ಜೀವರಕ್ಷಕರಿಗೆ ಅಭಯ ನೀಡುವ ಕಾನೂನಿನ ಮೂಲಕ ದೇಶಕ್ಕೇ ಮಾದರಿಯಾದ ಕರ್ನಾಟಕ

ಅಪಘಾತ ಸಂತ್ರಸ್ತರಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಲು ನೆರವಾಗುವ ಜನಸಾಮಾನ್ಯರಿಗೆ ಕಾನೂನು ರಕ್ಷಣೆ ಒದಗಿಸುವ ಕರ್ನಾಟಕ ರಾಜ್ಯದ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ. ಆ ಮೂಲಕ, ಕರ್ನಾಟಕದ ಹಿರಿಮೆ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮಿಂಚಿದೆ

ಅಪಘಾತ ಸಂತ್ರಸ್ತರಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸುವ ಜನಸಾಮಾನ್ಯರಿಗೆ ಕಾನೂನು ರಕ್ಷಣೆ ಒದಗಿಸುವ ಕರ್ನಾಟಕದ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ, ಜೀವ ರಕ್ಷಿಸಲು ಹೋರಾಡುವವರಿಗೆ ಕಾನೂನಿನ ಶ್ರೀರಕ್ಷೆ ಒದಗಿಸುವ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. 2016ರಲ್ಲಿ 1,50,715 ಮಂದಿ ಅಪಘಾತದಲ್ಲಿ ಮಡಿದಿದ್ದು, ದೇಶದಲ್ಲಿ ಅಪಘಾತದಿಂದ ಸಾವುನೋವಿನ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಕಾನೂನು ಮಹತ್ವ ಪಡೆದುಕೊಂಡಿದೆ.

2016ರ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತರ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿರುವುದಾಗಿ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಅಪಘಾತವಾದ ಮೊದಲ ಒಂದು ಗಂಟೆ ಗಾಯಾಳುವಿನ ಪಾಲಿಗೆ ಅಮೂಲ್ಯವಾಗಿದ್ದು, ಅದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸುವರ್ಣ ಅವಧಿ ಎಂದು ಕರೆಯಲಾಗುತ್ತದೆ. ಗಾಯಾಳುವಿನ ತುರ್ತು ಚಿಕಿತ್ಸೆಗೆ ಮುಂದಾಗುವವರನ್ನು ಪ್ರೋತ್ಸಾಹಿಸುವ, ಅವರಿಗೆ ಪೊಲೀಸ್ ಮತ್ತು ತನಿಖೆಯ ಹೆಸರಿನಲ್ಲಿ ನಡೆಯುವ ಕಿರುಕುಳದಿಂದ ಮುಕ್ತಿ ನೀಡುವ ಸಲುವಾಗಿ ಈ ಶಾಸನ ಜಾರಿಗೆ ಬರಲಿದೆ.

ಕಾನೂನಿನಂತೆ ಕರ್ನಾಟಕ ಸರ್ಕಾರ ಉತ್ತಮ ಜೀವರಕ್ಷಕರಿಗೆ ಆರ್ಥಿಕ ನೆರವು ಕೂಡ ನೀಡಲಿದೆ. ಅಲ್ಲದೆ, ಜೀವ ರಕ್ಷಣೆಗೆ ಮುಂದಾದವರು ನ್ಯಾಯಾಲಯ, ಪೊಲೀಸ್ ಠಾಣೆ ಎಂದು ಅಲೆಯುವುದನ್ನು ತಪ್ಪಿಸಲು ಇದು ಸಹಾಯಕವಾಗಲಿದೆ. ಒಂದು ವೇಳೆ, ವಿಚಾರಣೆಯಲ್ಲಿ ಪಾಲ್ಗೊಳ್ಳಲೇಬೇಕು ಎಂಬ ಸ್ಥಿತಿ ಇದ್ದರೆ ಅಂತಹವರಿಗೆ ಉತ್ತಮ ಜೀವರಕ್ಷಕ ನಿಧಿಯಿಂದ ಹಣಕಾಸಿನ ನೆರವು ನೀಡಲಾಗುತ್ತದೆ.

“ರಾಜ್ಯದ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ ಬಳಿಕ ಜೀವ ರಕ್ಷಿಸಿದ ವ್ಯಕ್ತಿ ತಕ್ಷಣವೇ ಅಲ್ಲಿಂದ ತೆರಳಬಹುದು ಎನ್ನುತ್ತದೆ ಹೊಸ ಕಾನೂನು. ಈ ಮೊದಲು ಅಪಘಾತಗಳು ನಡೆದಾಗ ಜೀವ ರಕ್ಷಿಸುವ ಬದಲು ಗಾಯಾಳುವಿನ ಜೊತೆ ಫೋಟೊ ಕ್ಲಿಕ್ಕಿಸುತ್ತಿದ್ದ ಹಾಗೂ ವಿಡಿಯೊ ಚಿತ್ರೀಕರಿಸುತ್ತಿದ್ದ ಘಟನೆಗಳು ಸಾಮಾನ್ಯವಾಗಿದ್ದವು. ಆದರೆ, ಹೊಸ ಕಾನೂನಿನಿಂದ ಜೀವರಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು,” ಎನ್ನುತ್ತಾರೆ ಅಧಿಕಾರಿಯೊಬ್ಬರು.

ಇದನ್ನೂ ಓದಿ : ಯುಜಿಸಿ ಬದಲಿಗೆ ಯೋಜಿಸಿರುವ ಉನ್ನತ ಶಿಕ್ಷಣ ಆಯೋಗ ಮಸೂದೆ ಅಪಾಯಕಾರಿ

2016ರಲ್ಲಿ ದೇಶದಲ್ಲಿ 4,80,652 ರಸ್ತೆ ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ 1,50,715 ಮಂದಿ ಸಾವನ್ನಪ್ಪಿದ್ದಾರೆ. 2015ರಲ್ಲಿ 5,01,423 ರಸ್ತೆ ಅಪಘಾತಗಳು ಸಂಭವಿಸಿದ್ದು 1,46,133 ಮಂದಿ ಮೃತಪಟ್ಟಿದ್ದರು. 2015-16ರಲ್ಲಿ ಅತಿ ಹೆಚ್ಚು ಅಪಘಾತವಾದ ಮೊದಲ ಐದು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೂಡ ಇದೆ.

ಜೀವರಕ್ಷಕರಿಗೆ ಅಭಯ ನೀಡುವಂತಹ ಯಾವುದೇ ಕಾನೂನನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ಆದರೆ ಸುಪ್ರೀಂ ಕೋರ್ಟ್ ಆದೇಶದಂತೆ 2015ರಲ್ಲಿ ಭೂಸಾರಿಗೆ ಸಚಿವಾಲಯ ಜೀವರಕ್ಷಕರಿಗೆ ಅಭಯ ಒದಗಿಸುವ ಕೆಲ ನಿರ್ದೇಶನಗಳನ್ನು ಜಾರಿಗೆ ತಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More