಾರತಕ್ಕೆ ಪರ್ಯಾಯ ತೈಲ ಮಾರ್ಗಗಳನ್ನು ಹುಡುಕಿಕೊಡಲಿದೆ ಅಮೆರಿಕ

ತೈಲಕ್ಕಾಗಿ ಇರಾನ್‌ ಅನ್ನು ಅವಲಂಬಿಸಿರುವ ಭಾರತಕ್ಕೆ ಪರ್ಯಾಯ ತೈಲ ಪೂರೈಕೆ ಮಾರ್ಗಗಳನ್ನು ಒದಗಿಸುವುದಾಗಿ ಅಮೆರಿಕ ಶನಿವಾರ ಹೇಳಿದೆ. “ಭಾರತಕ್ಕೆ ಹೆಚ್ಚಿನ ಪ್ರಮಾಣದ ತೈಲ ಆಮದು ಅಗತ್ಯ ಇರುವುದನ್ನು ಅಮೆರಿಕ ಗಮನಿಸಿದ್ದು, ಈ ಕುರಿತು ಪರ್ಯಾಯ ತೈಲ ಪೂರೈಕೆ ಕ್ರಮಗಳ ಬಗ್ಗೆ ಮಾತುಕತೆ ನಡೆಸಲಾಗುತ್ತದೆ, ನಮ್ಮ ಮಿತ್ರ ರಾಷ್ಟ್ರ ಭಾರತದ ಆರ್ಥಿಕತೆ ಮೇಲೆ ಯಾವುದೇ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ,” ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೇಜಾನ್‌ಗಾಗಿ ಶೋ ನಿರ್ಮಿಸಲಿದ್ದಾರೆ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸ್ಟ್ರೀಮಿಂಗ್ ಮೀಡಿಯಾ ಪ್ರವೇಶಿಸುತ್ತಿದ್ದಾರೆ. ಅಮೇಜಾನ್‌ ಪ್ರೈಂ ವಿಡಿಯೋಗೆ ನಟಿ ಪೊಲೀಸ್‌-ಡ್ರಾಮಾ ಸರಣಿ ನಿರ್ಮಿಸಲಿದ್ದಾರೆ. ‘ಎನ್‌ಎಹ್‌10’ ಮತ್ತು ‘ಉಡ್ತಾ ಪಂಜಾಬ್‌’ ಹಿಂದಿ ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದ ಸುದೀಪ್ ಶರ್ಮಾ ಅವರು ಅನುಷ್ಕಾರ ವೆಬ್‌ ಸರಣಿಗೆ ಚಿತ್ರಕಥೆ ಹೆಣೆಯಲಿದ್ದಾರೆ. ಅನುಷ್ಕಾ ನಿರ್ಮಾಣದ ‘ಫಿಲ್ಲೌರಿ’ ಹಿಂದಿ ಚಿತ್ರದ ಕ್ರಿಯೇಟಿವ್ ನಿರ್ಮಾಪಕರಾಗಿಯೂ ಸುದೀಪ್ ಕಾರ್ಯನಿರ್ವಹಿಸಿದ್ದರು. ಹಾರ್ದಿಕ್ ಮೆಹ್ತಾ ಕೂಡ ವೆಬ್‌ ಸರಣಿಯ ಚಿತ್ರಕಥೆಯಲ್ಲಿ ಕೈಜೋಡಿಸಲಿದ್ದಾರೆ. ಮೊದಲ ಸೀಸನ್‌ನಲ್ಲಿ ಹತ್ತು ಸಂಚಿಕೆಗಳಿರಲಿವೆ. ನಿರ್ಮಾಣದ ಹೊಣೆ ಹೊತ್ತಿರುವ ಅನುಷ್ಕಾ ಸರಣಿಯಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾರ್ಕ್‌ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಹರಿಹಾಯ್ದ ಸುಷ್ಮಾ ಸ್ವರಾಜ್‌

ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಚಾರ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ನಡೆದ ಸಾರ್ಕ್‌ ರಾಷ್ಟ್ರಗಳ ಸಭೆ ವೇಳೆ ಕಾಶ್ಮೀರದ ಘಟನೆಗಳ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, “ಯಾವುದೇ ತಾರತಮ್ಯವಿಲ್ಲದೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕಿದೆ. ಉಗ್ರವಾದಕ್ಕೆ ಬೆಂಬಲ ನೀಡಿದವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕಿದೆ. ಆ ಮೂಲಕ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಶಾಂತಿ ನೆಲಸುವ ನಿಟ್ಟಿನಲ್ಲಿ ಸಾರ್ಕ್‌ ರಾಷ್ಟ್ರಗಳ ನಾಯಕರು ಕಾರ್ಯನಿರ್ವಹಿಸಬೇಕಿದೆ,” ಎಂದಿದ್ದಾರೆ.

ಅಸಾರಾಮ್ ಲೈಂಗಿಕ ಪ್ರಕರಣದ ಸಹ ಆರೋಪಿಗೆ ಜಾಮೀನು

ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಹಆರೋಪಿಯಾಗಿ ಇಪ್ಪತ್ತು ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದ ಸಂಚಿತಾ ಗುಪ್ತಾಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಸಂಚಿತಾ ಗುಪ್ತಾಳ ನೇರ ಪಾತ್ರವನ್ನು ಸೂಚಿಸುವಂತಹ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದಿರುವ ನ್ಯಾಯಾಲಯ, ಆಕೆಯ ಶಿಕ್ಷೆಯನ್ನು ರದ್ದು ಪಡಿಸಿ ಜಾಮೀನು ನೀಡಿದೆ. ಪ್ರಕರಣದ ಕುರಿತು ಅಂತಿಮ ತೀರ್ಪು ಶೀಘ್ರದಲ್ಲಿಯೇ ಹೊರಬೀಳುವ ನಿರೀಕ್ಷೆಯಿದೆ.

ಹ್ಯಾಮಿಲ್ಟನ್ ಹಿಂದಿಕ್ಕಿದ ಬೊಟ್ಟಾಸ್‌ಗೆ ಪೋಲ್ ಪೊಸಿಷನ್

ಸೋಚಿಯಲ್ಲಿ ಭಾನುವಾರ (ಸೆ.೩೦) ನಡೆಯಲಿರುವ ರಷ್ಯಾ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿ ವಾಲ್ಟೆರಿ ಬೊಟ್ಟಾಸ್ ಪೋಲ್ ಪೊಸಿಷನ್ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಗೆಲ್ಲುವ ಫೇವರಿಟ್ ಎನಿಸಿರುವ ಬ್ರಿಟನ್ ಚಾಲಕ ಹ್ಯಾಮಿಲ್ಟನ್, ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಕೊಂಚ ಹಿನ್ನಡೆ ಅನುಭವಿಸಿದರು. ಒಂದು ಲ್ಯಾಪ್‌ನ ನಿಗದಿತ ಗುರಿಯನ್ನು ಫಿನ್‌ಲ್ಯಾಂಡ್ ಮೂಲದ ಫಾರ್ಮುಲಾ ಒನ್ ಚಾಲಕ ವಾಲ್ಟೆರಿ ಒಂದು ನಿಮಿಷ, ೩೧.೩೮೭ ಸೆ.ಗಳಲ್ಲಿ ಪೂರೈಸಿದರು. ಕಳೆದ ವರ್ಷ ಇದೇ ರಷ್ಯಾ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ವಾಲ್ಟೆರಿ ಗೆಲುವು ಸಾಧಿಸುವುದರೊಂದಿಗೆ ವೃತ್ತಿಬದುಕಿನ ಚೊಚ್ಚಲ ಫಾರ್ಮುಲಾ ರೇಸ್ ಪ್ರಶಸ್ತಿ ಜಯಿಸಿದ್ದರು. ವಿಶ್ವ ಫಾರ್ಮುಲಾ ಪ್ರಶಸ್ತಿ ರೇಸ್‌ನಲ್ಲಿ ಹ್ಯಾಮಿಲ್ಟನ್‌ಗಿಂತ ೪೦ ಪಾಯಿಂಟ್ಸ್ ಹಿನ್ನಡೆಯಲ್ಲಿರುವ ಫೆರಾರಿ ಚಾಲಕ ಸೆಬಾಸ್ಟಿಯನ್ ವೆಟಲ್ ಮೂರನೇ ಸ್ಥಾನ ಗಳಿಸಿದರು.

ವಿಂಡೀಸ್ ಸರಣಿಗೆ ಪೃಥ್ವಿ ಶಾ ಆಯ್ಕೆ ಸಾಧ್ಯತೆ

ಮುಂಬೈನ ಯುವ ಬ್ಯಾಟ್ಸ್‌ಮನ್, ಹತ್ತೊಂಬತ್ತು ವರ್ಷದೊಳಗಿನ ಭಾರತ ತಂಡದ ನಾಯಕ ಪೃಥ್ವಿ ಶಾ ತವರಿನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಂಭವವಿದೆ ಎಂದು ಬಿಸಿಸಿಐನ ನಂಬಲರ್ಹಮೂಲಗಳು ತಿಳಿಸಿವೆ. ಟೀಂ ಇಂಡಿಯಾ ಆಯ್ಕೆಸಮಿತಿ ವಿಂಡೀಸ್ ಸರಣಿಗೆ ತಂಡವನ್ನು ಆರಿಸಲಿದ್ದು, ಪೃಥ್ವಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ವಿಂಡೀಸ್ ವಿರುದ್ಧ ಭಾರತ ಎರಡು ಟೆಸ್ಟ್ ಪಂದ್ಯ ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಅಕ್ಟೋಬರ್ ೪ರಿಂದ ರಾಜ್‌ಕೋಟ್‌ನಲ್ಲಿ ಜರುಗಲಿದೆ. ಒಂದೊಮ್ಮೆ ಪೃಥ್ವಿಗೆ ಆಯ್ಕೆಸಮಿತಿ ಸ್ಥಾನ ಕಲ್ಪಿಸಿದ್ದೇ ಆದಲ್ಲಿ, ಅವರು ಕನ್ನಡಿಗ ಕೆ ಎಲ್ ರಾಹುಲ್ ಜತೆಗೆ ಇನ್ನಿಂಗ್ಸ್ ಆರಂಭಿಸುವುದು ಖಚಿತವೆಂತಲೂ ಹೇಳಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More