297 ಮಂದಿ ಪಿಟಿಐ ಸಿಬ್ಬಂದಿ ವಜಾ; ಸ್ಥಳೀಯ ಕಚೇರಿಗಳಲ್ಲಿ ಧರಣಿ ಆರಂಭ

ಕಂಪ್ಯೂಟರೀಕರಣದ ನಂತರ ೯೦ರ ದಶಕದಲ್ಲಿ ಹೆಚ್ಚು ಕೆಲಸಗಳು ಪಿಟಿಐನಲ್ಲಿ ಹುಟ್ಟಿಕೊಂಡವು. ವೇತನ ಮಂಡಳಿ ಶಿಫಾರಸು ಮಾಡಿದ ಮಟ್ಟದಲ್ಲಿಯೇ ಪಿಟಿಐ ಭಾರಿ ವೇತನ ಭರಿಸುತ್ತಿತ್ತು. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ ಎಂದು ಕಾರಣ ನೀಡಿ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ

ಭಾರತದ ಸುದ್ದಿಸಂಸ್ಥೆ ಪಿಟಿಐ (ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ) ತನ್ನ ಸಂಸ್ಥೆಯ ೨೯೭ ಸಂಪಾದಕಿಯೇತರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಹಠಾತ್ತಾಗಿ ನೌಕರನ್ನು ವಜಾಗೊಳಿಸಿರುವುದು ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶದ ಇತರ ಭಾಗಗಳಲ್ಲಿರುವ ಪಿಟಿಐ ಕಚೇರಿಯಲ್ಲಿ ಪತ್ರಕರ್ತರು ಧರಣಿ ನಡೆಸುತ್ತಿದ್ದಾರೆ.

ಸೆ.೨೯ರಂದು ಪಿಟಿಐ ನಿರ್ವಹಣಾ ಮಂಡಳಿ ತೆಗೆದುಕೊಂಡ ಈ ನಿರ್ಧಾರದಿಂದ ಪಿಟಿಐ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಬಲರಾಂ ಸಿಂಗ್ ದಹಿಯಾ, ಪಿಟಿಐ ಮುಖ್ಯ ಆಡಳಿತಾಧಿಕಾರಿ ಎಂ ಆರ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದು ಕಾನೂನುಬಾಹಿರವಾಗಿ ಪತ್ರಕರ್ತರನ್ನು ಹೀಗೆ ಕೆಲಸದಿಂದ ಕಿತ್ತುಹಾಕಿರುವುದು ಏಕಪಕ್ಷೀಯ ಹಾಗೂ ಪ್ರಚೋದಿತ ನಿರ್ಧಾರ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಪತ್ರದಲ್ಲಿ ಅ.೧ರಂದು ದೇಶಾದ್ಯಂತ ಬೆಳಿಗ್ಗೆ ೧೦ರಿಂದ ಸಂಜೆ ೬ರರವೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಪಿಟಿಐ ತನ್ನ ನಿರ್ಧಾರವನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಸಂಘಟನೆ ಹೇಳಿದೆ.

ದೆಹಲಿಯ ಪತ್ರಕರ್ತರ ಒಕ್ಕೂಟ ಕೂಡ ಪಿಟಿಐ ನಿರ್ಧಾರವನ್ನು ಖಂಡಿಸಿದ್ದು, ವಜಾಗೊಂಡ ಪತ್ರಕರ್ತರ ಬೆಂಬಲಕ್ಕೆ ನಿಂತಿದೆ. ಈ ಬೆಳವಣಿಗೆಯ ಕುರಿತು ಮಾತಾಡಿದ ದೆಹಲಿ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಎಸ್ ಕೆ ಪಾಂಡೆ ಹಾಗೂ ಕಾರ್ಯದರ್ಶಿ ಸುಜಾತಾ ಮಾಢೋಕ್, “ಭಾರತದ ಪ್ರಧಾನ ಸುದ್ದಿಸಂಸ್ಥೆಯನ್ನು ಕಟ್ಟುವಲ್ಲಿ ಶ್ರಮಿಸಿದ ಹಾಗೂ ಹೊಸ ಎತ್ತರಕ್ಕೆ ಕೊಂಡೊಯ್ದ ಉದ್ಯೋಗಿಗಳನ್ನು ಹೀಗೆ ಬೀದಿಗೆ ತಳ್ಳಿದ್ದು ಸರಿಯಲ್ಲ,” ಎಂದಿದ್ದಾರೆ.

ದೆಹಲಿ ಪತ್ರಕರ್ತರ ಒಕ್ಕೂಟವು, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕಾರ್ಮಿಕರ ಸಚಿವಾಲಯಕ್ಕೆ ಪಿಟಿಐನ ಕಾರ್ಮಿಕ ವಿರೋಧಿ ಹಾಗೂ ಮಾಧ್ಯಮ ವಿರೋಧಿ ನಡೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಅಲ್ಲದೆ, ಪಿಟಿಐ ಒಳಗಿನ ಹಾಗೂ ಹೊರಗಿನ ಪತ್ರಕರ್ತರನ್ನು ಕರೆದು ಪ್ರತಿಭಟನೆಗೆ ಬೆಂಬಲಿಸುವಂತೆ ಕರೆ ನೀಡಿದೆ.

ಉದ್ಯೋಗಿಗಳಿಗೆ ಬಾಕಿ ಇರುವ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುವುದು ಎಂದು ಪಿಟಿಐ ಹೇಳಿಕೊಂಡಿದೆ. ಪಿಟಿಐ ವಜಾ ಮಾಡಿದ 297 ಉದ್ಯೋಗಿಗಳ ಪಟ್ಟಿ ಪ್ರಕಟಿಸಿದೆ. ವಜಾಗೊಂಡವರಲ್ಲಿ ಪ್ರಸರಣ ಮೇಲ್ವಿಚಾರಕರು, ಎಂಜಿನಿಯರುಗಳು, ಸಹಾಯಕರು ಮತ್ತು ಅಟೆಂಡರ್ಸ್ ಹುದ್ದೆಗೆ ಸೇರಿದವರು ಇದ್ದಾರೆ. ಪಿಟಿಐ ನಿರ್ವಹಣಾ ಮಂಡಳಿಯ ಪ್ರಕಾರ, “ಈಗಾಗಲೇ ಈ ಮೇಲಿನ ಹುದ್ದೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ನಿಮ್ಮ ಹುದ್ದೆಗೆ ಯಾವುದೇ ಕೆಲಸಗಳಿಲ್ಲ,” ಎಂದು ಕಾರಣ ನೀಡಿ ೨೯೭ ಸಿಬ್ಬಂದಿಗೂ ಪತ್ರ ಬರೆದು ಕೆಲಸದಿಂದ ತೆಗೆದುಹಾಕಲಾಗಿದೆ. ಈ ನಿರ್ಧಾರ ಶನಿವಾರದವರೆಗೆ ಅಧಿಕಾರದಲ್ಲಿದ್ದ ನಿರ್ವಹಣಾ ಮಂಡಳಿಯ ಅಧಿಕಾರಿಗಳಿಂದ ಅಂಗೀಕಾರವಾಗಿದೆ. ಅ.೧ರಿಂದ ಪಿಟಿಐನ ನೂತನ ಅಧ್ಯಕ್ಷರಾಗಿ ಹಿಂದೂ ದೈನಿಕದ ಪ್ರಕಾಶಕ ಎನ್ ರವಿ ಆಯ್ಕೆಯಾಗಿದ್ದಾರೆ.

ಪಿಟಿಐ ಮೂಲಗಳ ಪ್ರಕಾರ, ಈ ನಿರ್ಧಾರವನ್ನು ಈ ಹಿಂದೆಯೇ ತೆಗೆದುಕೊಳ್ಳಲಾಗಿತ್ತು, ಪ್ರಕಟಿಸುವುದು ಮಾತ್ರವೇ ಬಾಕಿ ಉಳಿದಿತ್ತು. ಕಂಪ್ಯೂಟರೀಕರಣದ ನಂತರ ೯೦ರ ದಶಕದಲ್ಲಿ ಹೆಚ್ಚು ಕೆಲಸಗಳು ಪಿಟಿಐನಲ್ಲಿ ಹುಟ್ಟಿಕೊಂಡವು. ವೇತನ ಮಂಡಳಿ ಶಿಫಾರಸು ಮಾಡಿದ ಮಟ್ಟದಲ್ಲಿಯೇ ಪಿಟಿಐ ಭಾರಿ ವೇತನವನ್ನು ಸಿಬ್ಬಂದಿಗೆ ಭರಿಸುತ್ತಿತ್ತು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More