ಜನಮಾನಸದಲ್ಲಿ 2018ರ ಸೆಪ್ಟೆಂಬರ್ ತಿಂಗಳನ್ನು ಹಸಿರಾಗಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ಚರಿತ್ರೆಯಲ್ಲಿ ಜನಸಾಮಾನ್ಯರ ನಿತ್ಯದ ಬದುಕಿನ ಮೇಲೆ ನೇರ ಪರಿಣಾಮ ಬೀರುವಂಥ ಐತಿಹಾಸಿಕ ಸರಣಿ ತೀರ್ಪು ನೀಡಿದ ತಿಂಗಳು 2018ರ ಸೆಪ್ಟೆಂಬರ್ ಹೊರತುಪಡಿಸಿ ಇನ್ನೊಂದಿರಲಾರದು. ಅಂತಹ ದಾಖಲೆಗಾಗಿ, ನ್ಯಾ.ದೀಪಕ್ ಮಿಶ್ರಾ ಅವರಿಗೆ ಧನ್ಯವಾದ ಹೇಳಲೇಬೇಕು

ನಮ್ಮ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದದ್ದು ೧೯೫೦ರ ಜನವರಿ ೨೬ರಂದು. ನಮ್ಮ ಸಂವಿಧಾನ ಜಾರಿಗೆ ಬಂದ ದಿನವೇ, ಸರ್ವೋಚ್ಚ ನ್ಯಾಯಾಲಯ ಕೂಡ ಅಸ್ತಿತ್ವಕ್ಕೆ ಬಂದಿತು. ಪ್ರತಿವರ್ಷ ನಾವು ಜನವರಿ ೨೬ರಂದು ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡುತ್ತೇವೆ. ಹಾಗಾಗಿ, ನಿಮಗೆ ಸಂವಿಧಾನ ಜಾರಿಗೆ ಬಂದ ದಿನ ನೆನಪಿರಬಹುದು. ಆದರೆ, ಅಂದಿನಿಂದ ಇಂದಿನವರೆಗೆ, ಸುಪ್ರೀಂ ಕೋರ್ಟಿನ ಚರಿತ್ರೆಯಲ್ಲಿ ಜನಸಾಮಾನ್ಯರ ನಿತ್ಯದ ಬದುಕಿನ ಮೇಲೆ ನೇರ ಪರಿಣಾಮ ಬೀರುವಂತಹ ಐತಿಹಾಸಿಕ ಸರಣಿ ತೀರ್ಪುಗಳನ್ನು ನೀಡಿದ ತಿಂಗಳು ಈ ವರ್ಷದ ಸೆಪ್ಟೆಂಬರ್ ಹೊರತುಪಡಿಸಿ ಇನ್ನೊಂದಿರಲಾರದು. ಅಂತಹ ಐತಿಹಾಸಿಕ ದಾಖಲೆಗಾಗಿ, ಅಕ್ಟೋಬರ್ ೨ರಂದು ನಿವೃತ್ತರಾಗಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಧನ್ಯವಾದ ಹೇಳಲೇಬೇಕು.

ಹಾಗೇ, ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟಿನಲ್ಲಿ ತಮ್ಮ ನಂತರದ ಹಿರಿತನ ಹೊಂದಿರುವ ನಾಲ್ವರು ಹಿರಿಯ ನ್ಯಾಯಾಧೀಶರ ಬಹಿರಂಗ ಟೀಕೆ ಮತ್ತು ಬಂಡಾಯಕ್ಕೂ ಗುರಿಯಾದ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿದ್ದು ಕೂಡ ನ್ಯಾ.ದೀಪಕ್ ಮಿಶ್ರಾ ಅವರೇ ಎಂಬುದು ವಿಪರ್ಯಾಸ. ಅದೇನೇ ಇರಲಿ, ಕಳೆದ ನಾಲ್ಕು ವಾರಗಳಿಂದ ಸತತ ದಿಟ್ಟ ತೀರ್ಪುಗಳನ್ನು ನೀಡುವ ಮೂಲಕ, ತಮಗೆ ವರ್ಷದ ಆರಂಭದಲ್ಲಿ ಅಂಟಿದ್ದ ಕಳಂಕವನ್ನು ಕೆಲವರಾದರೂ ಮರೆಯವಂತೆ ಮಾಡಿರುವ ನ್ಯಾ.ಮಿಶ್ರಾ ಮೆಚ್ಚುಗೆಗೆ ಪಾತ್ರರು.

ನ್ಯಾ.ಮಿಶ್ರಾ ಅವರ ನೇತೃತ್ವದ ವಿವಿಧ ನ್ಯಾಯಪೀಠಗಳು ಈ ತಿಂಗಳಲ್ಲಿ ನೀಡಿರುವ ಪ್ರಮುಖ ತೀರ್ಪುಗಳು ಮತ್ತು ಅವುಗಳ ಸಾರ್ವಜನಿಕ ಮಹತ್ವದ ಬಗ್ಗೆ ಚರ್ಚಿಸೋಣ.

ಸುಪ್ರೀಂ ಕೋರ್ಟ್ ಕಲಾಪಗಳ ನೇರಪ್ರಸಾರದ ಕುರಿತ ತೀರ್ಪನ್ನೇ ಮೊದಲು ನೋಡೋಣ. ನ್ಯಾಯಾಲಯದ ಕಲಾಪಗಳ ಆಡಿಯೋ ಮತ್ತು ವೀಡಿಯೋ ಪ್ರಸಾರಕ್ಕಾಗಿ ಕಳೆದ ಹತ್ತು ವರ್ಷಗಳಿಂದ ನಾನು ಸಾರ್ವಜನಿಕ ಪ್ರತಿಪಾದನೆ ಮಾಡುತ್ತಲೇ ಇದ್ದೆ. ಹಾಗಾಗಿ, ನಮ್ಮ ನ್ಯಾಯಾಂಗದ ಸುಧಾರಣೆಯ ನಿಟ್ಟಿನಲ್ಲಿ ಈ ಕುರಿತ ತೀರ್ಪು ಒಂದು ಮೈಲಿಗಲ್ಲು ಎಂದೇ ನಾನು ಭಾವಿಸುವೆ (ಆ ತೀರ್ಪಿನ ಕುರಿತ ಪ್ರಕರಣದಲ್ಲಿ ನಾನು ಭಾಗೀದಾರನಾಗಿರಲಿಲ್ಲ). ಈ ತೀರ್ಪಿನಿಂದಾಗಿ, ಇನ್ನು ಮುಂದಿನ ದಿನಗಳಲ್ಲಿ ನಿಮ್ಮ ಟಿವಿ ಪರದೆ ಮತ್ತು ಮೊಬೈಲ್‌ಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟುಗಳ ಕಲಾಪಗಳನ್ನು ನೀವು ನೇರಪ್ರಸಾರದಲ್ಲಿ ವೀಕ್ಷಿಸುವುದು ಸಾಧ್ಯವಾಗಲಿದ್ದು, ಆ ಬಳಿಕ ನಿಮ್ಮ ಸಾರ್ವಜನಿಕ ಜೀವನ ಈಗಿನಂತೆ ಇರಲಾರದು. ಏಕೆಂದರೆ, ನಮ್ಮ ಕಾನೂನು ಮತ್ತು ನ್ಯಾಯಾಂಗದ ಪ್ರಕ್ರಿಯೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಲಿದ್ದು, ವಕೀಲರು ಕೂಡ ಪ್ರಕರಣಗಳ ವಿಳಂಬದಿಂದ ಸಾರ್ವಜನಿಕವಾಗಿ ತಮಗೆ ಆಗುವ ಮುಜುಗರದಿಂದ ಪಾರಾಗಲು ಹೆಚ್ಚು ಶಿಸ್ತು ಮತ್ತು ಪೂರ್ಣ ತಯಾರಿಯಿಂದ ಕಲಾಪಕ್ಕೆ ಹಾಜರಾಗಲಿದ್ದಾರೆ.

ಹಾಗಾಗಿ ಕಲಾಪಗಳು ಈಗಿನದಕ್ಕಿಂತ ಹೆಚ್ಚು ವ್ಯವಸ್ಥಿತವಾಗಿ ಮತ್ತು ಸಮರ್ಥವಾಗಿ ನಡೆಯಲಿವೆ. ಹಾಗೇ, ಸರ್ಕಾರಿ ನೌಕರರ ಭ್ರಷ್ಟಾಚಾರ ಮತ್ತು ಇತರ ಅಪರಾಧ ಪ್ರಕರಣಗಳ ವಿಚಾರಣೆ ಕೂಡ ಶೀಘ್ರಗತಿ ಪಡೆದುಕೊಳ್ಳಲಿದ್ದು, ಆರಂಭದಲ್ಲಿ ತಮ್ಮ ಸರ್ಕಾರ ಮತ್ತು ಅಧಿಕಾರಶಾಹಿಗೆ ನ್ಯಾಯಾಲಯದ ಒಳಗೆ ಉಂಟಾಗುವ ಅವಮಾನವನ್ನು ಜನಸಾಮಾನ್ಯರು ನೇರ ವೀಕ್ಷಣೆ ಮಾಡಲಿದ್ದಾರೆ. ಈ ಮುಜುಗರ ಮತ್ತು ಅವಮಾನದಿಂದಾಗಿ ಕ್ರಮೇಣ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯ ನಿಭಾಯಿಸುವುದರಿಂದ ಆಡಳಿತ ಮತ್ತು ಆಡಳಿತಶಾಹಿಯ ಪರಿಸ್ಥಿತಿ ಸುಧಾರಿಸಬಹುದು. ಆ ದೃಷ್ಟಿಯಲ್ಲಿ ನನ್ನ ಪ್ರಕಾರ, ಈ ತೀರ್ಪು ನಮ್ಮ ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪುಗಳಲ್ಲಿ ಒಂದು.

ಆ ಬಳಿಕ, ೧೮೬೦ರ ಭಾರತೀಯ ದಂಡಸಂಹಿತೆಯ ಕಲಂ 377ರ ಕೆಲವು ಕಾನೂನುಗಳನ್ನು ರದ್ದು ಮಾಡಿದ ತೀರ್ಪು ಮಹತ್ವದ್ದು. ಇಬ್ಬರು ವಯಸ್ಕರು ಪರಸ್ಪರ ಒಪ್ಪಿಗೆ ಮೇಲೆ ಸಲಿಂಗ ಸಂಬಂಧ ಹೊಂದಿದ್ದರೂ, ಅದನ್ನು ಅಪರಾಧವೆಂದು ಪರಿಗಣಿಸಿ ಹತ್ತು ವರ್ಷ ಜೈಲು ಶಿಕ್ಷೆ ನೀಡಬಹುದಾಗಿತ್ತು. ಸ್ವತಃ ನೀವೇ ಸಲಿಂಗರತಿಯ ಅನುಸರಿಸುವವರು ಅಥವಾ ಅಂಥವರ ಕುಟುಂಬದಲ್ಲಿ ಒಬ್ಬರಾಗಿರದೆ ಇದ್ದರೆ, ಪುರಾತನ ಕಾನೂನಿನ ಕ್ರೌರ್ಯ ಅರ್ಥವಾಗಲಾರದು. ಸಲಿಂಗ ಮತ್ತು ದ್ವಿಲಿಂಗ ಆಸಕ್ತ ಜನರ ಘನತೆಯನ್ನೆ ಈ ಕಾನೂನು ಮುಕ್ಕಾಗಿಸುತ್ತಿತ್ತು. ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನ ಮೂಲಕ ಅಂತಹ ಕ್ರೂರ ಕಾನೂನನ್ನು ಕಿತ್ತುಹಾಕಿತು. ಇದು ದೇಶದ ಕೋಟ್ಯಂತರ ಸಲಿಂಗ ಆಸಕ್ತರ ನಿಜ ಸ್ವಾತಂತ್ರ್ಯದ ಸಂಭ್ರಮಕ್ಕೆ ಕಾರಣವಾಯಿತು.

ಇನ್ನು, ಐಪಿಸಿಯ ೪೯೭ನೇ ವಿಧಿಯನ್ನು ರದ್ದುಪಡಿಸಿದ ಮತ್ತೊಂದು ಐತಿಹಾಸಿಕ ತೀರ್ಪನ್ನು ಗಮನಿಸೋಣ. ವಿವಾಹೇತರ ಸಂಬಂಧ ಎಂಬುದಕ್ಕೆ ಹಲವು ರೂಪಗಳಿವೆ. ನಮ್ಮ ಸಂಸದರು ವಿವಾಹೇತರ ಸಂಬಂಧಕ್ಕೆ ಕನಿಷ್ಠ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರತಿಪಾದಿಸುತ್ತಿದ್ದರು. ವಿಪರ್ಯಾಸವೆಂದರೆ, ೪೯೭ನೇ ವಿಧಿ, ವಿವಾಹೇತರ ಸಂಬಂಧವನ್ನು ಅಪರಾಧವೆಂದು ಪರಿಗಣಿಸಿ ಅದಕ್ಕೆ ಶಿಕ್ಷೆ ವಿಧಿಸುವುದಕ್ಕಿಂತ ಹೆಚ್ಚಾಗಿ, ವಿವಾಹಿತ ಮಹಿಳೆಯ ಮಾನವನ್ನು ಆಕೆಯ ಪತಿಯ ಪ್ರತಿಷ್ಠೆ ಎಂದೂ ಮತ್ತು ಆಕೆಯ ಗೌರವಕ್ಕೆ ವಿವಾಹೇತರ ಸಂಬಂಧದಿಂದ ಧಕ್ಕೆ ಬಂದರೆ ಅದು ಆಕೆಯ ಪತಿಗೆ ಅವಮಾನ ಎಂದು ಪರಿಭಾವಿಸಿದ್ದೇ ಹೆಚ್ಚು.

ಆ ಹಿನ್ನೆಲೆಯಲ್ಲಿ ಆ ವಿಧಿ ನಮ್ಮ ಕಾಲಕ್ಕೆ ಸರಿಹೊಂದುವುದಿಲ್ಲ ಎಂಬ ಹಿನ್ನೆಲೆಯಲ್ಲಿ ರದ್ದುಪಡಿಸಿದ ಸುಪ್ರೀಂ ಕೋರ್ಟ್ ಕ್ರಮ ನಿಜವಾಗಿಯೂ ಸಕಾಲಿಕ. ಹಾಗೆ ನೋಡಿದರೆ, ಸುಪ್ರೀಂ ಕೋರ್ಟ್ ತೀರ್ಪು ವಿವಾಹೇತರ ಸಂಬಂಧದ ಕಾನೂನು ಉಲ್ಲಂಘನೆಯನ್ನು ಅಪರಾಧವೆಂದು ಹೇಳಲಾಗದು ಎಂದು ಒಮ್ಮತದ ಆದೇಶ ನೀಡಿಲ್ಲ. ಸಿಜೆಐ ಮಿಶ್ರಾ ಅಂತಹ ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಅವರಿಗೆ ದನಿಗೂಡಿಸಿದರು. ಆದರೆ, ಉಳಿದ ಮೂವರು ನ್ಯಾಯಮೂರ್ತಿಗಳು ಅವರಿಗೆ ಸಹಮತ ವ್ಯಕ್ತಪಡಿಸಿಲ್ಲ. ಹಾಗಾಗಿ, ಸಂಸತ್ತು ಈ ವಿಷಯದಲ್ಲಿ ಚರ್ಚಿಸಿ, ೪೯೭ ವಿಧಿಗೆ ಅಗತ್ಯ ಬದಲಾವಣೆಗಳನ್ನು ತರಬೇಕಿದೆ.

ಈಗ ಆಧಾರ್ ಕುರಿತ ತೀರ್ಪನ್ನು ಗಮನಿಸೋಣ. ೧೯೫೦-೭೦ರ ದಶಕದಲ್ಲಿ ಸುಪ್ರೀಂ ಕೋರ್ಟ್ ಸರಾಸರಿ ಆರು ತಿಂಗಳ ವಿಚಾರಣೆಯ ಬಳಿಕ ತನ್ನ ಐತಿಹಾಸಿಕ ತೀರ್ಪುಗಳನ್ನು ನೀಡುತ್ತಿದ್ದರೆ, ಆಧಾರ್ ಪ್ರಕರಣದ ವಿಚಾರಣೆಗೆ ಅದು ಈಗ ತೆಗೆದುಕೊಂಡಿದ್ದು ಬರೋಬ್ಬರಿ ಆರು ವರ್ಷದ ಸುದೀರ್ಘ ಕಾಲಾವಕಾಶ. ಆದರೆ, ಈ ಆರು ವರ್ಷಗಳ ಅವಧಿಯಲ್ಲಿ ದೇಶದ ಶೇ.೯೯ರಷ್ಟು ವಯಸ್ಕರು ಆಧಾರ್ ನೋಂದಣಿ ಮಾಡಿಸಿಕೊಂಡರು ಮತ್ತು ಕೇಂದ್ರ ಸರ್ಕಾರ ಆ ಯೋಜನೆಗಾಗಿ ಹತ್ತಾರು ಸಾವಿರ ಕೋಟಿ ಸಾರ್ವಜನಿಕ ಹಣವನ್ನು ವ್ಯಯ ಮಾಡಿದೆ. ಹಾಗಾಗಿ, ಆಧಾರ್ ಕಾಯ್ದೆಯನ್ನು ಕೆಲವು ನಿರ್ಬಂಧ, ಷರತ್ತುಗಳ ಮೂಲಕ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದರೂ, ನ್ಯಾಯಾಲಯ ಕಡ್ಡಾಯವಲ್ಲ ಎಂದಿರುವ ಸೇವೆಗಳಿಗೂ ಜನಸಾಮಾನ್ಯರು ಆಧಾರ್ ಬಳಕೆಯ ಕಡ್ಡಾಯವಾಗಿ ಬಳಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನಾಯಮೂರ್ತಿಯಾಗಿ ರಂಜನ್ ಗೊಗೊಯ್ ನೇಮಕ

ಯಾಕೆಂದರೆ, ಈಗಾಗಲೇ ೯೯ರಷ್ಟು ಮಂದಿ ಆಧಾರ್ ಕಾರ್ಡುಗಳನ್ನೇ ತಮ್ಮ ಗುರುತಿನ ಚೀಟಿಗಳಾಗಿ ಮಾಡಿಕೊಂಡು, ಕಡ್ಡಾಯವಿರಲಿ ಬಿಡಲಿ ಎಲ್ಲ ಸೇವೆ, ಸೌಲಭ್ಯಗಳಿಗೂ ಬಳಸುತ್ತಿರುವುದರಿಂದ, ನೀವು ಆಧಾರ್ ಕಾರ್ಡು ತೋರಿಸದೆ ಇದ್ದರೆ, ಅನಗತ್ಯ ಸಂಶಯ, ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲರೂ ಆಧಾರ್ ಬಳಸುತ್ತಿರುವಾಗ ನಿಮಗೇನು ಸಮಸ್ಯೆ ಎಂಬ ಪ್ರಶ್ನೆ ಕೂಡ ಏಳುತ್ತದೆ ಮತ್ತು ನಿಮ್ಮ ಇತರ ದಾಖಲೆಗಳು ನಿಷ್ಪ್ರಯೋಜಕವಾಗುತ್ತವೆ. ಹಾಗಾಗಿ ಈ ವಿಷಯದಲ್ಲಿ ಚರ್ಚೆ ಇನ್ನೂ ಸಾಕಷ್ಟು ಇದೆ.

ಲೇಖಕರು, ಸುಪ್ರೀಂ ಕೋರ್ಟ್ ವಕೀಲರು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More