ಕಾಶ್ಮೀರ ಕಣಿವೆಯಲ್ಲಿ ದಿಗಿಲು ಹುಟ್ಟಿಸಿರುವ ಕದನದ ಹೊಸ ಮಜಲು

ಕಾಶ್ಮೀರ ಕಣಿವೆಯಲ್ಲಿನ ಇತ್ತೀಚಿನ ವಿದ್ಯಮಾನಗಳು ಪೊಲೀಸ್ ಮತ್ತು ಜನಸಾಮಾನ್ಯರನ್ನು ಆತಂಕಕ್ಕೆ ತಳ್ಳಿವೆ. ಉಗ್ರರನ್ನು ಹತ್ತಿಕ್ಕಲು ಪೊಲೀಸರು ಅವರ ಕುಟುಂಬದವರನ್ನು ಬಳಸಿಕೊಂಡರೆ, ಅದಕ್ಕೆ ಪ್ರತಿಯಾಗಿ ಉಗ್ರರು ಭದ್ರತಾ ಪಡೆಗಳ ಕುಟುಂಬಗಳನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ!

ಪಾಕ್ ಆಕ್ರಮಿತ ಕಾಶ್ಮೀರದ ಉಗ್ರಗಾಮಿಗಳ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಎರಡನೇ ವಾರ್ಷಿಕೋತ್ಸವವನ್ನು ಶನಿವಾರ ದೇಶಾದ್ಯಂತ ಆಚರಿಸಲಾಗಿದೆ. ಬರಲಿರುವ ೨೦೧೯ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೇನಾಪಡೆಗಳ ಕಾರ್ಯಾಚರಣೆಯನ್ನು ಕೂಡ ಆಡಳಿತಾರೂಢ ಬಿಜೆಪಿ ರಾಜಕೀಕರಣಗೊಳಿಸುವ ಮೂಲಕ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಮಾತುಗಳ ನಡುವೆ, ಸರ್ಜಿಕಲ್‌ ದಾಳಿಯ ಕುರಿತ ವ್ಯಾಪಕ ಚರ್ಚೆಗಳು ಮತ್ತೆ ಗರಿಗೆದರಿವೆ.

ಈ ನಡುವೆ, ಕೇವಲ ಹತ್ತು ದಿನಗಳ ಹಿಂದಷ್ಟೇ ೨೦೧೬ರ ಸೆಪ್ಟೆಂಬರಿನ ಸರ್ಜಿಕಲ್ ದಾಳಿ ಪೂರ್ವದ ಭಾರತೀಯ ಯೋಧರ ಶಿರಚ್ಛೇದದಂತಹ ಘಟನೆ, ಜಮ್ಮುವಿನ ರಾಮಘಡ ಪ್ರದೇಶದಲ್ಲಿ ಮರುಕಳಿಸಿದೆ. ಇದೇ ಸೆಪ್ಟೆಂಬರ್ ೧೮ರಂದು ಬಿಎಸ್‌ಎಫ್ ಯೋಧ ನರೇಂದ್ರ ಸಿಂಗ್ ಅವರನ್ನು ಪಾಕಿಸ್ತಾನದ ಗಡಿ ಕಾರ್ಯಪಡೆ (ಬಿಎಟಿ) ಕತ್ತು ಸೀಳಿ ಕೊಂದಿತ್ತು. ಶನಿವಾರ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‌ಎಫ್ ಮಹಾನಿರ್ದೇಶಕ ಕೆ ಕೆ ಶರ್ಮಾ, “ನಮ್ಮ ಯೋಧನ ಹತ್ಯೆಗೆ ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಾವು ಸರಿಯಾದ ಪ್ರತ್ಯುತ್ತರ ನೀಡಿದ್ದೇವೆ. ಆ ಪ್ರತೀಕಾರ ಏನು ಮತ್ತು ಎಂತಹ ಸ್ವರೂಪದ್ದು ಎಂಬುದನ್ನು ಇನ್ನು ಒಂದೆರಡು ದಿನಗಳಲ್ಲಿ ತಿಳಿಸುತ್ತೇವೆ,” ಎಂದಿದ್ದಾರೆ.

ಈ ನಡುವೆ, ಗೃಹ ಸಚಿವ ರಾಜನಾಥ್‌ ಸಿಂಗ್ ಕೂಡ, “ಮಹತ್ತರವಾದದ್ದು ಏನೋ ಸಂಭವಿಸಿದೆ. ಆದರೆ, ಈಗ ಅದು ಏನು ಎತ್ತ ಎಂಬುದನ್ನು ಬಹಿರಂಗಪಡಿಸಲಾರೆ. ಎರಡು ಮೂರು ದಿನದಲ್ಲಿ ಎಲ್ಲವೂ ಗೊತ್ತಾಗಲಿದೆ,” ಎಂದಿದ್ದಾರೆ. ಬಿಎಸ್‌ಎಫ್‌ ಮುಖ್ಯಸ್ಥರು ಮತ್ತು ಸ್ವತಃ ಗೃಹ ಸಚಿವರ ಈ ಹೇಳಿಕೆಗಳು ಗಡಿಯಲ್ಲಿ ಮತ್ತೊಂದು ಸರ್ಜಿಕಲ್ ದಾಳಿ ಅಥವಾ ಅಷ್ಟೇ ತೀವ್ರವಾದ ಇನ್ನೇನೋ ಸಂಭವಿಸಿದೆ ಎಂಬುದನ್ನು ಸೂಚಿಸುತ್ತಿವೆ. “ಗಡಿಯಾಚೆಯ ಇಂತಹ ಕೃತ್ಯಗಳನ್ನು ನೋಡಿಕೊಂಡು ಕೈಕಟ್ಟಿ ಕೂರುವುದಿಲ್ಲ; ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದೇವೆ ಮತ್ತು ಇನ್ನು ಮುಂದೆಯೂ ಅಂತಹ ಪಾಠಗಳನ್ನು ಮುಂದುವರಿಸುತ್ತೇವೆ,” ಎಂದೂ ಬಿಎಸ್‌ಎಫ್ ಮುಖ್ಯಸ್ಥರು ಹೇಳುವ ಮೂಲಕ, ಮುಂದಿನ ದಿನಗಳಲ್ಲಿ ಗಡಿಯಲ್ಲಿ ನಡೆಯಲಿರುವ ಕಾರ್ಯಾಚರಣೆಗಳ ಸುಳಿವು ನೀಡಿದ್ದಾರೆ.

ಇದು ಜಮ್ಮು-ಕಾಶ್ಮೀರದ ರಾಜ್ಯದಲ್ಲಿ ಹಾದುಹೋಗಿರುವ ಗಡಿ ನಿಯಂತ್ರಣ ರೇಖೆಯ ಆಚೀಚೆಯ ಇತ್ತೀಚಿನ ವಿದ್ಯಮಾನಗಳು. ಆದರೆ, ಗಡಿಯೊಳಗೆ, ಕಣಿವೆ ರಾಜ್ಯದ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ? ಗಡಿಯಲ್ಲಿನ ಇತ್ತೀಚಿನ ಈ ಬೆಳವಣಿಗೆಗಳಿಗೂ ಗಡಿಯೊಳಗಿನ ಕಣಿವೆ ರಾಜ್ಯದಲ್ಲಿನ ಬೆಳವಣಿಗೆಗಳಿಗೂ ಇರುವ ನಂಟೇನು? ಕಳೆದ ಮೂರು ವರ್ಷಗಳಿಂದ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಕಾಶ್ಮೀರ ಕಣಿವೆಯ ಬಂಡುಕೋರ ಚಟುವಟಿಕೆಗಳು ಮತ್ತು ಉಗ್ರಗಾಮಿ ಸಂಘಟನೆಗಳ ಉಪಟಳದ ಹಿಂದಿರುವ ಪಾಕ್‌ ನೆಲದ ಭಯೋತ್ಪಾದನಾ ಸಂಘಟನೆಗಳು ಸದ್ಯ ಸೃಷ್ಟಿಸಿರುವ ಪರಿಸ್ಥಿತಿ ಏನು? ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಕಣಿವೆಯ ಇತ್ತೀಚಿನ ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ ಸಿಗುವ ಚಿತ್ರಣ ಬೇರೆಯದ್ದೇ.

ಉಗ್ರರ ವಿರುದ್ಧದ ಕಾರ್ಯಾಚರಣೆಯ ವೇಳೆ ಆಕಸ್ಮಿಕವಾಗಿ ಯುವಕನೊಬ್ಬ ಸಾವಿಗೀಡಾಗಿದ್ದ ಘಟನೆಯನ್ನು ಖಂಡಿಸಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಪ್ರತಿಭಟನೆ ಕಾಶ್ಮೀರ ಕಣಿವೆಯಲ್ಲಿ ಶುಕ್ರವಾರ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿತ್ತು. ವಿವಿಧ ಪ್ರತ್ಯೇಕತಾವಾದಿ ಸಂಘಟನೆಗಳ ಜಂಟಿ ಒಕ್ಕೂಟ ಜಾಯಿಂಟ್ ರೆಸಿಸ್ಟೆನ್ಸ್‌ ಲೀಡರ್‌ಶಿಪ್ ಕರೆ ನೀಡಿದ್ದ ಆ ಪ್ರತಿಭಟನೆಗೆ ವ್ಯಕ್ತವಾದ ಜನಬೆಂಬಲ ಮತ್ತು ಸಹಜ ಜನಜೀವನದ ಮೇಲೆ ಅದು ಬೀರಿದ ಪರಿಣಾಮಗಳು ಕಣಿವೆಯ ಸದ್ಯದ ಪರಿಸ್ಥಿತಿಯನ್ನು ಅತ್ಯಂತ ಢಾಳಾಗಿ ಹೇಳುತ್ತಿತ್ತು ಎಂಬುದು ಮಾಧ್ಯಮ ವರದಿಗಳ ಸಾರ.

ಸ್ವತಃ ಸಿಆರ್‌ಪಿಎಫ್ ಮುಖ್ಯಸ್ಥರ ಮಾಧ್ಯಮ ಹೇಳಿಕೆಯ ಪ್ರಕಾರ, ಕಣಿವೆಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬರೋಬ್ಬರಿ ೩೬೦ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಆ ಮೂಲಕ, ಉಗ್ರರ ಸುರಕ್ಷತೆಗೆ ಮತ್ತು ಜೀವಿತಾವಧಿಗೆ ಭಾರಿ ಪೆಟ್ಟು ನೀಡಲಾಗಿದ್ದು, ಈ ತೀವ್ರ ಕಾರ್ಯಾಚರಣೆ ಉಗ್ರ ಸಂಘಟನೆಗಳತ್ತ ಆಕರ್ಷಿತರಾಗುವ ಯುವ ಸಮೂಹದಲ್ಲಿ ಭೀತಿ ಹುಟ್ಟಿಸಿದೆ. ಆದರೆ, ಕಣಿವೆ ರಾಜ್ಯದ ಉಗ್ರ ದಮನ ಕಾರ್ಯದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಸಿಆರ್‌ಪಿಎಫ್‌ ಮುಖ್ಯಸ್ಥರ ಈ ಹೇಳಿಕೆಗೆ ಪ್ರತಿಯಾಗಿ, ಕಾಶ್ಮೀರದಲ್ಲಿ ಕಳೆದ ಕೇವಲ ಎಂಟು ತಿಂಗಳ ಅವಧಿಯಲ್ಲಿ ೯೦ಕ್ಕೂ ಹೆಚ್ಚು ಯುವಕರು ಹಿಜ್ಬುಲ್ ಮುಜಾಹಿದೀನ್ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳನ್ನು ಸೇರಿದ್ದಾರೆ ಮತ್ತು ಸದ್ಯ ಕಣಿವೆಯಲ್ಲಿ ೩೨೦ಕ್ಕೂ ಹೆಚ್ಚು ಉಗ್ರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.

ಈ ನಡುವೆ, ಕಣಿವೆಯ ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟಹಾಕುವ ಸಲುವಾಗಿಯೇ ಇರುವ ವಿಶೇಷ ಪೊಲೀಸ್ ಅಧಿಕಾರಿಗಳೇ (ಎಸ್‌ಪಿಒ) ತಮ್ಮ ಸರ್ಕಾರಿ ರೈಫಲ್, ಗನ್‌ಗಳೊಂದಿಗೆ ತಲೆಮರೆಸಿಕೊಂಡು ಉಗ್ರ ಸಂಘಟನೆಗಳನ್ನು ಸೇರುತ್ತಿರುವ ಆಘಾತಕಾರಿ ಘಟನೆಗಳು ಕೂಡ ಮರುಕಳಿಸತೊಡಗಿವೆ. ಶುಕ್ರವಾರ ರಾತ್ರಿ ಕೂಡ ಅಂತಹ ಮತ್ತೊಂದು ಘಟನೆ ನಡೆದಿದ್ದು, ಶ್ರೀನಗರದ ಜವಾಹರ ನಗರ ಪ್ರದೇಶದ ಶಾಸಕರೊಬ್ಬರ ಭದ್ರತಾ ಉಪಠಾಣೆಯಲ್ಲಿದ್ದ ಏಳು ರೈಫಲ್, ಪಿಸ್ತೂಲ್ ಸೇರಿ ಒಟ್ಟು ಒಂಬತ್ತು ಶಸ್ತ್ರಾಸ್ತ್ರಗಳೊಂದಿಗೆ ಆದಿಲ್ ಬಷೀರ್ ಎಂಬ ಎಸ್ ಪಿ ಒ ಪರಾರಿಯಾಗಿದ್ದಾನೆ.

ಆದರೆ, ಕಾಶ್ಮೀರದ ಕಣಿವೆ ನಿವಾಸಿಗಳು ಬೆಚ್ಚಿಬೀಳುವಂತೆ ಉಗ್ರಗಾಮಿಗಳ ಜಾಲ ಮತ್ತು ಅವರ ಕಾರ್ಯಾಚರಣೆಯ ಸಾಧ್ಯತೆಯನ್ನು ತೋರಿಸಿಕೊಟ್ಟದ್ದು ಆಗಸ್ಟ್ ೩೧ರ ‘ಅಪಹರಣ ದಿನ.’ ಹೌದು, ಆ ದಿನವನ್ನು ದಕ್ಷಿಣ ಕಾಶ್ಮೀರದ ಪೊಲೀಸರು ನೆನಪಿಸಿಕೊಳ್ಳುವುದು ಹಾಗೆಯೇ. ಅಂದು ೧೧ ಮಂದಿ ಪೊಲೀಸರ ಕುಟುಂಬದವರನ್ನು ಉಗ್ರರು ಅಪಹರಿಸಿದ್ದರು. ಆ ಮೂಲಕ ತಮ್ಮ ವಿಸ್ತೃತ ಜಾಲದ ಬಲವನ್ನೂ, ಜಮ್ಮು-ಕಾಶ್ಮೀರ ಪೊಲೀಸ್ ಜಾಲದ ದೌರ್ಬಲ್ಯವನ್ನೂ ಉಗ್ರರು ಸಾಬೀತು ಮಾಡಿದ್ದರು. ಕಣಿವೆಯಲ್ಲಿ ಇಂತಹ ಅಪಹರಣ ಘಟನೆ ಇದೇ ಮೊದಲೇನಾಗಿರಲಿಲ್ಲ. ಆದರೆ, ನಿರ್ದಿಷ್ಟವಾಗಿ ಸೂಚನೆ ನೀಡಿ ಅಪಹರಿಸಲಾಗಿತ್ತು ಮತ್ತು ವ್ಯಾಪಕ ಪೊಲೀಸ್ ಮತ್ತು ಭದ್ರತಾ ಪಡೆಗಳ ಚಟುವಟಿಕೆಗಳ ನಡುವೆಯೂ, ಗುಪ್ತಚರ ಕಣ್ಗಾವಲು ಬೇಧಿಸಿ ಉಗ್ರರು ಏಕಕಾಲಕ್ಕೆ ವಿವಿಧಡೆಯ ೧೧ ಮಂದಿ ಕುಟುಂಬಗಳ ಸದಸ್ಯರನ್ನು ಅಪಹರಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ : ಕಾಶ್ಮೀರ ವಿವಾದ; ಭಾರತದ ಜೊತೆ ಬಾಂಧವ್ಯ ಸುಧಾರಿಸುವ ಇಮ್ರಾನ್ ನಾಟಕ

“ಕಳೆದ ಜೂನ್‌ನಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮ್ಯಾಂಡರ್ ಆಗಿದ್ದ ಹಮ್ಮದ್ ಖಾನ್ ಎಂಬಾತನ ಕುಟುಂಬ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ಉಗ್ರನ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಿದ್ದರು. ಪೊಲೀಸರ ಆ ಕ್ರಮಕ್ಕೆ ಪ್ರತೀಕಾರವಾಗಿ ಉಗ್ರರು, ಶ್ರೀನಗರ ಮತ್ತು ಆಸುಪಾಸಿನ ಕೆಳಹಂತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೆದರಿಸುವ ತಂತ್ರಕ್ಕೆ ಮೊರೆಹೋಗಿದ್ದರು. ಪೊಲೀಸ್ ಅಧಿಕಾರಿಗಳನ್ನು ಬೆದರಿಸುವ ಮತ್ತು ಅವರ ಕುಟುಂಬದವರನ್ನು ಅಪಹರಿಸುವ ಹೊಣೆ ಹೊತ್ತಿದ್ದ ಹಿಜ್ಬುಲ್ ಮುಜಾಹಿದೀನ್‌ನ ಕಮಾಂಡರ್ ರಿಯಾಜ್ ನೈಕೂ ಮತ್ತು ಆತನ ಅಧೀನ ಉಗ್ರ ಅಲ್ತಾಫ್ ಕಚ್ರೂ ಪೈಕಿ, ಇತ್ತೀಚೆಗೆ ಕಚ್ರೂ ಪೊಲೀಸರ ಕಾರ್ಯಾಚರಣೆಗೆ ಬಲಿಯಾಗಿದ್ದ. ಆತನ ಹತ್ಯೆಯ ಕೆಲವೇ ಗಂಟೆಗಳಲ್ಲಿ (ಆಗಸ್ಟ್ ೩೦-೩೧ರಂದು) ಪೊಲೀಸರ ಕುಟುಂಬದವರನ್ನು ಅಪಹರಿಸಲಾಗಿತ್ತು,” ಎಂದು ‘ದಿ ವೈರ್’ ಮಾಧ್ಯಮ ಮಾಹಿತಿ ಕಲೆಹಾಕಿದೆ.

ಅಲ್ಲದೆ, ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್ ಪುತ್ರ ಮತ್ತು ರಿಯಾಜ್ ನೈಕೂ ತಂದೆ ಸೇರಿದಂತೆ ಕೆಲವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಅಲ್ಲದೆ, “ಮೂವರು ಉಗ್ರರ ಕುಟುಂಬಕ್ಕೆ ಸೇರಿದ ಮನೆಗಳಿಗೆ ಬೆಂಕಿ ಹಚ್ಚಿದ್ದರು. ತಮ್ಮ ಕುಟುಂಬದವರ ಮೇಲಿನ ಪೊಲೀಸರ ದಬ್ಬಾಳಿಕೆಗೆ ಪ್ರತೀಕಾರವಾಗಿ ತಾವು ಅವರ ಕುಟುಂಬದವರ ಮೇಲೆ ಸೇಡು ತೀರಿಸಿಕೊಂಡಿದ್ದೇವೆ. ನಮ್ಮ ಗುರಿ ಭಾರತ ಸರ್ಕಾರ. ಆದರೆ, ಕಾಶ್ಮೀರದ ಪೊಲೀಸರನ್ನು ಭಾರತ ಬಲಿಪಶು ಮಾಡುತ್ತಿದೆ. ಪೊಲೀಸರಿಗೆ ನಾವು ಹಲವು ಬಾರಿ ಇದನ್ನು ಹೇಳಿದ್ದೇವೆ. ಎಚ್ಚರಿಕೆ ಕೊಟ್ಟಿದ್ದೇವೆ. ಆದರೆ, ಅವರು ತಮ್ಮ ಮೊಂಡುತನ ಬಿಡುತ್ತಿಲ್ಲ. ಹಾಗಾಗಿ ಇನ್ನು ಮುಂದೆ ನಮ್ಮ ದಾರಿಗೆ ಅಡ್ಡ ಬರುವ ಎಲ್ಲರಿಗೂ ಇದೇ ಗತಿಯಾಗಲಿದೆ,” ಎಂದು ಉಗ್ರ ರಿಯಾಜ್ ನೈಕೂ ಆಡಿರುವ ಮಾತುಗಲು ಕಣಿವೆಯಲ್ಲಿ ವೈರಲ್ ಆಗಿದ್ದವು.

ಪೊಲೀಸರು ವಶಕ್ಕೆ ಪಡೆದಿದ್ದ ತಮ್ಮವರನ್ನು ಬಿಡುಗಡೆ ಮಾಡಿದ ಬಳಿಕ, ಉಗ್ರರು ಎಲ್ಲ ೧೧ ಮಂದಿ ಪೊಲೀಸ್ ಕುಟುಂಬ ವರ್ಗದವರನ್ನೂ ಬಿಡುಗಡೆ ಮಾಡಿದರು. ಆದರೆ, ಭದ್ರತಾ ಪಡೆಗಳ ಕಾರ್ಯಕ್ಷಮತೆ ಮತ್ತು ಜಮ್ಮುಕಾಶ್ಮೀರ ಪೊಲೀಸ್ ಪಡೆ ಹಾಗೂ ಗುಪ್ತಚರ ದಳದ ವೈಫಲ್ಯಗಳ ಬಗ್ಗೆ ಆತಂಕ ಪಡುವಂತೆ ಮಾಡಿರುವ ಈ ಅಪಹರಣ ಘಟನೆಯ ಹಿನ್ನೆಲೆಯಲ್ಲಿ ಸರ್ಕಾರ, ಈವರೆಗೆ ಯಾವ ಬಗೆಯ ತನಿಖೆಗೂ ಆದೇಶಿಸಿಲ್ಲ. ಆದರೆ, ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್‌ ಪಿ ವಯೀದ್ ಅವರ ವರ್ಗಾವಣೆ ಮಾಡಲಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅವರು ತೀರಾ ಮೃದು ಧೋರಣೆ ತಳೆದಿದ್ದರು ಎಂಬ ಕಾರಣದಿಂದ ಅವರ ತಲೆದಂಡವಾಗಿದೆ ಎಂಬ ವರದಿಗಳಿವೆ.

ಆದರೆ, ಈವರೆಗೆ ಪೊಲೀಸರು ಮತ್ತು ಉಗ್ರರ ನಡುವಿನ ಮುಖಾಮುಖಿ ಕಾದಾಟದ ಕಣವಾಗಿದ್ದ ಕಣಿವೆಯಲ್ಲಿ ಇತ್ತೀಚಿನ ವಿದ್ಯಮಾನಗಳು, ಎರಡೂ ಕಡೆಯವರ ಕುಟುಂಬಗಳನ್ನು ಆತಂಕಕ್ಕೆ ತಳ್ಳಿವೆ. ಉಗ್ರರ ದಮನದ ತಂತ್ರವಾಗಿ ಪೊಲೀಸರು ಅವರ ಕುಟುಂಬದವರನ್ನು ಗುರಿಯಾಗಿಸಿಕೊಂಡು ಅವರನ್ನು ಗಾಳದ ಹುಳುವಾಗಿ ಬಳಸಿಕೊಳ್ಳುತ್ತಿವೆ. ಅದಕ್ಕೆ ಪ್ರತಿಯಾಗಿ ಉಗ್ರರು, ಪೊಲೀಸರು ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಹತ್ತಿಕ್ಕಲು ಅವರ ಕುಟುಂಬಗಳನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಕಣಿವೆ ರಾಜ್ಯದ ಉಗ್ರಗಾಮಿ ಇತಿಹಾಸದಲ್ಲಿ ಹೊಸ ಮಜಲಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಉಗ್ರರು ಪೊಲೀಸರ ಚಲನವಲನವಷ್ಟೇ ಅಲ್ಲದೆ, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೈಯಕ್ತಿಕ ಮಾಹಿತಿ ಮತ್ತು ಕುಟುಂಬ ವರ್ಗದವರ ಮಾಹಿತಿಯನ್ನೂ ಜಾಲಾಡಿದ್ದು, ಅವರ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಮುಖವಾಗಿ ಎಸ್‌ಪಿಒ ವರ್ಗದ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು, ಭದ್ರತಾ ಪಡೆಗಳ ಸ್ಥೈರ್ಯ ಕುಗ್ಗಿಸುವ, ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳೊಂದಿಗೆ, ತಳಮಟ್ಟದ ತಮ್ಮ ಬೆಂಬಲಿಗರ ಜಾಲವನ್ನೂ ಅವರು ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಕಳೆದ ವಾರ ಸುಮಾರು ೧೦ಕ್ಕೂ ಹೆಚ್ಚು ಎಸ್‌ಪಿಒ ಹುದ್ದೆಯ ಪೊಲೀಸ್ ಅಧಿಕಾರಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಬೆದರಿಕೆ ಹಾಕಿರುವುದೇ ಅಲ್ಲದೆ, ಅವರು ಕೆಲಸ ಬಿಡುವಂತೆ ತಾಕೀತು ಮಾಡಿರುವುದೇ ಸಾಕ್ಷಿ. ಅದೂ ಹೀಗೆ ಉಗ್ರರು ಭಾವಚಿತ್ರ, ಹೆಸರು, ಹುದ್ದೆ, ವಿಳಾಸಗಳನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದ ಅಧಿಕಾರಿಗಳೆಲ್ಲರೂ ಇಂಟರ್‌ನೆಟ್ ಮತ್ತು ಮೊಬೈಲ್ ನೆಟ್‌ವರ್ಕ್ ಮೂಲಕ ಉಗ್ರರ ಚಟುವಟಿಕೆಗಳ ಮೇಲೆ ಕಣ್ಣಿಡಲು ನೇಮಕವಾಗಿರುವ ಎಲೆಕ್ಟ್ರಾನಿಕ್ ಸರ್ವೈಲೆನ್ಸ್ ಯುನಿಟ್‌ಗಳ ಸಿಬ್ಬಂದಿ ಎಂಬುದು ವಿಪರ್ಯಾಸ.

ಅಲ್ಲದೆ, ಉಗ್ರರು ಜಮ್ಮು-ಕಾಶ್ಮೀರದ ಪೊಲೀಸ್ ವ್ಯವಸ್ಥೆಯ ಒಳಹೊರಗಿನ ವ್ಯವಹಾರಗಳ ಮೇಲೆ ಎಷ್ಟರಮಟ್ಟಿಗೆ ನಿಯಂತ್ರಣ ಹೊಂದಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ತಳಮಟ್ಟದ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಅಪಾಯ ಕಟ್ಟಿಟ್ಟಬುತ್ತಿ ಎಂಬ ಆತಂಕ ವ್ಯಕ್ತವಾಗುತ್ತಿದೆ. ಈ ನಡುವೆ, ಇಂತಹ ಗಂಭೀರ ಪರಿಸ್ಥಿತಿಯ ಕುರಿತ ಸರಿಯಾದ ರಾಜಕೀಯ ನಿರ್ಧಾರ ಕೈಗೊಳ್ಳಲು ಅಗತ್ಯ ಚುನಾಯಿತ ಸರ್ಕಾರವೇ ರಾಜ್ಯದಲ್ಲಿ ಗೈರಾಗಿದೆ. ರಾಜ್ಯಪಾಲರ ಆಡಳಿತದಲ್ಲಿರುವ ಕಣಿವೆಯ ಸದ್ಯದ ಪರಿಸ್ಥಿತಿಯನ್ನು ರಾಜ್ಯಪಾಲರ ಮೂಲಕ ಪರೋಕ್ಷ ಚುಕ್ಕಾಣಿ ಹಿಡಿದಿರುವ ಕೇಂದ್ರ ಸರ್ಕಾರ ಎಷ್ಟು ಸಮರ್ಥವಾಗಿ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More