ನ್ಯಾ.ಚಂದ್ರಚೂಡ್‌ ಭಿನ್ನಮತವೇ ಹಿಂದಿನ ದಿನದವರೆಗೆ ಸರ್ವಾನುಮತದ ತೀರ್ಪಾಗಿತ್ತೇ?

ಸೆ.೨೭ರ ಸಂಜೆವರೆಗೂ ಕೋರೆಗಾಂವ್ ಪ್ರಕರಣದ ತೀರ್ಪನ್ನು ತ್ರಿಸದ್ಯಸ್ಯ ಪೀಠದಲ್ಲಿ ಒಬ್ಬರಾದ ನ್ಯಾ.ಚಂದ್ರಚೂಡ್‌ ಪ್ರಕಟಿಸುತ್ತಾರೆ ಎನ್ನಲಾಗಿತ್ತು. ಆದರೆ, ಸೆ.೨೮ರಂದು ಏಕಾಏಕಿ ಬದಲಾವಣೆ ಆಗಿದ್ದು ಅನುಮಾನ ವ್ಯಕ್ತವಾಗಿದೆ. ಈ ಕುರಿತ ‘ಕಾರವಾನ್’ ವರದಿಯ ಭಾವಾನುವಾದ ಇಲ್ಲಿದೆ

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಸೆಪ್ಟೆಂಬರ್ ೨೮ರಂದು ತೀರ್ಪು ಪ್ರಕಟಿಸಿತ್ತು. ಆರೋಪಿಗಳನ್ನು ಬಂಧಮುಕ್ತಗೊಳಿಸಿ, ಪ್ರಕರಣವನ್ನು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸುವಂತೆ ಸಾಮಾಜಿಕ ಕಾರ್ಯಕರ್ತರು ಅರ್ಜಿಯಲ್ಲಿ ಆಗ್ರಹಿಸಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ತಮ್ಮನ್ನೊಳಗೊಂಡು ಬಹುಮತದ ತೀರ್ಪು ನೀಡಿದ್ದ ನ್ಯಾ.ಎ ಎಂ ಖಾನ್ವಿಲ್ಕರ್ ಸಾಮಾಜಿಕ ಕಾರ್ಯಕರ್ತರ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ್ದರು. ಆದರೆ ಈಗ, ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟವಾಗುವ ಹಿಂದಿನ ದಿನವಾದ ಸೆ.೨೭ರ ಸಂಜೆವರೆಗೂ ಸುಪ್ರೀಂ ಕೋರ್ಟ್ ವೆಬ್‌ಸೈಡಿನಲ್ಲಿ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಸದಸ್ಯ ಪೀಠದಲ್ಲಿ ಒಬ್ಬರಾದ ನ್ಯಾ.ಡಿ ವೈ ಚಂದ್ರಚೂಡ್ ತೀರ್ಪು ನೀಡಲಿದ್ದಾರೆ ಎಂದು ಉಲ್ಲೇಖಿಸಿ, ಆನಂತರ ಬದಲಾವಣೆ ಮಾಡಿದ ವಿಚಾರದ ಕುರಿತು ಚರ್ಚೆ ಆರಂಭವಾಗಿದೆ.

ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯು ಪ್ರತಿದಿನವೂ ವಿವಿಧ ನ್ಯಾಯಪೀಠಗಳು ವಿಚಾರಣೆ ನಡೆಸುವ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯದ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತದೆ. ಪ್ರಕರಣದ ವಿಚಾರಣೆ ನಡೆಸಲಿರುವ ನ್ಯಾಯಮೂರ್ತಿಗಳು, ವಿಚಾರಣೆಯ ಸಮಯ, ತೀರ್ಪು ಪ್ರಕಟಿಸಲಿರುವ ನ್ಯಾಯಮೂರ್ತಿಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಸೆ.೨೭ರ ಸಂಜೆ ಸುಪ್ರೀಂ ಕೋರ್ಟ್ ವೆಬ್‌ಸೈಟಿನಲ್ಲಿ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಚಂದ್ರಚೂಡ್ ತೀರ್ಪು ಪ್ರಕಟಿಸುವರು ಎಂದು ಉಲ್ಲೇಖಿಸಿದ್ದ ವಿವರ ಹೊಂದಿರುವ ಸ್ಕ್ರೀನ್ ಶಾಟ್ ಅನ್ನು 'ದಿ ಕಾರವಾನ್' ಲಗತ್ತಿಸಿ ವರದಿ ಮಾಡಿದೆ. ಆದರೆ, ತೀರ್ಪು ಪ್ರಕಟವಾಗುವ ದಿನ ಸುಪ್ರೀಂವಕೋರ್ಟ್ ವೆಬ್ಸೈಟಿನಲ್ಲಿ ನೋಟಿಸ್ ಹಾಕುವ ಮೂಲಕ ಸ್ಪಷ್ಟನೆ ನೀಡಿರುವ ರಿಜಿಸ್ಟ್ರಿಯು, ಭೀಮಾ ಕೋರೆಗಾಂವ್ ಪ್ರಕರಣದ ತೀರ್ಪನ್ನು ನ್ಯಾ.ಡಿ ವೈ ಚಂದ್ರಚೂಡ್ ಬದಲಿಗೆ ನ್ಯಾ.ಖಾನ್ಬಿಲ್ಕರ್ ಮತ್ತು ನ್ಯಾ.ಚಂದ್ರಚೂಡ್ ಪ್ರಕಟಿಸಲಿದ್ದಾರೆ ಎಂದು ಓದಿಕೊಳ್ಳುವುದು ಎಂದು ಸ್ಪಷ್ಟನೆ ನೀಡಿರುವುದರ ಬಗ್ಗೆ ಅನುಮಾನಗಳು ಎದ್ದಿವೆ.

ಸಂಪ್ರದಾಯದಂತೆ ರಿಜಿಸ್ಟ್ರಿಯು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನ್ಯಾ.ಚಂದ್ರಚೂಡ್ ಅವರ ಜೊತೆ ನ್ಯಾ.ಖಾನ್ವಿಲ್ಕರ್ ಹೆಸರು ಉಲ್ಲೇಖಿಸಬೇಕಿತ್ತು. ಇದರ ನಡುವೆ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರಾಕರಣೆ ಕುರಿತು ಪ್ರಶ್ನಿಸಲಾಗಿದ್ದ ಪ್ರಕರಣದ ವಿಚಾರಣೆಯನ್ನೂ ಸೆ.೨೮ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕೋರ್ಟ್ ರೂಮಿನಲ್ಲಿ ನಡೆಸಲಾಗುತ್ತದೆ ಎಂದು ವೆಬ್ಸೈಟಿನಲ್ಲಿ ರಿಜಿಸ್ಟ್ರಿ ಪ್ರಕಟಿಸಿತ್ತು. ಇಲ್ಲಿ ಸಿಜೆಐ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರಿಮನ್, ಡಿ ವೈ ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರಾ ತೀರ್ಪು ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಪೀಠ ನಡೆಸಿದ್ದು, ನಾಲ್ವರು ತೀರ್ಪು ಪ್ರಕಟಿಸಿದ್ದರು (ಖಾನ್ವಿಲ್ಕರ್ ಐದನೇ ನ್ಯಾಯಮೂರ್ತಿಯಾಗಿದ್ದರು). ಆದರೆ, ಇಲ್ಲಿ ಯಾರು ತೀರ್ಪಿನ ಪರ ಅಥವಾ ಭಿನ್ನಮತದ ತೀರ್ಪು ನೀಡಲಿದ್ದಾರೆ ಎಂಬುದನ್ನು ಉಲ್ಲೇಖಿಸಿರಲಿಲ್ಲ. ಪ್ರಕರಣದಲ್ಲಿ ಇಂದೂ ಮಲ್ಹೋತ್ರಾ ಭಿನ್ನಮತದ ತೀರ್ಪು ಬರೆದಿದ್ದರು.

ಈ ಮಧ್ಯೆ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನ್ಯಾ.ಖಾನ್ವಿಲ್ಕರ್ ತೀರ್ಪು ಪ್ರಕಟಿಸುತ್ತಾರೆ ಎಂಬುದರ ಸಂಬಂಧ ಲೋಪವಾಗಿದ್ದಕ್ಕೆ ರಿಜಿಸ್ಟ್ರಿಯು ಯಾವುದೇ ವಿವರಣೆ ನೀಡಿರಲಿಲ್ಲ. ಕೋರ್ಟ್ ರಿಜಿಸ್ಟ್ರಿಯಲ್ಲಿ ಪ್ರಕರಣಗಳ ಪಟ್ಟಿ ಪ್ರಕಟಿಸುವ ಹೊಣೆ ಹೊತ್ತಿರುವ ರಾಜಕುಮಾರ್ ಚುಬೆ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಮಾತನಾಡಲು ನಿರಾಕರಿಸಿದ್ದಾರೆ. ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲರಾಗಿರುವ ಪ್ರಶಾಂತ್ ಭೂಷಣ್ ಅವರು ಖಾನ್ವಿಲ್ಕರ್ ಹೆಸರು ಕೈಬಿಟ್ಟು ಆನಂತರ ಸೇರ್ಪಡೆಗೊಳಿಸಿದ್ದಕ್ಕೆ ಸಂಶಯ ವ್ಯಕ್ತಪಡಿಸಿದ್ದಾರೆ. “ಭೀಮಾ ಕೋರೆಗಾಂವ್ ಪ್ರಕರಣವು ಕೇಂದ್ರ ಸರ್ಕಾರಕ್ಕೆ ಮಹತ್ವದ್ದಾಗಿದೆ,” ಎಂದು ಭೂಷಣ್‌ ಹೇಳಿದ್ದು, “ಚಂದ್ರಚೂಡ್ ತೀರ್ಪು ಬರೆಯಲಿದ್ದಾರೆ ಎಂಬುದು ಸರ್ಕಾರಕ್ಕೆ ತಿಳಿದಿರುವ ಸಾಧ್ಯತೆ ಇದೆ. ಇದರಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿರುವ ಸಾಧ್ಯತೆ ಇದೆ,” ಎಂದು ಭೂಷಣ್ ಅನುಮಾನ ವ್ಯಕ್ತಪಡಿಸಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣದಲ್ಲಿ ಆರೋಪಿಯ ಪರ ವಾದ ಮಂಡಿಸುತ್ತಿರುವುದರಿಂದ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೂ ಪ್ರಕರಣದಲ್ಲಿ ಭಾಗಿಯಾಗುವುದರಿಂದ ಮಾತನಾಡುವುದಿಲ್ಲ ಎಂದು ಹೇಳಿದ್ದಾಗಿ 'ದಿ ಕ್ಯಾರವಾನ್' ವರದಿಯಲ್ಲಿ ತಿಳಿಸಿದೆ.

ಪ್ರಕರಣದಲ್ಲಿ ಚಂದ್ರಚೂಡ್ ಅವರ ತೀರ್ಪಿನ ಪೈಕಿ ಒಂದಂಶವನ್ನು ಪ್ರಮುಖವಾಗಿ ಒತ್ತಿಹೇಳಿರುವ ಪ್ರಶಾಂತ್ ಭೂಷಣ್, ಚಂದ್ರಚೂಡ್ ಅವರದ್ದು ನೈಜವಾಗಿ ತ್ರಿಸದಸ್ಯ ಪೀಠದ ಸರ್ವಾನುಮತದ ತೀರ್ಪಾಗಿದೆ. ತಮ್ಮ ತೀರ್ಪಿನ ಅಂತಿಮ ಪ್ಯಾರಾದಲ್ಲಿ ನ್ಯಾ.ಚಂದ್ರಚೂಡ್ ಅವರು, “ಎಸ್‌ಐಟಿ ರಚನೆಗೆ ಸಂಬಂಧಿಸಿದಂತೆ ಆದೇಶ ನೀಡುವ ವಿಚಾರದ ತೀರ್ಮಾನ ಕೈಗೊಳ್ಳಲು ಮೂರು ದಿನಗಳ ಬಳಿಕ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಬೇಕು," ಎಂದು ಆದೇಶಿಸಿದ್ದಾರೆ. ಆರೋಪಿಗಳ ಅರ್ಜಿ ವಜಾಗೊಳಿಸುವ ಬಹುಮತದ ತೀರ್ಪು ಪ್ರಶ್ನಾರ್ಹವಾಗಿರುವಾಗ ಭಿನ್ನಮತದ ತೀರ್ಪಿನಲ್ಲಿ ಮತ್ತೊಮ್ಮೆ ವಿಚಾರಣೆಗೆ ನಿಗದಿಪಡಿಸುವಂತೆ ಆದೇಶಿಸುವುದು ವೈರುಧ್ಯದ ನಡೆಯಂತೆ ಭಾಸವಾಗುತ್ತಿದೆ. "ಭಿನ್ನಮತವಿಲ್ಲದಿದ್ದರೆ ನ್ಯಾ.ಚಂದ್ರಚೂಡ್ ಅವರು ಅದನ್ನು ಬರೆಯುತ್ತಿರಲಿಲ್ಲ," ಎಂದು ಭೂಷಣ್ ವಿವರಿಸಿದ್ದಾರೆ.

ತಮ್ಮ ತೀರ್ಪಿನಲ್ಲಿ ನ್ಯಾ.ಚಂದ್ರಚೂಡ್ ಅವರು, “ಎಸ್ಐಟಿಯು ಆಗಾಗ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಬೇಕು. ಆರಂಭದಲ್ಲಿ ಮಾಸಿಕ ವರದಿ ಸಲ್ಲಿಸಬೇಕು,” ಎಂದು ಹೇಳಿದ್ದಾರೆ. ಆದರೆ, ಬಹುತದ ತೀರ್ಪು ವಿಶೇಷವಾಗಿ ಎಸ್ಐಟಿ ರಚನೆಯನ್ನು ವಿರೋಧಿಸಿದೆಯಲ್ಲದೆ, ಪುಣೆ ಪೊಲೀಸರು ಪ್ರಕರಣದ ವಿಚಾರಣೆ ಮುಂದುವರಿಸಲು ಅನುಮತಿ ನೀಡಿದೆ. ಇದೇ ಪ್ಯಾರಾದ ಅಡಿಯಲ್ಲಿ ಬರೆಯಲಾದ ಅಡಿಟಿಪ್ಪಣಿಯಲ್ಲಿ ಚಂದ್ರಚೂಡ್ ಅವರು, “ಅಲ್ಪಸಂಖ್ಯಾತರ ಪರವಾಗಿ ಮಾತನಾಡುವಾಗ ನಾನು ಎಸ್ಐಟಿಯಲ್ಲಿ ಯಾವೆಲ್ಲ ಅಧಿಕಾರಿಗಳು ಇರಬೇಕು ಎಂದು ಹೇಳಿಲ್ಲ. ಅಂಥ ಸ್ಥಿತಿ ನಿರ್ಮಾಣವಾದರೆ ಕೋರ್ಟ್‌ನ ಸಲಹೆ ಪಡೆಯುವ ಸ್ವಾತಂತ್ರ್ಯ ನೀಡಲಾಗಿದೆ," ಎಂದು ವಿವರಿಸಿದ್ದಾರೆ. ಚಂದ್ರಚೂಡ್ ಅವರು ತಮ್ಮ ಅಭಿಪ್ರಾಯಕ್ಕೆ ಪೂರಕವಾಗಿ ವಿಶೇಷ ವಿವರಣೆಗಳನ್ನು ನೀಡಿದ್ದಾರೆ. ಇದರ ಜೊತೆಗೆ ಮತ್ತಷ್ಟು ವಿವರಗಳನ್ನು ನೀಡಿರುವ ಪ್ರಶಾಂತ್ ಭೂಷಣ್ ಅವರು ಭಿನ್ನಮತದ ತೀರ್ಪೇ ಮೂಲತಃ ಸರ್ವಾನುಮತದ ಅಭಿಪ್ರಾಯವಾಗಿತ್ತು ಎಂದು ನನಗನ್ನಿಸಿದೆ ಎಂದು ಹೇಳಿದ್ದಾರೆ. ನ್ಯಾ.ಖಾನ್ವಿಲ್ಕರ್ ಅವರ ಬಹುಮತದ ತೀರ್ಪು ರಾತ್ರೋರಾತ್ರಿ ಕಾರ್ಯಪ್ರವೃತ್ತರಾದಂತೆ ಭಾಸವಾಗುತ್ತಿದೆ ಸಂಶಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಬಹುಮತದ ತೀರ್ಪಿನಲ್ಲಿ, “ಆರೋಪಿಗಳು ತನಿಖಾ ಸಂಸ್ಥೆ ಬದಲಿಸುವಂತೆ ಕೇಳುವ ಹಾಗಿಲ್ಲ ಅಥವಾ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸುವುದು ಸೇರಿದಂತೆ ಇದೇ ಮಾದರಿಯಲ್ಲಿ ವಿಚಾರಣೆ ನಡೆಸುವಂತೆ ಕೇಳುವಂತಿಲ್ಲ,” ಎಂದು ಹೇಳಲಾಗಿದೆ. ಆದರೆ, ಇದಕ್ಕೆ ನ್ಯಾ.ಚಂದ್ರಚೂಡ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದಿನ ಎರಡು ಪ್ರಕರಣಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ನ್ಯಾಯದಾನದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಒಂದು ಪ್ರಕರಣದಲ್ಲಿ ನ್ಯಾ.ಖಾನ್ವಿಲ್ಕರ್ ಅವರೇ ತನಿಖಾ ಸಂಸ್ಥೆಯ ಬದಲಾವಣೆ ನಿರ್ಧಾರ ಕೈಗೊಂಡಿದ್ದಾರೆ. ಆದರೆ, “ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಅರ್ಜಿದಾರರು ವೈಯಕ್ತಿಕ ಗಳಿಕೆ ಅಥವಾ ರಾಜಕೀಯ ಲಾಭಗಳನ್ನು ಎದುರು ನೋಡುತ್ತಿದ್ದಾರೆ,” ಎಂದು ಖಾನ್ವಿಲ್ಕರ್ ತೀರ್ಪು ಬರೆದಿದ್ದಾರೆ.

ಇದೆಲ್ಲದರ ಮಧ್ಯೆ, ಚಂದ್ರಚೂಡ್ ಅವರ ಭಿನ್ನಮತದ ತೀರ್ಪು, ಬಹುಮತದ ತೀರ್ಪಿನಲ್ಲಿನ ವಿರೋಧಭಾಸದ ಕಡೆಗೆ ಬೆಟ್ಟು ಮಾಡಿದೆ. ಖಾನ್ವಿಲ್ಕರ್ ಅವರು, “ತನಿಖಾಧಿಕಾರಿಗಳು ಪೂರ್ವಗ್ರಹದಿಂದ ತನಿಖೆ ನಡೆಸುತ್ತಿದ್ದಾರೆ ಎಂಬುದಕ್ಕೆ ಆರೋಪಿಗಳು ಸೂಕ್ತ ದಾಖಲೆಗಳನ್ನು ನೀಡಿಲ್ಲ,” ಎಂದಿದ್ದಾರೆ. ಆದರೆ, ತಮ್ಮ ಭಿನ್ನಮತದ ತೀರ್ಪಿನಲ್ಲಿ ಚಂದ್ರಚೂಡ್ ಅವರು ಅರ್ಜಿದಾರರು ಒದಗಿಸಿರುವ ಹಲವು ದಾಖಲೆ ಹಾಗೂ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಉದಾಹರಣೆಗೆ, ಪೊಲೀಸರು ೧೩ ಪರಿಶೀಲನೆ ನಡೆಸದ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆರೋಪಿಗಳಿಗೆ ಮಾವೋವಾದಿಗಳ ಸಂಪರ್ಕವಿದೆ ಎಂಬುದನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡಿದ್ದಾರೆ. “ಪತ್ರಗಳಲ್ಲಿ ಯಾವುದೇ ತೆರನಾದ ಸಹಿ ಇಲ್ಲ. ಇಮೇಲ್ ಅಥವಾ ಗುರುತು ಹಿಡಿಯಲು ಸಾಧ್ಯವಾಗುವ ಯಾವುದೇ ವಿವರಣೆ ಇಲ್ಲ,” ಎಂದು ನ್ಯಾ ಚಂದ್ರಚೂಡ್ ತೀರ್ಪಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಭೀಮಾ ಕೊರೆಗಾಂವ್ ಘರ್ಷಣೆ | ಮಾನವ ಹಕ್ಕು ಹೋರಾಟಗಾರರ ಗೃಹಬಂಧನ ೪ ವಾರ ವಿಸ್ತರಣೆ

ಮುಂದುವರಿದು, ಅರ್ಜಿದಾರರು ಬರೆದಿದ್ದಾರೆ ಎನ್ನಲಾದ ೧೩ ಪತ್ರಗಳ ಪೈಕಿ ಏಳು ಪತ್ರಗಳನ್ನು ಕಾಮ್ರೇಡ್ ಪ್ರಕಾಶ್ ಅವರಿಗೆ ಬರೆಯಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಜಿ ಎನ್ ಸಾಯಿಬಾಬಾ ಅವರ ಮತ್ತೊಂದು ಹೆಸರು ಪ್ರಕಾಶ್ ಎನ್ನಲಾಗಿದೆ. ಆಶ್ಚರ್ಯವೆಂದರೆ, ೨೦೧೭ರ ಮಾರ್ಚ್‌ನಿಂದಲೂ ಸಾಯಿಬಾಬಾ ಅವರನ್ನು ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಇದನ್ನು ಉಲ್ಲೇಖಿಸಿರುವ ಅರ್ಜಿದಾರರು, ಪತ್ರಗಳನ್ನು ತಿರುಚಿ, ನಮ್ಮ ಮೇಲೆ ಆರೋಪ ಒರಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ವಾದ ಮಂಡಿಸುವಾಗ ವಕೀಲ ಅಭಿಷೇಕ್ ಮನು ಸಿಂಘ್ವಿ, “ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿಯಲು ಪುಣೆಯ ನಗರಸಭೆ ಸಿಬ್ಬಂದಿಯನ್ನು ಕರೆತರಲಾಗಿದೆ,” ಎಂದಿದ್ದರು. ಇದನ್ನೂ ನ್ಯಾ.ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

“ವಿಚಾರಣೆಗೆ ಅಡ್ಡಿಪಡಿಸಬಾರದು ಎಂಬುದರ ಜೊತೆಗೆ ಸತ್ಯಾಸತ್ಯಾತೆ ತಿಳಿಯಲು ಎಸ್ಐಟಿ ತನಿಖೆಗೆ ವಹಿಸಲು ಯೋಗ್ಯವಾದ ಪ್ರಕರಣ ಇದಾಗಿದೆ. ಸದ್ಯ ಮಹಾರಾಷ್ಟ್ರ ಪೊಲೀಸರು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಪ್ರಕರಣದ ವಿಚಾರಣೆ ನಡೆಸಿಲ್ಲ ಎಂಬುದರ ಬಗೆಗಿನ ಅನುಮಾನಗಳನ್ನು ಕೋರ್ಟ್ ಗಮನಕ್ಕೆ ತರಲಾಗಿದೆ. ಇದರ ಜೊತೆಗೆ ಸ್ವತಂತ್ರವಾಗಿ ತನಿಖೆ ನಡೆಸಲು ಅಗತ್ಯವಾದ ದಾಖಲೆಗಳನ್ನು ಕೋರ್ಟ್‌ಗೆ ಒದಗಿಸಲಾಗಿದೆ,” ಎಂದು ನ್ಯಾ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಸಾಮಾಜಿಕ ಕಾರ್ಯಕರ್ತರು ಮಹಾರಾಷ್ಟ್ರ ಪೊಲೀಸರ ತನಿಖೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದನ್ನು ಗಮನಕ್ಕೆ ತೆಗೆದುಕೊಳ್ಳದ ನ್ಯಾ.ಖಾನ್ವಿಲ್ಕರ್, “ಆ ಕುರಿತು ತನಿಖೆ ನಡೆಸಲು ಇದು ಸೂಕ್ತ ಸಂದರ್ಭವಲ್ಲ,” ಎಂದಿದ್ದಾರೆ. ತೀರ್ಪಿನಲ್ಲಿ ಐವರು ಸಾಮಾಜಿಕ ಕಾರ್ಯಕರ್ತರಿಗೆ ಗೃಹ ಬಂಧನದ ಅವಧಿಯನ್ನು ಇನ್ನೂ ನಾಲ್ಕು ವಾರಗಳಿಗೆ ವಿಸ್ತರಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More