ಪಾಕ್‌ ಹೊರಡಿಸಿರುವ ಅಂಚೆಚೀಟಿಗಳೇಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ?

ಪಾಕ್‌ ಸರ್ಕಾರ ಬಿಡುಗಡೆಗೊಳಿಸಿರುವ ಅಂಚೆಚೀಟಿಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಶೇಷ ವರದಿ ಮಾಡಿರುವ ‘ಬಿಬಿಸಿ’ ಮತ್ತು ‘ವಾಸಿಂಗ್ಟನ್‌ ಪೋಸ್ಟ್‌’ಗಳು, ‘ಭಯೋತ್ಪಾದಕ’ರನ್ನು ವಿಜೃಂಭಿಸುವ ಪಾಕ್‌ ಅಂಚೆಚೀಟಿಗಳು ಭಾರತದ ಆಕ್ರೋಶಕ್ಕೆ ಕಾರಣ ಎಂದಿವೆ

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆಯೋಜನೆಗೊಂಡಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವರ ನಡುವಿನ ಭೇಟಿ ರದ್ದತಿಗೆ ಪಾಕ್‌ ಸರ್ಕಾರ ಬಿಡುಗಡೆಗೊಳಿಸಿರುವ ಅಂಚೆಚೀಟಿಗಳು ಕಾರಣವೆಂಬ ವಿಚಾರವೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವರದಿ ಮಾಡಿರುವ ‘ಬಿಬಿಸಿ’ ಮತ್ತು ‘ವಾಸಿಂಗ್ಟನ್‌ ಪೋಸ್ಟ್‌’ಗಳು, ‘ಭಯೋತ್ಪಾದನೆ’ ಹಾಗೂ ‘ಭಯೋತ್ಪಾದಕ’ರನ್ನು ವಿಜೃಂಭಿಸುವ ಪಾಕಿಸ್ತಾನಿ ಅಂಚೆಚೀಟಿಗಳು ಭಾರತದ ಆಕ್ರೋಶಕ್ಕೆ ಪ್ರಮುಖ ಕಾರಣ ಎಂದಿವೆ.

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾದ ನಂತರ ಇಮ್ರಾನ್‌ ಖಾನ್‌ ಅವರು ಭಾರತದೊಂದಿಗೆ ಸ್ನೇಹಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕಾರ್ಯಗತರಾಗುತ್ತಾರೆ ಎಂಬ ಮಾತುಗಳು ಈ ಹಿಂದೆ ಕೇಳಿಬಂದಿದ್ದವು. ಸೆ.14ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದ ಇಮ್ರಾನ್‌ ಖಾನ್‌ ಅವರು, “ಎರಡು ದೇಶಗಳ ನಡುವೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಾನು ಒಲವು ಹೊಂದಿದ್ದೇನೆ. ಈ ತಿಂಗಳ (ಸೆಪ್ಟಂಬರ್‌) ಕೊನೆಯಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಗೂ ಮುನ್ನ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಪಾಕ್‌ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಶಿ ಅವರು ಮಾತುಕತೆ ನಡೆಸಬಹುದು,” ಎಂದು ತಿಳಿಸಿದ್ದರು.

ಇಮ್ರಾನ್‌ ಖಾನ್‌ ಅವರ ಮನವಿ ಒಪ್ಪಿಕೊಂಡಿದ್ದ ಭಾರತದ ವಿದೇಶಾಂಗ ಸಚಿವಾಲಯ, ಮುಂದಿನ 24 ಗಂಟೆಗಳಲ್ಲಿ ತನ್ನ ನಿಲುವು ಬದಲಿಸಿ ಹೇಳಿಕೆ ನೀಡಿತ್ತು. ಆ ಬಗ್ಗೆ ಮಾತನಾಡಿದ್ದ ವಿದೇಶಾಂಗ ಸಚಿವಾಲಯ ವಕ್ತಾರ ಎನ್‌ ರವೀಶ್‌ ಕುಮಾರ್‌, "ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವರ ನಡುವಿನ ಮಾತುಕತೆಗೆ ಭಾರತ ಸಿದ್ಧವಿಲ್ಲ,” ಎಂದಿದ್ದರು. “ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರವಾದವನ್ನು ಪ್ರಚೋದಿಸುತ್ತಿದೆ. ಕಾಶ್ಮೀರಿ ಉಗ್ರರಿಗೆ ಪಾಕ್‌ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಆ ಮೂಲಕ, ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರವನ್ನು ಬೆಂಬಲಿಸುತ್ತಿದೆ. ಗಡಿಯಲ್ಲಿ ನಡೆದ ಭಾರತ ಪೊಲೀಸರ ಹತ್ಯೆ ಹಾಗೂ ಉಗ್ರರನ್ನು ವೈಭವೀಕರಿಸುವ ಪಾಕ್‌ ಅಂಚೆಚೀಟಿಗಳೇ ಇದಕ್ಕೆ ಸ್ಪಷ್ಟಿಕರಣ ನೀಡುತ್ತದೆ. ಹೀಗಾಗಿ, ಭಾರತ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆಗೆ ಸಿದ್ದವಿಲ್ಲ,” ಎಂದು ತಿಳಿಸಿದ್ದರು.

ಭಾರತದ ಪ್ರತಿಕ್ರಿಯೆಯಿಂದ ಕೆಂಡಾಮಂಡಲರಾಗಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಪ್ರಧಾನಿ ಮೋದಿ ಕುರಿತು ‘ಉನ್ನತ ಸ್ಥಾನದಲ್ಲಿರುವ ಸಣ್ಣ ಜನ’ ಎಂದು ಟೀಕಿಸಿದ್ದರು. ಇಮ್ರಾನ್‌ ಖಾನ್‌ ಅವರ ಆ ನಡೆ ಎರಡು ದೇಶಗಳಲ್ಲಿ ಪರ-ವಿರೋಧಗಳ ಚರ್ಚೆಗೆ ಗ್ರಾಸವಾಗಿ, ಗಡಿಯಲ್ಲಿ ಶಾಂತಿ ನೆಲೆಗೊಳಿಸುವ ಕಾರ್ಯಕ್ಕೆ ಮೊದಲ ಹಂತದಲ್ಲೇ ವಿಘ್ನ ಕಾಣಿಸಿಕೊಂಡಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ಈ ಎಲ್ಲ ಬೆಳವಣಿಗಳಿಗೆ ಪ್ರಮುಖ ಕಾರಣವಾಗಿದ್ದು, ‘ಕಾಶ್ಮೀರಿ ಹುತಾತ್ಮರ ದಿನ’ದಂದು ಪಾಕ್‌ ಸರ್ಕಾರ ಬಿಡುಗಡೆಗೊಳಿಸಿರುವ ಇಪ್ಪತ್ತು ಅಂಚೆಚೀಟಿಗಳು ಎಂಬುದು ಇಲ್ಲಿ ಗಮನಾರ್ಹ ಅಂಶ. ಕಣಿವೆಯಾದ್ಯಂತ ಭಾರತೀಯ ಸೇನೆ ಅಲ್ಲಿನ ಸಾಮಾನ್ಯ ನಾಗರಿಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಗುರಿಯಾಗಿಸಿ ನಡೆಸಿರುವ ದೌರ್ಜನ್ಯದ ಘಟನೆಗಳಿಗೆ ಸಂಬಂಧಿಸಿದ 20 ವಿಭಿನ್ನ ಚಿತ್ರಗಳನ್ನು ಪಾಕ್‌ ಸರ್ಕಾರ ಅಂಚೆಚೀಟಿಗಳಲ್ಲಿ ಮುದ್ರಿಸಿದೆ. ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ವಿವಿಧ ರೀತಿಯಲ್ಲಿ ಸಾರ್ವಜನಿವಾಗಿ ದೌರ್ಜನ್ಯಕ್ಕೆ ಒಳಪಟ್ಟ ಸಂಸ್ತ್ರಸ್ತರು, ನಕಲಿ ಎನ್‌ಕೌಂಟರ್‌ಗಳಲ್ಲಿ ಬಲಿಯಾದವರ ಚಿತ್ರಗಳು ಸೇರಿದಂತೆ ಸ್ವತಂತ್ರ ಕಾಶ್ಮೀರಕ್ಕಾಗಿ ನಡೆಯುತ್ತಿರುವ ಹೋರಾಟಗಳಿಗೆ ಸಂಬಂಧಿಸಿದ ಚಿತ್ರಗಳು ಪಾಕ್‌ ಅಂಚೆಚೀಟಿಯಲ್ಲಿ ಕಾಣಿಸಿಕೊಂಡಿವೆ.

ಇದೆಲ್ಲಕ್ಕಿಂತ ಪ್ರಮುಖವಾಗಿ, 2016ರಲ್ಲಿ ಭಾರತೀಯ ಸೇನೆಯಿಂದ ಹತ್ಯೆಯಾದ ಕಾಶ್ಮೀರಿ ಪ್ರತ್ಯೇಕತಾವಾದಿ ಬುರ್ಹಾನ್‌‌ ವಾನಿಯನ್ನು ‘ಪ್ರೀಡಂ ಐಕಾನ್‌’ ಎಂದು ಅಂಚೆಚೀಟಿಯೊಂದರಲ್ಲಿ ಬಿಂಬಿಸಲಾಗಿದೆ. ಬುರ್ಹಾನ್‌ ವಾನಿ, ಉಗ್ರಗಾಮಿ ಸಂಘಟನೆ ಹಿಜ್ಬುಲ್‌ ಮುಜಾಹಿದ್‌ನೊಂದಿಗೆ ಸಂಪರ್ಕ ಹೊಂದಿದ್ದ. ಭಯೋತ್ಪಾದನೆಯನ್ನು ಕಾಶ್ಮೀರದ ಯುವಜನತೆಯಲ್ಲಿ ಪ್ರಚೋದಿಸುವ ‘ಪೋಸ್ಟರ್‌ ಬಾಯ್‌’ ಎಂದೇ ಭದ್ರತಾ ಪಡೆಗಳಿಂದ ಪರಿಗಣಿಸಲ್ಪಟ್ಟಿದ್ದ. ಭಾರತೀಯ ಸೇನೆಯಿಂದ ಆತ ಹತ್ಯೆಯಾದ ನಂತರ ಜಮ್ಮು-ಕಾಶ್ಮೀರದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದು ಸಾವು-ನೋವು ಸಂಭವಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ : ಕಾಶ್ಮೀರದಿಂದ | ಪಾಕ್‌ ಸೇನಾ ರಹಸ್ಯ ಬಿಚ್ಚಿಟ್ಟು ಬಿರುಗಾಳಿ ಎಬ್ಬಿಸಿದ ದುರಾನಿ

ಪಾಕಿಸ್ತಾನ ಈ ರೀತಿಯ ಅವಿಶ್ವಾಸದ ವರ್ತನೆಗಳನ್ನು ಹಿಂದಿನಿಂದಲೂ ಅನುಸರಿಸುತ್ತ ಬಂದಿದೆ ಎಂಬುದು ಭಾರತ ಸರ್ಕಾರದ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಉಗ್ರರನ್ನು ಸ್ವಾತಂತ್ರ್ಯ ಯೋಧರನ್ನಾಗಿ ಚಿತ್ರಿಸಿರುವ ಇಮ್ರಾನ್ ಖಾನ್‌ ನೇತೃತ್ವದ ಪಾಕ್‌ ಸರ್ಕಾರದ ವಿರುದ್ಧ ಭಾರತದಲ್ಲಿ ವ್ಯಾಪಕ ಖಂಡನೆಗಳು ವ್ಯಕ್ತವಾಗಿವೆ. ಆದರೆ, ‘ಭಯೋತ್ಪಾದನೆ’ ಮತ್ತು ‘ಭಯೋತ್ಪಾದಕ’ರನ್ನು ವೈಭವಿಕರಿಸುವ ಮನಸ್ಥಿತಿ ಪಾಕಿಸ್ತಾನ ಹೊಂದಿದೆ ಎಂಬ ವಾದ ಮುಂದಿರಿಸಿ ಮಾತುಕತೆಯನ್ನು ಮೊಟಕುಗೊಳಿಸಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಅಂತಾರಾಷ್ಟ್ರೀಯ ವಲಯದಲ್ಲಿ ಭಿನ್ನ ಚರ್ಚೆಗಳು ಹುಟ್ಟಿಕೊಂಡಿವೆ.

2019ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಪಾಕ್‌ ಜೊತೆ ಸೌಹಾರ್ದ ಮಾತುಕತೆಗೆ ಇದು ಸೂಕ್ತ ಸಮಯವಲ್ಲವೆಂಬ ನಿರ್ಣಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಬಂದಿಗೆ ಎನ್ನಲಾಗಿದೆ. ಭಾರತದ ಶತ್ರುರಾಷ್ಟ್ರವೆಂದೇ ಬಿಂಬಿಸಲ್ಪಡುವ ಪಾಕಿಸ್ತಾನದ ಜೊತೆ ಶಾಂತಿ ಒಪ್ಪಂದಕ್ಕೆ ಮುಂದಾದರೆ ತನ್ನ ರಾಷ್ಟ್ರವಾದಿ ನಿಲುವಿನಿಂದ ಬಿಜೆಪಿ ಹಿಂದೆ ಸರಿಯುತ್ತಿದೆ ಎಂಬ ಸಂದೇಶಗಳು ರವಾನೆಯಾಗಬಹುದು; ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಾನಿ ಉಂಟುಮಾಡಬಹುದು ಎಂಬ ಅಭಿಪ್ರಾಯ ಕೇಂದ್ರ ನಾಯಕರಲ್ಲಿದೆ ಎಂಬ ಅನಿಸಿಕೆ ವ್ಯಕ್ತವಾಗಿದೆ. ಈಗಾಗಲೇ ನೋಟು ಅಮಾನ್ಯ, ಜಿಎಸ್ಟಿ, ಬೆಲೆ ಏರಿಕೆ ಹಾಗೂ ಹಣದುಬ್ಬರದಂತಹ ವಿಚಾರಗಳು ಕೇಂದ್ರ ಸರ್ಕಾರಕ್ಕೆ ಹಿನ್ನಡೆ ಉಂಟುಮಾಡುವ ಸೂಚನೆಗಳಿವೆ. ಇದನ್ನು ಅರಿತಂತಿರುವ ಬಿಜೆಪಿ ನಾಯಕರು, ಪಾಕ್‌ನೊಂದಿಗೆ ಶಾಂತಿ ಮಾತುಕತೆಗೆ ಮುಂದಾಗದಿರಲು ತೀರ್ಮಾನಿಸಿರಬಹುದು ಎಂಬ ಅಭಿಪ್ರಾಯವನ್ನು ರಾಜಕೀಯ ಪರಿಣತರು ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More