ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಖಾಸಗಿ ಶಾಲಾ ಶಿಕ್ಷಕರನ್ನು ಸನ್ಯಾಸಿಗಳಿಗೆ ಹೋಲಿಸಿದ ಶಿಕ್ಷಣ ಸಚಿವ ಎನ್ ಮಹೇಶ್

ಖಾಸಗಿ ಶಾಲಾ ಶಿಕ್ಷಕರನ್ನು ಸನ್ಯಾಸಿಗಳಿಗೆ ಹೋಲಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ವಿವಾದಕ್ಕೆ ಗುರಿಯಾಗಿದ್ದಾರೆ. ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಮಹೇಶ್, ಮಕ್ಕಳ ಹಕ್ಕುಗಳು ಹಾಗೂ ಖಾಸಗಿ ಶಾಲಾ ವ್ಯವಸ್ಥೆಯ ಬಗ್ಗೆ ಕಟುವಾಗಿ ಮಾತನಾಡಿದ್ದು, “ಸನ್ಯಾಸಿಗಳಂತಿರುವ ಖಾಸಗಿ ಶಾಲಾ ಶಿಕ್ಷಕರ ಅತಿಯಾದ ಶಿಸ್ತಿನ ವರ್ತನೆಗಳಿಂದಾಗಿ ಮಕ್ಕಳಲ್ಲಿನ ಸೃಜನಶೀಲತೆ ನಾಶವಾಗುತ್ತಿದೆ. ಖಾಸಗಿ ಶಾಲೆಯ ಶಿಕ್ಷಕರಿಗೆ ಹೋಲಿಸಿದರೆ ಸರ್ಕಾರಿ ಶಾಲೆಯ ಶಿಕ್ಷಕರು ಹೆಚ್ಚು ಪ್ರತಿಭಾವಂತರು,” ಎಂದು ಹೇಳಿದ್ದಾರೆ.

ಹಿರಿಯ ಅಧಿಕಾರಿಯಿಂದ ಕಿರುಕುಳ ಆರೋಪ; ಮಹಿಳಾ ಕಾನ್ಸ್‌ಟೆಬಲ್ ಆತ್ಮಹತ್ಯೆ

ಹಿರಿಯ ಅಧಿಕಾರಿ ಕಿರುಕುಳ ತಾಳಲಾರದೆ ಮಹಿಳಾ ಕಾನ್ಸ್‌ಟೆಬಲ್‌ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಇತ್ತೀಚೆಗೆ ಪೋಸ್ಟಿಂಗ್ ಮಾಡಲಾಗಿದ್ದ ಠಾಣೆಯೊಂದರ ಹಿರಿಯ ಅಧಿಕಾರಿ ತನಗೆ ಕಿರುಕುಳ ನೀಡಿದ್ದಾಗಿ ಪತ್ರ ಬರೆದಿಟ್ಟಿರುವ 25ರ ಹರೆಯದ ಮಹಿಳಾ ಕಾನ್ಸ್‌ಟೆಬಲ್, ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಕುರಿತು ಈಗಾಗಲೇ ತನಿಖೆ ಆರಂಭವಾಗಿದೆ ಎಂದು ಬಾರಾಬಂಕದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ ಪಿ ಶ್ರೀವಾಸ್ತವ ತಿಳಿಸಿದ್ದಾರೆ.

ಹೈಕಮಾಂಡ್ ಜೊತೆ ಚರ್ಚಿಸಿ ದಾಖಲೆ ಬಿಡುಗಡೆಗೊಳಿಸುವೆ: ಲಕ್ಷ್ಮಿ ಹೆಬ್ಬಾಳ್ಕರ್

ಬಿಜೆಪಿ ನಾಯಕರು ಮಂತ್ರಿ ಪದವಿ ಹಾಗೂ 30 ಕೋಟಿ ರು. ಆಮಿಷವೊಡ್ಡುವ ಮೂಲಕ ತಮ್ಮನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದ್ದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ದಾಖಲೆಗಳಿದ್ದಲ್ಲಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರು. ಯಡಿಯೂರಪ್ಪನವರ ಈ ಮಾತಿಗೆ ದಾವಣಗೆರೆಯಲ್ಲಿ ಮಾಧ್ಯಮಗಳ ಮುಂದೆ ಉತ್ತರಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್, ಹೈಕಮಾಂಡ್ ಜೊತೆ ಚರ್ಚಿಸಿ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಇಂದೋರ್‌ನಲ್ಲಿ ತಪ್ಪಿದ ವಿಮಾನ ಅಪಘಾತ; 104 ಮಂದಿ ಪಾರು

ಜೆಟ್ ಏರ್‌ವೇಸ್‌ ಸಂಸ್ಥೆಗೆ ಸೇರಿದ ವಿಮಾನವೊಂದರ ಎಂಜಿನ್ ವೈಫಲ್ಯವಾಗಿ ಇಂದೋರ್‌ನಲ್ಲಿ ತುರ್ತು ಭೂಸ್ಪರ್ಶ ಮಾಡುವ ಮೂಲಕ ಭಾರಿ ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದೆ. 36,000 ಅಡಿ ಎತ್ತರದಲ್ಲಿದ್ದಾಗ ವಿಮಾನದ ಎಂಜಿನ್ ಕೈಕೊಟ್ಟಿದ್ದು, ತಕ್ಷಣ ಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಸಾಧ್ಯವಾದ ಕಾರಣ 104 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆಂದು ಇಂದೋರ್ ವಿಮಾನ ನಿಲ್ದಾಣ ವ್ಯವಸ್ಥಾಪಕರು ತಿಳಿಸಿದ್ದಾರೆ.

ಗೋ ಇಲಾಖೆ ಸ್ಥಾಪನೆ ಘೋಷಣೆ ಮಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್

ಮಧ್ಯಪ್ರದೇಶದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರ ಪ್ರಚಾರದ ಅಬ್ಬರ ಮುಂದುವರಿಸಿದೆ. ಗೋಶಾಲೆಗಳಿಗೆ ಪ್ರಶಸ್ತಿ ನೀಡಲೆಂದು ಖಜುರಾಹೊ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಗೋ ಇಲಾಖೆಯನ್ನು ಸೃಷ್ಟಿ ಮಾಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಗೋಪಾಲನಾ ಮತ್ತು ತಳಿ ಅಭಿವೃದ್ಧಿ ಮಂಡಳಿಗೆ ಪರ್ಯಾಯವಾಗಿ ಈ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಚೌಹಾಣ್ ಹೇಳಿದ್ದಾರೆ.

ಕೊನೆಯ ವಿಮಾನವನ್ನು ಸುರಕ್ಷಿತವಾಗಿ ಕಳುಹಿಸಿ ಪ್ರಾಣ ತೆತ್ತ ಏರ್ ಟ್ರಾಫಿಕ್ ಕಂಟ್ರೋಲರ್!

ಇಂಡೋನೇಷ್ಯಾದಲ್ಲಿ ಸಂಭವಿಸುತ್ತಿರುವ ಭೂಕಂಪ ಹಾಗೂ ಸುನಾಮಿಯಿಂದ ಇದುವರೆಗೂ 800 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಇತ್ತೀಚೆಗೆ ಪ್ರಾಣ ತೆತ್ತ ಯುವ ಏರ್ ಟ್ರಾಫಿಕ್ ಕಂಟ್ರೋಲರ್ ದೇಶವೇ ಕೊಂಡಾಡುವ ಕೆಲಸ ಮಾಡಿದ್ದಾರೆ. ಮುಟಿಯಾರ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ 21ರ ಹರೆಯದ ಗುನವಾನ್ ಅಗುಂಗ್, 7.5 ಮ್ಯಾಗ್ನಿಟ್ಯೂಡ್ ಮಟ್ಟದ ಪ್ರಬಲ ಭೂಕಂಪ ಸಂಭವಿಸುವ ಅಪಾಯ ಅರಿತು, ಇನ್ನೇನು ಹೊರಡಲು ಸಿದ್ಧವಾಗಿದ್ದ ವಿಮಾನದ ಸಿಬ್ಬಂದಿಗೆ ತಕ್ಷಣ ಟೇಕಾಫ್ ಮಾಡುವಂತೆ ಸೂಚಿಸಿದ್ದಾರೆ. ವಿಮಾನ ಸುರಕ್ಷಿತವಾಗಿ ಮೇಲೇರಿದ ತಕ್ಷಣ ಭೂಕಂಪ ಸಂಭವಿಸಿ ಅಗುಂಗ್ ಮೃತಪಟ್ಟಿದ್ದಾರೆ.

ಜೀವರಕ್ಷಕರ ಕಾನೂನು ರಕ್ಷಣಾ ಮಸೂದೆ ಅಂಗೀಕರಿಸಿದ ರಾಷ್ಟ್ರಪತಿ

ರಸ್ತೆ ಅಪಘಾತಕ್ಕೊಳಗಾದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಜೀವರಕ್ಷಕರು ಹಾಗೂ ವೃತ್ತಿಪರ ವೈದ್ಯರಿಗೆ, ಕಾನೂನು ಹಾಗೂ ಪೋಲಿಸರಿಂದ ಯಾವ ತೊಂದರೆಗಳು ಉಂಟಾಗದಂತೆ ದೇಶಾದ್ಯಂತ ಜೀವರಕ್ಷಕರ ಕಾನೂನು ರಕ್ಷಣಾ ಮಸೂದೆ ಜಾರಿಯಾಗಲಿದ್ದು, ರಾಷ್ಟ್ರಪತಿ ರಮಾನಾಥ್ ಕೋವಿಂದ್ ಮಸೂದೆಯನ್ನು ಅಂಗೀಕರಿಸಿದ್ದಾರೆ. ಈ ಮಸೂದೆ ಜಾರಿಗೆ ಬರುವುದರಿಂದ ಅಪಘಾತಕ್ಕೀಡಾದ ಯಾವುದೇ ವ್ಯಕ್ತಿಯನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸುವವರು ಮತ್ತು ಚಿಕಿತ್ಸೆ ನೀಡುವವರಿಗೆ ಇನ್ನು ಮುಂದೆ ಪೋಲೀಸ್ ತನಿಖೆಯ ಭಯ ಇರುವುದಿಲ್ಲ. ಒಂದು ವೇಳೆ ವಿಚಾರಣೆಯ ಅಗತ್ಯವಿದ್ದರೆ ಜೀವರಕ್ಷಕರ ಪ್ರಯಾಣ ಹಾಗೂ ಇತರ ವೆಚ್ಚವನ್ನು ಜೀವರಕ್ಷಕರ ನಿಧಿಯಿಂದಲೇ ಭರಿಸಲಾಗುತ್ತದೆ.

ಏಕದಿನ ಅಗ್ರ ಆಟಗಾರರ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಭಾರತಕ್ಕೆ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಭಾರತದ ಆಟಗಾರರ ವಶವಾಗಿದೆ. ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದರೆ, ಎರಡನೇ ಸ್ಥಾನಕ್ಕೆ ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಲಗ್ಗೆ ಹಾಕಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಏಳನೇ ಟ್ರೋಫಿ ಜಯಿಸಲು ನೆರವಾದ ರೋಹಿತ್ ಶರ್ಮಾ ಟೂರ್ನಿಯಲ್ಲಿ ಗಳಿಸಿದ ೩೧೭ ರನ್‌ಗಳ ನೆರವಿನೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು, ಇದೇ ಏಷ್ಯಾ ಕಪ್‌ನಲ್ಲಿ ೩೪೨ ರನ್ ಗಳಿಸಿದ ಶಿಖರ್ ಧವನ್ ನಾಲ್ಕು ಸ್ಥಾನಗಳ ಜಿಗಿತದೊಂದಿಗೆ ಪ್ರಸ್ತುತ ಐದನೇ ಸ್ಥಾನದಲ್ಲಿದ್ದಾರೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ಇತ್ತ, ಟೀಂ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ವೆಸ್ಟ್‌ಇಂಡೀಸ್ ತಂಡಗಳಿವೆ.

ವಿಶ್ವ ಆರ್ಚರಿಯಲ್ಲಿ ಕಂಚು ಗೆದ್ದ ದೀಪಿಕಾ ಕುಮಾರಿ

ಟರ್ಕಿಯ ಸ್ಯಾಮ್ಸನ್‌ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿಂದು ಭಾರತದ ಗುರಿಕಾರ್ತಿ ದೀಪಿಕಾ ಕುಮಾರಿ ಕಂಚಿನ ಪದಕ ಜಯಿಸಿದರು. ಮೂರನೇ ಸ್ಥಾನಕ್ಕಾಗಿನ ಪ್ಲೇ-ಆಫ್ ಸೆಣಸಿನಲ್ಲಿ ಜರ್ಮನಿಯ ಗುರಿಕಾರ್ತಿ ಲಿಸಾ ಉನ್ರುಹ್ ತೀವ್ರ ಪೈಪೋಟಿ ಒಡ್ಡಿದರು. ಅತ್ಯಂತ ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಇಬ್ಬರೂ ೫-೫ ಸಮಬಲ ಸಾಧಿಸಿದರು. ಇದರಿಂದ ಶೂಟೌಟ್‌ನಲ್ಲಿ ವಿಜೇತರನ್ನು ಆಯ್ಕೆ ಮಾಡಲು ತೀರ್ಪುಗಾರರು ನಿರ್ಧರಿಸಿದರು. ಶೂಟೌಟ್‌ನಲ್ಲಿಯೂ ಇಬ್ಬರೂ ತಲಾ ೯ ಪಾಯಿಂಟ್ಸ್ ಗಳಿಸಿದ್ದು ತೀರ್ಪುಗಾರರನ್ನು ಸಂಕಷ್ಟಕ್ಕೆ ದೂಡಿತು. ಆದರೆ, ದೀಪಿಕಾ ಬಾಣವೊಂದು ಕೇಂದ್ರಸ್ಥಾನಕ್ಕೆ ಸಮೀಪ ನಾಟಿದ್ದರಿಂದ ಕಂಚು ಭಾರತದ ಗುರಿಕಾರ್ತಿಯ ಕೊರಳೇರಿತು. ಅಂದಹಾಗೆ, ದೀಪಿಕಾ ವೃತ್ತಿಬದುಕಿನಲ್ಲಿ ಇದು ಐದನೇ ವಿಶ್ವಕಪ್ ಪದಕವೆನ್ನುವುದು ಗಮನಾರ್ಹ.

ಮನೀಶ್ ಪಾಂಡೆ ನಾಯಕತ್ವದಲ್ಲಿ ಜಯದ ಖಾತೆ ತೆರೆದ ಕರ್ನಾಟಕ

ಸತತ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿ ತತ್ತರಿಸಿದ್ದ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿಯಲ್ಲಿ ಜಯದ ಖಾತೆ ತೆರೆಯಿತು. ಹಾಲಿ ಚಾಂಪಿಯನ್ ಕರ್ನಾಟಕ, ಆರ್ ವಿನಯ್ ಕುಮಾರ್ ನಾಯಕತ್ವದಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ (ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು) ಗೆಲುವು ಸಾಧಿಸಲು ವಿಫಲವಾಗಿ ಈಗ ಉಳಿದಿರುವ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಇದೇ ವೇಳೆ, ವಿದರ್ಭ ವಿರುದ್ಧದ ಇಂದಿನ ಪಂದ್ಯಕ್ಕೆ ಮನೀಶ್ ಪಾಂಡೆಗೆ ಸಾರಥ್ಯ ವಹಿಸಲಾಗಿತ್ತು. ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬೌಲರ್‌ಗಳ ದಾಳಿಗೆ ಸಿಲುಕಿದ ಪ್ರವಾಸಿ ವಿದರ್ಭ ೩೬.೨ ಓವರ್‌ಗಳಲ್ಲಿ ೧೨೫ ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ, ಕರ್ನಾಟಕ ೩೨.೩ ಓವರ್‌ಗಳಲ್ಲಿ ಕೇವಲ ೪ ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಕರ್ನಾಟಕದ ಗೆಲುವಿನಲ್ಲಿ ಶ್ರೇಯಸ್ ಗೋಪಾಲ್ ಆಲ್ರೌಂಡ್ ಆಟ ಪ್ರಮುಖವೆನಿಸಿತು. ೪೮ ಎಸೆತಗಳಲ್ಲಿ ಅಜೇಯ ೩೪ ರನ್ ಗಳಿಸಿದ ಶ್ರೇಯಸ್, ಕೇವಲ ೧೩ ರನ್‌ಗಳಿಗೆ ೩ ವಿಕೆಟ್ ಗಳಿಸಿ ಮಿಂಚಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More