ಮೋದಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದಕ್ಕೆ ಇಲ್ಲಿದೆ ಪುರಾವೆ!

ಕೇಂದ್ರ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆಯೇ? ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ ಜಾರಿ ನಂತರ ಕುಸಿದ ಆರ್ಥಿಕ ಅಭಿವೃದ್ಧಿ, ಏರಿದ ಕಚ್ಚಾ ತೈಲ ಬೆಲೆ- ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದ ಪರಿಣಾಮ ಮೋದಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಅದಕ್ಕೆ ಪುರಾವೆ ಇಲ್ಲಿದೆ

ನರೇಂದ್ರ ಮೋದಿ ಅವರ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆಯೇ? ಸುಸ್ತಿಯಾಗಿರುವ ಕೈಗಾರಿಕೋದ್ಯಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಮೋದಿ ಸರ್ಕಾರ, ತಾನು ಪಡೆದ ಸೇವೆಗೆ ಸಕಾಲದಲ್ಲಿ ಮೊತ್ತ ಪಾವತಿಸಿದೆ ಬಾಕಿ ಉಳಿಸಿಕೊಂಡಿರುವುದೇಕೆ?

ಹೌದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಾಕಿ ಉಳಿಸಿಕೊಂಡಿರುವುದು ಈಗಾಗಲೇ ನಗದು ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ಏರ್ ಇಂಡಿಯಾಗೆ. ಸಂಬಳ ನೀಡಲು ಕಷ್ಟಪಡುತ್ತಿರುವ ಏರ್ ಇಂಡಿಯಾ ಸಂಸ್ಥೆಗೆ ಭಾರತ ಸರ್ಕಾರವೇ ಪಾವತಿಸಬೇಕಾದ ಮೊತ್ತ 1,146.86 ಕೋಟಿ ರುಪಾಯಿಗಳು.

ವಿವಿಧ ಸಂದರ್ಭಗಳಲ್ಲಿ ಏರ್ ಇಂಡಿಯಾದಿಂದ ಚಾರ್ಟರ್ ಫ್ಲೈಟ್ ಸೇವೆ ಪಡೆದಿರುವ ಬಾಕಿ ಮೊತ್ತ ಇದು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವಾಲಯ ಸೇವೆ ಬಳಸಿಕೊಂಡಿರುವುದರಿಂದ ಸಂಚಯವಾದ ಮೊತ್ತವಿದು. ಆದರೆ, ಮೊದಲೇ ಸಂಕಷ್ಟದಲ್ಲಿರುವ ಏರ್ ಇಂಡಿಯಾಕ್ಕೆ ಬಾಕಿ ಪಾವತಿಸಲಾರದಷ್ಟು ಭಾರತ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆಯೇ ಎಂಬುದು ಮುಖ್ಯ ಪ್ರಶ್ನೆ.

ಕಮಾಂಡರ್ ಲೋಕೇಶ್ ಬಾತ್ರ (ನಿವೃತ್ತ) ಅವರು ಆರ್ಟಿಐ ಮೂಲಕ ಏರ್ ಇಂಡಿಯಾದಿಂದ ಪಡೆದಿರುವ ಮಾಹಿತಿ ಪ್ರಕಾರ, ಜನವರಿ 31ರವರೆಗೆ ಇದ್ದ ಬಾಕಿ ಮೊತ್ತ 325 ಕೋಟಿ ರುಪಾಯಿ. ಲೋಕೇಶ್ ಬಾತ್ರ ಮತ್ತೆ ಆರ್ಟಿಐ ಮೂಲಕ ಮಾಹಿತಿ ಪಡೆದಿದ್ದು, ಸೆಪ್ಟೆಂಬರ್ 26ರವರೆಗೆ ಈ ಬಾಕಿ ಮೊತ್ತವು 1,146.86 ಕೋಟಿ ರುಪಾಯಿಗೆ ಏರಿದೆ. ಈ ಪೈಕಿ, ರಕ್ಷಣಾ ಇಲಾಖೆ ಬಾಕಿ 211.17 ಕೋಟಿ, ಕ್ಯಾಬಿನೆಟ್ ಸೆಟ್ರೆಟರಿಯೇಟ್ ಮತ್ತು ಪ್ರಧಾನಿ ಕಾರ್ಯಾಲಯ 543.18 ಕೋಟಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ 392.33 ಬಾಕಿ ಉಳಸಿಕೊಂಡಿದೆ.

ಜನವರಿ 31ರವರೆಗೆ ಇದ್ದ ಬಾಕಿ ಮೊತ್ತ 325 ಕೋಟಿ. ಸೆಪ್ಟೆಂಬರ್ 26ರವರೆಗೆ ಈ ಬಾಕಿ 1,146.86 ಕೋಟಿ ರುಪಾಯಿಗೆ ಏರಿದೆ. ಅಂದರೆ, ನರೇಂದ್ರ ಮೋದಿ ಸರ್ಕಾರವು ಎಂಟು ತಿಂಗಳಲ್ಲಿ 821.86 ಕೋಟಿ ರುಪಾಯಿಗಳಷ್ಟು ಮೌಲ್ಯದ ಚಾರ್ಟರ್ ಫ್ಲೈಟ್ ಸೇವೆ ಬಳಸಿಕೊಂಡಿದೆ. ತಿಂಗಳಿಗೆ ಸರಾಸರಿ 102.73 ಕೋಟಿ ರುಪಾಯಿಗಳಷ್ಟು ಈ ಸೇವೆ ಪಡೆದುಕೊಂಡಿದೆ.

ಪ್ರಧಾನಿ, ರಾಷ್ಟ್ರಪತಿ ಚಾರ್ಟರ್ ಫ್ಲೈಟ್ ಬಳಕೆ ಮಾಡುವುದು ಅಗತ್ಯ. ಆದರೆ, ಸೇವೆ ನೀಡಿದ ಏರ್ ಇಂಡಿಯಾ ಸಂಸ್ಥೆಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡುವುದು ಸಹ ಕೇಂದ್ರ ಸರ್ಕಾರದ ಜವಾಬ್ದಾರಿ. ಏರ್ ಇಂಡಿಯಾ ಈಗಾಗಲೇ ನಷ್ಟದಲ್ಲಿದೆ. ನಷ್ಟದಲ್ಲಿರುವ ಸಂಸ್ಥೆಗೆ ಬಾಕಿ ಉಳಿಸಿಕೊಳ್ಳುವುದು ಮತ್ತಷ್ಟು ಅಮಾನವೀಯ. ತಿಂಗಳ ಹಿಂದಷ್ಟೇ ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ವೇತನ ಪಾವತಿ ವಿಳಂಬವಾಗುತ್ತದೆ ಎಂದು ಮುಂಚೆಯೇ ಸೂಚಿಸಿತ್ತು. ಕೆಲವು ಸಿಬ್ಬಂದಿಯ ವೇತನ ಕಡಿತದ ಪ್ರಸ್ತಾಪವನ್ನೂ ಮಾಡಿತ್ತು.

ಇದನ್ನೂ ಓದಿ : ಮೋದಿ ದೇಶದ ಅತ್ಯಂತ ದುಬಾರಿ ಪ್ರಧಾನಿ; ವಿಮಾನ ಹಾರಾಟ ವೆಚ್ಚವೇ ₹1,484 ಕೋಟಿ

‘ಎಕನಾಮಿಕ್ ಟೈಮ್ಸ್’ ವರದಿ ಪ್ರಕಾರ, 2017ನೇ ವಿತ್ತೀಯ ವರ್ಷದಲ್ಲಿ ಏರ್ ಇಂಡಿಯಾ, ಅಲಯನ್ಸ್ ಏರ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲ ಸಿಬ್ಬಂದಿಯ ವಾರ್ಷಿಕ ವೇತನ ವೆಚ್ಚ 2,841.48 ರುಪಾಯಿಗಳು. ವಾರ್ಷಿಕ ಶೇ.10ರಷ್ಟು ಹೆಚ್ಚಳವಾಗಿದ್ದರೂ 2018ನೇ ಸಾಲಿನ ವಾರ್ಷಿಕ ವೇತನ ವೆಚ್ಚವು 3,090 ಕೋಟಿ ರುಪಾಯಿಗಳಾಗುತ್ತದೆ.

ಅಂದರೆ, ಏರ್ ಇಂಡಿಯಾದ ಪ್ರತಿ ತಿಂಗಳ ಒಟ್ಟು ವೇತನ ವೆಚ್ಚ 257.46 ಕೋಟಿ ರುಪಾಯಿ. ಒಂದು ವೇಳೆ, ಮೋದಿ ಸರ್ಕಾರ ತಾನು ಏರ್ ಇಂಡಿಯಾಗೆ ಉಳಿಸಿಕೊಂಡಿರುವ ಬಾಕಿ ಮೊತ್ತ 1,146.86 ಕೋಟಿ ರುಪಾಯಿ ಪಾವತಿಸಿದರೆ, ಏರ್ ಇಂಡಿಯಾ ಎಲ್ಲ ಸಿಬ್ಬಂದಿಗೆ ನಾಲ್ಕೂವರೆ ತಿಂಗಳ ವೇತನವನ್ನು ಸಲೀಸಾಗಿ ಪಾವತಿಸಬಹುದಾಗಿದೆ. ಹಾಗಾಗಿ, ಏರ್ ಇಂಡಿಯಾ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗದೆ ಇರುವುದರಲ್ಲಿ ನರೇಂದ್ರ ಮೋದಿ ಸರ್ಕಾರದ ಪಾತ್ರವೂ ಇದೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More