ಲೋಕಸಭೆಗೆ ಸ್ಪರ್ಧಿಸಲಿರುವ ಅಖ್ಲಾಕ್ ಕೊಲೆ ಆರೋಪಿ ಹರಿ ಓಂ ಗುರಿ ಉಗ್ರ ಹಿಂದುತ್ವ

ದಾದ್ರಿಯಲ್ಲಿ ಗೋಮಾಂಸ ತಿಂದ ಅನುಮಾನದಲ್ಲಿ ಕೊಲೆಯಾದ ಅಖ್ಲಾಕ್ ಪ್ರಕರಣದ ಆರೋಪಿ ಹರಿ ಓಂ ಸಿಸೋಡಿಯ, ನೋಯ್ಡಾದ ಗೌತಮ್ ಬುದ್ಧ ಕ್ಷೇತ್ರದಿಂದ ೨೦೧೯ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆ ಕುರಿತ ‘ಹಫಿಂಗ್ಟನ್ ಪೋಸ್ಟ್‌’ ಲೇಖನದ ಭಾವಾನುವಾದ ಇಲ್ಲಿದೆ

ಉತ್ತರ ಪ್ರದೇಶದ ಕಮ್ಮಾರ ಮೊಹಮ್ಮದ್ ಅಖ್ಲಾಕ್‌ರನ್ನು ದಾದ್ರಿಯ ಬಿಸಾಡಾ ಗ್ರಾಮದಲ್ಲಿ ಸಾಮೂಹಿಕವಾಗಿ ಕೊಲೆ ಮಾಡಿ ಮೂರು ವರ್ಷಗಳೇ ಆಗಿವೆ. ಈ ಪ್ರಕರಣದ ೧೭ ಆರೋಪಿಗಳಲ್ಲಿ ಒಬ್ಬನಾಗಿರುವ ಹರಿ ಓಂ ಸಿಸೋಡಿಯ, ನೋಯ್ಡಾದ ಗೌತಮ್ ಬುದ್ಧ ಕ್ಷೇತ್ರದಿಂದ ೨೦೧೯ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆದರೆ, ಬಿಜೆಪಿ ಬಗ್ಗೆ ರೋಷ ವ್ಯಕ್ತಪಡಿಸುವ ಸಿಸೊಡಿಯ, ತಮ್ಮ ಕೃತ್ಯದ ಬಗ್ಗೆ ಹೆಮ್ಮೆ ಪಡುವುದನ್ನು ಮರೆಯುವುದಿಲ್ಲ.

“ಮೊಹಮ್ಮದ್ ಅಖ್ಲಾಕ್ ನಮ್ಮ ಧರ್ಮಕ್ಕೆ ಹಾನಿ ಮಾಡಿದ್ದಾರೆ. ನಮ್ಮ ಗೋಮಾತೆಗೆ ಅವಹೇಳನ ಮಾಡಿದ್ದಾರೆ. ಅವರ ಹತ್ಯೆಯಾಗಿರುವುದು ಸರಿ. ಗೋವುಗಳನ್ನು ಕೊಲ್ಲುವವರು ಯಾರೇ ಆದರೂ ಇದೇ ಅಂತ್ಯ ಕಾಣುತ್ತಾರೆ,” ಎಂದು ಸಿಸೋಡಿಯ ಬಹಿರಂಗವಾಗಿಯೇ ಅಭಿಪ್ರಾಯ ಹೇಳುತ್ತಾರೆ. ಉತ್ತರ ಪ್ರದೇಶದ ಮೀರತ್ ಮೂಲಕ ನವನಿರ್ಮಾಣ ಸೇನೆ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ತಕ್ಷಣ ಸಿಸೋಡಿಯ, “ಅಖ್ಲಾಕ್‌ಗೆ ತಕ್ಕ ಶಾಸ್ತಿಯಾಗಿದೆ,” ಎನ್ನುವ ಮಾತುಗಳನ್ನೇ ಹೇಳುತ್ತ ಬಂದಿದ್ದಾರೆ. ತಾವು ಸೇರಿದಂತೆ, ಆರೋಪಿಗಳೆಂದು ಪೊಲೀಸರು ಬಂಧಿಸಿದವರೆಲ್ಲರೂ ನಿರಪರಾಧಿಗಳು ಎಂದೇ ಹೇಳುತ್ತಾರೆ.

“ನಾನು ಶಾಸಕನಾದರೆ ಒಂದು ಗೋವನ್ನೂ ಕೊಲ್ಲಲು ಬಿಡುವುದಿಲ್ಲ,” ಎನ್ನುವುದು ಹರಿ ಓಂ ಸಿಸೊಡಿಯ ಕೊಡುವ ಭರವಸೆ. ೨೦೧೭ರ ಅಕ್ಟೋಬರ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ೨೮ ವರ್ಷದ ಸಿಸೋಡಿಯ, ಹಿಂದುತ್ವದ ರಕ್ಷಣೆಗಾಗಿ ಹೊಸ ಕಚೇರಿ ತೆರೆದಿದ್ದಾರೆ. “ಅಖ್ಲಾಕ್ ಕೊಲೆ ಪ್ರಕರಣದ ೧೭ ಆರೋಪಿಗಳನ್ನು ರಕ್ಷಿಸುತ್ತೇವೆ ಎಂದು ಭರವಸೆ ನೀಡಿ ಮೋಸ ಮಾಡಿದ ಬಿಜೆಪಿ ವಿರುದ್ಧವೇ ಮುಖ್ಯ ಹೋರಾಟ,” ಎಂದೂ ಹೇಳುತ್ತಿದ್ದಾರೆ. “ನಮಗೆ ನ್ಯಾಯ ಒದಗಿಸಿಕೊಡುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರು. ಆರ್ಥಿಕ ಸಮಸ್ಯೆಗಳನ್ನೂ ದೂರ ಮಾಡಿ ಉದ್ಯೋಗದ ಭರವಸೆಯನ್ನೂ ಕೊಟ್ಟಿದ್ದರು. ಆದರೆ, ನಾವಿನ್ನೂ ನಿರುದ್ಯೋಗಿಗಳಾಗಿಯೇ ಇದ್ದೇವೆ. ಆರೋಪ ಮುಕ್ತವಾಗುತ್ತೇವೆ ಎನ್ನುವ ಮುಖ್ಯ ಭರವಸೆಯನ್ನೂ ಈಡೇರಿಸಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇತ್ತೀಚೆಗೆ ಅಖ್ಲಾಕ್ ಕೊಲೆ ಪ್ರಕರಣದ ೧೮ನೇ ಆರೋಪಿಯಾದ ಸಿಸೋಡಿಯರ ಸೋದರ ಸಂಬಂಧಿ ರವಿ ಸಿಸೋಡಿಯರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಗೌತಮ ಬುದ್ಧ ನಗರದ ಶಾಸಕ ಕೇಂದ್ರ ಸಚಿವ ಮಹೇಶ್ ಶರ್ಮಾ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಮಹೇಶ್ ಶರ್ಮಾ ಅವರು ರವಿ ಕುಟುಂಬದ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಟ್ವೀಟ್ ಮಾಡಿದ್ದರು. ಆದರೆ, ನಂತರ ಶರ್ಮಾ ಅವರಿಂದ ರವಿ ಸಿಸೋಡಿಯ ಕುಟುಂಬಕ್ಕೆ ಯಾವುದೇ ಹಣಕಾಸು ನೆರವು ಸಿಗಲಿಲ್ಲ ಎನ್ನುತ್ತಾರೆ ಹರಿ ಓಂ ಸಿಸೋಡಿಯ.

ರವಿ ಸಿಸೋಡಿಯ ಮರಣಕ್ಕೆ ಜೈಲು ಅಧಿಕಾರಿ ಎಸ್ ಕೆ ಪಾಂಡೆ ಅವರನ್ನು ಶಿಕ್ಷಿಸುವಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಹರಿ ಓಂ ಆರೋಪಿಸುತ್ತಾರೆ. “ನನ್ನ ಕಣ್ಣೆದುರೇ ಜೈಲರ್ ಪಾಂಡೆ ರವಿಯನ್ನು ಹೊಡೆದು ದೌರ್ಜನ್ಯ ಎಸಗಿದ್ದಾರೆ. ಆದರೆ, ಈಗ ಚಿಕನ್ ಗುನ್ಯಾದಿಂದ ರವಿ ಸಾವನ್ನಪ್ಪಿದ್ದಾರೆ ಎಂದು ಕತೆ ಕಟ್ಟಲಾಗುತ್ತಿದೆ. ಜೈಲರ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ,” ಎಂದು ಹರಿ ಓಂ ಸಿಟ್ಟಾಗುತ್ತಾರೆ.

೨೦೧೫ರಲ್ಲಿ ಅಖ್ಲಾಕ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಕಾರಣ ಹರಿ ಓಂ, ದೂರಶಿಕ್ಷಣದಲ್ಲಿ ದಾಖಲಾಗಿದ್ದ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಎರಡು ಮಕ್ಕಳ ತಂದೆಯಾಗಿರುವ ಆತ ಈಗಲೂ ನಿರುದ್ಯೋಗಿ. ಆತನ ಸಹೋದರ ಮೇಲ್ವಿಚಾರಕನಾಗಿ ತಿಂಗಳಿಗೆ ಪಡೆಯುವ ೪೦೦೦-೫೦೦೦ ರು. ಆದಾಯದಲ್ಲಿಯೇ ಮನೆ ನಡೆಯುತ್ತಿದೆ. ಜಾಮೀನಿಗಾಗಿ ಇದ್ದ ಸಣ್ಣ ಜಮೀನನ್ನು ೧ ಲಕ್ಷಕ್ಕೆ ಮಾರಿದ್ದಾರೆ. ಇತರ ೧೭ ಮಂದಿ ಆರೋಪಿಗಳನ್ನು ಬಿಡಿಸಲು ಶಾಸಕನಾಗಲು ಬಯಸಿರುವುದಾಗಿ ಹೇಳುತ್ತಾರೆ ಹರಿ ಓಂ. ಉತ್ತರ ಪ್ರದೇಶದಲ್ಲಿ ಕಣಕ್ಕೆ ಇಳಿದಿರುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಂದೆ ಗೆಲುವಿನ ಅವಕಾಶವಿಲ್ಲ ಎನ್ನುವುದನ್ನು ಆತ ಒಪ್ಪುವುದಿಲ್ಲ. “ಈ ಪಕ್ಷಗಳು ರಾಜಕೀಯ ಮಾಡುವುದರ ಹೊರತಾಗಿ ಏನು ಮಾಡಿದ್ದಾರೆ? ನಾನು ಧರ್ಮಕ್ಕಾಗಿ ಹೋರಾಡುತ್ತಿದ್ದೇನೆ. ಹಿಂದುತ್ವಕ್ಕಾಗಿ, ಗೋ ರಕ್ಷಣೆಗಾಗಿ ಸ್ಪರ್ಧಿಸುತ್ತಿದ್ದೇನೆ. ನಮ್ಮ ಧರ್ಮಕ್ಕೆ ಅವಹೇಳನ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಪೊಲೀಸರು ಈ ನಿಟ್ಟಿನಲ್ಲಿ ಏನೂ ಕ್ರಮ ಕೈಗೊಳ್ಳುವುದಿಲ್ಲ. ಅದಕ್ಕೆ ಕಾನೂನುಗಳೇ ಇಲ್ಲ,” ಎನ್ನುತ್ತಾರೆ.

ಅಖಿಲ ಭಾರತೀಯ ಕ್ಷಾತ್ರೀಯ ಯುವ ಮಹಾಸಭಾದ ಅಧ್ಯಕ್ಷ ಅಭಿಷೇಕ್ ಸಿಸೋಡಿಯ ಅವರು, ಹರಿ ಓಂ ಬೆಂಬಲಕ್ಕೆ ನಿಂತಿದ್ದಾರೆ. ಅಭಿಷೇಕ್ ಕೆಲ ತಿಂಗಳ ಹಿಂದೆ ‘ಪದ್ಮಾವತ್’ ಸಿನಿಮಾ ವಿವಾದದ ಸಂದರ್ಭದಲ್ಲಿ, ದೀಪಿಕಾ ಪಡುಕೋಣೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರನ್ನು ಕೊಲೆ ಮಾಡಿದರೆ ರು. ೫ ಕೋಟಿ ಕೊಡುವುದಾಗಿ ಘೋಷಿಸಿ ಸುದ್ದಿಯಾದವರು. “ದೇಶಾದ್ಯಂತ ಠಾಕೂರ್ ಸಮುದಾಯ ಹರಿ ಓಂರನ್ನು ಬೆಂಬಲಿಸಲಿದೆ,” ಎಂದು ಅಭಿಷೇಕ್ ಸಿಸೋಡಿಯ ಹೇಳುತ್ತಾರೆ. “ಗೌತಮ ಬುದ್ಧ ನಗರದಲ್ಲಿರುವ ನಾಲ್ಕು ಲಕ್ಷ ರಜಪೂತರು ಹರಿ ಓಂಗೆ ಮತ ಹಾಕಲಿದ್ದಾರೆ. ಗೋರಕ್ಷಣೆಗೆ ಮತ್ತು ಅಖ್ಲಾಕ್‌ರಂತಹವರಿಗೆ ಪಾಠ ಕಲಿಸಲು ಜನರು ನಮ್ಮನ್ನು ಬೆಂಬಲಿಸುತ್ತಾರೆ,” ಎನ್ನುವ ಭರವಸೆ ಅಭಿಷೇಕ್‌ರದು.

‘ಪದ್ಮಾವತ್’ ವಿರುದ್ಧ ಪ್ರತಿಭಟನೆ ನಡೆಸಿದ್ದ ರಾಜಸ್ಥಾನ ಮೂಲದ ರಜಪೂತ ಕರಣಿ ಸೇನೆಯ ಬೆಂಬಲವೂ ಹರಿ ಓಂಗೆ ಇದೆ. ಉಗ್ರ ಹಿಂದುತ್ವವಾದಿ ಅಮಿತ್ ಜಾನಿ ನೇತೃತ್ವದ ಉತ್ತರ ಪ್ರದೇಶದ ನವನಿರ್ಮಾಣ ಸೇನೆ ಗೌತಮ ಬುದ್ಧ ನಗರದಲ್ಲಿ ಹರಿ ಓಂ ಮತ್ತು ರಾಜಸ್ಥಾನದ ರಾಯ್‌ಗಢದಲ್ಲಿ ೨೦೧೭ರ ಡಿಸೆಂಬರ್‌ನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಿದ ಶಂಬು ಲಾಲ್ ಸೇರಿದಂತೆ ಐವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿದೆ.

ಇದನ್ನೂ ಓದಿ : ದೊಂಬಿ ಹತ್ಯೆಗಳ ಬಗ್ಗೆ ಎನ್‌ಸಿಆರ್‌ಬಿ ಬಳಿ ವಿವರಗಳೇ ಲಭ್ಯವಿಲ್ಲ!

ಅಖ್ಲಾಕ್ ಕೊಲೆಗೆ ಮೂರು ವರ್ಷ

೨೦೧೮ರ ಸೆಪ್ಟೆಂಬರ್ ೨೮ಕ್ಕೆ ಮೊಹಮ್ಮದ್ ಅಖ್ಲಾಕ್ ಕೊಲೆಯಾಗಿ ಮೂರು ವರ್ಷಗಳು ತುಂಬುತ್ತವೆ. ಅಖ್ಲಾಕ್ ಕರುವನ್ನು ಕೊಲೆ ಮಾಡಿದ್ದಾನೆ ಎಂದು ಗ್ರಾಮದ ದೇವಾಲಯದಲ್ಲಿ ಘೋಷಣೆ ಮಾಡಿದ ಕೆಲವೇ ಕ್ಷಣದಲ್ಲಿ ಗ್ರಾಮಸ್ಥರು ಆತನ ಮನೆಗೆ ದಾಳಿ ಮಾಡಿ ದನದ ಮಾಂಸಕ್ಕಾಗಿ ಹುಡುಕಾಡಿದ್ದರು. ಆದರೆ, ಅಖ್ಲಾಕ್ ಮನೆಯಲ್ಲಿ ಗೋಮಾಂಸ ನಿಜಕ್ಕೂ ಪತ್ತೆಯಾಗಿದೆಯೇ ಇಲ್ಲವೇ ಎನ್ನುವುದನ್ನು ಉತ್ತರ ಪ್ರದೇಶ ಸರ್ಕಾರ ಇಂದಿಗೂ ಸ್ಪಷ್ಟಪಡಿಸಿಲ್ಲ.

೨೦೧೪ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವರದಿಯಾದ ಮೊದಲ ದೊಂಬಿ ಹತ್ಯೆ ಪ್ರಕರಣವೆಂದರೆ ಅಖ್ಲಾಕ್‌ ಕೊಲೆ. ಅಧಿಕಾರದ ಆಸೆಯಿಂದ ಬಿಜೆಪಿ ಹರಡಿದ ದ್ವೇಷದ ಅಲೆಗೆ ಮೊದಲ ಬಲಿ ಅವರದು. ಎಂಟು ದಿನಗಳ ನಂತರ ಬಹಳ ಒತ್ತಡದ ಬಳಿಕ ಮೌನ ಮುರಿದಿದ್ದ ಪ್ರಧಾನಿ ನರೇಂದ್ರ ಮೋದಿ, “ಹಿಂದೂ ಮತ್ತು ಮುಸ್ಲಿಮರು ಬಡತನದ ವಿರುದ್ಧ ಹೋರಾಡಬೇಕೇ ವಿನಾ ಪರಸ್ಪರ ಹೋರಾಡುವುದಲ್ಲ,” ಎಂದು ಹೇಳಿಕೆ ಕೊಟ್ಟರು. ಆದರೆ, ಅಖ್ಲಾಕ್ ಕೊಲೆಯನ್ನು ಖಂಡಿಸಲಿಲ್ಲ. ದೊಂಬಿಹತ್ಯೆಯನ್ನು ಖಂಡಿಸಬೇಕು ಎನ್ನುವ ಒತ್ತಡ ಬಿಜೆಪಿ ಸರ್ಕಾರದ ಮೇಲೆ ಹಲವು ಬಾರಿ ಬಂದರೂ, ಪ್ರತಿ ಬಾರಿ ಸರ್ಕಾರ ಅದನ್ನು ‘ಕಾನೂನು ಮತ್ತು ಸುವ್ಯವಸ್ಥೆ’ಯ ವಿಚಾರ ಎಂದೇ ಹೇಳುತ್ತ ಬಂದಿದೆ. ‘ಇಂಡಿಯಾ ಸ್ಪೆಂಡ್‌’ ನಡೆಸಿದ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಗೋಮಾಂಸಕ್ಕೆ ಸಂಬಂಧಿಸಿ ೨೦೧೦ರಿಂದೀಚೆಗೆ ನಡೆದ ಬಹುತೇಕ ಕೊಲೆಗಳಲ್ಲಿ ಶೇ. ೮೪ರಷ್ಟು ಪ್ರಕರಣಗಳಲ್ಲಿ ಮುಸ್ಲಿಮರು ಬಲಿಯಾಗಿದ್ದಾರೆ. ಇದರಲ್ಲಿ ಶೇ.೯೭ರಷ್ಟು ದಾಳಿಗಳು ೨೦೧೪ರ ನಂತರ ನಡೆದಿವೆ.

ಅಖ್ಲಾಕ್ ಹತ್ಯೆ ಆರೋಪಿಗಳಿಗೆ ಜಾಮೀನು

ಅಖ್ಲಾಕ್ ಹತ್ಯೆ ಪ್ರಕರಣದಲ್ಲಿ ಎಲ್ಲ ೧೭ ಆರೋಪಿಗಳೂ ಜಾಮೀನು ಪಡೆದು ಹೊರಗಿದ್ದಾರೆ. ರವಿ ಸಿಸೊಡಿಯ ಜೈಲಿನಲ್ಲಿ ಮರಣ ಹೊಂದಿದ್ದಾನೆ. ಆರೋಪಿಗಳ ಪರ ವಕೀಲರು ಪ್ರಕರಣದ ತೀರ್ಪನ್ನು ತಡ ಮಾಡುತ್ತಿದ್ದಾರೆ ಎಂದು ಅಖ್ಲಾಕ್ ಕುಟುಂಬವನ್ನು ಪ್ರತಿನಿಧಿಸುತ್ತಿರುವ ವಕೀಲ ಯೂಸುಫ್ ಸೈಫಿ ಅಭಿಪ್ರಾಯಪಡುತ್ತಾರೆ. “ಆರೋಪಿಗಳೆಲ್ಲರೂ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಆದರೆ, ಅಖ್ಲಾಕ್ ಕುಟುಂಬ ತಮ್ಮ ಮನೆಗೆ ಹಿಂತಿರುಗಲು ಭಯಪಡುತ್ತಿದೆ. ಗ್ರಾಮ ಮತ್ತು ಮನೆಯನ್ನು ತೊರೆದು ನಿರ್ವಸತಿಗರಾಗಿದ್ದಾರೆ” ಎನ್ನುತ್ತಾರೆ ಸೈಫಿ. ಆದರೆ, ಆರೋಪಿಗಳ ಪರ ವಕೀಲ ರಾಮ್ ಸರನ್ ನಗರ್ ಅವರು ಈ ಮಾತನ್ನು ಒಪ್ಪುವುದಿಲ್ಲ. “ಆರೋಪಿಗಳು ನಿರುದ್ಯೋಗಿಗಳಾಗಿ ಹತಾಶ ಜೀವನ ನಡೆಸುತ್ತಿದ್ದಾರೆ. ಕೆಲವರು ದಿನಗೂಲಿ ಮಾಡಿ ಜೀವನೋಪಾಯಕ್ಕೆ ಪ್ರಯತ್ನಿಸುತ್ತಿದ್ದಾರೆ,” ಎನ್ನುತ್ತಾರೆ ರಾಮ್ ಸರನ್. ಜಾಮೀನು ಪಡೆದ ನಂತರ ೩೦ ಬಾರಿ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದಾರೆ ಎನ್ನುತ್ತಾರವರು. “ಭಾರತದಲ್ಲಿ ಕಾನೂನು ಪ್ರಕ್ರಿಯೆ ಬಹಳ ವಿಳಂಬವಾಗುತ್ತದೆ. ಇಂದಿರಾ ಗಾಂಧಿ ಹತ್ಯೆ ಪ್ರಕರಣದ ವಿಚಾರಣೆಯೂ ವರ್ಷಗಟ್ಟಲೆ ನಡೆದಿತ್ತು,” ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ಹಿಂದುತ್ವದ ಹೊರತಾಗಿ ಹರಿ ಓಂ ಸಿಸೋಡಿಯ ನಿರುದ್ಯೋಗ ಸಮಸ್ಯೆಯನ್ನೂ ತಮ್ಮ ಪ್ರಚಾರದಲ್ಲಿ ಮುಖ್ಯ ವಿಚಾರವಾಗಿ ಮುಂದಿಡಲು ಬಯಸಿದ್ದಾರೆ. “ಬಿಸಾಡಾದ ೧೪,೦೦೦ ನಿವಾಸಿಗಳಲ್ಲಿ ಶೇ.೯೦ರಷ್ಟು ಮಂದಿ ನಿರುದ್ಯೋಗಿಗಳು. ಹೊಸ ತಲೆಮಾರಿನ ಯಾರೂ ಉದ್ಯೋಗ ಕಂಡುಕೊಂಡಿಲ್ಲ. ನಮ್ಮ ಗ್ರಾಮಕ್ಕೆ ಹೋಗಿ ಗಮನಿಸಿ; ಯುವಕರೆಲ್ಲ ನಿರುದ್ಯೋಗಿಗಳೇ. ಹೀಗಾಗಿ, ಅವರು ಅಪರಾಧದ ಕಡೆಗೆ ಆಕರ್ಷಿತರಾಗುತ್ತಾರೆ,” ಎನ್ನುತ್ತಾರೆ ಹರಿ ಓಂ. “ಬಿಜೆಪಿ ನಮ್ಮನ್ನು ಹೊಂಡದಿಂದ ಎತ್ತಿ ಬಾವಿಗೆ ಎಸೆದಿದೆ. ರಾಜಕೀಯ ಪಕ್ಷಗಳಿಗೆ ಯಾವಾಗಲೂ ರಾಜಕೀಯವೇ ಮುಖ್ಯವಾಗುತ್ತದೆ. ಅವರು ನಾವು ಹೇಗಿದ್ದೇವೆ ಎಂದು ಕೇಳಲೂ ಬಂದಿಲ್ಲ. ನಾವು ನಮ್ಮಷ್ಟಕ್ಕೇ ಬದುಕು ಕಟ್ಟಿಕೊಳ್ಳಬೇಕಿದೆ,” ಎಂದು ನಿರಾಶೆಯಿಂದ ಹೇಳುತ್ತಾರೆ ಹರಿ ಓಂ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More