ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಲಕ್ಷ್ಮಿ ಬಗ್ಗೆ ಜಾರಕಿಹೊಳಿ ಸಹೋದರರನ್ನು ಕೇಳಿ: ಕಾರಜೋಳ

ಲಕ್ಷ್ಮಿ ಹೆಬ್ಬಾಳ್ಕರ್‌ ಅದ್ಭುತ ಕಲಾವಿದೆಯಾಗಿದ್ದು, ಅವರನ್ನು ಜಾರಕಿಹೊಳಿ ಸಹೋದರರು ಈಗಾಗಲೇ ಕೊಂಡಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ಹೇಳಿದ್ದಾರೆ. “ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಾರಕಿಹೊಳಿ ಸಹೋದರರನ್ನು ಸಂಪರ್ಕಿಸಿ. ಲಕ್ಷ್ಮಿ ಬಗ್ಗೆ ಮಾತನಾಡಲು ನನಗಿಂತ ಜಾರಕಿಹೊಳಿ ಸಹೋದರರು ಸೂಕ್ತ,” ಎಂದು ಅವರು ಹೇಳಿದ್ದಾರೆ. ಈಚೆಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್‌, ೩೦ ಕೋಟಿ ರುಪಾಯಿ ಆಮಿಷವೊಡ್ಡುವ ಮೂಲಕ ಬಿಜೆಪಿ ಮುಖಂಡರು ತಮ್ಮನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸಿದ್ದರು ಎಂದಿದ್ದರು.

ಗೃಹಬಂಧನದಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಾಖಾ ಬಿಡುಗಡೆ

ನಕ್ಸಲರ ಜತೆ ನಂಟು ಹಾಗೂ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದಿಸಿದ್ದರು ಎಂದು ಬಂಧಿಸಿದ್ದ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ದೆಹಲಿ ಹೈಕೋರ್ಟ್ ಸೋಮವಾರ ಗೃಹಬಂಧನದಿಂದ ಬಿಡುಗಡೆಗೊಳಿಸಿದೆ. ಮಾನವ ಹಕ್ಕುಗಳ ಹೋರಾಟಗಾರರ ಬಂಧನ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿ ತನಿಖೆಗೆ ಅನುಕೂಲವಾಗಲೆಂದು ಐವರ ಗೃಹಬಂಧನವನ್ನು ೪ ವಾರ ವಿಸ್ತರಿಸಿ ಶುಕ್ರವಾರ ತೀರ್ಪು ನೀಡಿತ್ತು.

ಜಪಾನ್, ಅಮೆರಿಕ ರೋಗನಿರೋಧಕ ತಜ್ಞರಿಗೆ ವೈದ್ಯಕೀಯ ನೊಬೆಲ್ ಗೌರವ

ದೇಹದಲ್ಲಿನ ನೈಸರ್ಗಿಕ ಪ್ರತಿರೋಧಕ ಶಕ್ತಿಯಿಂದಲೇ (Immune Regulation) ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಸಾಧ್ಯ ಎಂಬ ಹೊಸ ಥೆರಪಿಯನ್ನು ಅನ್ವೇಷಿಸಿದ ರೋಗ ನಿರೋಧಕ ತಜ್ಞರುಗಳಾದ ಅಮೆರಿಕದ ಜೇಮ್ಸ್ ಅಲಿಸನ್ ಹಾಗೂ ಜಪಾನಿನ ಸುಕು ಹೊಂಜೊ ಅವರುಗಳಿಗೆ ಈ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ದೊರಕಿದೆ.

ಏರಿಳಿತದ ನಡುವೆ ಅಕ್ಟೋಬರ್ ತಿಂಗಳಲ್ಲಿ ಶುಭಾರಂಭ ಮಾಡಿದ ಷೇರುಪೇಟೆ

ಐಎಲ್ ಅಂಡ್ ಎಫ್ಎಸ್ ಸಂಕಷ್ಟ, ಕಚ್ಚಾ ತೈಲ ದರ ಏರಿಕೆ ನಡುವೆಯೂ ದೇಶೀಯ ಷೇರುಪೇಟೆ ಅಕ್ಟೋಬರ್ ತಿಂಗಳ ಮೊದಲ ದಿನ ಏರುಹಾದಿಯಲ್ಲಿ ಸಾಗಿ ಶುಭಾರಂಭ ಮಾಡಿದೆ. ದಿನವಿಡೀ ಏರಿಳಿತ ವಹಿವಾಟು ನಡೆದರೂ, ದಿನದ ಅಂತ್ಯಕ್ಕೆ ತೀವ್ರ ಖರೀದಿ ಬೇಡಿಕೆ ಬಂದ ಕಾರಣ ಸೆನ್ಸೆಕ್ಸ್ 299 ಅಂಶ ಜಿಗಿಯಿತು. ನಿಫ್ಟಿ 77 ಅಂಶ ಏರಿ 1,1000 ಮಟ್ಟ ಕಾಯ್ದುಕೊಂಡಿತು. ಬ್ಯಾಂಕಿಂಗ್, ಆಟೋ, ಎಫ್ಎಂಸಿಜಿ ಸೇರಿದಂತೆ ಬಹುತೇಕ ಸೂಚ್ಯಂಕಗಳು ದಿನದ ಅಂತ್ಯದಲ್ಲಿ ಜಿಗಿದವು. ತೀವ್ರ ಕುಸಿದಿದ್ದ ಎಸ್ ಬ್ಯಾಂಕ್, ಡಿಎಚ್ಎಫ್ಎಲ್ ಸಹ ಚೇತರಿಸಿಕೊಂಡಿವೆ. ಇದು ಈ ವಾರ ಪೇಟೆಯಲ್ಲಿ ಉತ್ಸಾಹ ಚಿಮ್ಮುವ ಮುನ್ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವೃತ್ತಿ

“ನಾನು ಜನರನ್ನು ಅವರ ಪೂರ್ವಾಪರಗಳ ಆಧಾರದ ಮೇಲೆ ಅಳೆಯುವುದಿಲ್ಲ. ಅವರ ನಡೆ ಹಾಗೂ ದೃಷ್ಟಿಕೋನದ ಮೇಲೆ ಅಳೆಯುತ್ತೇನೆ,” ಎಂದು ನಿರ್ಗಮಿತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ನ್ಯಾಯಾಂಗ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಪ್ರಬಲವಾಗಿದ್ದು, ಹಲವಾರು ಪ್ರಕರಣಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ,” ಎಂದರು. ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೊಯ್ ಅ.೩ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನಟಿ ತನುಶ್ರೀ ದತ್ತಾಗೆ ನಾನಾ ಪಾಟೇಕರ್‌ ನೋಟಿಸ್, ಕ್ಷಮೆ ಯಾಚನೆಗೆ ಒತ್ತಾಯ‌

ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದ ಬಾಲಿವುಡ್‌ ನಟಿ ತನುಶ್ರೀ ದತ್ತಾ ಅವರಿಗೆ ನಟ ನಾನಾ ಪಾಟೇಕರ್‌ ಅವರು ನೋಟಿಸ್‌ ನೀಡಿದ್ದಾರೆ. ಆ ಮೂಲಕ, ತನುಶ್ರೀ ದತ್ತಾ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. 2008ರಲ್ಲಿ ‘ಹಾರ್ನ್‌ ಓಕೆ ಪ್ಲೀಸ್‌’ ಸಿನಿಮಾ ಚಿತ್ರಿಕರಣದ ವೇಳೆ ನಾನಾ ಪಾಟೇಕರ್‌ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು. “ಆ ವಿಚಾರ ಹಿಂದಿ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ತಿಳಿದಿದ್ದರೂ, ಯಾರೂ ಬಾಯಿ ಬಿಡಲಿಲ್ಲ,” ಎಂದು ಖಾಸಗಿ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನುಶ್ರೀ ದತ್ತಾ ತಿಳಿಸಿದ್ದರು.

ಧರ್ಮಶಾಲಾ ಚಿತ್ರೋತ್ಸವಕ್ಕೆ ಈರೇಗೌಡ ನಿರ್ದೇಶನದ ‘ಬಳೆಕೆಂಪ’

ಈರೇಗೌಡ ನಿರ್ದೇಶನದ ‘ಬಳೆಕೆಂಪ’ ಸಿನಿಮಾ ಧರ್ಮಶಾಲಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಹಿಮಾಚಲ ಪ್ರದೇಶದ ಮೆಕ್‌ಲಿಯೋಡ್‌ ಗಂಜ್‌ನಲ್ಲಿ ನವೆಂಬರ್‌ 1ರಿಂದ 4ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಸ್ಪೇನ್‌, ಇಂಗ್ಲೆಂಡ್‌, ಸೌತ್ ಕೊರಿಯಾ, ರಾಟರ್‌ಡ್ಯಾಮ್‌ ಸೇರಿದಂತೆ ‘ಬಳೆಕೆಂಪ’ ಹನ್ನೆರೆಡು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದಿದ್ದ ‘ತಿಥಿ’ (2016) ಚಿತ್ರಕ್ಕೆ ಈರೇಗೌಡ ನಿರ್ದೇಶಕ ರಾಮರೆಡ್ಡಿ ಅವರೊಡಗೂಡಿ ಚಿತ್ರಕತೆ ರಚಿಸಿದ್ದರು. ‘ಬಳೆಕೆಂಪ’ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. 103 ನಿಮಿಷ ಅವಧಿಯ ಚಿತ್ರಕ್ಕೆ ಬೆನಡಿಕ್ಟ್‌ ಟೇಲರ್‌ ಮತ್ತು ನರೇನ್ ಚಂದಾವರ್ಕರ್‌ ಸಂಗೀತ ಸಂಯೋಜಿಸಿದ್ದಾರೆ.

ಆಸ್ಟ್ರೇಲಿಯಾ ಸರಣಿಗೆ ಪಾಕ್ ತಂಡದಲ್ಲಿ ಸ್ಥಾನ ಪಡೆದ ಹಫೀಜ್

ಪಾಕಿಸ್ತಾನ ತಂಡದ ಮಾಜಿ ಆರಂಭಿಕ ಆಟಗಾರ ಮೊಹಮದ್ ಹಫೀಜ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿ ಆರಿಸಿದೆ. ಇತ್ತೀಚಿನ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ತಂಡ ದಯನೀಯ ಸೋಲನುಭವಿಸಿದ್ದು, ಇಂದು ನಡೆದ ಕಾಂಗರೂ ವಿರುದ್ಧದ ಸರಣಿಗಾಗಿನ ಆಯ್ಕೆಯಲ್ಲಿ ೩೭ರ ಹರೆಯದ ಹಫೀಜ್‌ಗೆ ಆಯ್ಕೆ ಸಮಿತಿ ಸ್ಥಾನ ಕಲ್ಪಿಸಿದೆ. ೨೦೧೬ರಂದು ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಡುವುದರೊಂದಿಗೆ ೫೦ನೇ ಪಂದ್ಯವನ್ನಾಡಿದ್ದ ಹಫೀಜ್ ಮತ್ತೊಮ್ಮೆ ಟೆಸ್ಟ್ ತಂಡದಲ್ಲಿ ಆಡಿಲ್ಲ. ಪಾಕ್ ಮತ್ತು ಆಸೀಸ್ ನಡುವಣದ ಮೊದಲ ಟೆಸ್ಟ್ ಪಂದ್ಯ ಭಾನುವಾರದಿಂದ (ಅ.೭) ದುಬೈನಲ್ಲಿ ಶುರುವಾಗಲಿದೆ. ಪ್ರಕಟಿತ ತಂಡ ಇಂತಿದೆ: ಸರ್ಫರಾಜ್ ಅಹಮದ್ (ನಾಯಕ), ಅಜರ್ ಅಲಿ, ಫಖಾರ್ ಜಮಾನ್, ಇಮಾಮ್ ಉಲ್ ಹಕ್, ಮೊಹಮದ್ ಹಫೀಜ್, ಬಾಬರ್ ಆಜಮ್, ಅಸದ್ ಶಫೀಕ್, ಹ್ಯಾರಿಸ್ ಸೊಹೈಲ್,  ಉಸ್ಮಾನ್ ಸಲಾವುದ್ದೀನ್, ಯಾಸಿರ್ ಶಾ, ಶಾದಾಬ್ ಖಾನ್, ಬಿಲಾಲ್ ಆಸೀಫ್, ಮೊಹಮದ್ ಅಬ್ಬಾಸ್, ಹಸನ್ ಅಲಿ, ವಹಾಬ್ ರಿಯಾಜ್, ಫಹೀಮ್ ಅಶ್ರಫ್, ಮಿರ್ ಹಮ್ಜಾ ಮತ್ತು ಮೊಹಮದ್ ರಿಜ್ವಾನ್

ಭಾರತ-ವಿಂಡೀಸ್ ಪಂದ್ಯ ಸ್ಥಳಾಂತರ

ಆತಿಥೇಯ ಭಾರತ ಮತ್ತು ಪ್ರವಾಸಿ ವೆಸ್ಟ್‌ ಇಂಡೀಸ್ ತಂಡಗಳ ನಡುವಣದ ಎರಡನೇ ಏಕದಿನ ಪಂದ್ಯವು ಇಂದೋರ್‌ನಿಂದ ಬರೋಡಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಕಾಂಪ್ಲಿಮೆಂಟರಿ ಟಿಕೇಟುಗಳಿಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ನೇಮಿತ ಆಡಳಿತ ಮಂಡಳಿ ಜತೆಗಿನ ಬಿಕ್ಕಟ್ಟಿನಿಂದಾಗಿ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಪಂದ್ಯದ ಆತಿಥ್ಯಕ್ಕೆ ಅಸಮ್ಮತಿ ಸೂಚಿಸಿದ್ದು ಬಿಸಿಸಿಐ ಪಂದ್ಯದ ಸ್ಥಳಾಂತರಕ್ಕೆ ಮುಂದಾಗಿದೆ ಎಂದು ಗೊತ್ತಾಗಿದೆ. ಭಾರತ ಮತ್ತು ವಿಂಡೀಸ್ ನಡುವಣದ ಎರಡನೇ ಏಕದಿನ ಪಂದ್ಯ ಅಕ್ಟೋಬರ್ ೨೪ರಂದು ಜರುಗಲಿದೆ. ಏಕದಿನ ಸರಣಿಗೂ ಮುಂಚೆ ಎರಡು ಟೆಸ್ಟ್ ಪಂದ್ಯ ಸರಣಿ ನಡೆಯಲಿದ್ದು, ಮೊದಲ ಪಂದ್ಯ ಅಕ್ಟೋಬರ್ ೪ರಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More